ಅಂಬೇಡ್ಕರ್ ಬಗ್ಗೆ ಪ್ರಶ್ನೆ ಕೇಳುವ ನೈತಿಕ ಹಕ್ಕಿಲ್ಲ

KannadaprabhaNewsNetwork |  
Published : Jan 08, 2026, 03:00 AM IST
ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಬುಧವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ಲೋಕಾರ್ಪಣೆ ಮಾಡಲಾಯಿತು. ಮಾಜಿ ಸಚಿವ ಎಸ್.ಆರ್.ಪಾಟೀಲ, ಜಿಲ್ಲಾ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಮಾಜಿ ಶಾಸಕ ನಂದ ನ್ಯಾಮಗೌಡ, ಉಮೇಶ ಮೇಟಿ, ಶ್ರೀನಿವಾಸ ಬಳ್ಳಾರಿ ಮತ್ತಿತರರು ಇದ್ದರು | Kannada Prabha

ಸಾರಾಂಶ

ಆರ್‌ಎಸ್‌ಎಸ್‌ ಎಂದೂ ಅಂಬೇಡ್ಕರ್ ರಚನೆಯ ಸಂವಿಧಾನ ಒಪ್ಪಿಕೊಂಡಿಲ್ಲ. ಹೀಗಾಗಿ ಅಂಬೇಡ್ಕರ್ ಬಗ್ಗೆ ಆರ್‌ಎಸ್‌ಎಸ್‌, ಬಿಜೆಪಿಗೆ ಪ್ರಶ್ನೆ ಕೇಳುವ ನೈತಿಕ ಹಕ್ಕಿಲ್ಲ. ಅವುಗಳಿಗೆ ಉತ್ತರ ನೀಡುತ್ತ ಕುಳಿತುಕೊಳ್ಳುವ ಅವಶ್ಯಕತೆ ಇಲ್ಲ ಎಂದು ಎಐಸಿಸಿ ಎಸ್ಸಿ ಘಟಕದ ಸಂಯೋಜಕ, ವಿಧಾನ ಪರಿಷತ್ ಸದಸ್ಯ ಎಫ್.ಎಚ್.ಜಕ್ಕಪ್ಪನವರ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಆರ್‌ಎಸ್‌ಎಸ್‌ ಎಂದೂ ಅಂಬೇಡ್ಕರ್ ರಚನೆಯ ಸಂವಿಧಾನ ಒಪ್ಪಿಕೊಂಡಿಲ್ಲ. ಹೀಗಾಗಿ ಅಂಬೇಡ್ಕರ್ ಬಗ್ಗೆ ಆರ್‌ಎಸ್‌ಎಸ್‌, ಬಿಜೆಪಿಗೆ ಪ್ರಶ್ನೆ ಕೇಳುವ ನೈತಿಕ ಹಕ್ಕಿಲ್ಲ. ಅವುಗಳಿಗೆ ಉತ್ತರ ನೀಡುತ್ತ ಕುಳಿತುಕೊಳ್ಳುವ ಅವಶ್ಯಕತೆ ಇಲ್ಲ ಎಂದು ಎಐಸಿಸಿ ಎಸ್ಸಿ ಘಟಕದ ಸಂಯೋಜಕ, ವಿಧಾನ ಪರಿಷತ್ ಸದಸ್ಯ ಎಫ್.ಎಚ್.ಜಕ್ಕಪ್ಪನವರ ಹೇಳಿದರು.

ಕಾಂಗ್ರೆಸ್ ಜಿಲ್ಲಾ ಕಚೇರಿ ಆವರಣದಲ್ಲಿ ಬುಧವಾರ ನಡೆದ ಅಂಬೇಡ್ಕರ್ ಪುತ್ಥಳಿ ಅನಾವರಣದ ನಂತರ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರು ಮನುಸ್ಮೃತಿ ವಿರೋಧಿಸಿದ್ದಲ್ಲದೇ, ಅದನ್ನು ಸುಟ್ಟುಹಾಕಿದ್ದರು. ಆದರೆ, ಇಂದು ಕಾಂಗ್ರೆಸ್ ಪಕ್ಷವನ್ನು ದಲಿತರ ವೈರಿ ಎಂಬಂತೆ ಆ ವರ್ಗ ಬಿಂಬಿಸುತ್ತಿದೆ ಎಂದು ಕಿಡಿಕಾರಿದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿ, ದೇಶದಲ್ಲಿ ಇವತ್ತು ದಲಿತ, ದಮನಿತರಿಗೆ ಉತ್ತಮ ಬದುಕು ದೊರಕುತ್ತಿದೆ ಎಂದರೆ ಅದಕ್ಕೆ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಕಾರಣ. ನಾವೆಲ್ಲರೂ ಸಂವಿಧಾನದ ಶಕ್ತಿಯನ್ನು ಅರಿತುಕೊಳ್ಳದಿದ್ದರೇ ಮುಂದಿನ ದಿನಗಳಲ್ಲಿ ತೊಂದರೆಯಾಗಲಿದೆ. ಬಸವಣ್ಣ, ಅಂಬೇಡ್ಕರ್ ಅವರ ತತ್ವ, ಸಿದ್ಧಾಂತದಂತೆ ಆಡಳಿತ ನಡೆಸಿ, ಅವರ ಸಂದೇಶದ ಬಗೆಗೆ ಅರಿವು ಮೂಡಿಸುವುದು ಕಾಂಗ್ರೆಸ್ ಪಕ್ಷದ ಮುಖ್ಯ ಧ್ಯೇಯವಾಗಿದೆ ಎಂದು ತಿಳಿಸಿದರು.ಬಿಜೆಪಿಯವರು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಹಾತ್ಮ ಗಾಂಧೀಜಿಯವರ ಹೆಸರು ತೆಗೆದುಹಾಕಿದ್ದಾರೆ. ಸಂವಿಧಾನ ತಿರುಚುವ ಕೆಲಸ ಮಾಡುತ್ತಿರುವ ಆ ಪಕ್ಷ ಕಾರ್ಪೋರೇಟ್ ಕಂಪನಿಗಳ ಪರವಾಗಿದೆ. ಜಾತಿ, ಧರ್ಮಗಳ ಮಧ್ಯೆ ಒಡಕು ಮೂಡಿಸಿ ಕೆಲಸ ಮಾಡದೇ ಆಡಳಿತ ನಡೆಸುತ್ತಿದೆ. ಮನುವಾದಿಗಳನ್ನು ಒಪ್ಪಿಕೊಂಡರೇ ಮುಂದಿನ ಸ್ಥಿತಿ ಹೇಗಿರುತ್ತದೆ ಎಂದು ಪ್ರಶ್ನಿಸಿದರು.ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮಾತನಾಡಿ, ಅಂಬೇಡ್ಕರ್ ಅವರ ಆದರ್ಶ ಪಾಲಿಸಲು ಜನರಲ್ಲಿ ಅರಿವು ಮೂಡಿಸಬೇಕಿದೆ. ಅಂಬೇಡ್ಕರ್ ಅವರಿಗೆ ಸಹಕಾರ ನೀಡಿದ ನೆಹರು ಅವರು ವರನ್ನು ರಾಜ್ಯಸಭೆಗೆ ಆಯ್ಕೆಯಾಗಲು ಅವಕಾಶ ಮಾಡಿಕೊಟ್ಟರು ಎಂದು ತಿಳಿಸಿದರು.ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿ, ಮಹಿಳೆಯರಿಗೆ ಸ್ವಾತಂತ್ರ್ಯ, ಅಧಿಕಾರ ನೀಡಿದವರು ಡಾ.ಅಂಬೇಡ್ಕರ್ ಸಂವಿಧಾನ ಉಳಿದರೇ ನಮ್ಮ ದೇಶ ಸಮೃದ್ಧವಾಗಲಿದೆ ಎಂದರು.ಪುತ್ಥಳಿ ನಿರ್ಮಿಸಲು ನೆರವು ನೀಡಿದ ಮುಖಂಡರಾದ ಪೀರಪ್ಪ ಮ್ಯಾಗೇರಿ, ಪ್ರೇಮನಾಥ ಗರಸಂಗಿ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಗ್ಯಾರಂಟಿ ಅನುಷ್ಠಾನ ಅಧ್ಯಕ್ಷ ಅನಿಲಕುಮಾರ ದಡ್ಡಿ, ಯುವ ಮುಖಂಡ ಮಲ್ಲಿಕಾರ್ಜುನ ಮೇಟಿ, ದಯಾನಂದ ಪಾಟೀಲ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಎಂ.ಬಿ.ಸೌದಾಗರ, ಬಾಯಕ್ಕ ಮೇಟಿ, ಡಾ.ಎಂ.ಎಚ್.ಚಲವಾದಿ, ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ ಹದ್ಲಿ, ಎಸ್ಸಿ ಘಟಕದ ಅಧ್ಯಕ್ಷ ರಾಜು ಮನ್ನಿಕೇರಿ, ಮಹಿಳಾ ಘಟಕದ ಅಧ್ಯಕ್ಷೆ ಸುಮಿತ್ರಾ ಗುಳಬಾಳ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಬಳ್ಳಾರಿ, ಶಿವಾನಂದ ಮಾದರ ಇದ್ದರು.ಇದಕ್ಕೂ ಮೊದಲು ನಡೆದ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಮಾಜಿ ಸಚಿವ ಎಸ್.ಆರ್.ಪಾಟೀಲ, ಮಾಜಿ ಶಾಸಕ ಆನಂದ ನ್ಯಾಮಗೌಡ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಮುಖಂಡ ಉಮೇಶ ಮೇಟಿ ಮತ್ತಿತರರು ಇದ್ದರು.

ಅಂಬೇಡ್ಕರ್ ಕಾಂಗ್ರೆಸ್‌ನಲ್ಲಿರಲಿಲ್ಲ. ಅವರು ಷೆಡ್ಯೂಲ್ ಕಾಸ್ಟ್ ಫೆಡರೇಷನ್ ಎಂಬ ಪಕ್ಷ ರಚಿಸಿದ್ದರು. ಕಾಂಗ್ರೆಸ್ ಕಚೇರಿಯಲ್ಲಿ ಅಂಬೇಡ್ಕರ್ ಪುತ್ಥಳಿ ಪ್ರತಿಷ್ಠಾಪನೆ ಮಾಡಿದ್ದು ಅವರಿಗೆ ಕಾಣುವುದಿಲ್ಲ. ಸಮಾನತೆಯ ಹರಿಕಾರ ಪುತ್ಥಳಿ ಪ್ರತಿಷ್ಠಾಪಿಸಿರುವುದು ಸಂತಸ ತಂದಿದೆ.

-ಎಫ್.ಎಚ್.ಜಕ್ಕಪ್ಪನವರ, ಎಐಸಿಸಿ ಎಸ್ಸಿ ಘಟಕದ ಸಂಯೋಜಕ, ವಿಧಾನ ಪರಿಷತ್ ಸದಸ್ಯರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿಂತಿದ್ದ ಲಾರಿಗೆ ಕ್ರೂಸರ್‌ ಡಿಕ್ಕಿ: 4 ಜನರ ಸಾವು
ಎಚ್.ಡಿಕೆಯನ್ನು ಮುಖ್ಯಮಂತ್ರಿಯಾಗಿ ನೋಡಲು ಜನತೆ ಕಾತುರ