ಕನ್ನಡಪ್ರಭ ವಾರ್ತೆ ಸುರಪುರ
ತಾಲೂಕಿನ ನಗರ ಕೇಂದ್ರದಿಂದ ಯಾದಗಿರಿ ಜಿಲ್ಲಾ ಕೇಂದ್ರಕ್ಕೆ ಹೋಗಲು ಬೆಳಗ್ಗೆ 7.30ರಿಂದ 9 ಗಂಟೆವರೆಗೂ ಬಸ್ಸುಗಳು ಇಲ್ಲದೇ ಪಯಾಣಿಕರು, ನೌಕರರು, ವಿದ್ಯಾರ್ಥಿಗಳ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ವಿವಿಧ ಜಿಲ್ಲಾ ಮತ್ತು ತಾಲೂಕು ಘಟಕಗಳಿಂದ ಬಸ್‌ಗಳು ಸುರಪುರ ಮಾರ್ಗವಾಗಿ ಸಂಚರಿಸುತ್ತವೆ. ಆದರೆ, ಇಲ್ಲಿ ಸಾಕಷ್ಟು ಬಸ್‌ಗಳು ಕಲಬುರಗಿ ಜಿಲ್ಲೆಗೆ ಹೆಚ್ಚು ಹೋಗುತ್ತವೆ ಹೊರತು ಯಾದಗಿರಿ ಜಿಲ್ಲೆಗೆ ಹೋಗುವುದಿಲ್ಲ. ಇದರಿಂದ ಯಾದಗಿರಿ ಜಿಲ್ಲಾ ಕೇಂದ್ರಕ್ಕೆ ಬಸ್‌ಗಳು ಇಲ್ಲದಿದ್ದರೆ ಸುರಪುರ ಬಸ್ ಘಟಕದಿಂದ ಒಂದು ಬಸ್ ಬಿಡದೆ ಪ್ರಯಾಣಿಕರನ್ನು ಸತಾಯಿಸುತ್ತಿರುವುದು ನಿತ್ಯ ನಡೆಯುತ್ತಿದೆ.
ಕೆಲಸ, ನೌಕರಿ, ಆಸ್ಪತ್ರೆ, ವ್ಯವಹಾರ ಸೇರಿ ಇತರೆ ಕಾರ್ಯಗಳಿಗೆ ಹೋಗುವವರು ಪಿಳಿಪಿಳಿ ಕಣ್ಣು ಬಿಡುತ್ತಾ ಯಾದಗಿರಿ ಬಸ್‌ಗಳನ್ನು ನೋಡುತ್ತಿರಬೇಕಿದೆ. ಕಂಟ್ರೋಲರ್ ಹತ್ತಿರ ಮಾತನಾಡಿದರೆ, ಬಸ್ ಬಂದಾಗ ಹತ್ತಿ ಹೋಗಿ, ನಮಗೆ ಸಾವಿರಾರು ಕೆಲಸ ಇದೆ ಎಂದು ಉದಾಸೀನವಾಗಿ ವರ್ತಿಸುತ್ತಾರೆ ಅನ್ನೋದು ಪ್ರಯಾಣಿಕರ ದೂರು.ಈ ಮೊದಲು 8.30ಕ್ಕೆಸರಿಯಾದ ಸಮಯಕ್ಕೆ ಬಸ್ ಬರುತ್ತಿತ್ತು. ಆ ಬಸ್ ಇದ್ದಿದ್ದರೆ ಸಮಯಕ್ಕೆ ಸರಿಯಾಗಿ ಕಚೇರಿಗೆ ಹಾಜರಾಗಿ ನಮ್ಮ ಕರ್ತವ್ಯವನ್ನು ಸಾವಧಾನವಾಗಿ ಮಾಡುತ್ತಿದ್ದೇವು. ಆದರೆ ಈಗ ಬಸ್ ಇಲ್ಲದೆ ಸರಿಯಾಗಿ ನಮ್ಮ ಕಾಯಕದ ಸ್ಥಳಕ್ಕೆ ಹೋಗಿ ವರದಿ ಮಾಡಿಕೊಳ್ಳದಿದ್ದರೆ ಅಧಿಕಾರಿಗಳು ನಿಂದಿಸುತ್ತಾರೆ. ಅಲ್ಲದೆ ಒಂದೆಡೆ ದಂಡ ಹಾಕುತ್ತಾರೆ. ನಮಗೆ ಮೇಲಾಧಿಕಾರಿಗಳಿಂದ ಬೈಸ್ಕೊಳ್ಳುವುದೇ ನಿತ್ಯ ಕೆಲಸವಾಗಿದೆ ಎಂದು ಮಹಿಳಾ ನೌಕರರು ಅಳಲು ತೋಡಿಕೊಂಡರು.
ಹತ್ತಿಗೂಡರು ಮತ್ತು ಯಾದಗಿರಿಗೆ ಹೋಗುವಂತಹ ವಿದ್ಯಾರ್ಥಿಗಳು ಒಂದು ದಿನವೂ ಕೂಡ ಕಾಲೇಜಿಗೆ ನಾವು ಸರಿಯಾಗಿ ಸಮಯಕ್ಕೆ ಹೋಗಿಲ್ಲ. ಇದರಿಂದ ನಿತ್ಯ ಶಿಕ್ಷಕರು ನಮ್ಮನ್ನು ಬಯ್ಯುತ್ತಾರೆ. ತಾಲೂಕು ಕೇಂದ್ರದಿಂದಲೇ ಜಿಲ್ಲಾ ಕೇಂದ್ರಕ್ಕೆ ಹೋಗಲು ಬಸ್ ಇಲ್ಲ ಅಂದರೆ ನಮ್ಮ ತಾಲೂಕಿನ ಸ್ಥಿತಿ ಏನೆಂಬುದು ನಮಗೆ ತಿಳಿಯುತ್ತಿಲ್ಲ. ಕೂಡಲೇ ಈ ಬಗ್ಗೆ ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.ವಾಗ್ವಾದ: ಕೆಎಸ್‌ಆರ್‌ಟಿಸಿ ಬಸ್ಸುಗಳಲಿಲ್ಲದೆ ಕಂಟ್ರೋಲರ್ ಮತ್ತು ಪ್ರಯಾಣಕರ ನಡುವೆ ವಾಗ್ವಾದ ನಡೆಯುತ್ತಿದೆ. ಬಸ್ ಬಗ್ಗೆ ಕೇಳಲು ಹೋದರೆ ನಮಗೆ ಏನ್ ಕೇಳ್ತೀರಾ? ಬಸ್ ಬಂದಾಗ ಹತ್ತಿಕೊಂಡು ಹೋಗಿ. ಇಲ್ಲದಿದ್ದರೆ ಇಲ್ಲೇ ಇರಿ. ನಮಗೂ ಅದಕ್ಕೂ ಯಾವುದೇ ಸಂಬಂಧ ಇಲ್ಲ. ನಮಗೆ ನೂರಾರು ಟೆನ್ಷನ್, ನಾಲ್ಕು ಜನ ಕಂಟ್ರೋಲರ್ ಇರಬೇಕಾದ ಜಾಗದಲ್ಲಿ ಒಬ್ಬನೇ ಇದ್ದೇನೆ. ನಮ್ಮ ಕಷ್ಟವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕಂಟ್ರೋಲರ್ ಮೆಹಬೂಬ್ ತಮ್ಮ ಸಮಸ್ಯೆ ಹೇಳುತ್ತಾರಂತೆ.
ಸುರಪುರ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕಂಟ್ರೋಲರ್‌ಗಳ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಯಾವುದೇ ಪ್ರಯಾಣಿಕ ಹೋದರೂ ಸಮಾಧಾನದಿಂದ ಉತ್ತರಿಸಿದೆ ರೇಗುವುದು, ಕೂಗಾಡುವುದು ಮಾಡುತ್ತಾರೆ. ಯಾವ ವಿಷಯವನ್ನು ಕೇಳಲು ಹಿಂದೇಟು ಹಾಕುವಂತ ಪರಿಸ್ಥಿತಿ ಇದೆ ಎಂದು ಪ್ರಯಾಣಿಕರಾದ ರಾಧಾ, ಅನುಸೂಯಾ ನೊಂದು ನುಡಿದರು.ಬೆಳಗಿನ ವೇಳೆ ಸುರಪುರ ತಾಲೂಕು ಕೇಂದ್ರದಿಂದ ಜಿಲ್ಲಾ ಕೇಂದ್ರಕ್ಕೆ ಹೋಗಲು ಯಾವ ಬಸ್ಸುಗಳೂ ಇಲ್ಲ. ಇದು ತಾಲೂಕಿನ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಜನಪ್ರತಿನಿಧಿಗಳು ಸಾರ್ವಜನಿಕರ ಕಷ್ಟವನ್ನು ಆಲಿಸುತ್ತಿಲ್ಲ. ಪ್ರಯಾಣಿಕರ ನೌಕರರ ಮತ್ತು ವಿದ್ಯಾರ್ಥಿಗಳ ಸಂಕಷ್ಟಕ್ಕೆ ಕೂಡಲೇ ಜನಪ್ರತಿನಿಧಿಗಳು ಸ್ಪಂದಿಸಿ, ಬಸ್ಸುಗಳ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಶೀಘ್ರದಲ್ಲೇ ರಸ್ತೆ ತಡೆದು ಬಸ್ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸುತ್ತೇವೆ.- ಮಲ್ಲಿಕಾರ್ಜುನ್ ಕ್ರಾಂತಿ, ಡಿಎಸ್‌ಎಸ್ (ಕ್ರಾಂತಿಕಾರಿ ಬಣ) ಜಿಲ್ಲಾ ಸಂಚಾಲಕ.