ಬಿಜೆಪಿಗೆ ಹೋಗಲು ಹಿಂಬಾಗಿಲು ಬೇಕಿಲ್ಲ, ನೇರ ಎಂಟ್ರಿಗೇ ಆಹ್ವಾನವಿದೆ

KannadaprabhaNewsNetwork | Updated : Mar 09 2024, 01:33 AM IST

ಸಾರಾಂಶ

ಹುಮನಾಬಾದ್‌ ಶಾಸಕ ಸಿದ್ದು ಪಾಟೀಲ್‌ ವಿರುದ್ಧ ಮಾಜಿ ಸಚಿವ ವಾಗ್ದಾಳಿ ನಡೆಸಿ, 48ಗಂಟೇಲಿ ಕಾಂಗ್ರೆಸ್‌ನ ಟಿಕೆಟ್‌ ತರ್ತೇನೆ, ನೀವು ಬಿಜೆಪಿ ಟಿಕೆಟ್‌ ತನ್ನಿ ಎಂದು ಫೇಸ್‌ಬುಕ್‌ ವಾರ್‌ ನಡೆಸಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಬಿಜೆಪಿಯ ಹಿರಿಯ ಅನೇಕ ಮುಖಂಡರೇ ನನ್ನನ್ನು ಕರೆಸಿ ಭೇಟಿಯಾಗಿದ್ದಾರೆ, ನಾನೇನು ನಿಮ್ಮ ಕಡೆ ಬರಬೇಕಂತೆ ಬಂದಿಲ್ಲ. 2008ರಿಂದಲೇ ಬಿಜೆಪಿಯ ಹಿರಿಯರು ನನ್ನನ್ನು ಪಕ್ಷಕ್ಕೆ ಆಹ್ವಾನಿಸುತ್ತಿದ್ದಾರೆ. ಹಿಂಬಾಗಿಲಿನಿಂದ ಬಿಜೆಪಿಗೆ ಹೋಗುವಂಥ ದುಸ್ಥಿತಿ ನನಗೆ ಬಂದಿಲ್ಲ. ಹೋಗಬೇಕಾದ್ರೆ ನೇರವಾಗಿ ಹೋಗೋಣ. ನನ್ನದೇ ಆದ ದೂರದೃಷ್ಟಿ ಇದೆ. ಅದರಂತೆ ನಾನು ಕೆಲಸ ಮಾಡ್ತೇನೆ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್‌ ತಿಳಿಸಿದ್ದಾರೆ.

ಅವರು ಗುರುವಾರ ಹುಮನಾಬಾದ್ ಶಾಸಕ ಡಾ. ಸಿದ್ದು ಪಾಟೀಲ್‌ ಅವರ ಫೇಸ್‌ಬುಕ್‌ ಲೈವ್‌ಗೆ ಉತ್ತರಿಸಿ, ಹೋಗಬೇಕಾದರೆ ನಿನಗೆ ಕೇಳಿ ಹೋಗಬೇಕಾ, 48 ಗಂಟೇಲಿ ಕಾಂಗ್ರೆಸ್‌ ಟಿಕೆಟ್‌ ತರ್ತೇನೆ ನೀವೂ ಬಿಜೆಪಿ ಟಿಕೆಟ್‌ ತನ್ನಿ ನೇರ ಸ್ಪರ್ಧೆಗೆ ಬನ್ನಿ ಎಂದ ಅವರು ಒಂದೆರಡು ವರ್ಷದ ಹಿಂದಷ್ಟೇ ಬಿಜೆಪಿಗೆ ಸೇರಿದ ಸಿದ್ದು ಪಾಟೀಲ್‌ ಅವರಿಗೆ ಇನ್ನೂ ಪಕ್ಷದ ಬಗ್ಗೆ ಗೊತ್ತಿಲ್ಲ ಎಂದು ಟಾಂಗ್‌ ನೀಡಿದರು.

ಕಾಂಗ್ರೆಸ್‌ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ ಹಾಗೆಯೇ 15 ವರ್ಷಕ್ಕೂ ಹೆಚ್ಚು ಕಾಲ ನನಗಿಂತ ಹೆಚ್ಚು, ಪಕ್ಷದ ಸೌಲಭ್ಯವನ್ನು ನೀವಷ್ಟೇ ಅಲ್ಲ ನಿಮ್ಮ ಪರಿವಾರವೂ ಪಡೆದಿಕೊಂಡಿದ್ದನ್ನು ಮರೆಯದಿರಿ. ನಾನು ಬಿಜೆಪಿಗೆ ಹೋಗುತ್ತಿದ್ದೇನೆ ಎಂದು ಯಾರು ಹೇಳಿದ್ದಾರೆ. ಕಾಂಗ್ರೆಸ್‌ ಶಾಸಕನಾಗಿದ್ದ ನನ್ನ ವಾಹನದ ಪಾಸ್‌ಗಳನ್ನು ನೀವು, ನಿಮ್ಮ ಸಹೋದರರು ನಿಮ್ಮ ಕಾರುಗಳಿಗೆ ಹಚ್ಚಿಕೊಂಡು ತಿರುಗುತ್ತಿದ್ದದ್ದನ್ನು ಮರೆತಂತೆ ಕಾಣುತ್ತದೆ ಆದರೆ ಜನ ಮರೆತಿಲ್ಲ. ನಿಮ್ಮ ಜೊತೆ ಬಿಜೆಪಿ ಮುಖಂಡರ ಬಳಿ ನಾನು ಬಂದಿದ್ದರ ಬಗ್ಗೆ ಒಬ್ಬ ಮುಖಂಡನ ಹೆಸರನ್ನಾದರ ಹೇಳಲಿ ಎಂದು ಪ್ರಶ್ನಿಸಿದರು.

ನಾನು ನನ್ನ ಧರ್ಮ ಪತ್ನಿ, ನನ್ನ ಮಗನ ಜೊತೆ ವೀರಭದ್ರೇಶ್ವರ ದೇವಸ್ಥಾನಕ್ಕೆ ಶಿವರಾತ್ರಿಯ ರಾತ್ರಿ 7ಕ್ಕೆ ಬಂದು ಆಣೆ ಪ್ರಮಾಣ ಮಾಡ್ತೀನಿ, ಶಾಸಕ ಡಾ. ಸಿದ್ದು ಪಾಟೀಲ್‌ ಸಹ ಬರಲಿ ನಾನು ಅವರೊಂದಿಗೆ ತೆರಳಿ ಟಿಕೆಟ್‌ಗಾಗಿ ಬಿಜೆಪಿ ಮುಖಂಡರ ಮನೆ ಬಾಗಿಲು ತುಳಿದದ್ದು ಮತ್ತು ಚಂದ್ರಬಾಬು ನಾಯ್ಡು ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂಬ ಎರಡು ವಿಷಯಗಳ ಬಗ್ಗೆ ಪ್ರಮಾಣ ಮಾಡಲಿ, ಆ ದೇವರು ಶಕ್ತಿ ಶಾಲಿಯಾಗಿದ್ದಾನೆ ಯಾರು ಸುಳ್ಳು ಹೇಳ್ತಾರೆ, ಯಾರು ಸತ್ಯ ಹೇಳ್ತಾರೆ ಎಂಬುವದನ್ನು ಆ ಭಗವಂತ ನೋಡ್ತಾನೆ ಎಂದು ರಾಜಶೇಖರ ಪಾಟೀಲ್‌ ಸವಾಲೆಸೆದರು.

ನಾಯ್ಡು ಪ್ರಕರಣದಲ್ಲಿ ಶಾಸಕ ಭಾಗಿ, ಆಣೆ ಮಾಡಿದ್ರೆ ರಾಜಕೀಯ ನಿವೃತ್ತಿ:

ಹುಮನಾಬಾದ್‌ ಶಾಸಕ ಡಾ. ಸಿದ್ದು ಪಾಟೀಲ್‌ ಅವರು ಹಾಗೂ ಮಹಾರಾಷ್ಟ್ರದ ಪೂಣೆಯಲ್ಲಿರುವ ಅವರ ಭಾವ ಆಂಧ್ರಪ್ರದೇಶ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗಿರುವ, ವಿಚಾರಣೆ ಎದುರಿಸಿರುವ ಮಾಹಿತಿ ಇದೆ. ಅದು ಆಗಿಲ್ಲ, ಈ ಪ್ರಕರಣದಲ್ಲಿಲ್ಲ ಎಂದು ಆಣೆ ಪ್ರಮಾಣ ಮಾಡಲಿ ನಾನು ರಾಜಕೀಯದಿಂದಲೇ ನಿವೃತ್ತಿ ಹೊಂದುತ್ತೇನೆ ಎಂದು ಸವಾಲೆಸೆದು ಮುಂಬರುವ ದಿನಗಳಲ್ಲಿ ತೆಲಂಗಾಣಾ ಹಾಗೂ ಆಂಧ್ರ ಮುಖ್ಯಮಂತ್ರಿಗೆ ಭೇಟಿಯಾಗಿ ತನಿಖೆಗೆ ಆಗ್ರಹಿಸಲಾಗುತ್ತದೆ ಎಂದು ಎಚ್ಚರಿಸಿದರು.

ಟೆಂಡರ್‌ಗೆ ನಿಮ್ಮನ್ನು ಕೇಳಿ ಹಾಕಲು ನಿವೇನ್‌ ಖಾನ್‌ ಅಲ್ಲ, ಗೌರ್ನರ್‌ ಅಲ್ಲ:

ಇನ್ನು ಕಾಮಗಾರಿಗಳ ಟೆಂಡರ್‌ ಬಗ್ಗೆ ನಿಮ್ಮನ್ನು ಕೇಳಿ ಹಾಕಲು ನಿವೇನ್‌ ಖಾನ್‌ ಅಲ್ಲ, ಗೌರ್ನರ್‌ ಅಲ್ಲ. ಕೇಳಲು ಸರ್ಕಾರ ಇದೆ. ಟೆಂಡರ್‌ ಪ್ರಕ್ರಿಯೆಯಲ್ಲಿ ಯಾರು ಬೇಕಾದರೂ ಪಾಲ್ಗೊಳ್ಳಬಹುದು. ಡಾ. ಅಂಬೇಡ್ಕರ್‌ ಅವರು ನೀಡಿರುವ ಸಂ‍ವಿಧಾನದಂತೆ ಕೆಲಸ ಮಾಡ್ತೇವೆ. ನಿಮ್ಮನ್ನು ಕೇಳಿ ನನ್ನ ಪುತ್ರನಾಗಲಿ, ಅಳಿಯನಾಗಲಿ ಟೆಂಡರ್‌ ಹಾಕುವ ಅಗತ್ಯವಿಲ್ಲ ಎಂದು ನಿಮ್ಮ ಬದುಕು ಏನಿತ್ತು, ಇಲ್ಲಿಯವರೆಗೆ ಬರಲು ಯಾವ ಹಾದಿ ಹಿಡಿದಿದ್ದೀರಾ ಎಂಬ ಕುರಿತಾಗ ನಿಮ್ಮ ಕುಂಡಲಿ ಬಿಚ್ಚಿಡುತ್ತೇನೆ ಎಂದು ಎಚ್ಚರಿಸಿದರು.

ಆಣೆ ಪ್ರಮಾಣಕ್ಕೆ ಶುಕ್ರವಾರ ಪವಿತ್ರ ಶಿವರಾತ್ರಿಯ ಸಂಜೆ 7ಗಂಟೆಗೆ ವೀರಭದ್ರೇಶ್ವರ ದೇವಸ್ಥಾನಕ್ಕೆ ಆಗಮಿಸುವಂತೆ ಹುಮನಾಬಾದ್‌ ಶಾಸಕ ಡಾ. ಸಿದ್ದು ಪಾಟೀಲ್‌ ಅವರಿಗೆ ಮಾಜಿ ಸಚಿವ ರಾಜಶೇಖರ ಪಾಟೀಲ್‌ ಆಹ್ವಾನ ನೀಡಿದ್ದಾರಾದರೆ ಶಾಸಕ ಡಾ. ಸಿದ್ದು ಪಾಟೀಲ್‌ ಅವರು ಬೆಂಗಳೂರಿನಲ್ಲಿದ್ದು ಆಣೆ ಪ್ರಮಾಣ ಸಧ್ಯಕ್ಕೆ ನಡೆಯಲ್ಲ ಎನ್ನಲಾಗಿದೆ.

Share this article