ಮೈತ್ರಿಯಾದ್ರೆ ನಮ್ಮ ಹಕ್ಕು ಬಿಟ್ಟು ಕೊಡುವ ಸಂದರ್ಭ ಬರೋದಿಲ್ಲ: ಸಿ.ಟಿ. ರವಿ
- ಬಿಜೆಪಿ ಕಚೇರಿಯಲ್ಲಿ ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಪಕ್ಷದ ಪ್ರಮುಖರ ಸಭೆ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ಜೆಡಿಎಸ್- ಬಿಜೆಪಿ ಮೈತ್ರಿ ಮಾಡಿಕೊಂಡರೆ ನೈಋತ್ಯ ಕ್ಷೇತ್ರದಲ್ಲಿ ನಾವು ನಮ್ಮ ಹಕ್ಕನ್ನು ಬಿಟ್ಟುಕೊಡುವ ಸಂದರ್ಭ ಬರುವುದಿಲ್ಲ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದ್ದಾರೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯ ಐದೂ ಜಿಲ್ಲೆಗಳ ಬಿಜೆಪಿ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು. ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಹಿನ್ನೆಲೆಯಲ್ಲಿ ಪರಿಷತ್ ಚುನಾವಣೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕೆಲವರಲ್ಲಿ ಗೊಂದಲಗಳಿರಬಹುದು. ಆದರೆ, ಇದುವರೆಗೆ ಜೆಡಿಎಸ್‌ನವರು ಎನ್‌ಡಿಎ ಭಾಗ ಮಾತ್ರ ಆಗಿದ್ದಾರೆ. ಚುನಾವಣೆ ಹೊಂದಾಣಿಕೆ ಚರ್ಚೆಯೇ ಪ್ರಾರಂಭವಾಗಿಲ್ಲ. ಈ ಕಾರಣಕ್ಕೆ ಯಾವುದೇ ಗೊಂದಲಕ್ಕೂ ಕಾರ್ಯಕರ್ತರು ಬೀಳುವುದು ಬೇಡ. ಒಂದು ವೇಳೆ ಹೊಂದಾಣಿಕೆ ಆಗುವುದೇ ಆದರೆ ನಾವು ನಮ್ಮ ಹಕ್ಕನ್ನು ಬಿಟ್ಟುಕೊಡುವ ಸಂದರ್ಭ ಬರುವುದಿಲ್ಲ ಎಂದರು. ನೈಋತ್ಯ ಕ್ಷೇತ್ರದಲ್ಲಿ 6 ಬಾರಿ ವಿಧಾನ ಪರಿಷತ್ ಚುನಾವಣೆ ನಡೆದಿದೆ. ಇವುಗಳಲ್ಲಿ ಬಿಜೆಪಿ 4 ಬಾರಿ ಗೆಲುವು ಸಾಧಿಸಿದೆ. ಈ ಕ್ಷೇತ್ರದ ವ್ಯಾಪ್ತಿಯಲ್ಲಿ 15 ಜನ ಕಾಂಗ್ರೆಸ್ ಶಾಸಕರು, 14 ಜನ ಬಿಜೆಪಿ ಶಾಸಕರು ಇದ್ದಾರೆ. ಜೆಡಿಎಸ್‌ನ ಓರ್ವರು ಮಾತ್ರ ಇದ್ದಾರೆ. ಸಂದರ್ಭ ಬಂದಾಗ ಇವೆಲ್ಲವೂ ಚರ್ಚೆಗೆ ಬರುತ್ತದೆ ಎಂದ ಅವರು, ಹೊಂದಾಣಿಕೆ ಆದ್ರೆ ಎನ್‌ಡಿಎ ಅಭ್ಯರ್ಥಿ ಇದ್ದರೆಂದು ಕೆಲಸ ಮಾಡೋಣ ಎಂದರು. ಶಿಕ್ಷಕರ ಕ್ಷೇತ್ರ ಮತ್ತು ಪದವೀಧರ ಕ್ಷೇತ್ರದ ಮತದಾರರ ನೋಂದಣಿಗೆ 2ನೇ ಹಂತದ ಮಹಾ ಸಂಪರ್ಕ ಅಭಿಯಾನ ಹಮ್ಮಿಕೊಂಡು ನ.6 ರೊಳಗೆ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ತಿಳಿಸಿದರು. ಇದೇ ತಿಂಗಳು 27 ಮತ್ತು 28 ರಂದು ಮೊದಲ ಹಾಗೂ 2ನೇ ಹಂತದ ಮಹಾ ಸಂಪರ್ಕ ಅಭಿಯಾನವನ್ನು ನ.3 ಮತ್ತು 4 ರಂದು ಹಮ್ಮಿಕೊಳ್ಳೋಣ ಎಂದು ಹೇಳಿದರು. ಹಳೇ ಮತದಾರರ ಪಟ್ಟಿಯನ್ನು ನಾವು ಬಳಸಿಕೊಳ್ಳಬೇಕು. ಅದರಲ್ಲಿ ಬಿಜೆಪಿ ಒಲವಿರುವವರು ಎಷ್ಟು ಮಂದಿ ಎಂದು ಗುರುತಿಸಿ ಶೇ.100 ಮತದಾನ ಆಗುವಂತೆ ನೋಡಿಕೊಳ್ಳಬೇಕು. ಅದು ಶಿಕ್ಷಕರಿರಲಿ, ಪದವೀಧರರು ಇರಲಿ. ಹಾಗೆಯೇ ಹೊಸ ನೋಂದಣಿ ಮಾಡುವಾಗ ನಮ್ಮ ಒಲವು ಇರುವವರು ಎನ್ನುವ ಕಡೆಗೆ ಗಮನ ಕೊಡಬೇಕು ಎಂದರು. ಯಾರು ನೋಂದಣಿ ಮಾಡಿಸಿದ್ದು ಎನ್ನುವುದು ಮುಖ್ಯವಾಗುವುದಿಲ್ಲ. ಯಾರನ್ನು ನೋಂದಣಿ ಮಾಡಿಸಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ. ಶಿಕ್ಷಕರ ಬೇರೆ ಸಂಘಟನೆಗಳಿವೆ, ಪ್ರಿನ್ಸಿಪಲ್ಸ್ ಅಸೋಸಿಯೇಷನ್, ಖಾಸಗಿ ಶಿಕ್ಷಕರ ಸಂಘ, ಅತಿಥಿ ಶಿಕ್ಷಕರ ಸಂಘಟನೆ, ಪದವೀಧರ ಶಿಕ್ಷಕರ ಸಂಘಟನೆ ಹೀಗೆ ಬೇರೆ ಸಂಘಟನೆಯವರನ್ನೆಲ್ಲಾ ಸಂಪರ್ಕಿಸಬೇಕು ಎಂದು ಸಲಹೆ ಮಾಡಿದರು. ಅಭ್ಯರ್ಥಿ ಆಯ್ಕೆಯನ್ನು ಸ್ಥಳೀಯರ ಅಭಿಪ್ರಾಯ ಪಡೆದು ರಾಜ್ಯಕ್ಕೆ ಕಳುಹಿಸಿ ನಂತರ ಕೇಂದ್ರೀಯ ಚುನಾವಣಾ ಸಮಿತಿಗೆ ಕಳುಹಿಸಿ ಅಲ್ಲಿ ಅಂತಿಮ ತೀರ್ಮಾನ ಆಗಲಿದೆ ಎಂದು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ಕೊಡಗು ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಶಿವಮೊಗ್ಗ ಜಿಲ್ಲಾಧ್ಯಕ್ಷ ಮೇಘರಾಜು, ಉಡುಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್, ವಿಧಾನ ಪರಿಷತ್ ಸದಸ್ಯ ಅರುಣ್, ಗಿರೀಶ್ ಪಟೇಲ್ , ನೈಋತ್ಯ ಪದವೀಧರ ಕ್ಷೇತ್ರದ ಜಿಲ್ಲಾ ಸಂಚಾಲಕ ಸಿ.ಆರ್.ಪ್ರೇಮ್‌ಕುಮಾರ್, ಶಿಕ್ಷಕರ ಕ್ಷೇತ್ರದ ಜಿಲ್ಲಾ ಸಂಚಾಲಕ ಎಚ್.ಎಸ್. ಪುಟ್ಟಸ್ವಾಮಿ ಉಪಸ್ಥಿತರಿದ್ದರು. 25 ಕೆಸಿಕೆಎಂ 1 ಚಿಕ್ಕಮಗಳೂರಿನ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ನಡೆದ ಪಕ್ಷದ ಮುಖಂಡರ ಸಭೆಯಲ್ಲಿ ಮಾಜಿ ಸಚಿವ ಸಿ.ಟಿ. ರವಿ ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.