ಕನ್ನಡಪ್ರಭ ವಾರ್ತೆ ಚಡಚಣ
ನಾನು, ನೀನು, ಆನು, ತಾನು ಎಂಬ ನಾಲ್ಕೇ ನಾಲ್ಕು ಅದ್ವೈತ ಸಿದ್ಧಾಂತದ ಆಧ್ಯಾತ್ಮಿಕ ಪದಗಳನ್ನೊಳಗೊಂಡಂತೆ ಸರಳ ಹಾಗೂ ಸರ್ವಕಾಲಕ್ಕೂ ಬಾಳುವಂತಹ ಕವನಗಳನ್ನು ಬರೆದು ಶಬ್ದಗಾರುಡಿಗ ಎಂದು ಪ್ರಖ್ಯಾತಿ ಪಡೆದವರು ನಾಕುತಂತಿ ಖ್ಯಾತಿಯ ವರಕವಿ ದ.ರಾ.ಬೇಂದ್ರೆ ಎಂದು ಪಿಡಿಜೆ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಸಂತೋಷ ಕುಲಕರ್ಣಿ ಹೇಳಿದರು.ಪಟ್ಟಣದ ಶ್ರೀ ಸಂಗಮೇಶ್ವರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಕನ್ನಡ ವಿಭಾಗ ಆಯೋಜಿಸಿದ ವರಕವಿ ಬೇಂದ್ರೆ ಅವರ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಂಬಿಕಾತನಯದತ್ತ ಎಂಬ ಕಾವ್ಯ ನಾಮದಿಂದ ಕವನಗಳನ್ನು ಬರೆದು ಜನಸಾಮಾನ್ಯರಿಗೂ ತಿಳಿಯುವಂತೆ ಮಾಡಿದರು. ಗರಿ, ನಾದಲೀಲೆ, ನಾಕುತಂತಿ, ಅರಳು ಮರಳು, ಉಯ್ಯಾಲೆ, ಸಖಿಗೀತ ಮುಂತಾದ ಪ್ರಸಿದ್ಧ ಕವನ ಸಂಕಲಗಳನ್ನು ಬರೆದಿದ್ದಾರೆ. ಅವರ ನರಬಲಿ ಕವನ ಬ್ರಿಟಿಷ್ ಆಡಳಿತವನ್ನು ಪ್ರಶ್ನಿಸುವಂತೆ ಇದ್ದುದ್ದರಿಂದ ಅವರನ್ನು ಸೆರೆಮನೆಗೆ ಹಾಕಲಾಯಿತು ಎಂದು ಹೇಳಿದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಂ.ಎಸ್.ಮಾಗಣಗೇರಿ ಮಾತನಾಡಿ, ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು ಬಳಸಿಕೊಂಡೆವು ಅದನು ಅದಕು ಇದಕು ಎದಕು ಕವನದ ತಿರುಳು ಬೆಂದು ಬೇಂದ್ರೆಯಾದ ಒಲವಿನ ಆಶಯವನ್ನು ಧ್ವನಿಸಿದರೆ ‘ಸಖೀ ಗೀತ’ವಂತೂ ಬದುಕಿನ ಬವಣೆಯ ಮಹಾಕಾವ್ಯವೇ ಸರಿ ಎಂದು ವಿಶ್ಲೇಷಿಸಿದರು.ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ನಿರ್ದೇಶಕ ಬಸವರಾಜ ಯಂಕಂಚಿ ಮಾತನಾಡಿ, ಬೇಂದ್ರೆಯವರು ಹೇಳಿದ ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ ಎಂಬ ಮಾತು ಕವಿ ಹಾಗೂ ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆಯಾಗಿದೆ. ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ಕವನಗಳನ್ನು ಓದುವ ಹಾಗೂ ಬರೆಯುವ ಪ್ರವೃತ್ತಿ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆಡಳಿತಾಧಿಕಾರಿ ಡಾ.ಎಸ್.ಎಸ್.ಚೋರಗಿ ಮಾತನಾಡಿ, ‘ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ ನೀಡುವೆನು ರಸಿಕ ನಿನಗೆ ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ ಅದರ ಸವಿಯನು ಹನಿಸು ಎನಗೆ’ ಎಂದು ಬೇಂದ್ರೆಯವರ ಕಾವ್ಯದ ಸವಿಯನ್ನು ನೆನಪಿಸಿಕೊಂಡರು.ಪ್ರಾಚಾರ್ಯ ಡಾ.ಎಸ್.ಬಿ.ರಾಠೋಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಂಥಪಾಲಕ ಎಂ.ಕೆ. ಬಿರಾದಾರ, ಪ್ರೊ.ಬಸವರಾಜ ಯಳ್ಳೂರ, ಪ್ರೊ.ಮಯೂರ್ ಕುದುರಿ, ಪ್ರೊ.ಮುರುಗೇಶ್ ಕೆ. ಎಂ., ಪ್ರೊ.ಎಸ್. ಎಸ್. ವಾಲಿಕಾರ ಪ್ರೊ.ಪೂಜಾ ಬುರುಡ, ಪ್ರೊ.ವಿನೋದ ಘೆವಂಡೆ ಹಾಗೂ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕುಮಾರಿ ರಾಜಶ್ರೀ ಹೊನಮೋರೆ ಪ್ರಾರ್ಥಿಸಿದರು. ಪ್ರೊ.ಮಹಾಂತೇಶ ಜನವಾಡ ಸ್ವಾಗತಿಸಿದರು. ಪ್ರೊ.ಎಸ್.ಎಫ್.ಬಿರಾದಾರ ನಿರೂಪಿಸಿದರು. ಡಾ. ಎಸ್. ಎಸ್. ದೇಸಾಯಿ ವಂದಿಸಿದರು.