ಸುಖ ಭೋಗಗಳಿದ್ದರೂ ಯಾರಿಗೂ ಶಾಂತಿ, ನೆಮ್ಮದಿ ಇಲ್ಲ: ಅಮೋಘಕೀರ್ತಿ ಮುನಿ ಮಹಾರಾಜ

KannadaprabhaNewsNetwork | Published : Feb 29, 2024 2:05 AM

ಸಾರಾಂಶ

ಪೂಜ್ಯ ಅಮರಕೀರ್ತಿ ಮುನಿ ಮಹಾರಾಜರು ಆಶೀರ್ವಚನ ನೀಡಿ ತೀರ್ಥಂಕರರ ಜನನದಿಂದ ಮೂರು ಲೋಕಗಳಲ್ಲೂ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ. ದೀಕ್ಷೆ ಎಂಬುದು ಪಲಾಯನವಾದ ಅಲ್ಲ. ಪ್ರಗತಿ ಮತ್ತು ಉನ್ನತಿಯ ಮಾರ್ಗವಾಗಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಸಿದ್ಧವಸ್ತುಗಳು, ಸುಖ-ಭೋಗಗಳು ಸಾಕಷ್ಟು ಸಿಗುತ್ತವೆ. ಆದರೆ ಯಾರಿಗೂ ಶಾಂತಿ, ಸಮಾಧಾನವಿಲ್ಲ. ಕೋಪದಿಂದ, ಭಾವುಕತೆಯಿಂದ ಯಾರೂ ಮುನಿ ದೀಕ್ಷೆ ತೆಗೆದುಕೊಳ್ಳಬಾರದು. ವೈರಾಗ್ಯಭಾವದಿಂದ ಮಾತ್ರ ದೃಢ ಸಂಕಲ್ಪದೊಂದಿಗೆ ಮುನಿ ದೀಕ್ಷೆ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಪೂಜ್ಯ ಅಮೋಘಕೀರ್ತಿ ಮುನಿ ಮಹಾರಾಜರು ಹೇಳಿದರು.

ಅವರು ಬುಧವಾರ ವೇಣೂರಿನಲ್ಲಿ ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ರಾಜ್ಯಾಭಿಷೇಕ ಮತ್ತು ದೀಕ್ಷಾಕಲ್ಯಾಣ ರೂಪಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಂಗಲ ಪ್ರವಚನ ನೀಡಿದರು.

ಆದಿನಾಥ ತೀರ್ಥಂಕರರ ಕಾಲದಿಂದಲೂ ಮುನಿದೀಕ್ಷಾ ಪದ್ಧತಿ ಬಳಕೆಯಲ್ಲಿದೆ. ಈಗ ಎಲ್ಲ ಸುಖ- ಭೋಗಗಳು ಹಾಗೂ ಸಿದ್ಧವಸ್ತುಗಳು ಸುಲಭದಲ್ಲಿ ಸಿಗುತ್ತವೆ. ಆದರೆ ಮಾನಸಿಕ ಶಾಂತಿ, ನೆಮ್ಮದಿ ಯಾರಿಗೂ ಇಲ್ಲ. ಇಂದು ಮನುಷ್ಯನ ಜೀವನ ಪಶುಗಳಂತೆ ಆಗಿದೆ. ಯಾರೂ ಅಧ್ಯಯನ, ಸ್ವಾಧ್ಯಾಯ, ಧಾರ್ಮಿಕ ಚಿಂತನ- ಮಂಥನ ಮಾಡುವುದಿಲ್ಲ. ಜ್ಞಾನ ಮತ್ತು ವೈರಾಗ್ಯ ಶೂನ್ಯವಾಗಿದೆ. ಸಾಹಿತ್ಯ, ಸಂಗೀತ, ಕಲೆಯಲ್ಲಿ ಯಾರಿಗೂ ಆಸಕ್ತಿಯಿಲ್ಲ. ಧರ್ಮ ಜಾಗೃತಿ ಇಲ್ಲ. ರತ್ನತ್ರಯ ಧರ್ಮದ ಪಾಲನೆಯಿಂದ ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಅವರು ಹೇಳಿದರು.

ಅಂದು ಹಸ್ತಿನಾಪುರದಲ್ಲಿ ನಡೆದ ಶಾಂತಿನಾಥ ತೀರ್ಥಂಕರರ ದೀಕ್ಷಾವಿಧಿಯ ರೂಪಕವನ್ನು ಇಂದು ಮುನಿಗಳು ನೆರವೇರಿಸಿ ಮಾತನಾಡಿದರು.

ಪೂಜ್ಯ ಅಮರಕೀರ್ತಿ ಮುನಿ ಮಹಾರಾಜರು ಆಶೀರ್ವಚನ ನೀಡಿ ತೀರ್ಥಂಕರರ ಜನನದಿಂದ ಮೂರು ಲೋಕಗಳಲ್ಲೂ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ. ದೀಕ್ಷೆ ಎಂಬುದು ಪಲಾಯನವಾದ ಅಲ್ಲ. ಪ್ರಗತಿ ಮತ್ತು ಉನ್ನತಿಯ ಮಾರ್ಗವಾಗಿದೆ ಎಂದು ಅವರು ಹೇಳಿದರು.

ಕೊಲ್ಲಾಪುರದ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ, ಕಂಬದಹಳ್ಳಿ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ ಮತ್ತು ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿದರು. ಬೆಂಗಳೂರಿನ ಪದ್ಮಿನಿ ನಾಗರಾಜ್ ಜೈನ ಧರ್ಮದ ಪ್ರಸ್ತುತತೆ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಮೂಡುಬಿದಿರೆ ನೋಟರಿ ಶ್ವೇತಾ ಜೈನ್ ಕಾರ್ಯಕ್ರಮ ನಿರ್ವಹಿಸಿದರು.ಮಸ್ತಕಾಭಿಷೇಕದಲ್ಲಿ ಇಂದಿನ ಕಾರ್ಯಕ್ರಮ

ವೇಣೂರು ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕದ ಎಂಟನೇ ದಿನವಾದ ಫೆ.೨೯ರಂದು ಗುರುವಾರ ಯುಗಳ ಮುನಿಶ್ರೀಗಳಾದ ಪರಮಪೂಜ್ಯ ೧೦೮ ಶ್ರೀ ಅಮೋಘಕೀರ್ತಿ ಮಹಾರಾಜರು ಹಾಗೂ ಪರಮಪೂಜ್ಯ ೧೦೮ ಶ್ರೀ ಅಮರಕೀರ್ತಿ ಮಹಾರಾಜರ ಪಾವನ ಸಾನಿಧ್ಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಕುಟುಂಬಸ್ಥರು ದಿನದ ಸಂಪೂರ್ಣ ಸೇವೆ ನೆರವೇರಿಸುವರು.

ಮೂಡುಬಿದಿರೆ ಜೈನಮಠದ ಡಾ. ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ, ಕಾರ್ಕಳ ಭುವನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡುವರು. ಪೂಜಾಕರ್ತೃಗಳಿಂದ ಬೆಳಗ್ಗೆ ೮ ಗಂಟೆಗೆ ಕೆವಲ ಜ್ಞಾನ ಕಲ್ಯಾಣ ಆಹಾರ ವಿಧಾನನಡೆದು ಸಮವಸರಣ ಪೂಜೆ ನೆರವೇರುವುದು.

ಮುಖ್ಯ ವೇದಿಕೆಯಲ್ಲಿ ರಾತ್ರಿ ೭.೩೦ ರಿಂದ ೯.೩೦ರವರೆಗೆ ಉಜಿರೆ ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳ ಎಸ್.ಡಿ.ಎಂ. ಕಲಾ ಕೇಂದ್ರದಿಂದ ಕಲಾವೈಭವ ನೆರವೇರುವುದು. ರಾತ್ರಿ ೯.೩೦ ರಿಂದ ೧೧.೩೦ರವರೆಗೆ ಕಾರ್ಕಳ ಶ್ರೀ ಲಲಿತ ಕೀರ್ತಿ ಯಕ್ಷಗಾನ ಕಲಾ ಮಂಡಳಿಯಿಂದ ಕಮಠೋಪಸರ್ಗ ವಿಜಯ ಯಕ್ಷಗಾನ ನಡೆಯುವುದು. ವಸ್ತುಪ್ರದರ್ಶನ ವೇದಿಕೆಯಲ್ಲಿ ರಾತ್ರಿ ೭ ರಿಂದ ೮.೩೦ ರವರೆಗೆ ಭಕ್ತಿಗೀತೆ ಹಾಗೂ ಭಾವಗೀತೆ ಸ್ಫೂರ್ತಿ ಭಟ್ ಗುಂಡೂರಿ ಬಳಗದವರಿಂದ ರಾತ್ರಿ ಗಂಟೆ ೮.೩೦ ರಿಂದ ೧೧ರವರೆಗೆ ವೇಣೂರು ಶಿವಾಂಜಲಿ ಡ್ಯಾನ್ಸ್ ಇನ್‌ಸ್ಟಿಟ್ಯೂಟ್‌ನಿಂದ ನೃತ್ಯ ಪ್ರದರ್ಶನ ಸಾದರಪಡಿಸಲಿರುವರು.

Share this article