ಸುಂದರ ಬದುಕು ಕಟ್ಟಿಕೊಂಡಲ್ಲಿ ಸಮಸ್ಯೆ ಇರದು: ಮಧುಗಿರಿ ಡಿವೈಎಸ್‌ಪಿ ರಾಮಚಂದ್ರಪ್ಪ

KannadaprabhaNewsNetwork | Published : Nov 17, 2024 1:18 AM

ಸಾರಾಂಶ

ಈ ಹಿಂದೆ ಅಪರಾಧ ಕೃತ್ಯಗಳಲ್ಲಿ ಭಾಗವಹಿಸಿದ್ದವರು ಕಾನೂನು ಹಾಗೂ ಸಮಾಜಬಾಹಿರ ಚಟವಟಿಕೆಗಳಿಂದ ದೂರ ಸರಿದು ಉತ್ತಮ ನಾಗರೀಕರನ್ನಾಗಿ ಬದುಕು ಕಟ್ಟಿಕೊಳ್ಳುವಂತೆ ಮಧುಗಿರಿ ಡಿವೈಎಸ್‌ಪಿ ರಾಮಚಂದ್ರಪ್ಪ ಸಲಹೆ ನೀಡಿದರು. ಪಾವಗಡ ಪೊಲೀಸ್‌ ಠಾಣೆ ಆವರಣದಲ್ಲಿ ಅಪರಾಧಿಗಳಿಗೆ ಪರೇಡ್‌ ನಡೆಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಪಾವಗಡ

ಈ ಹಿಂದೆ ಅಪರಾಧ ಕೃತ್ಯಗಳಲ್ಲಿ ಭಾಗವಹಿಸಿದ್ದವರು ಕಾನೂನು ಹಾಗೂ ಸಮಾಜಬಾಹಿರ ಚಟವಟಿಕೆಗಳಿಂದ ದೂರ ಸರಿದು ಉತ್ತಮ ನಾಗರೀಕರನ್ನಾಗಿ ಬದುಕು ಕಟ್ಟಿಕೊಳ್ಳುವಂತೆ ಮಧುಗಿರಿ ಡಿವೈಎಸ್‌ಪಿ ರಾಮಚಂದ್ರಪ್ಪ ಸಲಹೆ ನೀಡಿದರು.

ಅವರು ಪಾವಗಡ ಪೊಲೀಸ್‌ ಠಾಣೆಯ ಅವರಣದಲ್ಲಿ ವೈ.ಎನ್‌.ಹೊಸಕೋಟೆ,ತಿರುಮಣಿ ಅರಸೀಕೆರೆ ಪಾವಗಡ ಸೇರಿ ಈ ಠಾಣೆಗಳಲ್ಲಿ ರೌಡಿ ಶೀಟರ್, ಮಟ್ಕಾ ಇಸ್ಪೀಟ್‌,ಇತರೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಪರಾಧಿಗಳಿಗೆ ಪರೇಡ್‌ ನಡೆಸಿ ಬುದ್ದಿ ವಾದ ಹೇಳಿದರು.

ಮಟ್ಕಾ ಇಸ್ಪೀಟ್‌ ಹಾಗೂ ಇತರೆ ಸಮಾಜ ಬಾಹೀರ ಚಟವಟಿಕೆಯಿಂದ ಸಮಾಜಕ್ಕೆ ಹಾನಿಕರ. ಇದರಿಂದ ನಿಮ್ಮ ಕುಟುಂಬ ಹಾಗೂ ಜೀವನ ಹದಗೆಡಲಿದ್ದು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬದುಕು ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.

ನಂತರ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕುಂದು ಕೊರತೆಗಳ ಸಭೆ ನಡೆಸಿದರು. ಈ ವೇಳೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ದೇವಸ್ಥಾನಗಳ ಪಕ್ಕ ಶಾಲಾ-ಕಾಲೇಜುಗಳ ಪಕ್ಕ ಪೆಟ್ಟಿಗೆ ಅಂಗಡಿಗಳಲ್ಲಿ ಯಾರೋ ಭಯವಿಲ್ಲದೆ ಅಕ್ರಮ ಮದ್ಯ ಮಾರಾಟವಾಗುತ್ತಿದೆ. ಇದನ್ನು ಸೇವಿಸುವ ಗ್ರಾಮೀಣ ಪ್ರದೇಶದ ಅನೇಕ ಮಂದಿ ಬಡವರ್ಗದವರು ಬೀದಿ ಪಾಲಾಗುತ್ತಿದ್ದಾರೆ. ಇದನ್ನು ತಡೆಗಟ್ಟುವಲ್ಲಿ ಹೆಚ್ಚು ಆಸಕ್ತಿ ವಹಿಸುವಂತೆ ಅನೇಕ ಮಂದಿ ದಲಿತ ಮುಖಂಡರು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿ ಡಿವೈಎಸ್‌ಪಿಗೆ ಒತ್ತಾಯಿಸಿದರು.

ಇದೇ ವೇಳೆ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕ ಜಿಲ್ಲಾಧ್ಯಕ್ಷ ಪಾಳೆಗಾರ ಲೋಕೇಶ್ ಮಾತನಾಡಿ ಪಾವಗಡ ತಾಲೂಕಿನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಕುಂದು ಕೊರತೆಗಳ ಬಗ್ಗೆ ವಿವರಿಸಿದರು.

ದಲಿತ ಮುಖಂಡ ಹನುಮಂತರಾಯಪ್ಪ ಮಾತನಾಡಿ ತಾಲೂಕಿನಲ್ಲಿ ಎಚ್ಚೆತ್ತಿರುವ ಪೋಕ್ಸೋ ಕೇಸುಗಳ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಜಾಗೃತಿ ಕಾರ್ಯಕ್ರಮವನ್ನು ಇಲಾಖೆ ವತಿಯಿಂದ ಹಮ್ಮಿಕೊಳ್ಳುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ವೃತ್ತ ನಿರೀಕ್ಷಕರಾದ ಸುರೇಶ್ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಗಿರೀಶ್, ತಾಲೂಕಿನ ಎಲ್ಲಾ ಪೊಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್‌ ಗಳು ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಮುಖಂಡರಾದ ಗುಟ್ಟಹಳ್ಳಿ ಅಂಜಪ್ಪ,ಕನ್ನಮೇಡಿ ಕೃಷ್ಣಮೂರ್ತಿ, ಪೆದ್ದನ್ನ, ಸಿ.ಕೆ.ತಿಪ್ಪೇಸ್ವಾಮಿ,ಭಾಸ್ಕರ್ ನಾಯಕ,ಹನುಮಂತರಾಯಪ್ಪ,ಬೇಕರಿ, ನಾಗರಾಜ್,ಕರವೇ ಲಕ್ಷ್ಮೀನಾರಾಯಣ,ಕೆ.ಟಿ.ಹಳ್ಳಿ ಮಂಜುನಾಥ್,ಕೆ.ಪಿ. ಲಿಂಗಣ್ಣ,ಮಂಗಳವಾಡ ಮಂಜುನಾಥ,ಡಿಎಸ್ಎಸ್ ನರಸಿಂಹಪ್ಪ,ವಳ್ಳೂರು ನಾಗೇಶ್ ,ಬಿಎಸ್‌ಪಿ ಮಂಜುನಾಥ,ಡಿಜೆಎಸ್‌ ಈರಣ್ಣ,ಬಾಸ್ಕರನಾಯಕ ಇತರೆ ಅನೇಕ ಮಂದಿ ಸಂಘಟನೆಯ ಮುಖಂಡರು ಭಾಗವಹಿಸಿದ್ದರು.

Share this article