ಬಸ್‌ ಪ್ರಯಾಣ ದರ ಏರಿಕೆ ಪ್ರಸ್ತಾಪ ಇಲ್ಲ-ಸಿಎಂ

KannadaprabhaNewsNetwork | Published : Jun 21, 2024 1:06 AM

ಸಾರಾಂಶ

ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಬಸ್‌ ದರ ಹೆಚ್ಚಳ ಮಾಡುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಕನ್ನಡಪ್ರಭ ವಾರ್ತೆ ಬಳ್ಳಾರಿತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಬಸ್‌ ದರ ಹೆಚ್ಚಳ ಮಾಡುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.ಸಂಡೂರು ತಾಲೂಕಿನ ಜಿಂದಾಲ್‌ ವಿಮಾನ ನಿಲ್ದಾಣದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿ, ರಾಜ್ಯದಲ್ಲಿ ಬಸ್ ದರ ಏರಿಕೆ ಮಾಡುವುದಿಲ್ಲ ಎಂದು ತಿಳಿಸಿದರು.

ಗ್ಯಾರಂಟಿಗಾಗಿಯೇ ಅಲ್ಲ, ರಾಜ್ಯದ ಅಭಿವೃದ್ಧಿಗಾಗಿ ಡೀಸೆಲ್‌-ಪೆಟ್ರೋಲ್ ಬೆಲೆ ಏರಿಸಬೇಕಾಯಿತು ಎಂದು ಸ್ಪಷ್ಟನೆ ನೀಡಿದ ಅವರು, ಈ ವರ್ಷ ಗ್ಯಾರಂಟಿ ಯೋಜನೆಗಳಿಗೆ ₹65 ಸಾವಿರ ಕೋಟಿ ನೀಡಬೇಕು. ಉಳಿದಂತೆ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು. ಇದಕ್ಕೆಲ್ಲ ಸಂಪನ್ಮೂಲ ಸಂಗ್ರಹಿಸಬೇಕಲ್ಲವೇ? ಎಂದರು.

ಕೇಂದ್ರದ ಬಿಜೆಪಿ ಸರ್ಕಾರ ಬೆಲೆ ಏರಿಕೆ ಮಾಡಿದರೆ ನೀವು (ಮಾಧ್ಯಮದವರು) ಮಾತನಾಡುವುದಿಲ್ಲ. ಆದರೆ ನಾವು ಬೆಲೆ ಏರಿಸಿದರೆ ಪ್ರಶ್ನಿಸುತ್ತೀರಿ. ತೈಲಬೆಲೆ ಏರಿಕೆಗೆ ಕೇಂದ್ರ ಸರ್ಕಾರವೇ ಕಾರಣ. ಕಳೆದ 10 ವರ್ಷಗಳ ಹಿಂದೆ ₹72 ಇದ್ದ ಪೆಟ್ರೋಲ್ ದರ ಇದೀಗ ಲೀಟರ್‌ಗೆ ₹100 ಆಗಿದೆ. ಕೇಂದ್ರ ಸರ್ಕಾರ ಈ ಹಿಂದೆ ಬೆಲೆ ಏರಿಕೆ ಮಾಡಿತ್ತು. ಅಲ್ಲದೆ ಕರ್ನಾಟಕ ಪಾಲಿನ ತೆರಿಗೆ ಹಣವನ್ನೂ ನೀಡುತ್ತಿಲ್ಲ. ರಾಜ್ಯಕ್ಕೆ ₹1.87 ಲಕ್ಷ ಕೋಟಿ ರು. ಅನ್ಯಾಯವಾಗಿದೆ ಎಂದರು.

ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಬಿಟ್ಟರೆ ಬಿಜೆಪಿಯ ಯಾವ ಸಂಸದನೂ ಈ ಬಗ್ಗೆ ಮಾತನಾಡಲಿಲ್ಲ. ಬೆಂಗಳೂರು ಅಭಿವೃದ್ಧಿಗೆ, ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಅನುದಾನ ನೀಡಲಿಲ್ಲ. ಅನುದಾನ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದ ಡಿ.ಕೆ.ಸುರೇಶ್ ಅವರದ್ದು ದೇಶ ವಿಭಜನೆಯ ಹೇಳಿಕೆ ಎಂದು ಹರಿಹಾಯ್ದರು.

ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ಆರಂಭ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ರಾಜ್ಯದಾದ್ಯಂತ ಹೋರಾಟ ನಡೆಸುತ್ತಿರುವ ಕುರಿತ ಪ್ರಶ್ನೆಗೆ, ಎರಡು ಇಲಾಖೆ ಅಧಿಕಾರಿಗಳ ಜತೆ ಸೋಮವಾರ ಸಭೆ ಕರೆಯಲಾಗಿದೆ. ಈ ಕುರಿತು ಸೂಕ್ತ ನಿಲುವು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ತುಂಗಭದ್ರಾ ಜಲಾಶಯದ ನವಲಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಸಂಬಂಧಿಸಿ ಮೂರು ರಾಜ್ಯಗಳ ನಡುವೆ ಚರ್ಚೆಯಾಗಬೇಕಾಗಿದೆ. ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳ ಜತೆಗೆ ಮಾತನಾಡಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.ಸಂಡೂರು ತಾಲೂಕಿನಲ್ಲಿ ಗಣಿಗಾರಿಕೆ ಆರಂಭಕ್ಕೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅನುಮತಿ ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, "ನೀವು ಅವರನ್ನೇ ಕೇಳಿ " ಎಂದರಲ್ಲದೆ, ಒಂದು ಕಾಲದಲ್ಲಿ ಅವರೇ (ಎಚ್.ಡಿ.ಕುಮಾರಸ್ವಾಮಿ) ಅದಕ್ಕೆ ವಿರೋಧಿಸಿದ್ದರು ಎಂದು ಹೇಳಿದರು.

Share this article