ಪೊಲೀಸ್‌ ಠಾಣೆಯಲ್ಲೇ ರಕ್ಷಣೆ ಇಲ್ಲ: ಸತೀಶ್‌ ಕುಂಪಲ ಆರೋಪ

KannadaprabhaNewsNetwork | Published : Oct 18, 2024 12:01 AM

ಸಾರಾಂಶ

ಅಶಾಂತಿಯುತ ವಾತಾವರಣ ನಿರ್ಮಾಣಕ್ಕೆ ಪೊಲೀಸ್ ಇಲಾಖೆ ಕಾರಣವಾಗುತ್ತಿದೆ. ಸ್ಥಳೀಯ ಶಾಸಕರು ಈ ಪ್ರಕರಣದ ಬಗ್ಗೆ ಧ್ವನಿ ಎತ್ತಿಲ್ಲ. ಸಾಮರಸ್ಯ ಸಮನ್ವಯ ತರುವ ಕೆಲಸವನ್ನು ಶಾಸಕರು ಮಾಡಲಿ ಎಂದು ಸತೀಶ್‌ ಕುಂಪಲ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಉಳ್ಳಾಲ ಠಾಣೆ ಇನ್ಸ್‌ಪೆಕ್ಟರ್ ಕೊಠಡಿಯಲ್ಲೇ ಭಜರಂಗದಳ ಮುಖಂಡನಿಗೆ ಹಲ್ಲೆ ಪ್ರಕರಣ ಸಂಭವಿಸಿದೆ. ಇದು ಪೊಲೀಸ್‌ ಠಾಣೆಯಲ್ಲೇ ರಕ್ಷಣೆ ಇಲ್ಲ ಎನ್ನುವುದು ಸಾಬೀತಾಗಿದೆ ಎಂದು ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್‌ ಕುಂಪಲ ಆರೋಪಿಸಿದ್ದಾರೆ.

ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆದುಕೊಂಡ ಪರಿಣಾಮ ಇಂದು ಹಿಂದೂ ಮುಖಂಡರ ಮೇಲೆ ಹಲ್ಲೆಯಾಗುತ್ತಿದೆ. ಈ ರೀತಿ ಪರಿಸ್ಥಿತಿ ನಿರ್ಮಾಣವಾದರೆ ಹಿಂದೂ ಯುವಕರು ಯಾವ ರೀತಿ ಬದುಕುವುದು? ದಕ್ಷಿಣ ಕನ್ನಡ ಸಹಿತ ಕರ್ನಾಟಕದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ ಎನ್ನುವುದು ಇದರಿಂದ ಮತ್ತೆ ಸಾಬೀತಾಗಿದೆ ಎಂದರು.

ಅತೀ ಸೂಕ್ಷ್ಮ ಪ್ರದೇಶ ಉಳ್ಳಾಲದಲ್ಲಿ ಬುಧವಾರ ಸಣ್ಣ ಅಪಘಾತ ನಡೆದಿದೆ. ಅಪಘಾತದ ವಿಚಾರದಲ್ಲಿ ಮಂಜೇಶ್ವರ ಮುಸ್ಲಿಂ ಯುವಕರು ಉಳ್ಳಾಲದ ಶರತ್ ಎಂಬುವವರ ಮೇಲೆ ಹಲ್ಲೆ ಮಾಡಿದ್ದರು. ಈ ವೇಳೆ ಮಂಜೇಶ್ವರ ಹಾಗೂ ಉಳ್ಳಾಲ ಭಾಗದ ಮುಸ್ಲಿಂ ಯುವಕರು ಉಳ್ಳಾಲ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಮಂಜೇಶ್ವರದ ಸಾಕಷ್ಟು ಮುಸ್ಲಿಂ ಯುವಕರು ಉಳ್ಳಾಲ ಠಾಣೆಗೆ ಮುತ್ತಿಗೆ ಹಾಕುವ ರೀತಿ ಆಗಮಿಸಿದ್ದರು. ಅಲ್ಲಿನ ಇನ್‌ಸ್ಪೆಕ್ಟರ್‌ಗೆ ಘಟನೆಯನ್ನು ಶಾಂತವಾಗಿ ನಿಭಾಯಿಸುವಂತೆ ವಿನಂತಿಸಿದ್ದೆ. ಆದರೆ ಮಂಜೇಶ್ವರ ಶಾಸಕರಿಂದ ಪೊಲೀಸರಿಗೆ ಒತ್ತಡ ಬಂದಿತ್ತು. ಹಾಗಾಗಿ ಯಾರೇ ಫೋನ್ ಮಾಡಿದರೂ ಉಳ್ಳಾಲದಲ್ಲಿ ಅಶಾಂತಿ ಆಗದಂತೆ ನೋಡಿಕೊಳ್ಳಿ ಎಂದಿದ್ದೆ ಎಂದರು. ಇದಾದ ಬಳಿಕ ಬಜರಂಗದಳ ಸಂಚಾಲಕ ಅರ್ಜುನ್ ಮಾಡೂರು ಠಾಣೆಗೆ ಹೋಗಿದ್ದರು. ಶರತ್ ಕೂಡ ಠಾಣೆಗೆ ಬಂದಿದ್ದು, ಮಾತುಕತೆ ನಡೆದು ಒಳ್ಳೆಯ ರೀತಿ ಎರಡು ತಂಡಗಳು ಸಂಧಾನಕ್ಕೆ ಮುಂದಾಗಿತ್ತು. ಅಷ್ಟರಲ್ಲಿ ಸ್ಥಳದಲ್ಲಿದ್ದ ಕಿಡಿಗೇಡಿ ಮುಸ್ಲಿಂ ಯುವಕರು ಹಿಂದೂ ಮುಖಂಡನ ಮೇಲೆ ಹಲ್ಲೆ ಮಾಡಿದ್ದಾರೆ. ಪೊಲೀಸರು ಹೊರಗಡೆಯವರನ್ನು ಠಾಣೆಯಿಂದ ಹೊರಗೆ ಕಳುಹಿಸುವ ಕೆಲಸ ಮಾಡಬೇಕಿತ್ತು. ಯಾರದ್ದೋ ಒತ್ತಡಕ್ಕೆ ಅವರನ್ನು ಠಾಣೆಯ ಒಳಗಡೆ ಇರಿಸಿಕೊಂಡಿದ್ದಾರೆ. ಇದರಿಂದಾಗಿ ಮತಾಂಧರಿಗೆ ಪೊಲೀಸರೇ ಬೆಂಬಲ ಕೊಡುವ ಕೆಲಸ ಮಾಡಿದ್ದಾರೆ ಎಂದು ಸತೀಶ್‌ ಕುಂಪಲ ಆರೋಪಿಸಿದರು.

ಅಶಾಂತಿಯುತ ವಾತಾವರಣ ನಿರ್ಮಾಣಕ್ಕೆ ಪೊಲೀಸ್ ಇಲಾಖೆ ಕಾರಣವಾಗುತ್ತಿದೆ. ಸ್ಥಳೀಯ ಶಾಸಕರು ಈ ಪ್ರಕರಣದ ಬಗ್ಗೆ ಧ್ವನಿ ಎತ್ತಿಲ್ಲ. ಸಾಮರಸ್ಯ ಸಮನ್ವಯ ತರುವ ಕೆಲಸವನ್ನು ಶಾಸಕರು ಮಾಡಲಿ ಎಂದು ಸತೀಶ್‌ ಕುಂಪಲ ಆಗ್ರಹಿಸಿದರು.

Share this article