ಸಿಎಂ ಉದ್ಘಾಟಿಸಿದ ಚಿತಾಗಾರದಲ್ಲಿ ಚಿತೆಯೇ ಇಲ್ಲ!

KannadaprabhaNewsNetwork |  
Published : Nov 06, 2024, 12:34 AM IST
5ಕೆಬಿಪಿಟಿ.1.ಬಂಗಾರಪೇಟೆ ಪಟ್ಟಣದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಉದ್ಘಾಟನೆಯಾಗಿರುವ ಅನಿಲ ಚಿತಾಗಾರ. | Kannada Prabha

ಸಾರಾಂಶ

ಅನಿಲ ಚಿತಾಗಾರ ಅಪೂರ್ಣವಾಗಿದ್ದರೂ ಪೂರ್ಣಗೊಂಡಿದೆ ಎಂದು ಸುಳ್ಳು ಹೇಳಿ ಮುಖ್ಯಮಂತ್ರಿಗಳಿಂದ ಉದ್ಘಾಟನೆ ಮಾಡಿಸಿದ್ದಾರೆ ಎಂದು ನಾಗರಿಕರು ಟೀಕಿಸಿದ್ದಾರೆ. ಪಟ್ಟಣದಲ್ಲಿ ಮೊದಲೇ ಹಿಂದೂಗಳ ಸ್ಮಶಾನ ತುಂಬಾ ಕಿರಿದಾಗಿದ್ದು ಸತ್ತವರನ್ನು ಹೂಳಲೂ ಸ್ಥಳಾವಕಾಶ ಇಲ್ಲದೆ ಪರದಾಡುವಂತಾಗಿದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಪಟ್ಟಣದಲ್ಲಿ ಜಿಲ್ಲೆಯಲ್ಲೆ ಪ್ರಥಮ ಎಂಬಂತೆ ಅನಿಲ ಚಿತಾಗಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿ ವರ್ಷವಾದರೂ ಇದುವರೆಗೂ ಚಿತಾಗಾರ ಕಾರ್ಯಾರಂಭವಾಗದೆ ನನೆಗುದಿಗೆ ಬಿದ್ದಿದೆ. ಜಿಲ್ಲೆಯಲ್ಲೆ ಪ್ರಥಮ ಬಾರಿಗೆ ಪಟ್ಟಣದಲ್ಲಿ ೧.೧೩ ಕೋಟಿ ವೆಚ್ಚದಲ್ಲಿ ಅನಿಲ ಚಿತಾಗಾರವನ್ನು ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಪುರಸಭೆ ಮುಂದಾಗಿತ್ತು. ಆದರೆ ಈ ಯೋಜನೆ ಕಳೆದ ಹತ್ತು ವರ್ಷಗಳಿಂದ ಕುಂಟುತ್ತಾ ಸಾಗಿತ್ತು. ಕಟ್ಟಡವೇನೋ ನಿರ್ಮಾಣ ಮಾಡಲಾಗಿತ್ತು, ಆದರೆ ಕಟ್ಟಡ ಒಳಗೆ ಮೃತ ದೇಹಗಳನ್ನು ದಹಿಸಲು ಬೇಕಾದ ಆಧುನಿಕ ಯಂತ್ರಗಳನ್ನು ಖರೀದಿ ಮಾಡದೆ ಕಡೆಗಣಿಸಿದ್ದರಿಂದ ಯೋಜನೆ ಆರಂಭದಲ್ಲೆ ಹಳ್ಳ ಹಿಡಿಯುವಂತಾಗಿತ್ತು.ಲೋಕಾರ್ಪಣೆ ಮಾಡಿದ್ದ ಸಿಎಂ

ಆದರೆ ಕಳೆದ ವರ್ಷ ನ.೧೧ರಂದು ಜಿಲ್ಲೆಯ ಮೂರು ತಾಲೂಕಿನ ಜನತೆಗೆ ಕುಡಿಯುವ ನೀರಿನ ಯೋಜನೆಯಾದ ಯರಗೋಳ್ ಡ್ಯಾಂ ಉದ್ಘಾಟನೆಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಆಗ ಅನಿಲ ಚಿತಾಗಾರ ಸಿದ್ಧವಾಗಿದೆ ಎಂದು ಮುಖ್ಯಮಂತ್ರಿಗಳಿಂದ ಯರಗೋಳ್ ಪ್ರದೇಶದಲ್ಲೆ ನಾಮಫಲಕವನ್ನು ಉದ್ಘಾಟಿಸಿದ್ದರು.

ಆದರೆ ವರ್ಷವಾದರೂ ಪುರಸಭೆ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ ಲೋಕಾರ್ಪಣೆ ಮಾಡದೆ ವಿಳಂಬ ಮಾಡಿದ್ದರಿಂದ ಇಂದು ಕಟ್ಟಡ ಸಹ ಶಿಥಿಲಾವಸ್ಥೆಗೆ ತಲುಪುವಂತಾಗಿದೆ. ಕೆಲವೊಂದು ಸಲಕರಣಿಗಳನ್ನು ಮಾತ್ರ ತಂದು ಇಡಲಾಗಿದೆ. ಮೃತದೇಹಗಳ ದಹನಕ್ಕೆ ಅಗತ್ಯವಾಗಿ ಬೇಕಾದ ಯಂತ್ರಗಳನ್ನು ಇನ್ನೂ ಖರೀದಿಸಿಲ್ಲ. ಹಣಕಾಸಿನ ಕೊರತೆ ಇದಕ್ಕೆ ಕಾರಣ ಎನ್ನಲಾಗಿದೆ.

ಮೃತರ ಹೂಳಲೂ ಜಾಗವಿಲ್ಲ

ಈಗಾಗಲೇ ತಂದಿರುವ ಯಂತ್ರಗಳನ್ನೂ ಸಹ ಜೋಡಿಸದ ಕಾರಣ ಅವೂ ತುಕ್ಕು ಹಿಡಿಯುವಂತಾಗಿವೆ. ಅನಿಲ ಚಿತಾಗಾರ ಅಪೂರ್ಣವಾಗಿದ್ದರೂ ಪೂರ್ಣಗೊಂಡಿದೆ ಎಂದು ಸುಳ್ಳು ಹೇಳಿ ಮುಖ್ಯಮಂತ್ರಿಗಳಿಂದ ಉದ್ಘಾಟನೆ ಮಾಡಿಸಿದ್ದಾರೆ ಎಂದು ನಾಗರಿಕರು ಪುರಸಭೆಯ ಕಾರ್ಯವೈಖರಿಯನ್ನು ಟೀಕಿಸಿದ್ದಾರೆ. ಪಟ್ಟಣದಲ್ಲಿ ಮೊದಲೇ ಹಿಂದೂಗಳ ಸ್ಮಶಾನ ತುಂಬಾ ಕಿರಿದಾಗಿದ್ದು ಸತ್ತವರನ್ನು ಹೂಳಲೂ ಸ್ಥಳಾವಕಾಶ ಇಲ್ಲದೆ ಪರದಾಡುವಂತಾಗಿದೆ.

ಮೃತದೇಹಗಳನ್ನು ಸುಡಬೇಕಾದರೆ ಅದಕ್ಕೂ ಸ್ಥಳದ ಕೊರತೆ, ಜೊತೆಗೆ ಸೌದೆಯ ಕೊರತೆ ಇದೆ. ಇಂತಹ ಸಮಯದಲ್ಲಿ ಪುರಸಭೆ ಅನಿಲ ಚಿತಾಗಾರ ನಿರ್ಮಾಣ ಮಾಡುವ ಬಗ್ಗೆ ಭರವಸೆ ಸಾರ್ವಜನಿಕರಲ್ಲಿ ಆಶಾಭಾವಣೆ ಮೂಡಿತ್ತು. ಮೃತದೇಹಗಳನ್ನು ಸಾಗಿಸಲು ಶಾಂತಿ ವಾಹನವನ್ನೂ ಪುರಸಭೆಯಿಂದ ನಾಗರೀಕರಿಗೆ ಉಚಿತವಾಗಿ ಕಲ್ಪಿಸಲಾಗುವುದು ಎಂದೂ ಹೇಳಿತ್ತು, ಆದರೆ ಹತ್ತು ವರ್ಷಗಳಿಂದ ಪುರಸಭೆ ಕೊಟ್ಟ ಮಾತಿನಿಂದ ನಡೆದುಕೊಳ್ಳದೆ ಕಾಮಗಾರಿ ತೆವಳುತ್ತಿದೆ.

ಅನಿಲ ಚಿತಾಗಾರ ಅಪೂರ್ಣ

ಇದಕ್ಕೆ ಪುರಸಭೆಯ ಆಡಳಿತ ಮಂಡಳಿಯ ಇಚ್ಚಾಶಕ್ತಿ ಕೊರತೆ ಕಾರಣವಾಗಿದೆ. ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಉದ್ಘಾಟಿಸಿದ್ದಾರೆ. ಚಿತಾಗಾರ ನಿರ್ಮಾಣಕ್ಕೆ ೧.೧೩ ಕೋಟಿ ರು.ಗಳ ವೆಚ್ಚ ಮಾಡಲಾಗಿದೆ ಎಂದು ಕರ ಪತ್ರ ಮುದ್ರಿಸಿ ಹಂಚಿ ಮುಖ್ಯಮಂತ್ರಿಗಳಿಂದ ಲೋಕಾರ್ಪಣೆ ಸಹ ಮಾಡಿಸಿ ವರ್ಷವಾದರೂ ಇನ್ನೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಇದರ ಜೊತೆಗೆ ಇನ್ನೂ ಅನೇಕ ಕಾಮಗಾರಿಗಳನ್ನೂ ಮುಖ್ಯಮಂತ್ರಿಗಳಿಂದ ಶುಂಕುಸ್ಥಾಪನೆ ಮಾಡಿಸಿದ್ದರೂ ಅ‍ವುಗಳ ಕಾಮಗಾರಿ ಆಮೆ ನಡಿಗೆಯಲ್ಲಿ ಸಾಗಿದೆ.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ