ಕನ್ನಡಪ್ರಭ ವಾರ್ತೆ ಮದ್ದೂರು
ವಿಧಾನ ಸಭೆಯಲ್ಲಿ ಜೆಡಿಎಸ್ ಶಾಸಕ ಎಚ್.ಟಿ.ಮಂಜು ಅವರ ಪ್ರಶ್ನೆಗೆ ಉತ್ತರಿಸಿ, ಪ್ರಸ್ತುತ ರಾಜ್ಯದಲ್ಲಿ ಹೊಸ ನಗರ ಸ್ಥಳೀಯ ಸಂಸ್ಥೆಗಳನ್ನು ರಚಿಸುವ ಮತ್ತು ಗಡಿಗಳನ್ನು ಮಾರ್ಪಡಿಸುವ ಕಾಲಾವಕಾಶ ಮುಕ್ತಾಯಗೊಂಡಿರುತ್ತದೆ. ಆದ್ದರಿಂದ ಈ ಹಂತದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಗಡಿಗಳನ್ನು ಮಾರ್ಪಡಿಸಲು ಅಥವಾ ಕೆಲವು ಪ್ರದೇಶಗಳನ್ನು ಸೇರಿಸುವುದಕ್ಕೆ, ಕೈಬಿಡುವುದಕ್ಕೆ ಅವಕಾಶವಿರುವುದಿಲ್ಲವೆಂದು ತಿಳಿಸಿದ್ದಾರೆ.
ಒಂದು ನಗರಸಭೆಯನ್ನು ರಚಿಸಲು ಕರ್ನಾಟಕ ಪುರಸಭೆಗಳ ಅಧಿನಿಯಮ ೧೯೬೪ರ ಸೆಕ್ಷನ್-೩ರಲ್ಲಿ ತಿಳಿಸಿರುವ ಮಾನದಂಡಗಳನ್ವಯ ೨೦೧೧ರ ಜನಗಣತಿಯಂತೆ ಆ ಒಟ್ಟಾರೆ ಪ್ರದೇಶದ ಜನಸಂಖ್ಯೆ ೫೦ ಸಾವಿರ ದಿಂದ ೩ ಲಕ್ಷ ಇದ್ದು, ಪ್ರತಿ ಚದರ ಕಿ.ಮೀ. ಪ್ರದೇಶಕ್ಕೆ ೧೫೦೦ ಜನಸಾಂದ್ರತೆ, ಅಂತಹ ಪ್ರದೇಶದಲ್ಲಿ ಶೇ.೫೦ಕ್ಕಿಂತ ಹೆಚ್ಚು ಕೃಷಿಯೇತರ ಚಟುವಟಿಕೆಗಳು ಮತ್ತು ಅಲ್ಲಿನ ವಾರ್ಷಿಕ ಆದಾಯ ನಿಕಟಪೂರ್ವ ಜನಗಣತಿಯನ್ವಯ ೯ ಲಕ್ಷ ಇಲ್ಲವೇ ತಲಾ ಆದಾಯ ೪೫ ರು. ಇರಬೇಕಾಗುತ್ತದೆ ಎಂದಿದ್ದಾರೆ.ಮದ್ದೂರು ಪುರಸಭೆಯೊಂದಿಗೆ ಚಾಮನಹಳ್ಳಿ ಗ್ರಾಮ ಪಂಚಾಯ್ತಿಯ ಚಾಮನಹಳ್ಳಿ, ದೇಶಹಳ್ಳಿ, ಸೋಮನಹಳ್ಳಿ ಗ್ರಾಪಂನ ರುದ್ರಾಕ್ಷಿಪುರ, ಸೋಮನಹಳ್ಳಿ, ಕೆ.ಕೋಡಿಹಳ್ಳಿ, ಅಗರಲಿಂಗನದೊಡ್ಡಿ, ಗೆಜ್ಜಲಗೆರೆ ಗ್ರಾಪಂನ ಗೆಜ್ಜಲಗೆರೆ, ಗೊರವನಹಳ್ಳಿ ಗ್ರಾಪಂನ ಗೊರವನಹಳ್ಳಿ ಗ್ರಾಮಗಳನ್ನು ಸೇರ್ಪಡೆಗೊಳಿಸಿ ನಗರಸಭೆಯನ್ನು ರಚಿಸಲಾಗಿದೆ. ಈ ಗ್ರಾಮಗಳಲ್ಲಿ ೨೦೧೧ರ ಜನಗಣತಿಯನ್ವಯ ಒಟ್ಟು ೫೪,೪೯೧ ಜನಸಂಖ್ಯೆ ಇದೆ. ಒಟ್ಟಾರೆ ಪ್ರದೇಶ ೩೫.೫೮ ಚದರ ಕಿ.ಮೀ. ಇದೆ. ಪ್ರತಿ ಚದರ ಕಿ.ಮೀ.ಗೆ ಜನಸಾಂದ್ರತೆ ೧,೫೩೧ ಇರುತ್ತದೆ. ಈ ಎಲ್ಲಾ ಪ್ರದೇಶದಲ್ಲಿ ಶೇ.೫೫ರಷ್ಟು ಕೃಷಿಯೇತರ ಚಟುವಟಿಕೆಗಳಿದ್ದು, ರಾಜಸ್ವ ವಾರ್ಷಿಕ ೪ ಕೋಟಿ ರು.ಗಳಿಗಿಂತ ಹೆಚ್ಚಿರುತ್ತದೆ. ಈ ರೀತಿಯಾಗಿ ಒಟ್ಟಾರೆ ಪ್ರದೇಶವು ನಿಯಮಾನುಸಾರ ಮಾನದಂಡವನ್ನು ಪೂರೈಸುತ್ತಿರುವುದನ್ನು ಪರಿಗಣಿಸಿ ಆಡಳಿತಾತ್ಮಕ ಮತ್ತು ಪ್ರಗತಿಪರ ಹಿತದೃಷ್ಟಿಯಿಂದ ನಗರಸಭೆಯನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ.
ನಗರಸಭೆ ರಚನೆ ಸಮಯದಲ್ಲಿ ಚಾಮನಹಳ್ಳಿ, ಸೋಮನಹಳ್ಳಿ, ಗೆಜ್ಜಲಗೆರೆ, ಗೊರವನಹಳ್ಳಿ ಗ್ರಾಪಂ ಆಡಳಿತ ಮಂಡಳಿಗಳು ಸಭೆಯನ್ನು ನಡೆಸಿ ಸರ್ವಾನುಮತದಿಂದ ಸಹಮತಿ ಸೂಚಿಸಿದ ನಂತರವೇ ಈ ಗ್ರಾಮಗಳನ್ನು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರ್ಪಡೆಗೊಳಿಸಲು ಪರಿಗಣಿಸಲಾಗಿದೆ. ಹಾಗಾಗಿ ಇಲ್ಲಿ ಯಾವುದೇ ಅವೈಜ್ಞಾನಿಕ ಕ್ರಮದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಗ್ರಾಮ ಪಂಚಾಯಿತಿಗಳಿಂದ ದಾಖಲೆಗಳನ್ನು ಹಸ್ತಾಂತರಿಸಿದ ನಂತರ ಸಾರ್ವಜನಿಕರಿಗೆ ಸೇವೆಗಳನ್ನು ಹಾಗೂ ಮೂಲ ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸಲಾಗುತ್ತಿದೆ ಎಂದಿದ್ದಾರೆ.