ಹಾನಗಲ್ಲ: ಸರ್ಕಾರವೇ ಎಲ್‌ಕೆಜಿ, ಯುಕೆಜಿ ಆರಂಭಿಸುತ್ತಿದೆ ಎನ್ನುವ ಮಾತ್ರಕ್ಕೆ ಅಂಗನವಾಡಿ ಕೇಂದ್ರಗಳನ್ನು ಮುಚ್ಚುವ ಯಾವ ಪ್ರಶ್ನೆಯೂ ಇಲ್ಲ. ಈ ವಿಚಾರದಲ್ಲಿ ಅನಗತ್ಯ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ. ಅಂಗನವಾಡಿ ಕಾರ್ಯಕರ್ತೆಯರು ಇನ್ನಷ್ಟು ಆಸಕ್ತಿಯಿಂದ ಸೇವೆ ಸಲ್ಲಿಸಬೇಕು ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಇಲ್ಲಿನ ಗುರುಭವನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕಿಯರಿಗೆ ಮೊಬೈಲ್ ಫೋನ್‌ಗಳನ್ನು ವಿತರಿಸಿ ಅವರು ಮಾತನಾಡಿದರು. ಇಂದು ಜಗದ ವೇಗಕ್ಕೆ ಓಡುವ ಅನಿವಾರ್ಯತೆ ಎಲ್ಲ ಕ್ಷೇತ್ರಗಳಲ್ಲಿದೆ. ಅದು ಶಿಕ್ಷಣ ಕ್ಷೇತ್ರಕ್ಕೂ ಹೊರತಾಗಿಲ್ಲ. ಅಂಗನವಾಡಿ ಕೇಂದ್ರಗಳು ಸಮಾಜದ ಹಿತಕ್ಕಾಗಿ ಮಕ್ಕಳ ಸೇವೆಯಲ್ಲಿ ತೊಡಗಿಕೊಂಡಿರುವ ಸಮರ್ಪಣಾ ಭಾವದ ಸಂಸ್ಥೆಯಾಗಿದೆ. ಇಂದಿನ ತಂತ್ರಜ್ಞಾನ ಯುಗದಲ್ಲಿ ಅಂಗನವಾಡಿಗಳು ಮಾಹಿತಿ ಕೊರತೆಯಿಂದ ಹಿನ್ನಡೆಗೆ ಹೋಗುವುದು ಬೇಡ ಎಂಬ ಕಾರಣಕ್ಕಾಗಿ ಸರ್ಕಾರ ಮೊಬೈಲ್ ವಿತರಿಸುತ್ತಿದೆ. ಮಕ್ಕಳ ಸೇವೆಯನ್ನು ಭಗವಂತನ ಸೇವೆ ಎಂಬುದನ್ನು ಅರಿಯಬೇಕು. ಮಕ್ಕಳನ್ನು ಆಸ್ತಿಯನ್ನಾಗಿ ಮಾಡುವ ಮಹತ್ಕಾರ್ಯ ಅಂಗನವಾಡಿಗಳಿಂದ ಆಗಬೇಕು. ಮಕ್ಕಳಲ್ಲಿ ದೇಶಭಕ್ತಿ ಬೆಳೆಸಬೇಕು. ಕರ್ತವ್ಯಕ್ಕೆ ಆದ್ಯತೆ ನೀಡಿ. ಮೊಬೈಲ್ ಸದ್ಬಳಕೆ ಮೂಲಕ ಅಂಗನವಾಡಿಗಳು ಸಶಕ್ತವಾಗಲಿ ಎಂದು ಆಶಿಸಿದರು.ಸಿಡಿಪಿಒ ಎಂ.ಆರ್. ನಂದಕುಮಾರ ಮಾತನಾಡಿ, ಇಲಾಖೆ ನೀಡಿದ ಮೊಬೈಲ್ ಸದುದ್ದೇಶಕ್ಕೆ ಬಳಕೆಯಾಗಲಿ. ಇಲಾಖೆಗೆ ಬೇಕಾಗುವ ಎಲ್ಲ ಮಾಹಿತಿಯನ್ನು ಮೊಬೈಲ್ ಮೂಲಕ ನೀಡುವುದರಿಂದ ಸಮಯ ಉಳಿತಾಯವಾಗಲಿದೆ. ಅಲ್ಲದೇ ಅಗತ್ಯದ ಸಮಯಕ್ಕೆ ಮಾಹಿತಿ ದೊರಕಲು ಸಾಧ್ಯವಿದೆ. ಎಲ್ಲ ಸಂದರ್ಭದಲ್ಲಿ ಅಂಗನವಾಡಿಗಳು ಮಕ್ಕಳ ಹಿತಕ್ಕೆ ಪ್ರಾಮಾಣಿಕವಾಗಿ ಶ್ರಮಿಸುವಂತಾಗಬೇಕು. ಆಗಲೇ ಮಕ್ಕಳು ಶಕ್ತಿಯುತವಾಗಿ, ಬುದ್ಧಿವಂತರಾಗಿ ಹೊರಹೊಮ್ಮಲು ಸಾಧ್ಯ ಎಂದರು.
೩೫೦ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ೧೨ ಮೇಲ್ವಿಚಾರಕಿಯರಿಗೆ ಮೊಬೈಲ್ ವಿತರಿಸಲಾಯಿತು. ಮೇಲ್ವಿಚಾರಕಿಯರಾದ ರಾಜೇಶ್ವರಿ ಬಿ., ಸುವರ್ಣಾ ಜಡೆಮಠ, ವನಜಾಕ್ಷಿ ಬಡಿಗೇರ, ಈರಮ್ಮ ಪಾಟೀಲ, ಶಾಂತಾ ಭಜಂತ್ರಿ, ಗಿರಿಜಾ ಬೆಂಗೇರಿ, ರೇಣುಕಾ ಹಾವೇರಿ, ವಿಜಯಾ ಹಿರೇಮಠ, ನತಾಶಾ ಗುಡಗೇರಿ, ಮರಿಯಮ್ಮ ಸಾವಕ್ಕನವರ ಇದ್ದರು.ಅಂಗನವಾಡಿ ಕೇಂದ್ರಗಳ ಅಸ್ತಿತ್ವದ ಪ್ರಶ್ನೆ ಕಾಡುತ್ತಿದೆ. ಈ ಬಗ್ಗೆ ಗೊಂದಲ ಬೇಡ. ಅಂಗನವಾಡಿ ಕೇಂದ್ರಗಳನ್ನು ಮುಚ್ಚುವ ಯಾವುದೇ ಆಲೋಚನೆಯನ್ನೂ ಸರ್ಕಾರ ಮಾಡಿಲ್ಲ. ಕಾರ್ಯಕರ್ತೆಯರು ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.