ರೋಡ್‌ ಹಂಪ್‌ಗೆ ರಿಫ್ಲೆಕ್ಟರ್‌ ಇಲ್ಲ, ಬಣ್ಣವೂ ಕಾಣ್ತಾ ಇಲ್ಲ!

KannadaprabhaNewsNetwork | Published : Jun 15, 2024 1:10 AM

ಸಾರಾಂಶ

ಗುಂಡ್ಲುಪೇಟೆ ಪರಿಮಿತಿಯ ಹೆದ್ದಾರಿಯಲ್ಲಿ ರೋಡ್‌ ಹಂಪ್‌ ಹಾಕಲಾಗಿದ್ದು, ರೋಡ್‌ ಹಂಪ್‌ಗೆ ಯಾವುದೇ ಮುನ್ಸೂಚನೆ ಕ್ರಮಗಳಿಲ್ಲದಿರುವುದು ಅಪಘಾತಗಳಿಗೆ ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಗುಂಡ್ಲುಪೇಟೆ ಪರಿಮಿತಿಯ ಹೆದ್ದಾರಿಯಲ್ಲಿ ರೋಡ್‌ ಹಂಪ್‌ ಹಾಕಲಾಗಿದ್ದು, ರೋಡ್‌ ಹಂಪ್‌ಗೆ ಯಾವುದೇ ಮುನ್ಸೂಚನೆ ಕ್ರಮಗಳಿಲ್ಲದಿರುವುದು ಅಪಘಾತಗಳಿಗೆ ಕಾರಣವಾಗಿದೆ.

ಮೈಸೂರು ಬಳಿ ಕಡಕೊಳ ಹಾಗೂ ಕೇರಳ ರಸ್ತೆಯ ಕಣ್ಣೇಗಾಲ ಬಳಿ ಟೋಲ್‌ ಮಾತ್ರ ವಾಹನಗಳಿಂದ ಚಾಚು ತಪ್ಪದೆ ಹಣ ವಸೂಲಿ ಆಗುತ್ತಿದೆ. ಆದರೆ ಇಲ್ಲಿ ಅಪಘಾತ ತಡೆಯಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿಫಲವಾಗಿದೆ. ಅಪಘಾತಗಳ ತಡೆಯುವ ಉದ್ದೇಶದಿಂದ ರೋಡ್‌ ಹಂಪ್‌ ಹಾಕಿದ್ದಾರೆ. ಆದರೆ ರೋಡ್‌ ಹಂಪ್‌ನಿಂದ ಅಪಘಾತ ತಡೆಯುವುದಕ್ಕಿಂತ ಅಪಘಾತಗಳೇ ಹೆಚ್ಚುತ್ತಿವೆ. ಬೇಗೂರು ಕಡೆಯಿಂದ ಬರುವಾಗ ಗುಂಡ್ಲುಪೇಟೆ ಬಳಿಯ ಕಿಶೋರ್‌ ಹೋಂಡಾ ಶೋ ರೂಂ ಮುಂದಿನ ರೋಡ್‌ ಹಂಪ್‌ ಇರುವುದೇ ವಾಹನಗಳು ಹತ್ತಿರ ಬರುವ ತನಕ ಕಾಣುತ್ತಿಲ್ಲ.

ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಉದಾಸೀನತೆಯಿಂದಾಗಿ ಕಿಶೋರ್‌ ಹೋಂಡಾ ಶೋ ರೂಂ ಮುಂದಿನ ಹಂಪ್‌ಗೆ ರಾತ್ರಿ ಸಮಯದಲ್ಲಂತೂ ರೋಡ್‌ ಹಂಪ್‌ ಕಾಣದೆ ಮುಂದಿನ ವಾಹನಕ್ಕೆ ಡಿಕ್ಕಿಯಾಗಿವೆ. ರೋಡ್‌ ಹಂಪ್‌ ನೆಗೆದು ಮುಂದಿನ ವಾಹನಗಳಿಗೆ ಮುತ್ತಿಕ್ಕಿವೆ. ಪ್ರತಿ ದಿನ ಸಂಚರಿಸುವ ವಾಹನಗಳ ಸವಾರರಿಗೆ ರೋಡ್‌ ಹಂಪ್‌ ಇದೆ ಎನ್ನುವುದು ಗೊತ್ತು. ಆದರೆ ಪ್ರವಾಸಿಗರ ವಾಹನಗಳು ಹೊಸದಾಗಿ ಬರುವ ಚಾಲಕರಿಗೆ ರೋಡ್‌ ಹಂಪ್‌ ಇದೆ ಎನ್ನುವುದು ಅರಿವಿಲ್ಲದೆ ರೋಡ್‌ ಹಂಪ್‌ ಮೇಲೆ ಜಿಗಿದು ಹೋಗುವ ದೃಶ್ಯ ರಾತ್ರಿ ವೇಳೆ ಸಾಮಾನ್ಯವಾಗಿದೆ.

ಹಂಪ್‌ ಕಾಣದೆ ವಾಹನಗಳ ಚಾಲಕರು ದಿಡೀರ್‌ ಬ್ರೇಕ್‌ ಹಾಕಿದಾಗ ಹಿಂಬದಿ ಸವಾರರು ಮುಂದಿನ ವಾಹನಗಳಿಗೆ ಗುದ್ದಿಸುವುದನ್ನು ತಪ್ಪಿಸಲು ಎಡ ಬದಿಯ ಮಣ್ಣಿಗೆ ರಸ್ತೆಗೆ ಬಿಟ್ಟಾಗ ಧೂಳು ಆಳೆತ್ತರಕ್ಕೆ ಎದ್ದು ಬೈಕ್‌ ಸವಾರರು ಹಾಗೂ ಪಾದಚಾರಿಗಳಿಗೆ ತುಂಬಿಕೊಳ್ಳುತ್ತಿದೆ.

ಬಣ್ಣ ಮಾಸಿ ಹೋಗಿದೆ: ಮೈಸೂರು-ಊಟಿ ಹೆದ್ದಾರಿಯ ಗುಂಡ್ಲುಪೇಟೆ ಪರಿಮಿತಿಯಲ್ಲಿ ರೋಡ್‌ ಹಂಪ್‌ ಹಾಕಿದ್ದಾರೆ. ಹಂಪ್‌ ಹಾಕಿದ ಹೊಸದಲ್ಲಿ ಬಿಳಿ ಬಣ್ಣ ಬಳಿದಿದ್ದಾರೆ. ಆದರೆ ಕೆಲ ತಿಂಗಳ ಬಳಿಕ ಬಿಳಿ ಬಣ್ಣ ರೋಡ್‌ ಹಂಪ್‌ನಲ್ಲಿ ಮಾಯವಾಗಿದೆ. ಬಿಳಿ ಬಣ್ಣ ಇದ್ದರೆ ಸವಾರರು ಅದನ್ನು ನೋಡಿ ವಾಹನವನ್ನು ನಿಧಾನವಾಗಿ ಚಲಿಸುತ್ತಾರೆ.

ರಿಪ್ಲೆಕ್ಟರ್‌ ಇಲ್ಲ: ರೋಡ್‌ ಹಂಪ್‌ ಮುಂದೆ ಇದ್ದರೂ ನಾಮಫಲಕ ಹಾಕಿಲ್ಲ. ಜೊತೆಗೆ ರೋಡ್‌ ಹಂಪ್‌ ಬಳಿ ರಿಫ್ಲೆಕ್ಟರ್‌ ಹಾಕದ ಕಾರಣ ಅಪಘಾತಗಳಿಗೆ ರೋಡ್‌ ಹಂಪ್‌ಗಳೇ ಕಾರಣವಾಗಿವೆ ಎಂದು ಗುಂಡ್ಲುಪೇಟೆ ಪುರಸಭೆ ಸದಸ್ಯ ಎಸ್.ಕಿರಣ್‌ಗೌಡ ಹೇಳಿದ್ದಾರೆ. ಗುಂಡ್ಲುಪೇಟೆ ಮೂಲಕವೇ ತಮಿಳುನಾಡು ಹಾಗೂ ಕೇರಳ ರಾಜ್ಯಕ್ಕೆ ತೆರಳುವ ಗೂಡ್ಸ್‌ ವಾಹನಗಳು, ಪ್ರವಾಸಿಗರ ವಾಹನಗಳು ರಾತ್ರಿ ೯ ಗಂಟೆಗೆ ಬಂಡೀಪುರ ಗಡಿಯಲ್ಲಿ ರಸ್ತೆ ಬಂದ್‌ ಆಗುವ ಕಾರಣ ವಾಹನಗಳು ವೇಗವಾಗಿ ತೆರಳುತ್ತಿವೆ. ರೋಡ್‌ ಹಂಪ್‌ ಕಣ್ಣಿಗೆ ಕಾಣದೆ ಹಂಪ್‌ ಮೇಲೆ ನೆಗಿದು ಮುಂದಿನ ವಾಹನಗಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವುದೇ ತ್ರಾಸವಾಗುತ್ತಿದೆ ಎಂದು ಕೇರಳದ ಲಾರಿ ಚಾಲಕ ಜಾರ್ಜ್‌ ಹೇಳಿದ್ದಾರೆ.

Share this article