- ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಡುಗೆ ಅನಿಲ ಪೂರೈಕೆದಾರರು-ಅಧಿಕಾರಿಗಳ ಸಭೆ
ಕನ್ನಡಪ್ರಭ ವಾರ್ತೆ ದಾವಣಗೆರೆ
ಜಿಲ್ಲೆಯಲ್ಲಿ ಅಡುಗೆ ಅನಿಲದ ದಾಸ್ತಾನು ಹೇರಳವಾಗಿದ್ದು, ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರು ಆತಂಕದಿಂದ ಅತಿಯಾಗಿ ಗ್ಯಾಸ್ ಬುಕಿಂಗ್ ಮಾಡುತ್ತಿರುವುದು ಕಂಡುಬಂದಿದೆ. ಇದರಿಂದಾಗಿ ವ್ಯವಸ್ಥೆ ಮೇಲೆ ಒತ್ತಡ ಉಂಟಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಅಡುಗೆ ಅನಿಲ ಪೂರೈಕೆದಾರರು ಮತ್ತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ನಡೆಸಿದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 38 ಐಒಸಿಎಲ್, ಎಚ್.ಪಿ.ಸಿ.ಎಲ್. ಮತ್ತು ಬಿಪಿಸಿಎಲ್ ಕಂಪನಿಗಳ ಅಡಿಯಲ್ಲಿ ಏಜೆನ್ಸಿಗಳು ಕಾರ್ಯನಿರ್ವಹಿಸುತ್ತಿದ್ದು, ಸಾಕಷ್ಟು ದಾಸ್ತಾನು ಲಭ್ಯವಿದೆ. ಆದರೆ, ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಆಗಿಲ್ಲ. ಗೃಹ ಉಪಯೋಗಿ ಅಡುಗೆ ಅನಿಲ್ ಸಿಲಿಂಡರ್ ಬುಕ್ ಮಾಡಿದ 25 ದಿನದೊಳಗೆ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ಗೃಹ ಬಳಕೆ ಸಿಲಿಂಡರ್‌ಗಳನ್ನು ಹೋಟೆಲ್, ರೆಸ್ಟೋರೆಂಟ್ ಅಥವಾ ಇತರ ವಾಣಿಜ್ಯ ಉದ್ದೇಶಗಳಿಗೆ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ರಸ್ತೆ ಬದಿಯ ಗಾಡಿಗಳು ಅಥವಾ ವಾಣಿಜ್ಯ ಮಳಿಗೆಗಳಲ್ಲಿ ಗೃಹ ಬಳಕೆ ಸಿಲಿಂಡರ್ ಕಂಡುಬಂದಲ್ಲಿ ತಕ್ಷಣವೇ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಗತ್ಯ ಸೇವೆಗಳಾದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು, ಶಾಲೆಗಳು ಮತ್ತು ಸರ್ಕಾರಿ ಹಾಗೂ ಖಾಸಗಿ ವಸತಿ ನಿಲಯಗಳಲ್ಲಿ ಅಡುಗೆ ಅನಿಲದ ಕೊರತೆ ಆಗದಂತೆ ವಿತರಕರು ಸರಬರಾಜು ಮಾಡುವಂತೆ ಸೂಚನೆ ನೀಡಿದರು.
ಪ್ರಸ್ತುತ ಪದವಿಪೂರ್ವ ಪರೀಕ್ಷೆ ನಡೆಯುತ್ತಿದ್ದು, ನಂತರ ಎಸ್‌ಎಸ್‌ಎಲ್‌ಸಿ ಮತ್ತು ಪದವಿ ಪರೀಕ್ಷೆಗಳು ನಡೆಯುವುದರಿಂದ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಊಟದಲ್ಲಿ ತೊಂದರೆ ಆಗದಂತೆ ಅಧಿಕಾರಿಗಳು ನಿರಂತರ ಪೂರೈಕೆ ಖಚಿತಪಡಿಸಿಕೊಳ್ಳಬೇಕು. ವಸತಿ ನಿಲಯಗಳಲ್ಲಿ ಗ್ಯಾಸ್ ಉಳಿತಾಯ ಮಾಡುವ ನಿಟ್ಟಿನಲ್ಲಿ ಚಪಾತಿ, ಪೂರಿ ದೋಸೆಯಂತಹ ಅಡುಗೆಗಳನ್ನು ತಾತ್ಕಾಲಿಕ ಮುಂದೂಡಿ, ಬದಲಿಗೆ ಉಪ್ಪಿಟ್ಟು, ಪುಲಾವ್, ತರಕಾರಿ ಬಾತ್, ಅನ್ನ, ತರಕಾರಿ ಸಂಬಾರು ಮಾಡುವಂತೆ ಸಲಹೆ ನೀಡಿದರು.
ಸಿಲಿಂಡರ್‌ಗಳ ಬಗ್ಗೆ ಎಚ್ಚರ:
ಗ್ರಾಹಕರು ಇ-ಕೆವೈಸಿ ಮಾಡಿಸಿ ಬುಕಿಂಗ್ ಅನ್ನು ಗ್ರಾಹಕರ ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬುಕಿಂಗ್ ಮಾಡಬೇಕು. ಬುಕಿಂಗ್ ಮಾಡಿದ 25 ದಿನಗಳ ನಂತರ ಸಿಲಿಂಡರ್ ಮನೆಗೆ ಬರಲಿದೆ. ಸಿಲಿಂಡರ್ ವಿತರಣೆ ಮಾಡಿದಾಗ ಗ್ರಾಹಕರ ಸಂಖ್ಯೆಗೆ ಒಟಿಪಿ ಬರಲಿದೆ. ಪ್ರಸ್ತುತ 38 ವಿವಿಧ ಗ್ಯಾಸ್ ಕಂಪನಿಯಲ್ಲಿ ಪ್ರಸ್ತುತ ಅಂದಾಜು 7 ಲಕ್ಷ ಮನೆ ಬಳಕೆ ಸಿಲಿಂಡರ್‌ಗಳ ಸಂಪರ್ಕವಿದೆ ಎಂದರು.
- - -
-11ಕೆಡಿವಿಜಿ36:ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಅಧ್ಯಕ್ಷತೆಯಲ್ಲಿ ಅಡುಗೆ ಅನಿಲ ಪೂರೈಕೆದಾರರು ಮತ್ತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಯಿತು.