ಅಣ್ಣಿಗೇರಿ: ಜಿಲ್ಲೆಯಲ್ಲಿ ಯಾವುದೇ ರೀತಿಯ ರಸಗೊಬ್ಬರದ ಕೊರತೆ ಇಲ್ಲ. ರೈತರು ಈ ಕುರಿತು ಆತಂಕಗೊಳ್ಳಬಾರದು. ಅಗತ್ಯಕ್ಕೆ ತಕ್ಕಷ್ಟು ಗೊಬ್ಬರ ಪೂರೈಸಲಾಗುವುದು ಎಂದು ಸಚಿವ ಸಂತೋಷ ಲಾಡ್ ಭರವಸೆ ನೀಡಿದರು.
ಇಲ್ಲಿನ ಆದಿಕವಿ ಪಂಪ ಸ್ಮಾರಕ ಭವನದಲ್ಲಿ ಮಂಗಳವಾರ ನಡೆದ ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.ನವಲಗುಂದ ಕ್ಷೇತ್ರದಲ್ಲಿ 17 ಸಾವಿರ ಟನ್ ಯೂರಿಯಾ ಬೇಡಿಕೆ ಇತ್ತು. ಸರ್ಕಾರದಿಂದ 23 ಸಾವಿರ ಟನ್ ಯೂರಿಯಾ ಪೂರೈಸಲಾಗಿದೆ. ಅಗತ್ಯ ಬಿದ್ದರೆ ಮತ್ತಷ್ಟು ಪೂರೈಸಲಾಗುವುದು. ರೈತರು ಯಾವುದೇ ಕಾರಣಕ್ಕೂ ಹೆಚ್ಚು ಹಣ ನೀಡಿ ಗೊಬ್ಬರ ಖರೀದಿಸಬಾರದು. ಹಾಗೊಂದು ವೇಳೆ ಯಾರಾದರೂ ಹೆಚ್ಚಿನ ಹಣ ಪಡೆಯುತ್ತಿದ್ದರೆ ದಾಖಲೆಗಳೊಂದಿಗೆ ದೂರು ನೀಡಿದರೆ ಅವರ ಪರವಾನಗಿ ರದ್ದು ಮಾಡಲಾಗುವುದು ಎಂದು ತಿಳಿಸಿದರು.
ದೇಶದಲ್ಲಿ ಇನ್ನೂ ಮೂಲಭೂತ ಸಮಸ್ಯೆಗಳು ಕಾಡುತ್ತಿವೆ. ನೀರಿನ ಸಮಸ್ಯೆ ಸೇರಿದಂತೆ ಸಾಕಷ್ಟು ಸಮಸ್ಯೆಗಳು ದೇಶದಲ್ಲಿವೆ. ಸರ್ಕಾರದ ಸೌಲಭ್ಯಗಳಿಂದ ಜನ ವಂಚಿತರಾಗಿದ್ದರೆ. ಅವರನ್ನು ಗುರುತಿಸಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಜನತಾ ದರ್ಶನ ಆಯೋಜಿಸಲಾಗಿದೆ ಎಂದರು.ಪಂಪ ಉತ್ಸವ, ಸ್ಮಾರಕ ಮತ್ತು ಪ್ರಾಧಿಕಾರದ ಕುರಿತಂತೆ ಸಿಎಂ ಜತೆಗೆ ಚರ್ಚಿಸಿ ಕ್ರಮವಹಿಸುವುದಾಗಿ ಭರವಸೆ ನೀಡಿದರು. ಅಣ್ಣಿಗೇರಿ ಮತ್ತು ಅಳ್ನಾವರಕ್ಕೆ ಬಜೆಟ್‌ನಲ್ಲಿ ಸಮುದಾಯ ಆಸ್ಪತ್ರೆ ಮಂಜೂರಾಗಿವೆ. ವಿಶೇಷವಾಗಿ ಅಣ್ಣಿಗೇರಿಗೆ ಇಸಿಜಿ ಸೌಲಭ್ಯ ಕುರಿತಂತೆ ಅಹವಾಲುಗಳು ಸಲ್ಲಿಕೆಯಾಗಿದ್ದು, ಸರ್ಕಾರಕ್ಕೆ ಈ ಬಗೆಗೆ ವರದಿ ಸಲ್ಲಿಸಲಾಗುವುದು. ಮಳೆಯಿಂದ 30 ಸಾವಿರ ಎಕರೆ ಬೆಳೆಹಾನಿಯಾಗಿದೆ ಎಂಬ ವರದಿ ಇದೆ. ಅದನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ ಎಂದರು.
ಕಂದಾಯ ಇಲಾಖೆಯ 52, ಪಂಚಾಯತ್ ರಾಜ್‌ಗೆ ಸಂಬಂಧಿಸಿದಂತೆ 48, ನಗರಾಭಿವೃದ್ಧಿ ಪ್ರಾಧಿಕಾರದ 34 ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ 199 ಅರ್ಜಿಗಳು ಸಲ್ಲಿಕೆಯಾಗಿವೆ. ಇವೆಲ್ಲವುಗಳನ್ನು ಪರಿಶೀಲಿಸಿ ಕಾಲಮಿತಿಯಲ್ಲಿ ವಿಲೇವಾರಿ ಮಾಡಲಾಗುವುದು ಎಂದರು.ಕಾರ್ಯಕ್ರಮದಲ್ಲಿ ಶಾಸಕ ಎನ್.ಎಚ್. ಕೋನರೆಡ್ಡಿ ಮಾತನಾಡಿ, ಸಾರ್ವಜನಿಕರ ಸಮಸ್ಯೆ, ಅಹವಾಲುಗಳ ನಿವಾರಿಸಲು ಪ್ರತಿ ವಾರ ಕ್ಷೇತ್ರದಲ್ಲಿ ಜನಸಂಪರ್ಕ ಸಭೆ ನಡೆಸಲಾಗುತ್ತಿದೆ. ಜನಸಂಪರ್ಕ ಸಭೆ ಮೂಲಕ ಸಾರ್ವಜನಿಕರಿಗೆ ಅನುಕೂಲವಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಪಂ ಸಿಇಒ ಭುವನೇಶ ಪಾಟೀಲ್, ಎಸ್ಪಿ ಗುಂಜನ್ ಆರ್ಯ, ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ರುದ್ರೇಶ್ ಘಾಳಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಸಂತೋಷ ಬಿರಾದರ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರ ಅಧ್ಯಕ್ಷ ಎಸ್.ಆರ್. ಪಾಟೀಲ ಸೇರಿದಂತೆ ಇತರ ಜನಪ್ರತಿನಿಧಿಗಳು, ಸಾರ್ವಜನಿಕರು, ಇತರರು ಉಪಸ್ಥಿತರಿದ್ದರು.ಸಂಚಾರಿ ಆರೋಗ್ಯ ಘಟಕ ಚಾಲನೆ: ಈ ಸಂದರ್ಭದಲ್ಲಿ ಅಣ್ಣಿಗೇರಿ ತಾಲೂಕಿನ ಸಂಚಾರಿ ಆರೋಗ್ಯ ಘಟಕ ವಾಹನಕ್ಕೆ ಸಚಿವ ಸಂತೋಷ್ ಲಾಡ್ ಹಾಗೂ ಶಾಸಕ ಕೋನರೆಡ್ಡಿ, ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಪಂ ಸಿಇಒ ಭುವನೇಶ ಪಾಟೀಲ ಚಾಲನೆ ನೀಡಿದರು. ಇದೇ ವೇಳೆ ರೈತರು ಅಣ್ಣಿಗೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವೈಜ್ಞಾನಿಕ ರಸ್ತೆಯಿಂದಾಗಿ ಅಪಘಾತಗಳು ಹೆಚ್ಚಾಗುತ್ತಿವೆ. ಈ ಕುರಿತಂತೆ ಕ್ರಮವಹಿಸಿ ಅಪಘಾತ ತಡೆಯಲು ಮನವಿ ಮಾಡಿದರು.
ಆರೋಗ್ಯ ಇಲಾಖೆ ಅಧಿಕಾರಿ ತರಾಟೆ: ಬಸವರಾಜ ಬೆಟಗೇರಿ ಎಂಬುವವರು ಮಾತನಾಡಿ, ಅಣ್ಣಿಗೇರಿ ಪಟ್ಟಣದಲ್ಲಿ ಸಾರ್ವಜನಿಕರಿಗೆ ಇಸಿಜಿ ಸೌಲಭ್ಯವಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಔಷಧಿಗಳ ಕೊರತೆ ಇದೆ. ರೇಬಿಸ್ ಚುಚ್ಚುಮದ್ದು ದಾಸ್ತಾನು ಇಲ್ಲ ಎಂದು ಸಚಿವರ ಗಮನಕ್ಕೆ ತಂದರು. ಈ ವೇಳೆ ಔಷಧಿ ದಾಸ್ತಾನು ಪರಿಶೀಲಸದ ಆರೋಗ್ಯ ಇಲಾಖೆ ಅಧಿಕಾರಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ಈ ವೇಳೆ ಆರೋಗ್ಯ ಅಧಿಕಾರಿಗಳಿಗೆ ನಿರಂತರವಾಗಿ ಔಷಧಿ ದಾಸ್ತಾನು ಸಂಗ್ರಹಿಸಿ ಪೂರೈಸುವಂತೆ ಸೂಚನೆ ನೀಡಿದರು.ಉದ್ಯೋಗಕ್ಕೆ ಮೊರೆ: ಅಣ್ಣಿಗೇರಿಯ ವಿಶೇಷಚೇತನ ರಾಜೇಸಾಬ ಬಾಬುಸಾಬ ಕಣವಿ, ಕೆಲವು ವರ್ಷಗಳ ಹಿಂದೆ ಸೆಂಟ್ರಿಂಗ್ ಕೆಲಸ ಮಾಡಲು ಹೋಗಿ ಕಟ್ಟಡದಿಂದ ಬಿದ್ದು ಅಂಗವೂನ ಆವಿಕಲನಾಗಿರುವುದರಿಂದ ಉದ್ಯೋಗ ಒದಗಿಸುವತೆ ಮನುವಿ ಮಾಡಿದರು. ಈ ವೇಳೆ ಮಾತನಾಡಿದ ಸಚಿವರು, ಸಂತೋಷ ಲಾಡ್ ಫೌಂಡೇಶನ್ ವತಿಯಿಂದ ಅಂಗಡಿ ಮುಂಗಟ್ಟು ತೆರೆಯಲು ಸಹಾಯ ಮಾಡುತ್ತೇವೆ ಎಂದರು.
ಪೈಲ್ವಾನ್ ಸಂಘದಿಂದ ಕಟ್ಟಡಕ್ಕೆ ಮನವಿ: ಅಣ್ಣಿಗೇರಿ ಪಟ್ಟಣದ ಮಾಜಿ ಪೈಲ್ವಾನ್ ಶಂಕ್ರಪ್ಪ ಅಣ್ಣಿಗೇರಿ ಮಾತನಾಡಿ, ಪೈಲ್ವಾನರ ಸಂಘದ ಕಟ್ಟಡಕ್ಕೆ ಹಣ ನೀಡಿ ಕಟ್ಟಡ ನಿರ್ಮಿಸಿಕೊಡುವಂತೆ ಸಚಿವ, ಶಾಸಕರಿಗೆ ಮನವಿ ಮಾಡಿದರು. ಈ ವೇಳೆ ಶಾಸಕ ಕೋನರಡ್ಡಿ ತಾವು ಶಾಸಕರ ಅನುದಾನದಲ್ಲಿ ಕಟ್ಟಡ ನಿರ್ಮಸಿಕೊಡುವುದಾಗಿ ಭರವಸೆ ನೀಡಿದರು. ಈ ವೇಳೆ ಸಚಿವರು ನಿವೇಶನ ಖರೀದಿಗೆ ₹2.15 ಲಕ್ಷ ತಾವು ನೀಡುವುದಾಗಿ ಹೇಳಿದರು.