ವಿಪತ್ತು ನಿರ್ವಹಣೆಗೆ ಹಣ ಕೊರತೆ ಇಲ್ಲ: ದಿನೇಶ್‌ ಗುಂಡೂರಾವ್‌

KannadaprabhaNewsNetwork |  
Published : Aug 03, 2024, 12:35 AM IST

ಸಾರಾಂಶ

ಪ್ರಸ್ತುತ ಜಿಲ್ಲೆಯ ಮಂಗಳೂರು, ಉಳ್ಳಾಲ ಹಾಗೂ ಕಡಬ ಸೇರಿ ಮೂರು ತಾಲೂಕುಗಳಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದ್ದು, 234 ಸಂತ್ರಸ್ತರು ಆಶ್ರಯ ಪಡೆದಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಹಣದ ಕೊರತೆ ಇಲ್ಲ. ಪ್ರಸ್ತುತ ಜಿಲ್ಲಾ ವಿಪತ್ತು ಪರಿಹಾರ ನಿಧಿಯಲ್ಲಿ 1422.76 ಲಕ್ಷ ರು. ಅನುದಾನ ಇದ್ದು, ತಾಲೂಕುಗಳಲ್ಲಿ ಒಟ್ಟು 414.78 ಲಕ್ಷ ರು. ಲಭ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

ಜಿಲ್ಲೆಯ ವಿವಿಧೆಡೆ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಪ್ರಕೃತಿ ವಿಕೋಪ ನಿರ್ವಹಣೆಗಾಗಿ ಗ್ರಾ.ಪಂ.ನಲ್ಲಿ ವಿಪತ್ತು ನಿರ್ವಹಣಾ ಸಮಿತಿ ಇದೆ. ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ವಿಕೋಪ ಬಾಧಿತ 79 ಗ್ರಾ.ಪಂ.ಗಳಿಗೆ ತಲಾ 25 ಸಾವಿರ ರು., 148 ಗ್ರಾ.ಪಂಗಳಿಗೆ ತಲಾ 15 ಸಾವಿರ ರು.ನಂತೆ ಒಟ್ಟು 40,95,000 ರು. ಬಿಡುಗಡೆಗೊಳಿಸಿ ಆದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.ಮನೆ ಹಾನಿ ಪರಿಹಾರ:

ರಾಜ್ಯ ಸರ್ಕಾರದ ಆದೇಶದ ಪ್ರಕಾರ ಪೂರ್ಣ ಹಾನಿಯಾದ ಮನೆಗಳಿಗೆ 1.20 ಲಕ್ಷ ರು. ಪರಿಹಾರದ ಜತೆಗೆ ದೇವರಾಜ್‌ ಅರಸು ವಸತಿ ಯೋಜನೆಯಡಿ ಹೆಚ್ಚುವರಿಯಾಗಿ ಸಾಮಾನ್ಯ ವರ್ಗಗಳಿಗೆ 1.20 ಲಕ್ಷ ರು., ಪರಿಶಿಷ್ಟ ವರ್ಗಗಳಿಗೆ 1.50 ಲಕ್ಷ ರು. ಒದಗಿಸಲು ಕ್ರಮ ವಹಿಸಲಾಗುತ್ತಿದೆ. ಅನಧಿಕೃತ ಜಮೀನಿನಲ್ಲಿ ಸಂಪೂರ್ಣ ಹಾನಿಗೊಳಗಾದ ಮನೆಗಳಿಗೆ ಒಂದು ಬಾರಿ ಪರಿಹಾರವಾಗಿ 1 ಲಕ್ಷ ರು. ಒದಗಿಸುವುದಾಗಿ ಸಚಿವರು ಹೇಳಿದರು.

ಭಾಗಶಃ ಹಾನಿಗೊಳಗಾದ ಮನೆಗಳ ದುರಸ್ತಿಗೆ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ 6500 ರು. ಜತೆಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 43,500 ಸೇರಿಸಿ ಒಟ್ಟು 50,000 ರು. ಒದಗಿಸಲಿದೆ. ಪ್ರವಾಹದಿಂದ ಬಟ್ಟೆ ಕಳೆದುಕೊಂಡರೆ 2500 ರು., ಗೃಹೋಪಯೋಗಿ ವಸ್ತುಗಳು ಹಾನಿಯಾದರೆ 2500 ರು. ನಿಗದಿಪಡಿಸಲಾಗಿದೆ. ಜಿಲ್ಲೆಯಲ್ಲಿ ಹಾನಿಗೊಳಗಾದ 106 ಸರ್ಕಾರಿ ಶಾಲಾ ಕೊಠಡಿಗಳ ತುರ್ತು ದುರಸ್ತಿ ಕಾಮಗಾರಿ ನಡೆಸಲು 194 ಲಕ್ಷ ರು. ಅನುದಾನ ಮಂಜೂರು ಮಾಡಲಾಗಿದೆ. 18 ಅಂಗನವಾಡಿ ಕಟ್ಟಡಗಳ ತುರ್ತು ದುರಸ್ತಿ ಕಾಮಗಾರಿಗಳಿಗೆ 37.50 ಲಕ್ಷ ರು. ಅನುದಾನ ಮಂಜೂರಾತಿ ಮಾಡಲಾಗಿದೆ ಎಂದು ವಿವರಿಸಿದರು.

ಪ್ರಸ್ತುತ ಜಿಲ್ಲೆಯ ಮಂಗಳೂರು, ಉಳ್ಳಾಲ ಹಾಗೂ ಕಡಬ ಸೇರಿ ಮೂರು ತಾಲೂಕುಗಳಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದ್ದು, 234 ಸಂತ್ರಸ್ತರು ಆಶ್ರಯ ಪಡೆದಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 7.190 ಹೆಕ್ಟೇರ್‌ ತೋಟಗಾರಿಕಾ ಬೆಳೆ ಹಾನಿಯಾಗಿದ್ದು, ಪರಿಹಾರ ಪಾವತಿಗಾಗಿ ಪರಿಹಾರ ತಂತ್ರಾಂಶದಲ್ಲಿ ದಾಖಲಿಸಲಾಗಿದೆ. ಮೆಸ್ಕಾಂಗೆ ಮಳೆಗಾಲದಲ್ಲಿ ಈವರೆಗೆ ಒಟ್ಟು 10.14 ಕೋಟಿ ರು. ನಷ್ಟವಾಗಿರುವುದಾಗಿ ದಿನೇಶ್‌ ಗುಂಡೂರಾವ್‌ ತಿಳಿಸಿದರು.

ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 11 ಸೇತುವೆ/ ಕಿರು ಸೇತುವೆ ಹಾನಿಗೊಳಗಾಗಿ ಅಂದಾಜು 2181 ಲಕ್ಷ ರು. ಹಾಗೂ 43.064 ಕಿ.ಮೀ. ರಸ್ತೆಗಳು ಹಾನಿಗೀಡಾಗಿ ಅಂದಾಜು 2181 ಲಕ್ಷ ರು. ನಷ್ಟ ಸಂಭವಿಸಿದೆ ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಜಿ.ಪಂ. ಸಿಇಒ ಡಾ. ಆನಂದ್‌, ಮಾಜಿ ಸಚಿವ ಅಭಯಚಂದ್ರ ಜೈನ್‌, ಮೆಸ್ಕಾಂ ಎಂಡಿ ಪದ್ಮಾವತಿ, ಪಾಲಿಕೆ ಆಯುಕ್ತ ಆನಂದ್‌ ಇದ್ದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದ.ಕ. ಜಿಲ್ಲೆಯ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ನಿರ್ಧರಿಸಿದ್ದರು. ಇದೀಗ ನಾನು ಭೇಟಿ ನೀಡಿ ಪರಿಶೀಲಿಸಿರುವುದರಿಂದ ಅವರು ಭೇಟಿ ನೀಡುವುದು ಬೇಡ ಎಂದು ತಿಳಿಸಿದ್ದೇನೆ. ಅನಿವಾರ್ಯತೆ ಇದ್ದರೆ ಮುಖ್ಯಮಂತ್ರಿ ಭೇಟಿಗೆ ತಿಳಿಸಲಾಗುವುದು.

- ದಿನೇಶ್‌ ಗುಂಡೂರಾವ್‌, ಜಿಲ್ಲಾ ಉಸ್ತುವಾರಿ ಸಚಿವ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ