ಜಿಲ್ಲೆಯಲ್ಲಿ ಎಲ್‌ಪಿಜಿ ಕೊರತೆ ಇಲ್ಲ: ಮಂತರ್‌ ಗೌಡ

KannadaprabhaNewsNetwork |  
Published : Apr 08, 2026, 03:45 AM IST
ಸಭೆ ಸಂದರ್ಭ | Kannada Prabha

ಸಾರಾಂಶ

ಕೊಡಗು ಜಿಲ್ಲೆಯಲ್ಲಿ ಗೃಹ ಬಳಕೆ ಅನಿಲ ಸಿಲಿಂಡರ್ ಗಳಿಗೆ ಯಾವುದೇ ರೀತಿಯ ಕೊರತೆ ಇಲ್ಲ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ತಿಳಿಸಿದ್ದಾರೆ.

ಕುಶಾಲನಗರ: ಕೊಡಗು ಜಿಲ್ಲೆಯಲ್ಲಿ ಗೃಹ ಬಳಕೆ ಅನಿಲ ಸಿಲಿಂಡರ್ ಗಳಿಗೆ ಯಾವುದೇ ರೀತಿಯ ಕೊರತೆ ಇಲ್ಲ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ತಿಳಿಸಿದ್ದಾರೆ.ಕುಶಾಲನಗರದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಪುರಸಭೆಯ ಸಭಾಂಗಣದಲ್ಲಿ ನಡೆದ ಕುಶಾಲನಗರ ತಾಲೂಕು ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದು ಶಾಸಕರು ಈ ವಿಷಯ ತಿಳಿಸಿದರು. ಆದರೆ ವಾಣಿಜ್ಯ ಬಳಿಕೆ ಸಿಲಿಂಡರ್ ಗಳು ಅಭಾವ ತಲೆದೋರಿದ್ದು, ಇನ್ನೂ ಸಮರ್ಪಕವಾಗಿ ವಿತರಣೆ ಆಗುತ್ತಿಲ್ಲ ಎಂದು ಮಾಹಿತಿ ನೀಡಿದರು. ಆದ್ಯತೆ ಮೇರೆಗೆ ಆಸ್ಪತ್ರೆ ವಸತಿಗೃಹಗಳು ತುರ್ತು ಘಟಕಗಳಿಗೆ ವಾಣಿಜ್ಯ ಸಿಲಿಂಡರ್ ಗಳನ್ನು ಪೂರೈಸಲು ಕ್ರಮ ಕೈಗೊಳ್ಳುವಂತೆ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಇತ್ತೀಚಿನ ದಿನಗಳಲ್ಲಿ ಬಿಪಿಎಲ್ ಪಡಿತದಾರರನ್ನು ಎಪಿಎಲ್ ಆಗಿ ಪರಿವರ್ತನೆ ಮಾಡಿದ್ದು, ಕೆಲವು ಅರ್ಹ ಪಡಿತರಚೀಟಿದಾರರಿಗೆ ಅನಾನುಕೂಲವಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ ಅವರು, ಕೂಡಲೇ ಅಧಿಕಾರಿ, ಸಿಬ್ಬಂದಿಗಳು ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಿಪಿಎಲ್ ಪಡಿತರ ಚೀಟಿದಾರರಿಗೆ ಮತ್ತೆ ಎಪಿಎಲ್ ನಿಂದ ಬಿಪಿಎಲ್ ಗೆ ಮರು ಸ್ಥಾಪಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಏಕಾಏಕಿ ಬಿಪಿಎಲ್ ನಿಂದ ಎಪಿಎಲ್ ಮಾಡಿದ ಹಿನ್ನೆಲೆಯಲ್ಲಿ ಅರ್ಹ ಫಲಾನುಭವಿಗಳಿಗೆ ಸಮಸ್ಯೆ ಉಂಟಾಗಿದೆ. ಗಿರಿಜನ ಹಾಡಿಯಲ್ಲಿ ಹಲವರಿಗೆ ಪಡಿತರ ವಸ್ತುಗಳು ಹಾಗೂ ಸರಕಾರಿ ಸೌಲಭ್ಯಗಳು ಸಿಗದಂತಾಗಿದೆ ಎಂದು ಶಾಸಕರು ಹೇಳಿದರು. ಈ ಸಮಸ್ಯೆ ಬಗ್ಗೆ ಸುದೀರ್ಘ ಚರ್ಚೆ ನಡೆದು ಸಭೆಯಲ್ಲಿ ಉಪಸ್ಥಿತರಿದ್ದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ವಿ.ಪಿ. ಶಶಿಧರ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಅಧಿಕಾರಿಗಳು ಜನಪರ ಆಗಿರಬೇಕು, ಹೊರತು ಜನ ಪೀಡಕರಾಗಬಾರದು ಎಂದು ಕಿವಿಮಾತು ಹೇಳಿದರು.ಇಲಾಖೆಯಲ್ಲಿ ಮಾನವಿಯತೆಯಿಂದ ಕೆಲಸ ನಿರ್ವಹಿಸಬೇಕಾಗಿದೆ ಎಂದು ಸಲಹೆ ನೀಡಿದರು.ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ನದಿ ತಟದಲ್ಲಿ ಯಾವುದೇ ರೀತಿಯ ಅಕ್ರಮ ಕಟ್ಟಡಗಳು ನಿರ್ಮಾಣವಾಗದಂತೆ ಎಚ್ಚರ ವಹಿಸಬೇಕು ಎಂದು ಹೇಳಿದ ಶಾಸಕರು ಕುಶಾಲನಗರ ತಾವರೆಕೆರೆ ಅಭಿವೃದ್ಧಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ನದಿಯಿಂದ 50 ಮೀಟರ್ ಅಂತರದ ತನಕ ಹಾಗೂ ಕೆರೆಗಳಿಂದ ನೂತನ ಆದೇಶ ಪ್ರಕಾರ ಆರು ಮೀಟರ್ ದೂರದ ತನಕ ಯಾವುದೇ ಕಟ್ಟಡಗಳನ್ನು ನಿರ್ಮಾಣಕ್ಕೆ ಅವಕಾಶ ಕಲ್ಪಿಸಬಾರದು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು. ಸೋಮೇಶ್ವರ ದೇವಾಲಯ ಬಳಿ ಕೆರೆ ಬಫರ್ ಜೋನ್ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡದ ಬಗ್ಗೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವುದು ಮತ್ತು ಹೊಸಕೋಟೆ ಬಳಿ ವೃದ್ಧಾಶ್ರಮ ಹೆಸರಿನಲ್ಲಿ ಅಕ್ರಮವಾಗಿ ನಿರ್ಮಾಣವಾಗುತ್ತಿರುವ ಕಟ್ಟಡದ ಬಗ್ಗೆ ದಾಖಲಾತಿ ಪರಿಶೀಲಿಸುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಮಾಜಿ ಶಾಸಕರು ಕಾನೂನು ನಿಯಮಗಳನ್ನು ಮೀರಿ ಕಟ್ಟಡ ನಿರ್ಮಿಸುತ್ತಿದ್ದು, ಈ ಬಗ್ಗೆ ಸ್ಥಳೀಯರು ಉಪ ವಿಭಾಗ ಅಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಸಭೆಗೆ ತಿಳಿಸಿದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಶಶಿಧರ್, ಕೂಡಲೇ ಸಂಬಂಧಿಸಿದ ಪಂಚಾಯತಿ ಅಧಿಕಾರಿಗಳು, ತಹಸೀಲ್ದಾರ್ ಕ್ರಮ ಕೈಗೊಂಡು ಸಂಬಂಧಿಸಿದವರಿಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು. ಗ್ರಾಮ ವ್ಯಾಪ್ತಿಯ ಯಾವುದೇ ಸಮಸ್ಯೆಗಳಾಗಲಿ ಕಾರ್ಯಕ್ರಮಗಳಾಗಲಿ ಜನಪ್ರತಿನಿಧಿಗಳಿಗೆ ಸಮರ್ಪಕ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.

ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ವಾರದ ಸಂತೆ ನಡೆಯುತ್ತಿದ್ದು ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿದೆ. ತ್ಯಾಜ್ಯಗಳನ್ನು ನದಿ ಬದಿಯಲ್ಲಿ ರಾಶಿ ಹಾಕಿ ಬೆಂಕಿ ಹಾಕುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ತಿಳಿಸಿದ ಶಾಸಕರು, ಮಾರುಕಟ್ಟೆಯ ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡರು. ಸಮರ್ಪಕ ಸ್ವಚ್ಛತಾ ಕಾರ್ಯದ ಹಿನ್ನೆಲೆಯಲ್ಲಿ ತಕ್ಷಣ ಈ ಸ್ವಚ್ಛತಾ ವ್ಯವಸ್ಥೆಯನ್ನು ಮತ್ತು ಸಂತೆ ವ್ಯಾಪಾರಿಗಳಿಂದ ಸುಂಕ ವಸೂಲಿ ವ್ಯವಸ್ಥೆಯನ್ನು ಕುಶಾಲನಗರ ಪುರಸಭೆಯ ಸುಪರ್ದಿಗೆ ನೀಡುವಂತೆ ಶಾಸಕರು ಮಾರುಕಟ್ಟೆ ಅಧಿಕಾರಿಗೆ ತಿಳಿಸಿದರು.ತಾಲೂಕಿನ ಪ್ರತಿ ಪಂಯಿತಿಗಳ ಅಭಿವೃದ್ಧಿಗೆ ಕಳೆದ ಮೂರು ವರ್ಷಗಳ ಅವಧಿಯಲ್ಲಿ 80 ಲಕ್ಷದಿಂದ ಒಂದು ಕೋಟಿ ತನಕ ಅನುದಾನ ನೀಡಲಾಗಿದೆ ಎಂದು ಶಾಸಕರು ಮಾಹಿತಿ ಒದಗಿಸಿದರು. ಕುಶಾಲನಗರ ಪಟ್ಟಣದ ಮುಖ್ಯ ರಸ್ತೆಯ ಅಭಿವೃದ್ಧಿಗೆ ಸರ್ಕಾರದಿಂದ ಈಗಾಗಲೇ 5.5 ಕೋಟಿ ಅನುದಾನ ಲಭಿಸಿದ್ದು ಪಟ್ಟಣದ ರಥ ಬೀದಿಯನ್ನು ಸೌಂದರೀಕರಣ ಮಾಡುವ ಯೋಜನೆ ರೂಪಿಸಲಾಗಿದೆ ಎಂದು ಶಾಸಕರು ಹೇಳಿದರು.ಸಭೆಯಲ್ಲಿ ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಪ್ರಮೋದ್ ಮುತ್ತಪ್ಪ , ಕೆ ಡಿ ಪಿ ನಾಮನಿರ್ದೇಶಿತ ಸದಸ್ಯರಾದ ಹಮೀದ್, ಟಿ ಬಿ ಜಗದೀಶ್, ಸ್ವಾಮಿ, ಹನೀಫ್, ಕೆ ಎನ್ ಅಶೋಕ್ ಗ್ರಾಮ ಪಂಚಾಯಿತಿಗಳ ಆಡಳಿತ ಅಧಿಕಾರಿ ಅಬ್ದುಲ್ಲಾ, ಕಾರ್ಯ ನಿರ್ವಹಣಾಧಿಕಾರಿ ಪರಮೇಶ್ವರಪ್ಪ ತಾಲೂಕು ತಹಸೀಲ್ದಾರ್ ಕಿರಣ್ ಜಿ ಗೌರಯ್ಯ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಪುರಸಭೆಯ ಅಧಿಕಾರಿಗಳು ಸಿಬ್ಬಂದಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಮಾಜಿಕ ಕಳಕಳಿಯ ಕಾರಣಕ್ಕೆ ‘ಬಾಬೂಜಿ’ಯಾದ ಡಾ. ಬಾಬು ಜಗಜೀವನ್ ರಾಂ: ಪ್ರೊ. ಎಂ.ಡಿ.ಮಂಚಿ
ಉಡುಪಿ: 12 ರಂದು ಕಥಾಬಿಂದು ಸಾಹಿತ್ಯ ಸಮ್ಮೇಳನ