ಕನ್ನಡಪ್ರಭ ವಾರ್ತೆ ಕುದೂರು
ಹೇಮೆಯ ಸುದ್ದಿ ಹರಿದು ಬಂದ ದಾರಿ:
೧೯೯೩ರಲ್ಲಿ ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದಾಗ, ಎಸ್.ಎಂ.ಕೃಷ್ಣರವರು ಉಪಮುಖ್ಯಮಂತ್ರಿ ಹಾಗೂ ಮಧ್ಯಮ ಮತ್ತು ಬೃಹತ್ ನೀರಾವರಿ ಸಚಿವರಾಗಿದ್ದಾಗ ಸೆಪ್ಟಂಬರ್ ೧೪, ೧೯೯೪ ರಲ್ಲಿ ಕುಣಿಗಲ್ ಮತ್ತು ಹೆಬ್ಬೂರು ಮಧ್ಯ ಹೇಮಾವತಿ ಎಡದಂಡೆ ನಾಲೆಯ ೧೮೦-೨೦೦ ಕಿಮೀ ಅಂತರದಲ್ಲಿ ಶ್ರೀರಂಗ ಏತ ನೀರಾವರಿ ಯೋಜನೆ ಎಂಬ ಹೆಸರಿನಲ್ಲಿ ಸಮಿತಿ ರಚಿಸಲಾಯಿತು. ಅಲ್ಲಿಂದ ಹೇಮಾವತಿ ಮಾತು ಆರಂಭವಾಯಿತು. ಮತ್ತೆ ೧೯೯೬ ರಲ್ಲಿ ಹೊಸ ಸಮಿತಿ ರಚಿಸಲಾಯಿತು. ಆಗ ನೀರಾವರಿ ಸಚಿವರಾಗಿದ್ದ ಕೆ.ಎನ್.ನಾಗೇಗೌಡರು ಸಮಿತಿಯ ಅಧ್ಯಕ್ಷರಾದರು, ಉಪಾಧ್ಯಕ್ಷರಾಗಿ ಎಚ್.ಎಂ.ರೇವಣ್ಣ ಇದ್ದರು. ಮತ್ತೆ ೨೦೦೩ ರಲ್ಲಿ ಸಮಿತಿ ಬೇರೆಯಾಯಿತು. ಆಗ ನೀರಾವರಿ ಸಚಿವರಾಗಿ ಎಚ್.ಕೆ.ಪಾಟೀಲರಿದ್ದರು.ಬಹುಕಾಲದ ಚರ್ಚೆಯ ನಂತರ ೨೦೦೩, ಡಿಸೆಂಬರ್ ೧೧ರಲ್ಲಿ ಮಾಗಡಿ ತಾಲೂಕಿನ ೮೬ ಕೆರೆಗಳಿಗೆ ೦.೯ ಟಿಎಂಸಿ ನೀರು ಹರಿಸಲಾಗುತ್ತದೆ ಎಂಬ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು. ಅದಕ್ಕೆ ೯೬ ಕೋಟಿ ರು. ಗಳನ್ನು ಮೀಸಲಿಟ್ಟಿದ್ದೂ ಆಯಿತು. ಆದರೆ ನೀರು ಹರಿಸುವ ಕೆಲಸಕ್ಕೆ ಚಾಲನೆ ನೀಡಲಾಗಲೇ ಇಲ್ಲ. ಅಷ್ಟರಲ್ಲಾಗಲೇ ಲೋಕಸಭೆ ಮತ್ತು ರಾಜ್ಯಸಭೆ ಚುನಾವಣೆಗಳು ಬಂದ ಕಾರಣ ಸಮಿತಿಯನ್ನು ಪುನರ್ ರಚನೆ ಮಾಡಲು ನಿರ್ಧರಿಸಲಾಯಿತು.ಹೇಮೆಗೆ ಅಂದಿನ ನಾಯಕರ ಭರವಸೆಗಳು:
೨೦೧೧ರಲ್ಲಿ ಮುಖ್ಯಮಂತ್ರಿಯಾಗಿದ್ದ ಸದಾನಂದಗೌಡರು ಮಾಗಡಿಯ ತಿರುಮಲೆ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಮಹತ್ವದ ಯೋಜನೆಯಾದ ಹೇಮಾವತಿ ನೀರಿನ ಕುರಿತಾಗಿ ಶೀಘ್ರವೇ ಸ್ಥಳೀಯ ಜನಪ್ರತಿನಿಧಿಗಳ ಜೊತೆ ಚರ್ಚಿಸಿ ಶಾಶ್ವತ ಪರಿಹಾರ ಕೊಡಿಸುವೆ ಎಂದು ಹೋದವರು ತಿರುಗಿ ಬರಲಿಲ್ಲ.
ಸಂಸದ ಡಿ.ಕೆ.ಸುರೇಶ್ ರವರು ೨೦೧೬ ರ ಜನವರಿ ೩ರಂದು ಮಾಗಡಿ ತಾಲೂಕಿಗೆ ಹೇಮಾವತಿ ಯೋಜನೆಯನ್ನು ಕೊಡುಗೆಯಾಗಿ ಕೊಡುತ್ತಿದ್ದೇನೆ ಎಂದು ಕರಲಹಳ್ಳಿ ಬಸವಣ್ಣದ ದೇವಾಲಯದಲ್ಲಿ ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು.
ಮಾಯವಾದ ಸಿ.ಪಿ.ಯೋಗೇಶ್ವರ್:
ಮಾತು ಮರೆತ ಸುರೇಶ್‌ಗೌಡ:
ಹೇಮಾವತಿಗಿಂತ ಮೇಕೆದಾಟು ಸೂಕ್ತ ಎಂದಿದ್ದರು ಶಾಸಕ ಎಚ್.ಸಿ.ಬಾಲಕೃಷ್ಣರವರು. ಮತ್ತೆ ಅವರು ಮುಂದುವರೆದು ಹೇಮಾವತಿಯಿಂದ ಮಾತ್ರ ಸಾಧ್ಯವಿಲ್ಲ. ನೇತ್ರಾವತಿ ನದಿ ನೀರಿನ ಲಿಂಕ್ ಕೊಡಬೇಕು ಎಂದಿದ್ದರು.
ತುಮಕೂರು ಶಾಸಕರ ಪ್ರತಿಭಟನೆ:
ಪೈಪ್ ಲೈನ್ ಮೂಲಕ ತುಮಕೂರು ಜಿಲ್ಲೆಯಿಂದ ಮಾಗಡಿ ತಾಲೂಕಿಗೆ ನೀರು ತರುವುದು ಸುಲಭಕ್ಕಾಗುವುದಿಲ್ಲ. ಅದನ್ನು ಎಕ್ಸ್‌ಪ್ರೆಸ್ ಕೆನಾಲ್ ಮೂಲಕ ತಂದರೆ ಮಾತ್ರ ತಾಲೂಕಿನ ಕೆರೆಗಳಿಗೆ ನೀರು ಹರಿಸಬಹುದು ಎಂದು ಸಂಸದ.ಡಿ.ಕೆ.ಸುರೇಶ್, ಮತ್ತು ಶಾಸಕ ಎಚ್.ಸಿ.ಬಾಲಕೃಷ್ಣ ರವರು ಒತ್ತಾಯ ಮಾಡಿದ ನಂತರ ತುಮಕೂರು ಜಿಲ್ಲೆಯ ಶಾಸಕರು ಎಕ್ಸ್‌ಪ್ರೆಸ್ ಕೆನಾಲ್ ಮೂಲಕ ನೀರು ಹರಿಸಲು ಬಿಡುವುದಿಲ್ಲ ಎಂದು ಪ್ರತಿಭಟಿಸಲು ಶುರು ಮಾಡಿದರು.ಇದಕ್ಕೆ ಪ್ರತಿರೋಧವಾಗಿ ಮಾಗಡಿ ತಾಲೂಕಿನಲ್ಲಿಯೂ ಮಾಜಿ ಸಚಿವ ಎಚ್.ಎಂ.ರೇವಣ್ಣರ ಮುಂದಾಳತ್ವದಲ್ಲಿ ರಸ್ತ ತಡೆ ಚಳುವಳಿಯೂ ಆಯಿತು.
ಉಪಮುಖ್ಯಮಂತ್ರಿಗಳ ಮೌನವೇಕೆ?:ಮಾಗಡಿ ತಾಲೂಕಿಗೆ ಎಕ್ಸ್‌ಪ್ರೆಸ್ ಕೆನಾಲ್ ಮೂಲಕ ನೀರು ಹರಿಯಬೇಕೆಂಬ ಹಂಬಲ ಡಿಸಿಎಂ ಡಿ.ಕೆ.ಶಿವಕುಮಾರ್ ರವರದ್ದೂ ಆಗಿತ್ತು. ಈ ಹಿಂದೆ ಅವರು ಹೆಚ್ಚುವರಿಯಾಗಿ ೪೦ ಕೋಟಿ ರು.ಗಳನ್ನು ಕಾಮಗಾರಿಗೆ ಮಂಜೂರು ಮಾಡಿಕೊಡುತ್ತೇನೆ ಎಂದು ಹೇಳಿದ್ದರು. ಆದರೆ ಈಗ ಮಾಗಡಿ ತಾಲೂಕಿಗೆ ನೀರು ಹರಿಯಬಾರದು ಎಂದು ಅವರದ್ದೇ ಪಕ್ಷದ ತುಮಕೂರು ಜಿಲ್ಲೆಯ ಶಾಸಕರು ಪ್ರತಿಭಟಿಸುತ್ತಿರುವಾಗ, ಅವರನ್ನು ಗದರಿಸಿ ಸುಮ್ಮನಿರುವಂತೆ ಮತ್ತು ತಮ್ಮ ಜಿಲ್ಲೆಗೆ ನೀರು ಹರಿಸಲು ಚಳುವಳಿಗಳಾಗದಂತೆ ಕಾಮಗಾರಿ ಆರಂಭಿಸಲು ಪ್ರಯತ್ನ ಪಡುತ್ತಿಲ್ಲವಲ್ಲ ಏಕೆ? ಎಂದು ತಾಲೂಕಿನ ಜನರು ಪ್ರಶ್ನಿಸಿದ್ದಾರೆ.
ತುಮಕೂರು ಜಿಲ್ಲೆಗೆ ಹೇಮಾವತಿ ನದಿ ನೀರು ಹರಿಯುವ ಮುನ್ನ ಹಾಸನದ ಜಿಲ್ಲೆಯ ಜನರೂ ಕೂಡಾ ಹೀಗೆಯೇ ಪ್ರತಿಭಟಿಸಿದ್ದರೆ ತುಮಕೂರು ಜಿಲ್ಲೆಗೆ ನೀರು ಬರಲು ಸಾಧ್ಯವಾಗುತ್ತಿತ್ತಾ? ಆದ್ದರಿಂದ ಕುಡಿಯುವ ನೀರಿಗೆ ಯಾರದ್ದೂ ಅಡ್ಡಿ ಇರಬಾರದು. ಪರಸ್ಪರ ಸಹಕಾರಗಳಿಂದ ಮತ್ತು ಸೌಹಾರ್ದತೆಯಿಂದ ಮಾತ್ರ ನೆಮ್ಮದಿಯ ಜೀವನ ಮಾಡಬಹುದು ಎಂದು ಮಾಗಡಿ ತಾಲೂಕಿನ ಜನರು ತುಮಕೂರು ಶಾಸಕರಿಗೆ ಮನವಿ ಮಾಡಿದ್ದಾರೆ.‘ನೀರಾವರಿ ವಿಚಾರವಾಗಿ ಯಾವುದೇ ರಾಜಕಾರಣ ಬೇಡ, ಎಕ್ಸ್‌ಪ್ರೆಸ್ ಕೆನಾಲ್ ಮೂಲಕ ನೀರು ಸರಾಗವಾಗಿ ಬರುತ್ತದೆ ಎಂಬುದು ವಾದ. ಆದರೆ ಶ್ರೀರಂಗ ಏತ ನೀರಾವರಿ ಯೋಜನೆಗೆ ಪೈಪ್ ಮೂಲಕವಾದರೂ ನೀರು ಬರಬೇಕು. ಶ್ರೀರಂಗ ಏತ ನೀರಾವರಿ ಯೋಜನೆಗೂ ಎಕ್ಸ್‌ಪ್ರೆಸ್ ಕೆನಾಲ್ ಗೂ ಸಂಬಂಧವಿಲ್ಲ. ಶ್ರೀರಂಗ ಏತ ನೀರಾವರಿ ಯೋಜನೆಗೆ ೪೬೦ ಕೋಟಿ ರು. ಮಂಜೂರಾಗಿದೆ.’
-ಎ.ಮಂಜುನಾಥ್, ಮಾಜಿ ಶಾಸಕರು, ಮಾಗಡಿ