ಆಳುವ ಪ್ರತಿನಿಧಿಗಳಲ್ಲಿ ಸಾಮಾಜಿಕ ಪರಿಕಲ್ಪನೆ ಇಲ್ಲ: ಕೇಂದ್ರ ಮಾಜಿ ಸಚಿವ ಎ.ನಾರಾಯಣಸ್ವಾಮಿ ಅಸಮಾಧಾನ

KannadaprabhaNewsNetwork |  
Published : Jul 28, 2025, 12:30 AM IST
27ಕೆಆರ್ ಎಂಎನ್ 1.ಜೆಪಿಜಿರಾಮನಗರದ ಅಂಬೇಡ್ಕರ್ ಭವನದಲ್ಲಿ ಮಾತೆ ಸಾವಿತ್ರಿ ಬಾಫುಲೆ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ಸಮಾರಂಭದಲ್ಲಿ ಗಣ್ಯರು  ಶ್ರೀ ಶಿವಶರಣ ಮಾದರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿಗಳಿಗೆ ಗುರುವಂದನೆ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಬೇರೆ ದೇಶಗಲ್ಲಿ ಕೌಶಲ್ಯಾಧಾರಿತ ಶಿಕ್ಷಣ ನೀಡಲಾಗುತ್ತಿದೆ. ಆದರೆ, ನಮ್ಮ ದೇಶದಲ್ಲಿ ಆ ವ್ಯವಸ್ಥೆ ಇಲ್ಲ. ಓದಿದವರು ಎಲ್ಲರೂ ಸರ್ಕಾರಿ ಹುದ್ದೆಯನ್ನೇ ಅಪೇಕ್ಷೆ ಪಡುತ್ತಾರೆ. ಹೆಚ್ಚು ಅಂಕ ಪಡೆದಾಕ್ಷಣಕ್ಕೆ ಯಾರು ಪ್ರತಿಭಾವಂತರಲ್ಲ. ಓದು ನಿರಂತರವಾಗಿದ್ದು, ಅದನ್ನು ಮನನ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ರಾಮನಗರ

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅಸ್ಪೃಶ್ಯರಿಗೆ ಮೀಸಲಾತಿ ಕಲ್ಪಿಸಿದರು. ಅದು ಸಂವಿಧಾನದ ಪುಸ್ತಕಕ್ಕೆ ಸೀಮಿತವಾಗಿದೆ. ಆಳುವ ವರ್ಗದ ಪ್ರತಿನಿಧಿಗಳಿಗೆ ಸಾಮಾಜಿಕ ಪರಿಕಲ್ಪನೆ ಇಲ್ಲದಿರುವ ಕಾರಣದಿಂದಲೇ ಶೋಷಿತ ವರ್ಗ 4ನೇ ದರ್ಜೆ ನಾಗರಿಕರಾಗಿ ಬದುಕುತ್ತಿದ್ದಾರೆ ಎಂದು ಕೇಂದ್ರ ಮಾಜಿ ಸಚಿವ ಎ.ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಮಾತೆ ಸಾವಿತ್ರಿ ಬಾಫುಲೆ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ-ಪಿಯುಸಿ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ, ಸಾಧಕರಿಗೆ, ಜನಪದ ಗಾಯಕರಿಗೆ ಸನ್ಮಾನ ಮತ್ತು ಜಾನಪದ ಗಾಯನೋತ್ಸವ ಹಾಗೂ ಶ್ರೀ ಶಿವಶರಣ ಮಾದರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿಗಳಿಗೆ ಗುರು ವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳಾಗಿದೆ. ಈ ದೇಶದ ರಾಜಕಾರಣಿಗಳು ಹಾಗೂ ಆಡಳಿತ ವರ್ಗದ ಚುನಾಯಿತ ಪ್ರತಿನಿಧಿಗಳಿಗೆ ಸಾಮಾಜಿಕ ಪರಿಕಲ್ಪನೆ ಎಂಬುದೇ ಇಲ್ಲ. ಈ ಕಾರಣದಿಂದಾಗಿಯೇ ಸಂವಿಧಾನ ಪರಿಪೂರ್ಣವಾಗಿ ಜಾರಿಯಾಗಲು ಸಾಧ್ಯವಾಗಿಲ್ಲ. ಪ್ರಾಮಾಣಿಕತೆ, ಸಂಸ್ಕಾರ, ಮಾನವೀಯತೆ ಹಾಗೂ ಸಾಮಾಜಿಕ ಕಳಕಳಿ ಇರುವ ಒಬ್ಬ ರಾಜಕಾರಣಿ ಇಲ್ಲ ಎಂದರು.

ಅಸ್ಪೃಶ್ಯರು, ಶೋಷಿತ ವರ್ಗದ ಮೇಲೆ ಮತ್ತೊಂದು ಪ್ರಜ್ಞಾವಂತ ವರ್ಗವನ್ನು ಮೀಸಲಾತಿಗೆ ಸೇರಿಸಿದ್ದಾರೆ. ಇದಕ್ಕೆ ಯಾವ ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಮಾದಿಗ ಸಮಾಜಕ್ಕಾಗಿ ಒಳ ಮೀಸಲಾತಿಗಾಗಿ ಬದ್ಧತೆ ತೋರಿಸುತ್ತಿದ್ದೇನೆ. ನನ್ನ ಮುಂದಿರುವ ಮಹನೀಯರ ಮಾನಸಿಕ ಸ್ಥಿತಿ ಅರಿತರೆ ಮಾದಿಗರಿಗೆ ನಾಲ್ಕನೇ ದರ್ಜೆಯೂ ಇಲ್ಲದಂತಿದೆ. ಅಂತಹ ಮನಸ್ಥಿತಿ ಹೊಂದಿರುವ ರಾಜಕಾರಣಿಗಳಿಗೆ ಎಚ್ಚರಿಕೆ ನೀಡುತ್ತಿದ್ದು, ಇನ್ನು ಮುಂದೆ ಇದೆಲ್ಲವನ್ನು ನಾವು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಒಳ ಮೀಸಲಾತಿ ಇಲ್ಲದ ಕಾರಣ ಶೋಷಿತರಲ್ಲಿ ಶೋಷಿತರು, ಅಸ್ಪೃಶ್ಯರಲ್ಲಿ ಅಸ್ಪೃಶ್ಯರು ಎಂಬಿಬಿಎಸ್, ಟೆಕ್ನಿಕಲ್ ಕೋರ್ಸ್ ಗಳನ್ನು ಪಡೆಯಲು ಆಗುತ್ತಿಲ್ಲ. ಆಳುವ ವರ್ಗ ಬಲಿಷ್ಠರು, ಬಲಾಢ್ಯರು, ಹ‍ಣವಂತರು ಹಾಗೂ ಶೋಷಿತ ವರ್ಗಗಳ ಮಧ್ಯೆ ದೊಡ್ಡ ಕಂದಕ ಸೃಷ್ಟಿಸಿದ್ದಾರೆ. ಇದೆಲ್ಲವನ್ನು ಮೆಟ್ಟಿ ನಿಲ್ಲುವ ಸವಾಲು ಶೋಷಿತ ವರ್ಗದ ಮಕ್ಕಳ ಮುಂದಿದೆ. ಯಾರಲ್ಲಿ ಛಲವಿದ್ದು, ಮೌಲ್ಯಗಳನ್ನು ಮೈಗೂಡಿಸಿಕೊಂಡು ಮಾನವೀಯತೆ ಹೊಂದಿರುತ್ತಾರೊ ಅವರ ಸಾಧನೆಗೆ ಯಾವ ಜಾತಿ, ವ್ಯಕ್ತಿ ಅಡ್ಡಿಯಾಗಲು ಸಾಧ್ಯವಿಲ್ಲ ಎಂದು ನಾರಾಯಣಸ್ವಾಮಿ ಹೇಳಿದರು.

ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ಸುಭದ್ರವಾದ ಸರ್ಕಾರ ರಾಜ್ಯದಲ್ಲಿ ಇದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಗಟ್ಟಿಯಾಗಿದೆ. ಇವರೊಂದಿಗೆ ಜಿ.ಪರಮೇಶ್ವರ್, ಮಹದೇವಪ್ಪ, ಕೆ.ಎಚ್.ಮುನಿಯಪ್ಪ, ಶಿವರಾಜ್ ತಂಗಡಗಿರವರು ನಿಮ್ಮ ಸಮಾಜದ ಪರ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಮಕ್ಕಳ ವಿದ್ಯಾಭ್ಯಾಸಕ್ಕೆ ಎಲ್ಲರು ಪ್ರಥಮ ಆದ್ಯತೆ ಕೊಡಬೇಕು. ಮನುಷ್ಯನಾಗಲು ವಿದ್ಯೆಯೇ ಮುಖ್ಯ. ಅದು ನಮಗೆ ಸ್ಥಾನಮಾನ ತಂದು ಕೊಡುತ್ತದೆ. ಸರ್ಕಾರ ಮಕ್ಕಳ ಶಿಕ್ಷಣಕ್ಕಾಗಿಯೇ ಅನೇಕ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಉತ್ತೇಜನೆ ನೀಡುತ್ತಾ ಬಂದಿದೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರು ಸಹ ಶಿಕ್ಷಣ, ಸಂಘಟನೆ, ಹೋರಾಟದ ಅಸ್ತ್ರ ನೀಡಿದ್ದು, ಆ ಹಾದಿಯಲ್ಲಿ ಸಾಗಬೇಕು. ಪ್ರತಿಯೊಬ್ಬರು ಶಿಕ್ಷಣವಂತರಾದಾಗ ಮಾತ್ರ ಸಮಾಜ ಸುಧಾರಣೆಯಾಗುತ್ತದೆ ಎಂದು ತಿಳಿಸಿದರು.

ಸಮಾರಂಭ ಉದ್ಘಾಟಿಸಿದ ಕೆಐಎಡಿಬಿ ಮೈಸೂರು ವಿಭಾಗ ವಿಶೇಷ ಭೂಸ್ವಾಧೀನಾಧಿಕಾರಿ ಎನ್.ವೆಂಕಟರಾಜು, ಐಎಎಸ್ , ಐಪಿಎಸ್ ಗಿಂತಲೂ ಪ್ರತಿಭಾವಂತರು ನಮ್ಮ ಸಮಾಜದಲ್ಲಿ ಇದ್ದಾರೆ. ನಾವು ಓದಿದ ಅಂಶಗಳು ಪ್ರಶ್ನೆಗಳಾಗಿ ಬಂದಿದ್ದರಿಂದ ನಾವು ಉನ್ನತ ಹುದ್ದೆ ಅಲಂಕರಿಸಿದ್ದೇವೆ ಅಷ್ಟೇ. ಆದರೆ, ನಮಗಿಂತಲೂ ಮೂರು ಪಟ್ಟು ಬುದ್ಧಿವಂತರು ಸಮಾಜದಲ್ಲಿದ್ದಾರೆ. ಆದ್ದರಿಂದ ಯಾರೂ ಬಿಗುಮಾನ ಹೊಂದಬಾರದು ಎಂದು ಕಿವಿಮಾತು ಹೇಳಿದರು.

ಬೇರೆ ದೇಶಗಲ್ಲಿ ಕೌಶಲ್ಯಾಧಾರಿತ ಶಿಕ್ಷಣ ನೀಡಲಾಗುತ್ತಿದೆ. ಆದರೆ, ನಮ್ಮ ದೇಶದಲ್ಲಿ ಆ ವ್ಯವಸ್ಥೆ ಇಲ್ಲ. ಓದಿದವರು ಎಲ್ಲರೂ ಸರ್ಕಾರಿ ಹುದ್ದೆಯನ್ನೇ ಅಪೇಕ್ಷೆ ಪಡುತ್ತಾರೆ. ಹೆಚ್ಚು ಅಂಕ ಪಡೆದಾಕ್ಷಣಕ್ಕೆ ಯಾರು ಪ್ರತಿಭಾವಂತರಲ್ಲ. ಓದು ನಿರಂತರವಾಗಿದ್ದು, ಅದನ್ನು ಮನನ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ ಯಾವ ಕಾರಣಕ್ಕೂ ಉದ್ಧಾರವಾಗಲು ಸಾಧ್ಯವಿಲ್ಲ. ಪ್ರತಿಭೆ ಛಳಪನ್ನು ಇಟ್ಟುಕೊಂಡವರು ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ. ಬಡತನ ಕೂಲಿ ಯಶಸ್ಸಿಗೆ ಅಡ್ಡಿಯಾಗುವುದಿಲ್ಲ ಎಂದು ತಿಳಿಸಿದರು.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ,

ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ಟ್ರಸ್ಟ್ ಅಧ್ಯಕ್ಷ ಎಂ.ನಾಗೇಶ್ ಮಾತನಾಡಿದರು.

ಶ್ರೀ ಶಿವಶರಣ ಮಾದರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿಗಳಿಗೆ ಗುರುವಂತನೆ ಸಲ್ಲಿಸಲಾಯಿತು. ಎಸ್ಸೆಸ್ಸೆಲ್ಸಿ - ಪಿಯುಸಿ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರಗಳ ಸಾಧಕರು ಹಾಗೂ ಜನಪದ ಗಾಯಕರನ್ನು ಸನ್ಮಾನಿಸಲಾಯಿತು.

ಬಿಡದಿ ಪುರಸಭೆ ಮಾಜಿ ಸದಸ್ಯ ರಮೇಶ್ ಕುಮಾರ್, ಮುಖಂಡರಾದ ನರಸಿಂಹಯ್ಯ, ಕಲ್ಕೆರೆ ಶಿವಣ್ಣ, ನಮನಚಂದ್ರು ಮತ್ತಿತರರು ಉಪಸ್ಥಿತರಿದ್ದರು.

‘ಶೂದ್ರರಿಗೆ ಅಕ್ಷರ ಕಲಿಸುತ್ತಿದ್ದಾರೆ ಎಂಬ ಕಾರಣಕ್ಕೆ ಸಾವಿತ್ರಿ ಬಾಫುಲೆ ಅವರನ್ನು ಪಟ್ಟಭದ್ರರು ಕೆಸರು ಎರಚಿ ಅವಮಾನಿಸುತ್ತಿದ್ದರು. ಇದೆಲ್ಲವನ್ನು ಲೆಕ್ಕಿಸದೆ ಫುಲೆರವರು ಕ್ಲಿಷ್ಟಕರ ವಾತಾವರಣದಲ್ಲಿಯೂ ಅಸ್ಪೃಶ್ಯರಿಗೆ ವಿದ್ಯಾದಾನ ಮಾಡಿದರು. ನಾವು ಶಾರದಾ ದೇವಿ, ಸರಸ್ವತಿ ಅಂತ ಹೇಳುತ್ತೇವೆ. ಆ ಸ್ಥಾನದಲ್ಲಿ ಬೇರೆ ಯಾರಾದರು ಗೌರವಿಸಲ್ಪಡುತ್ತಾರೆ ಅಂದರೆ ಫುಲೆ ದಂಪತಿಗೆ ಸಲ್ಲುತ್ತದೆ.’

- ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ, ಶಿವಶರಣ ಮಾದರ ಚನ್ನಯ್ಯ ಗುರುಪೀಠ

PREV

Recommended Stories

ಯೂರಿಯಾ: ರೈತ ಬಾಂಧವರಲ್ಲಿ ಅತಂಕ ಬೇಡ
ಪಂಚಪೀಠ ನಿರ್ಣಯ ಒಪ್ಪಲ್ಲ, ರಂಭಾಪುರಿ ಶ್ರೀಗಳ ಮನಸ್ಥಿತಿ ಕಲುಷಿತ: ವಚನಾನಂದ ಶ್ರೀ