ಕನ್ನಡಪ್ರಭ ವಾರ್ತೆ ಇಂಡಿ
ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನದಲ್ಲಿ ಸಂಸದ ರಮೇಶ ಜಿಗಜಿಣಗಿ ಅವರ ಪಾತ್ರ ಸ್ವಲ್ಪವೂ ಇಲ್ಲ. ಈ ಯೋಜನೆ ಕುರಿತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರೆ ದಾಖಲೆ ನೀಡಲಿ. ರಾಷ್ಟ್ರೀಯ ಹೆದ್ದಾರಿ ಭೂಮಿಪೂಜೆ ಸಮಾರಂಭವನ್ನು ಸರ್ಕಾರಿ ಕಾರ್ಯಕ್ರಮವೆಂದು ಬಿಂಬಿಸಿ ಜೆಡಿಎಸ್, ಬಿಜೆಪಿ ಸಮಾವೇಶ ಎನ್ನುವಂತೆ ಮಾಡಿದ್ದು ಸಂಸದರಿಗೆ ಶೋಭೆ ತರುವುದಿಲ್ಲ ಎಂದು ಸಂಸದರ ವಿರುದ್ಧ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೇದ ಮೋಮಿನ ವಾಗ್ದಾಳಿ ನಡೆಸಿದರು.ನಗರದ ಕಾಂಗ್ರೆಸ್ ಕಚೇರಿಯಲ್ಲಿ ಅವರು ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಬೆಳಗಾವಿಯಲ್ಲಿ ಕೇಂದ್ರ ಸಚಿವ ನಿತೀನ ಗಡ್ಕರಿ ಅವರು ಈ ಕಾಮಗಾರಿಗೆ ಚಾಲನೆ ನೀಡಿದ್ದರೂ ಸಂಸದ ಜಿಗಜಿಣಗಿ ಅವರು ಮತ್ತೆ ಇಂಡಿಯಲ್ಲಿಯೇ ಕಾರ್ಯಕ್ರಮ ಏಕೆ ಮಾಡಬೇಕು? ಶಾಸಕ ಯಶವಂತರಾಯಗೌಡ ಪಾಟೀಲ ಅವರು ಮತ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೇ ಹತಾಸೆಯಿಂದ ಕಾರ್ಯಕ್ರಮ ಮಾಡಿದ್ದಾರೆ ಎಂಬ ಅನುಮಾನ ಮೂಡಿದೆ ಎಂಬ ಶಂಕೆ ವ್ಯಕ್ತಪಡಿಸಿದರು.30 ರಿಂದ 35 ವರ್ಷ ರಾಜಕಾರಣದಲ್ಲಿರುವ ಶಾಸಕ ಯಶವಂತರಾಯಗೌಡ ಪಾಟೀಲ ಅವರು ನಿಮ್ಮಿಂದ ಪಾಠ ಕಲಿಯಬೇಕಿಲ್ಲ. ಎಲ್ಲರನ್ನು ಗೌರವಿಸುವ ಕಾರ್ಯ ಶಾಸಕರು ಮಾಡುತ್ತಾರೆ. ಸಿದ್ದೇಶ್ವರ ಶ್ರೀಗಳ ಮೇಲಿನ ಭಕ್ತಿ, ಗೌರವ, ಆದರ್ಶ ಇಟ್ಟುಕೊಂಡು ವೇದಿಕೆಗಳಲ್ಲಿ ಅವರ ಹೆಸರು ಬಳಸಿಕೊಳ್ಳುತ್ತಾರೆ ವಿನಃ ರಾಜಕಾರಣಕ್ಕಾಗಿ ಅಲ್ಲ ಎಂಬುದು ತಿಳಿಯಬೇಕು. ಬಸ್ ನಿಲ್ದಾಣ ಮಾಡಿದ್ದೇನೆ ಎಂದು ಶಾಸಕರು ಎಲ್ಲಿಯೂ ಹೇಳಿಲ್ಲ. ಬಸ್ ಡಿಪೋ ಮಾಡಿದ್ದೇನೆ ಎಂದು ಹೇಳಿದ್ದನ್ನು ಸರಿಯಾಗಿ ಕೇಳಿಸಿಕೊಳ್ಳಬೇಕು. ಸಣ್ಣ ವಿಚಾರಗಳನ್ನು ಚರ್ಚಿಸಿ ಸಣ್ಣತನಕ್ಕೆ ಇಳಿಯಬಾರದು. ಕೇಂದ್ರ ಸಚಿವ ನಿತಿನ ಗಡ್ಕರಿ ಅವರು ಹೆದ್ದಾರಿ ಸುಧಾರಣೆ ಮಾಡುತ್ತಿರುವುದರಿಂದ ಅಧಿವೇಶನದಲ್ಲಿ ಅವರನ್ನು ಹೊಗಳಿದ್ದಾರೆ. ಒಳ್ಳೆಯ ಕೆಲಸ ಮಾಡಿದ ಪ್ರಧಾನಿ ಅಟಲ್ ಬಿಹಾರ ವಾಜಪೇಯಿ ಅವರನ್ನೂ ಹೊಗಳಿದ್ದಾರೆ. ಸುಳ್ಳು ಆರೋಪಗಳನ್ನು ಬಿಟ್ಟು ಅಭಿವೃದ್ದಿಗೆ ಕೈಜೋಡಿಸುವಂತೆ ಮನವಿ ಮಾಡಿದರು.ಈ ವೇಳೆ ಸದಾಶಿವ ಪ್ಯಾಟಿ, ಶಿವಯೋಗೆಪ್ಪ ಚನಗೊಂಡ,ಶಾಂತುಗೌಡ ಪಾಟೀಲ, ಲಿಂಬಾಜಿ ರಾಠೋಡ, ಪ್ರಭುಗೌಡ ಪಾಟೀಲ, ರಮೇಶ ಕಲ್ಯಾಣಿ, ಚನ್ನು ದೇವರ, ಸತೀಶ ಕುಂಬಾರ, ಭೀಮರಾಯ ಗಾಣಿಗೇರ,ಮಂಜುನಾಥ ಕಾಮಗೊಂಡ, ಹರಿಚಂದ್ರ ಪವಾರ, ಭೀಮಣ್ಣ ಕವಲಗಿ, ಜಟ್ಟೆಪ್ಪ ರವಳಿ, ಸುಭಾ ಬಾಬರ, ಅವಿನಾಶ ಬಗಲಿ, ಇಲಿಯಾಸ ಬೊರಾಮಣಿ, ಪ್ರಶಾಂತ ಕಾಳೆ ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಅದು ಸರ್ಕಾರದ್ದೋ, ಪಕ್ಷದ ಕಾರ್ಯಕ್ರಮವೋ ಉತ್ತರಿಸಿ:ಆ ಕಾರ್ಯಕ್ರಮಕ್ಕೆ ಶಾಸಕರನ್ನು ಅಹ್ವಾನಿಸಿದರೂ ಬರಲಿಲ್ಲ ಎಂದು ಆರೋಪ ಮಾಡುವವರು, ಸರ್ಕಾರದ ಯಾವೊಬ್ಬ ಅಧಿಕಾರಿಯನ್ನು ಕರೆಯದೇ, ಸರ್ಕಾರಿ ಕಾರ್ಯಕ್ರಮ ಇರದಿದ್ದರೆ ಶಾಸರು ಹೇಗೆ ಕಾರ್ಯಕ್ರಮಕ್ಕೆ ಬರಲು ಆಗುತ್ತದೆ? ಮೊದಲು ಅದು ಸರ್ಕಾರಿ ಕಾರ್ಯಕ್ರಮವೋ, ಪಕ್ಷದ ಕಾರ್ಯಕ್ರಮವೋ ಎಂಬ ಉತ್ತರ ನೀಡಲಿ. ಸರ್ಕಾರಿ ಕಾರ್ಯಕ್ರಮವೆಂದರೆ ಅಧಿಕಾರಿಗಳು ಏಕೆ ಬರಲಿಲ್ಲ? ಪಕ್ಷದ ಕಾರ್ಯಕ್ರಮವಾದರೆ ಕಾಂಗ್ರೆಸ್ ಪಕ್ಷದ ಇಬ್ಬರ ಶಾಸಕರ ಭಾವಚಿತ್ರ ಏಕೆ ಹಾಕಿದ್ದಿರಿ ಎಂಬ ಉತ್ತರ ನೀಡಬೇಕು ಎಂದು ಹೇಳಿದರು.
ಪುರಸಭೆಯ ಬಿಜೆಪಿ ಸದಸ್ಯರನ್ನೇ ನಿಮ್ಮ ಬಳಿ ಕೆರೆದುಕೊಳ್ಳಲು ಆಗದೇ, ಬೇರೆ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ. ಬಿಜೆಪಿ ಸದಸ್ಯರು ಶಾಸಕರ ಅಭಿವೃದ್ದಿ ಕೆಸಲಗಳನ್ನು ನೋಡಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ ವಿನಃ ಯಾವುದೇ ಅಧಿಕಾರ, ಹಣದ ಆಸೆಗಾಗಿ ಅಲ್ಲ. ಸಂಸದ ರಮೇಶ ಜಿಗಜಿಣಗಿ ಅವರು ಸಣ್ಣತನಕ್ಕೆ ಇಳಿಯದಂತೆ ತಮ್ಮ ಕಾರ್ಯಕರ್ತರು, ಮುಖಂಡರಿಗೆ ತಿಳಿ ಹೇಳಬೇಕು.ಜಾವೇದ ಮೋಮಿನ,
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ.