ಗೋಕರ್ಣ: ಇಲ್ಲಿನ ತಲಗೇರಿ ಕಿರಿಯ ಪ್ರಾಥಮಿಕ ಶಾಲೆಗೆ ಕುಡಿಯುವ ನೀರು ಪೂರೈಕೆಯಾಗದೆ ಒಂದು ತಿಂಗಳಿಂದ ಬಿಸಿಯೂಟ ತಯಾರಿಕೆಗೆ ತೊಂದರೆಯಾಗುತ್ತಿದ್ದು, ಈ ಬಗ್ಗೆ ಗ್ರಾಮ ಪಂಚಾಯಿತಿಗೆ ತಿಳಿಸಿದರೂ ನೀರು ಪೂರೈಕೆ ಮಾಡಿಲ್ಲ ಎಂದು ಶಾಲಾ ಅಭಿವೃದ್ಧಿ ಸಮಿತಿಯವರು ಹೇಳುತ್ತಿದ್ದು, ಈ ಬಗ್ಗೆ ಶಿಕ್ಷಣ ಇಲಾಖೆ ತ್ವರಿತ ಕ್ರಮ ಕೈಗೊಳ್ಳಬೇಕಿದೆ. ಈ ಶಾಲೆಗೆ ಜಲಜೀವನ್ ಮಿಷನ್ ಅಡಿ ನೀರಿನ ಸಂಪರ್ಕ ನೀಡಲಾಗಿದೆ.
ಶಾಲೆ ಪ್ರಾರಂಭವಾಗಿ ತಿಂಗಳಾದರೂ ಒಂದು ದಿನ ಮಾತ್ರ ನೀರು ಬಂದಿದ್ದು, ನಂತರ ಬಂದಿಲ್ಲ. ಈ ಬಗ್ಗೆ ಕೇಳಿದರೆ ನೀರಿನ ಪೈಪ್‌ಲೈನ್ ಹಾಳಾಗಿದೆ, ನಾಳೆ ಬರುತ್ತದೆ ಎಂದು ಉತ್ತರ ನೀಡುತ್ತಿದ್ದಾರೆ. ಈ ಶಾಲೆಗೆ ಬಾವಿ ಇಲ್ಲದಿರುವುದರಿಂದ ಗ್ರಾಮ ಪಂಚಾಯಿತಿಯ ನೀರಿನ ಪೂರೈಕೆಯೆ ಆಧಾರವಾಗಿದೆ. ಪ್ರಸ್ತುತ ಪಕ್ಕದ ಮನೆಯವರು ದಿನಕ್ಕೆ ಕೇವಲ ಎರಡು ಕೊಡ ನೀರು ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.ಮಕ್ಕಳಿಗೆ ಕುಡಿಯಲು ನೀರಿಲ್ಲ: ಪುಟ್ಟ ಮಕ್ಕಳಿಗೆ ಬಾಯಾರಿಕೆಯಾದರೆ ನೀರು ಸರಿಯಾಗಿ ಸಿಗುತ್ತಿಲ್ಲ. ಶಿಕ್ಷಕರು, ಅಡುಗೆಯವರೇ ಹೊರಗಡೆಯಿಂದ ನೀರು ತಂದು ಮಕ್ಕಳಿಗೆ ನೀಡುತ್ತಿದ್ದಾರೆ.
ಮಳೆ ನೀರು ಸಂಗ್ರಹ: ಕೈ ಮತ್ತು ಪಾತ್ರೆಗಳನ್ನು ಸ್ವಚ್ಛಗೊಳಿಸಲು ಶಾಲೆಯ ಚಾವಣಿಯಿಂದ ಬೀಳುವ ಮಳೆ ನೀರು ಸಂಗ್ರಹಿಸಿ ಬಳಸುತ್ತಿದ್ದು, ಇಂತಹ ಗಂಭೀರ ಸಮಸ್ಯೆಯನ್ನು ಬಗೆಹರಿಸುವವರು ಯಾರು ಎಂಬುದೇ ತಿಳಿಯದಾಗಿದೆ.ಈ ಬಗ್ಗೆ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರನ್ನು ವಿಚಾರಿಸಿದಾಗ, ತಾವು ಹಲವು ಬಾರಿ ಗ್ರಾಮ ಪಂಚಾಯಿತಿಗೆ ನೀರು ಬಿಡುವಂತೆ ತಿಳಿಸಿದ್ದೇವೆ. ಪೈಪ್‌ಲೈನ್ ಹಾಳಾಗಿದೆ ಸರಿಪಡಿಸಿ ನೀಡುತ್ತೇವೆ ಎಂದು ದಿನ ಕಳೆಯುತ್ತಿದ್ದು, ಇದರಿಂದ ಶಾಲೆ ಅಡುಗೆ ತಯಾರಿಸಲು ತೊಂದರೆಯಾಗಿದೆ. ಮೇ ತಿಂಗಳಲ್ಲಿ ಒಮ್ಮೆ ನೀರನ್ನು ಬಿಟ್ಟಿದ್ದರು. ನಂತರ ನೀಡಿಲ್ಲ ಎಂದು ತಿಳಿಸಿದ್ದಾರೆ.