ಎಚ್ಡಿಕೆ-ಸತೀಶ್ ಜಾರಕಿಹೊಳಿ ಭೇಟಿಯಲ್ಲಿ ವಿಶೇಷತೆ ಏನಿಲ್ಲ : ಮಾಗಡಿ ಕ್ಷೇತ್ರ ಶಾಸಕ ಬಾಲಕೃಷ್ಣ

KannadaprabhaNewsNetwork |  
Published : Mar 28, 2025, 01:17 AM ISTUpdated : Mar 28, 2025, 03:45 AM IST
27ಕೆಆರ್ ಎಂಎನ್ 4.ಜೆಪಿಜಿಬಿಡದಿ ಪುರಸಭಾ ವ್ಯಾಪ್ತಿಯಲ್ಲಿನ ಹಲವು ವಾರ್ಡ್ ಗಳಲ್ಲಿ‌ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಾಲಕೃಷ್ಣ ಚಾಲನೆ ನೀಡಿದರು. | Kannada Prabha

ಸಾರಾಂಶ

ರಾಮನಗರ: ಒಬ್ಬ ರಾಜ್ಯ ಸಚಿವರು ಕೇಂದ್ರ ಸಚಿವರನ್ನು ಭೇಟಿ ಮಾಡುವುದರಲ್ಲಿ ವಿಶೇಷತೆ ಏನು ಇಲ್ಲ. ಬೆಳಗಾವಿ ಭಾಗದ ಅನೇಕ ಸಮಸ್ಯೆಗಳ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರೊಂದಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಚರ್ಚೆ ಮಾಡಿದ್ದಾರೆ ಅಷ್ಟೆ ಎಂದು ಮಾಗಡಿ ಕ್ಷೇತ್ರ ಶಾಸಕ ಬಾಲಕೃಷ್ಣ ತಿಳಿಸಿದರು.

ರಾಮನಗರ: ಒಬ್ಬ ರಾಜ್ಯ ಸಚಿವರು ಕೇಂದ್ರ ಸಚಿವರನ್ನು ಭೇಟಿ ಮಾಡುವುದರಲ್ಲಿ ವಿಶೇಷತೆ ಏನು ಇಲ್ಲ. ಬೆಳಗಾವಿ ಭಾಗದ ಅನೇಕ ಸಮಸ್ಯೆಗಳ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರೊಂದಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಚರ್ಚೆ ಮಾಡಿದ್ದಾರೆ ಅಷ್ಟೆ ಎಂದು ಮಾಗಡಿ ಕ್ಷೇತ್ರ ಶಾಸಕ ಬಾಲಕೃಷ್ಣ ತಿಳಿಸಿದರು.

ಬಿಡದಿ ಪುರಸಭೆ ವ್ಯಾಪ್ತಿಯಲ್ಲಿ 3.32 ಕೋಟಿ ರುಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡರು ನೀರಾವರಿ ಬಗ್ಗೆ ಅನುಭವ ಇರುವವರು. ಹಾಗಾಗಿ ಅವರನ್ನು ಭೇಟಿಯಾಗಿ ಚರ್ಚೆ ಮಾಡಿದ್ದಾರೆ. ರಾಜ್ಯದ ಕೆಲ ಸಮಸ್ಯೆಗಳನ್ನು ಬಗೆಹರಿಸಿಕೊಡಿ ಅಂತ ಕೇಳಿರಬಹುದು. ಈ ಬಗ್ಗೆ ಅವರೇ ಹೇಳುತ್ತೇನೆ ಅಂತ ಹೇಳಿದ್ದಾರಲ್ಲ ಕಾದು ನೋಡೊಣ ಎಂದರು.

ಜೆಡಿಎಸ್ ಶಾಸಕರ ಬೆಂಬಲ ಕೋರಲು ಸತೀಶ್ ಜಾರಕಿ ಹೊಳಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದಾರೆಂದು ಜಿ.ಟಿ.ದೇವೇಗೌಡರು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಜಿ.ಟಿ.ದೇವೇಗೌಡರಿಗೆ ಯಾರು ಹೇಳಿದ್ದಾರೋ ಗೊತ್ತಿಲ್ಲ. ಅವರಿಗೆ ಪೋನ್ ಮಾಡಿ ಕೇಳುತ್ತೇನೆ. ಅವರಿಗೆ ಮಾಹಿತಿ ಇರಬಹುದೇನೋ, ನನಗೆ ಮಾಹಿತಿ ಇಲ್ಲ. ವಿರೋಧ ಪಕ್ಷದವರು ವಿರೋಧವಾಗಿ ಟೀಕೆ ಮಾಡುತ್ತಾರೆ ಮಾಡಲಿ ಎಂದು ಹೇಳಿದರು.

ಬಿಜೆಪಿಯಿಂದ ಯತ್ನಾಳ್ ಉಚ್ಚಾಟನೆ ಮಾಡಿದ್ದಾರಲ್ಲ ಎಂಬ ಪ್ರಶ್ನೆಗೆ ಯಾರು ನೇರವಾಗಿ, ನಿಷ್ಠುರವಾಗಿ ಮಾತನಾಡುತ್ತಾರೋ ಅವರು ಯಾವುದೇ ಪಕ್ಷದಲ್ಲಿ ಉಳಿಯಲ್ಲ. ಅವರೇನು ಉಚ್ಚಾಟನೆ ಆಗುತ್ತಿರುವುದು ಮೊದಲನೇ ಬಾರಿ ಅಲ್ಲ. ಎರಡನೇ ಬಾರಿ ಅವರು ಉಚ್ಚಾಟನೆ ಆಗಿದ್ದಾರೆ. ಸುಮ್ಮನೆ ಬಿಜೆಪಿಯಲ್ಲಿ ಯತ್ನಾಳ್ ಗೆ ಒಂದು ಎಚ್ಚರಿಕೆ ಕೊಟ್ಟಿದ್ದಾರೆ ಎಂದು ಉತ್ತರಿಸಿದರು.

ಶಾಶ್ವತವಾಗಿ ಯತ್ನಾಳ್ ಅವರನ್ನು ಪಕ್ಷದಿಂದ ವಜಾ ಮಾಡಲಿ ನೋಡೋಣ. ಬಿಜೆಪಿಗೆ ಆ ಶಕ್ತಿ ಇದೆಯಾ. ಯತ್ನಾಳ್ ಇಲ್ಲ ಅಂದರೆ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ನಾನು ಕುಟುಂಬ ರಾಜಕಾರಣ ಬರುವುದಕ್ಕೂ ಮುನ್ನವೇ ಬಿಜೆಪಿ ಬಿಟ್ಟೆ. ಅಲ್ಲಿಂದ ಮತ್ತೊಂದು ಕುಟುಂಬ ರಾಜಕಾರಣ ಸೇರಿ ಅಲ್ಲಿಂದಲೂ ಹೊರ ಬಂದೆ ಎಂದು ಬಿಜೆಪಿ-ಜೆಡಿಎಸ್ ವಿರುದ್ಧ ಬಾಲಕೃಷ್ಣ ವ್ಯಂಗ್ಯವಾಡಿದರು.

ಹನಿಟ್ರ್ಯಾಪ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಲುಕಿದ್ದಾರೆ ಎಂಬ ಛಲವಾದಿ ನಾರಾಯಣಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಹುಚ್ಚುಚ್ಚಾಗಿ ಮಾತನಾಡುವವರಿಗೆ ಉತ್ತರ ಕೊಡುವುದಿಲ್ಲ. ಅವರೊಬ್ಬ ವಿರೋಧ ಪಕ್ಷದ ನಾಯಕರಾಗಿ ಗೌರವಯುತವಾಗಿ ಮಾತನಾಡಬೇಕು. ನಾಲಿಗೆಗೆ ಬಂದ ಹಾಗೆ ಮಾತನಾಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು.

ತನಿಖೆ ನಡೆಯುತ್ತಿಲ್ಲ ಅಂತ ರಾಜಣ್ಣ ಹೇಳಿದ್ದಾರಾ. ಅವರು ದೂರು ಕೊಟ್ಟಿರುವುದರಿಂದ ತನಿಖೆ ನಡೆಯಲಿದೆ. ಬಿಜೆಪಿಯವರು ಇರವುದೇ ಆರೋಪ‌ ಮಾಡಲು. ನಾವು ಕೆಲಸ ಮಾಡದೇ ಕೇವಲ ಹನಿಟ್ರ್ಯಾಪ್ ಮಾಡಿಕೊಂಡು ಕೂತಿದ್ದೇವಾ. ಈ ಬಗ್ಗೆ ತನಿಖೆ ನಡೆದು ಸತ್ಯಾಂಶ ಹೊರ ಬರಲಿ ಎಂದು ಬಾಲಕೃಷ್ಣ ಹೇಳಿದರು.

 ಬಿಡದಿ ಟೌನ್‌ಶಿಪ್ ಜೆಡಿಎಸ್‌ನ ಪಾಪದ ಕೂಸು: ಬಾಲಕೃಷ್ಣ

ರಾಮನಗರ: ಬಿಡದಿ ಟೌನ್ ಶಿಪ್ ಜೆಡಿಎಸ್‌ನ ಪಾಪದ ಕೂಸು. ಅದನ್ನು ಈಗ ನಾವು ಹೊತ್ತಿಕೊಂಡಿದ್ದೇವೆ ಎಂದು ಮಾಗಡಿ ಶಾಸಕ ಬಾಲಕೃಷ್ಣ ಪ್ರತಿಕ್ರಿಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡದಿ ಟೌನ್‌ಶಿಪ್ ಕೇಂದ್ರ ಸಚಿವ ಕುಮಾರಸ್ವಾಮಿ ಅವರೇ ಮಾಡಿದ್ದ ಯೋಜನೆ. ಎರಡನೇ ಬಾರಿ ಅಧಿಕಾರಕ್ಕೆ ಬಂದಾಗಲೂ ಕುಮಾರಸ್ವಾಮಿ ಇದನ್ನು ಸರಿಪಡಿಸಲಿಲ್ಲ. ಮಾಜಿ ಶಾಸಕ ಎ.ಮಂಜುನಾಥ್ ಕೆಎಐಡಿಬಿಗೆ ಸಾವಿರ ಎಕರೆ ಭೂಮಿ ಸ್ವಾಧೀನ ಮಾಡಿಸಿದರು. ಆಗ ನಾವು ವಿರೋಧ ಮಾಡಿದೆವು. ಅವರು ಮಾಡೇ ಮಾಡುತ್ತೇವೆ ಅಂದಿದ್ದರು. ಈಗ ಅವರು ಬಂದು ವಿರೋಧ ಮಾಡುತ್ತಿದ್ದಾರೆ ಅಷ್ಟೆ ಎಂದರು.

ಬಿಡದಿ ಟೌನ್‌ಶಿಪ್ ಯೋಜನೆ ಉದ್ದೇಶ ಬೆಂಗಳೂರು ಒತ್ತಡ ಕಡಿಮೆ ಮಾಡುವುದು. ಸಣ್ಣಪುಟ್ಟ ವ್ಯತ್ಯಾಸಗಳು ಇರುತ್ತವೆ. ಎಲ್ಲವನ್ನೂ ಸರಿಪಡಿಸಿ ರೈತರ ಮನವೊಲಿಸುತ್ತೇವೆ. ನಾವು ರಿಯಲ್ ಎಸ್ಟೇಟ್ ಮಾಡಲು ಇಲ್ಲಿ ಬಂದಿಲ್ಲ. ರಿಯಲ್ ಎಸ್ಟೇಟ್ ಮಾಡುತ್ತಿರುವುದು ಯಾರು ಅಂತ ಇಡೀ ಬಿಡದಿ ಜನರಿಗೆ ಗೊತ್ತಿಗೆ ಎಂದು ಎ.ಮಂಜುನಾಥ್ ವಿರುದ್ಧ ಬಾಲಕೃಷ್ಣ ವಾಗ್ದಾಳಿ ನಡೆಸಿದರು.

ಒಂದು ವರ್ಷದಲ್ಲಿ ಬಿಡದಿ ಸಮಗ್ರ ಅಭಿವೃದ್ಧಿ: ಬಾಲಕೃಷ್ಣ

ರಾಮನಗರ: ಮುಂದಿನ ಒಂದು ವರ್ಷದಲ್ಲಿ ಬಿಡದಿ ಪಟ್ಟಣವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಬಾಲಕೃಷ್ಣ ತಿಳಿಸಿದರು.

ಬಿಡದಿ ಪುರಸಭಾ ವ್ಯಾಪ್ತಿಯಲ್ಲಿನ ಹಲವು ವಾರ್ಡ್ ಗಳಲ್ಲಿ‌ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಸಿಲ್ಕ್ ಫಾರಂ‌ ಬಳಿ ಆಯೋಜನೆ ಮಾಡಿದ್ದ ಇ-ಖಾತಾ ಅಭಿಯಾನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆಯಂತೆ ಬಿಡದಿ ಪಟ್ಟಣವನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಸರ್ಕಾರದಿಂದ ಅನುದಾನ ತರಲು ಹೋರಾಡುತ್ತಿದ್ದೇನೆ ಎಂದರು.

ಕಂದಾಯ ಭೂಮಿಯಲ್ಲಿ ಯಾವುದೇ ಪರವಾನಗಿ ಪಡೆಯದೆ ಲೇಔಟ್ ನಿರ್ಮಾಣ ಮಾಡಿರುವ ಜಾಗದಲ್ಲಿ ನಿವೇಶನಗಳನ್ನು ಖರೀದಿ ಮಾಡಿರುವಂತವರಿಗೆ ಪುರಸಭೆಯಲ್ಲಿ ಖಾತೆಗಳು ಆಗುತ್ತಿರಲಿಲ್ಲ. ಈ ಬಗ್ಗೆ ಸಿಎಂ ಹಾಗೂ ಡಿಸಿಎಂ ಅವರ ಮುಂದೆ ಶಾಸಕರು ವಿಷಯ ತಂದಾಗ ಬಿ ಖಾತಾ ಅಭಿಯಾನ ಪ್ರಾರಂಭ ಮಾಡುವ ಚಿಂತನೆ ಮಾಡಿ‌ ಬಿ ಖಾತಾ ಅಭಿಯಾನ ಇದೀಗ ಚಾಲ್ತಿಯಲ್ಲಿದೆ. ಹಾಗಾಗಿ ಯಾವ ನಿವೇಶನಗಳಿಗೆ ಖಾತೆ ಇಲ್ಲ ಅಂದವರು ಕೂಡಲೇ ಪುರಸಭೆಗೆ ತೆರಳಿ ಅಗತ್ಯ ದಾಖಲೆಗಳನ್ನ ಕೊಟ್ಟು ಬಿ- ಖಾತೆ ಮಾಡಿಸಿಕೊಳ್ಳಿ ಎಂದು ಹೇಳಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಲೋಹೀತ್ ಕುಮಾರ್ ಮಾತನಾಡಿದರು. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜ್, ಪುರಸಭೆಯ ಉಪಾಧ್ಯಕ್ಷೆ ಮಂಜುಳಾ, ಸದಸ್ಯರಾದ ಸಿ.ಉಮೇಶ್, ನವೀನ್, ರಾಮಚಂದ್ರಯ್ಯ, ರಮೇಶ್, ಲಲಿತಾ ನರಸಿಂಹಯ್ಯ, ಮುಖ್ಯಾಧಿಕಾರಿ ಕೆ.ಜಿ.ರಮೇಶ್ ಮತ್ತಿತರರು ಉಪಸ್ಥಿತರಿದ್ದರು. 

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ