ಹನಿಟ್ರ್ಯಾಪ್ ಬಗ್ಗೆ ತನಿಖೆ ನಡೆಸುವುದರಲ್ಲಿ ಯಾವ ತಪ್ಪೂ ಇಲ್ಲ : ಕೃಷಿ ಸಚಿವ ಚಲುವರಾಯಸ್ವಾಮಿ

KannadaprabhaNewsNetwork |  
Published : Mar 27, 2025, 01:07 AM ISTUpdated : Mar 27, 2025, 12:50 PM IST
N. Chaluvarayaswamy

ಸಾರಾಂಶ

ಹನಿಟ್ರ್ಯಾಪ್‌ನಲ್ಲಿ ಕೇಂದ್ರ ಮಟ್ಟದ ನಾಯಕರೂ ಇದ್ದಾರೆಂದು ಹೇಳಲಾಗುತ್ತಿದೆ. ಕಳೆದ ಆರು ತಿಂಗಳಲ್ಲಿ ಹಲವರು ನ್ಯಾಯಾಲಯದಿಂದ ತಡೆಯಾಜ್ಞೆಯನ್ನೂ ತಂದಿದ್ದಾರೆ. ಅಸೆಂಬ್ಲಿಯಲ್ಲಿ ವಿರೋಧ ಪಕ್ಷದವರೂ ಚರ್ಚೆ ಮಾಡಿದ್ದಾರೆ.  

 ಮಂಡ್ಯ :  ಹನಿಟ್ರ್ಯಾಪ್ ಬಗ್ಗೆ ತನಿಖೆ ನಡೆಸುವುದರಲ್ಲಿ ಯಾವ ತಪ್ಪೂ ಇಲ್ಲ. ಎಲ್ಲಾ ಪಕ್ಷದವರೂ ಹನಿಟ್ರ್ಯಾಪ್‌ಗೆ ಒಳಗಾಗಿರುವ ಆತಂಕವಿದೆ. ಹಾಗಾಗಿ ಈ ವಿಚಾರವಾಗಿ ತನಿಖೆ ನಡೆಸಿ ಸಾರ್ವಜನಿಕವಾಗಿ ಬಹಿರಂಗಪಡಿಸಿದರೆ ಉತ್ತಮ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದರು.

ಹನಿಟ್ರ್ಯಾಪ್‌ನಲ್ಲಿ ಕೇಂದ್ರ ಮಟ್ಟದ ನಾಯಕರೂ ಇದ್ದಾರೆಂದು ಹೇಳಲಾಗುತ್ತಿದೆ. ಕಳೆದ ಆರು ತಿಂಗಳಲ್ಲಿ ಹಲವರು ನ್ಯಾಯಾಲಯದಿಂದ ತಡೆಯಾಜ್ಞೆಯನ್ನೂ ತಂದಿದ್ದಾರೆ. ಅಸೆಂಬ್ಲಿಯಲ್ಲಿ ವಿರೋಧ ಪಕ್ಷದವರೂ ಚರ್ಚೆ ಮಾಡಿದ್ದಾರೆ. ರಾಜಣ್ಣನವರು ಗೃಹ ಸಚಿವರಿಗೆ ಮನವಿ ಕೊಟ್ಟಿದ್ದು, ಗೃಹ ಸಚಿವರು ತನಿಖಾ ಅಧಿಕಾರಿಗೆ ದೂರು ಕೊಡಿ ಎಂದಿದ್ದಾರೆ. ದೂರು ಕೊಟ್ಟ ಬಳಿಕ ಕಾನೂನು ಬದ್ಧವಾಗಿ ತನಿಖೆ ಮಾಡಲು ಸಿಎಂ ಜೊತೆ ಮಾತನಾಡುವುದಾಗಿ ಸುದ್ದಿಗಾರರಿಗೆ ತಿಳಿಸಿದರು.

ಪಕ್ಷದಿಂದ ಜಿಪಂ, ತಾಪಂ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಆದೇಶ ಬಂದಿದೆ. ಆ ನಿಟ್ಟಿನಲ್ಲಿ ಕ್ಷೇತ್ರವಾರು ಸಭೆ ಮಾಡುತ್ತಿದ್ದೇವೆ. ಈ ವರ್ಷ ಮಾರ್ಚ್‌ನಿಂದ ಮುಂದಿನ ಮಾರ್ಚ್‌ವರೆಗೆ ಸ್ಥಳೀಯ ಚುನಾವಣೆಗಳು ನಡೆಯುತ್ತವೆ. ಎಲ್ಲಾ ಚುನಾವಣೆಗಳನ್ನೂ ಗಮನದಲ್ಲಿಟ್ಟುಕೊಂಡು ತಯಾರಿ ಮಾಡುತ್ತಿದ್ದೇವೆ. ನಮ್ಮ ಕೆಲಸಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿರುವುದಾಗಿ ಹೇಳಿದರು.

ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರದ ಚುನಾವಣೆಗಳನ್ನು ಗೆದ್ದಿದ್ದೇವೆ. ಎರಡೂವರೆ ಲಕ್ಷ ಬಿಜೆಪಿ ಮತಗಳು ಜಿಲ್ಲೆಯಲ್ಲಿವೆ. ಲೋಕಸಭೆ ಚುನಾವಣೆ ಬಂದಾಗ ಮೋದಿ ಮುಖ ನೋಡಿಕೊಂಡು ಜನರು ಮತ ಹಾಕಿದರೆ, ಸ್ಥಳೀಯ ಚುನಾವಣೆಗಳಲ್ಲಿ ಅಭ್ಯರ್ಥಿ ನೋಡಿ ಮತ ಹಾಕುತ್ತಾರೆ. ಮಂಡ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಇದೆ. ಜೆಡಿಎಸ್ ನಾಯಕರ ರೀತಿ ಅವರು ಲೆಕ್ಕಕ್ಕೇ ಇಲ್ಲ ಎಂದು ನಾವು ಹೇಳುವುದಿಲ್ಲ. ಜೆಡಿಎಸ್‌ಗೆ ರಾಜ್ಯದಲ್ಲಿ ಶಕ್ತಿ ಇರುವ ಜಿಲ್ಲೆ ಇದ್ದರೆ ಮಂಡ್ಯ. ನಮಗೂ ಸಹ ಇಲ್ಲಿ ಶಕ್ತಿ ಇದೆ. ನಾವು ಈ ಬಾರಿ ಮಾಡಿರುವ ಕೆಲಸದಿಂದ ಜನರು ಒಲವು ತೋರಿದ್ದಾರೆ ಎಂದು ವಿಶ್ವಾಸದಿಂದ ನುಡಿದರು.

ದೆಹಲಿಯಲ್ಲಿ ಸತೀಶ್ ಜಾರಕಿಹೋಳಿ, ಕುಮಾರಸ್ವಾಮಿ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿ, ಯಾರು ಯಾರನ್ನು ಭೇಟಿ ಮಾಡಬೇಡಿ ಎನ್ನಲಾಗುವುದಿಲ್ಲ. ಅದು ಅವರ ವೈಯಕ್ತಿಕ ಭೇಟಿ. ಸತೀಶ್ ಜಾರಕಿಹೊಳಿ ನಮ್ಮ ಪಕ್ಷದ ಮುಖಂಡರು, ಮಂತ್ರಿಗಳು. ಕುಮಾರಸ್ವಾಮಿ, ಸತೀಶ್ ಜಾರಕಿಹೊಳಿ ಭೇಟಿ ರಾಜಕೀಯ ಭೇಟಿ ಆಗಿರಲು ಸಾಧ್ಯವಿಲ್ಲ. ರಾಜಕೀಯವಾಗಿ ಕುಮಾರಸ್ವಾಮಿ ಅವರನ್ನು ಸತೀಶ್ ಜಾರಕಿಹೋಳಿ ಭೇಟಿ ಮಾಡೋ ಅವಶ್ಯಕತೆಯೇ ಇಲ್ಲ. ಇವರ ಭೇಟಿ ಏಕೆ ಆಗಿದೆ ಎನ್ನುವುದನ್ನು ನಾನು ಹೇಳೋಕೆ ಆಗೋಲ್ಲ ಎಂದು ಜಾರಿಕೊಂಡರು.

ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಗೇಟ್ ಓಪನ್ ಆಗಿರುವ ಪ್ರಶ್ನೆಗೆ ಪ್ರತಿಕ್ರಿಯಿಸಿ, ಪ್ರತಿ ವರ್ಷ ಅಣೆಕಟ್ಟೆಯನ್ನು ನಿರ್ವಹಣೆ ಮಾಡಬೇಕು. ೮೦ ಅಡಿಗೆ ಬರುವ ಮುಂಚೆ ನಿರ್ವಹಣೆ ಮಾಡುವುದು ಸಾಮಾನ್ಯ. 

ಸದ್ಯ ಡ್ಯಾಂನಲ್ಲಿ 107   ಅಡಿ ನೀರು ಇದೆ.

ಇನ್ನೇನು ಮಳೆ ಬರುವ ವಾತಾವರಣ ಸಹ ಇದೆ. ನಿರ್ವಹಣೆ ಮಾಡುವ ಸಂದರ್ಭದಲ್ಲಿ ಒಂದು ಗೇಟ್ ಓಪನ್ ಆಗಿದೆ. ಭಾನುವಾರ ಬೆಳಗ್ಗೆ ೮ ಗಂಟೆಗೆ ವೇಳೆಗೆ ಗೇಟ್ ಓಪನ್ ಆಗಿರೋದು ತಿಳಿದಿದೆ. ಇದರಿಂದ ಸ್ವಲ್ಪ ನೀರು ಹೋಗಿದೆ. ಸಂಜೆ5 ಗಂಟೆ ಒಳಗೆ ತಾಂತ್ರಿಕ ತಂಡ ಈ ಗೇಟ್ ಮುಚ್ಚಿದೆ. ೬೦೦ ರಿಂದ ೭೦೦ ಕ್ಯೂಸೆಕ್ ನೀರು ಹೋಗಿರಬೇಕು ಅಷ್ಟೇ. ಕಣ್ತಪ್ಪಿನಿಂದ ಗೇಟ್ ಓಪನ್ ಆಗಿದೆ ಅಷ್ಟೇ. ಅಧಿಕಾರಿಗಳು ಸಮಯ ಪ್ರಜ್ಞೆ ಮೆರೆದು ಬೇಗ ಸರಿಪಡಿಸಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕೆಆರ್‌ಎಸ್ ವೀಕ್ಷಣೆಗೆ ಬನ್ನಿ ಎಂದಿದ್ದೇನೆ. ನೂರಾರು ವರ್ಷಗಳು ಆಗಿರೋ ಕಾರಣ ಗೇಟ್‌ಗಳ ರಿವ್ಯೆ ಮಾಡಬೇಕು ಎಂದು ನುಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆ ಸುರಕ್ಷತೆಗೆ ಸಾರಿಗೆ ಇಲಾಖೆ ಎಐ ಆಧರಿತ ಕ್ಯಾಮೆರಾ ಅಳವಡಿಕೆ
ಮಂಡ್ಯ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಸ್ವತಂತ್ರ ಸ್ಪರ್ಧೆ - ಸುಮಲತಾ ಪರ ನಾರಾಯಣಗೌಡ ಬ್ಯಾಟಿಂಗ್‌