ಮಣ್ಣು ತೆಗೆಯಲು ಅಡ್ಡಿ: ಸಕಲೇಶಪುರ ಇಟ್ಟಿಗೆಗೆ ಕುತ್ತು

KannadaprabhaNewsNetwork | Published : Jan 15, 2024 1:46 AM

ಸಾರಾಂಶ

ಸರ್ಕಾರಿ ಭೂಮಿಯಲ್ಲಿ ಮಣ್ಣು ತೆಗೆಯಬಾರದು ಎಂಬ ನಿಯಮ ಸಕಲೇಶಪುರದಲ್ಲಿ ಇಟ್ಟಿಗೆ ಉದ್ಯಮಿಗಳಿಗೆ ಸಂಕಷ್ಟ ತಂದೊಡ್ಡಿದೆ. ಹೇಮಾವತಿ ಹಿನ್ನೀರು ಪ್ರದೇಶದಲ್ಲಿ ಮಣ್ಣು ಗಣಿಗಾರಿಕೆ ನಡೆಸುವುದಕ್ಕೆ ಅಧಿಕಾರಿಗಳ ವಲಯದಿಂದ ತೀವ್ರ ಹಸ್ತಕ್ಷೇಪ ವ್ಯಕ್ತವಾಗುತ್ತಿರುವ ಪರಿಣಾಮ ಇಟ್ಟಿಗೆ ತಯಾರಕರು ಹತಾಶರಾಗಿದ್ದಾರೆ.

ನದಿ ಪಾತ್ರದಲ್ಲಿ ಮಣ್ಣು ತೆಗೆಯದಂತೆ ಅಧಿಕಾರಿಗಳ ಎಚ್ಚರಿಕೆ । ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿ ಸಾವಿರಾರು ಕಾರ್ಮಿಕರು ಶ್ರೀವಿದ್ಯಾ ಸಕಲೇಶಪುರ

ಕನ್ನಡಪ್ರಭ ವಾರ್ತೆ ಸಕಲೇಶಪುರ

ಸರ್ಕಾರಿ ಭೂಮಿಯಲ್ಲಿ ಮಣ್ಣು ತೆಗೆಯಬಾರದು ಎಂಬ ನಿಯಮ ಈಗ ಇಟ್ಟಿಗೆ ಉದ್ಯಮಿಗಳಿಗೆ ಸಂಕಷ್ಟ ತಂದೊಡ್ಡಿದೆ.

ತಾಲೂಕು ಕೆಂದ್ರದಿಂದ ಕೂಡಗಿನ ಗಡಿವರೆಗಿನ ವಿಶಾಲವಾದ ಹೇಮಾವತಿ ಹಿನ್ನೀರು ಭೂಮಿಯ ನದಿ ದಂಡೆಯಲ್ಲಿ ನೂರಾರು ಇಟ್ಟಿಗೆ ಭಟ್ಟಿಗಳಿದ್ದು ಪ್ರತಿವರ್ಷ ನವೆಂಬರ್ ತಿಂಗಳಿನಿಂದ ಏಪ್ರಿಲ್ ತಿಂಗಳವರೆಗೆ ಕನಿಷ್ಠ ೩ ಕೋಟಿ ರು.ಗೂ ಅಧಿಕ ಇಟ್ಟಿಗೆ ಉತ್ಪಾದನೆ ಮಾಡುವ ಜನರು ರಾಜಧಾನಿ ಸೇರಿದಂತೆ ಕೂಡಗು ಹಾಗೂ ಮೈಸೂರು ಜಿಲ್ಲೆಗಳಿಗೂ ಪೊರೈಸುತ್ತಿದ್ದಾರೆ. ಹೀಗೆ ತಲತಲಾಂತರದಿಂದ ಇಟ್ಟಿಗೆ ಉತ್ಪಾದಿಸುವವರ ವಿಚಾರಕ್ಕೆ ಗ್ರಾ.ಪಂಯಾಗಲಿ, ತಾಲೂಕು ಆಡಳಿತ ಸಹ ತಲೆ ಹಾಕದ ಪರಿಣಾಮ ಮನಬಂದಂತೆ ಹೇಮಾವತಿ ಹಿನ್ನೀರು ಪ್ರದೇಶದಲ್ಲಿ ಮಣ್ಣು ತೆಗೆಯುತ್ತಿದ್ದ ಇಟ್ಟಿಗೆ ಭಟ್ಟಿ ಮಾಲೀಕರು ತಮ್ಮ ಶಕ್ತಿಯಾನುಸರ ಇಟ್ಟಿಗೆ ಉತ್ಪಾದಿಸುತ್ತಿದ್ದರು.

ಆದರೆ ಇತ್ತೀಚಿನ ವರ್ಷಗಳಲ್ಲಿ ಹೇಮಾವತಿ ಹಿನ್ನೀರು ಪ್ರದೇಶದಲ್ಲಿ ಮಣ್ಣು ಗಣಿಗಾರಿಕೆ ನಡೆಸುವುದಕ್ಕೆ ಅಧಿಕಾರಿಗಳ ವಲಯದಿಂದ ತೀವ್ರ ಹಸ್ತಕ್ಷೇಪ ವ್ಯಕ್ತವಾಗುತ್ತಿರುವ ಪರಿಣಾಮ ಹತಾಶರಾಗಿರುವ ಇಟ್ಟಿಗೆ ತಯಾರಕರು ಮುಂದೇನು ಮಾಡುವುದೇಂಬ ಚಿಂತೆಯಲ್ಲಿ ದಿನ ದೂಡುತ್ತಿದ್ದಾರೆ.

ಅವಕಾಶ ಬೇಕಿದೆ:

ಪ್ರಸಕ್ತ ಸನ್ನಿವೇಶದಲ್ಲಿ ಹೇಮಾವತಿ ಜಲಾಶಯದ ಅಧಿಕಾರಿಗಳು ತಮಗೆ ಅನುಮತಿ ನೀಡಲು ಅಧಿಕಾರವಿಲ್ಲ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹೋಗಿ ಎಂದು ಕೈತೊರುತ್ತಿದ್ದಾರೆ. ಆದರೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಮಣ್ಣು ಗಣಿಗಾರಿಕೆ ಅನುಮತಿ ನೀಡುವ ಅಧಿಕಾರ ತಮ್ಮ ವ್ಯಾಪ್ತಿಯಲ್ಲಿಲ್ಲ. ತಾಲೂಕು ಆಡಳಿತದ ಮೊರೆ ಹೋಗಿ ಎನ್ನುತ್ತಿದ್ದಾರೆ. ತಾಲೂಕು ಆಡಳಿತ ತಮಗೂ ಇದಕ್ಕೂ ಸಂಬಂಧವಿಲ್ಲ, ಜಿಲ್ಲಾಡಳಿತ ಅಥಾವ ಸರ್ಕಾರ ಇದಕ್ಕೆ ನಿರ್ದೇಶನ ನೀಡಿದರೆ ತಾವು ಕೆಲಸ ಮಾಡಲು ಅವಕಾಶ ನೀಡುತ್ತೇವೆ ಎನ್ನುತ್ತಿದ್ದಾರೆ. ಇದರಿಂದಾಗಿ ಎಲ್ಲಿಗೆ ಹೋಗುವುದು, ಯಾವ ಇಲಾಖೆ ಅನುಮತಿ ನೀಡಲು ಅವಕಾಶ ಪಡೆದಿದೆ ಎಂಬ ಜಿಜ್ಞಾಸೆಯಲ್ಲಿರುವ ಇಟ್ಟಿಗೆ ಭಟ್ಟಿಯ ಮಾಲೀಕರು ಮಣ್ಣು ಗಣಿಗಾರಿಕೆಗೆ ಅವಕಾಶ ನೀಡುವಂತೆ ಕಂಡ ಕಂಡ ಅಧಿಕಾರಿಗಳಿಗೆಲ್ಲ ದುಂಬಾಲು ಬೀಳುತ್ತಿದ್ದಾರೆ.

ಇಲ್ಲಿನ ಇಟ್ಟಿಗೆಗಳು ಶ್ರೇಷ್ಠ:

ಹೇಮಾವತಿ ಹಿನ್ನೀರು ಪ್ರದೇಶದಲ್ಲಿ ಉತ್ಪಾದನೆಯಾಗುವ ಇಟ್ಟಿಗೆಗಳು ರಾಜ್ಯ ರಾಜಧಾನಿ ಸೇರಿದಂತೆ ಮೂರ್‍ನಾಲ್ಕು ಜಿಲ್ಲೆಯಲ್ಲೆ ಅತ್ಯಂತ ಪ್ರಸಿದ್ಧ. ಹೀನ್ನೀರು ಪ್ರದೇಶದಲ್ಲಿನ ಮಣ್ಣು ಇಟ್ಟಿಗೆ ತಯಾರಿಕೆ ಅತ್ಯಂತ ಶ್ರೇಷ್ಠವಾಗಿದೆ ಎಂಬ ಕಾರಣಕ್ಕೆ ನೂರಾರು ಇಟ್ಟಿಗೆ ಭಟ್ಟಿಗಳು ಪ್ರತಿವರ್ಷ ಇಲ್ಲಿ ಕಾರ್ಯ ನಿರ್ವಹಿಸುತ್ತಿವೆ.

ಭಾರಿ ಉದ್ಯೋಗ:

ತಾಲೂಕಿನ ಹಾದಿಗೆ ಗ್ರಾಮದಿಂದ ಕೆರೋಡಿ ಗ್ರಾಮದವರೆಗಿನ ಹೇಮಾವತಿ ಹೀನ್ನೀರು ಪ್ರದೇಶದಲ್ಲಿರುವ ನೂರಾರು ಇಟ್ಟಿಗೆ ಭಟ್ಟಿಗಳಲ್ಲಿ ತಮಿಳುನಾಡು, ಆಂದ್ರ, ಅಸ್ಸಾಂ ಹಾಗೂ ಉತ್ತರ ಕರ್ನಾಟಕದಿಂದ ಬಂದಿರುವ ಸಾವಿರಾರು ಮಂದಿ ಕೆಲಸ ಮಾಡುತ್ತಿದ್ದಾರೆ, ಇಟ್ಟಿಗೆ ಭಟ್ಟಿಗಳಿಗೆ ಅಗತ್ಯವಿರುವ ಸೌದೆ ಪೊರೈಕೆಯಲ್ಲಿ ತಾಲೂಕಿನ ನೂರಾರು ಜನರು ತೊಡಗಿದ್ದಾರೆ. ಇಟ್ಟಿಗೆ ಸಾಗಾಟ ಸೇರಿದಂತೆ ಹಲವು ವಿಧದಲ್ಲಿ ಸ್ಥಳೀಯರಿಗೂ ಉದ್ಯೋಗ ಲಭಿಸಿದೆ.

ಶಾಸಕರ ಹತಾಶೆ:

ಕಾನೂನಿನಲ್ಲಿ ಮಣ್ಣು ಗಣಿಗಾರಿಕೆ ಅವಕಾಶವಿಲ್ಲ. ದೂರು ಬಂದರೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂಬ ಅಧಿಕಾರಿಗಳ ಹೇಳಿಕೆಯಿಂದ ಹತಾಶರಾದ ಶಾಸಕರು ಸರ್ಕಾರದೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದು ಎಂದಿದ್ದರು. ಆದರೆ, ಇಟ್ಟಿಗೆ ಸಿದ್ದಪಡಿಸಲು ಇದು ಪ್ರಸಕ್ತ ಸಮಯವಾಗಿರುವುದರಿಂದ ಶಾಸಕರ ಭರವಸೆ ನಂಬಿ ಕುಳಿತುಕೊಳ್ಳುವಂತಿಲ್ಲ. ಭಂಡ ಧೈರ್ಯದಲ್ಲಿ ಬಂಡವಾಳ ಹಾಕುವಂತಿಲ್ಲ ಎಂಬ ತ್ರಿಶಂಕು ಸ್ಥಿತಿಗೆ ಇಟ್ಟಿಗೆ ಭಟ್ಟಿ ಮಾಲೀಕರು ತಲುಪಿದ್ದಾರೆ.

ಇಟ್ಟಿಗೆ ಭಟ್ಟಿಗಳ ಕಾರ್ಯನಿರ್ವಹಣೆಯ ಮೇಲೆ ತಾಲೂಕು ಆಡಳಿತ ನಿಗಾ ಇಟ್ಟಿದೆ. ದೂರು ಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.

ಡಾ.ಶೃತಿ ಉಪ ವಿಭಾಗಾಧಿಕಾರಿ.

ಹಲವು ದಶಕಗಳಿಂದ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಇಟ್ಟಿಗೆ ಭಟ್ಟಿಗಳಿಗೆ ಇತ್ತೀಚಿನ ವರ್ಷಗಳಲ್ಲಿ ಅಧಿಕಾರಿಗಳು ಹಿಂಸೆ ನೀಡುತ್ತಿದ್ದಾರೆ. ಆದ್ದರಿಂದ, ಸಾವಿರಾರು ಜನರಿಗೆ ಉದ್ಯೋಗ ನೀಡುವ ಈ ಉದ್ಯಮಕ್ಕೆ ಕಾನೂನು ಪ್ರಕಾರ ಅನುಮತಿ ನೀಡಬೇಕು.

ಲೋಹಿತ್ ಜಂಭರಡಿ, ಅಧ್ಯಕ್ಷ, ಇಟ್ಟಿಗೆ ಉದ್ಯಮದಾರರ ಸಂಘ.

ಹೇಮಾವತಿ ನದಿ ಪಾತ್ರದಲ್ಲಿ ಇಟ್ಟಿಗೆ ಹೊಯ್ದಿರುವುದು.

Share this article