ಕನ್ನಡಪ್ರಭ ವಾರ್ತೆ ವಿಜಯಪುರ
ನಾನು ಬಿಜೆಪಿಗೆ ಬರ್ತೀನಿ ಬಿಡ್ತೀನಿ, ಆಗೋದರ ಕುರಿತು ಚರ್ಚೆಯಾಗಬೇಕೆಂಬುದು ನನ್ನ ಭಾವನೆ. ಬಿಜೆಪಿಯಲ್ಲಿರೋ ಗೊಂದಲಗಳು ಬಗೆಹರಿಯಬೇಕು. ಸ್ವಲ್ಪ ಶುದ್ಧೀಕರಣ ಆಗಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.ಬಿಜೆಪಿ ಮರು ಸೇರ್ಪಡೆ ವಿಚಾರದ ಕುರಿತು ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ನಾಯಕರು, ರಾಜ್ಯದ ನಾಯಕರು ಹಾಗೂ ಪರಿವಾರದವರು ಗಮನಿಸಬೇಕು. ಈ ಕಾರಣದಿಂದ ನಾನು ಲೋಕಸಭಾ ಚುನಾವಣೆ ಸ್ಪರ್ಧೆ ಮಾಡಿದ್ದೆ. ಎಲ್ಲರೂ ಈಗ ಬಾ ಬಾ ಎಂದು ಕರೆಯುತ್ತಿದ್ದಾರೆ. ಆದರೆ, ಸುಮ್ಮನೇ ಹೋಗೋದಲ್ಲ ಏನಾಗಬೇಕೆಂಬುವುದನ್ನು ಕುಳಿತು ಚರ್ಚೆ ಮಾಡಿ ತೀರ್ಮಾನ ತೆಗೆದುಕೊಂಡು ನಂತರ ಪಕ್ಷಕ್ಕೆ ಹೋಗುವುದನ್ನು ತೀರ್ಮಾನಿಸಲಾಗುವುದು. ನನ್ನ ಮನೆಯೊಳಗೆ(ಬಿಜೆಪಿ ಪಕ್ಷದೊಳಗೆ) ಹೋಗಲು ಬರಲು ಷರತ್ತುಗಳಿಲ್ಲ. ಆದರೆ, ಶುದ್ಧೀಕರಣ ಆಗಬೇಕು ಎಂದು ಆಗ್ರಹಿಸಿದರು.ಬಿಎಸ್‌ವೈ ಕುಟುಂಬದ ವಿರುದ್ಧ ಕಿಡಿ:
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಇಡೀ ದೇಶದಲ್ಲಿ ಬಿಜೆಪಿಯಲ್ಲಿ ಅಪ್ಪ ಮಗ, ಮತ್ತೊಬ್ಬ ಮಗ ಇವರ ಕಂಟ್ರೋಲ್‌ನಲ್ಲಿ ಬಿಜೆಪಿ ಇಲ್ಲ. ಇಲ್ಲಿ ಯಡಿಯೂರಪ್ಪ ಕೇಂದ್ರ ಚುನಾವಣಾ ಸಮಿತಿ ಸದಸ್ಯರು, ಅವರ ಪುತ್ರ ರಾಘವೇಂದ್ರ ಸಂಸದ, ಮತ್ತೋರ್ವ ಮಗ ವಿಜಯೇಂದ್ರ ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ. ಕಾಂಗ್ರೆಸ್ ಹಾಗೂ ಕುಟುಂಬ ಮುಕ್ತ ದೇಶ ಮಾಡುತ್ತೇನೆಂದು ಎಲ್ಲ ಸಭೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಹಾಗಾದರೇ ರಾಜ್ಯ ಬಿಜೆಪಿ ಕೇಂದ್ರದ ಕಂಟ್ರೋಲ್‌ನಲ್ಲಿ ಇದೆಯೋ? ಇಲ್ಲವೋ ಎಂದು ಪ್ರಶ್ನೆ ಹಾಕಿದರು. ಇಂತಹ ವಿಷಯಗಳ ಚರ್ಚೆ ಮಾಡಿ ನಂತರ ಬಿಜೆಪಿ ಸೇರ್ಪಡೆ ಕುರಿತು ತೀರ್ಮಾನ ಮಾಡುತ್ತೇನೆ ಎಂದರು.ಸಿಎಂ ಸಿದ್ದರಾಮಯ್ಯ ಜೈಲಿಗೆ ಹೋಗೋದು ಫಿಕ್ಸ್: ಈಶ್ವರಪ್ಪ ಭವಿಷ್ಯ
ಕಾಂಗ್ರೆಸ್ ಹಗರಣ ಸಿಬಿಐಗೆ ನೀಡಬೇಕು, ಕಾಂಗ್ರೆಸ್ ಪಟ್ಟಿ ಮಾಡಿದ ಬಿಜೆಪಿಯ 22 ಹಗರಣಗಳನ್ನು ಸಿಬಿಐಗೆ ಕೊಡಲಿ. ಸಿಬಿಐ ಕಳ್ಳರು ಯಾರು ಅಂತ ಹಿಡಿತಾರೆ. ಲೂಟಿ ಮಾಡಿದವರು ಜೈಲಿಗೆ ಹೋಗುತ್ತಾರೆ. ಜೈಲಿಗೆ ಹೋಗುವವರ ನಾಯಕತ್ವ ಸಿದ್ದರಾಮಯ್ಯ ತೆಗೆದುಕೊಳ್ಳುತ್ತಾರೆ. ಇದರಲ್ಲಿ ಅನುಮಾನವೇ ಇಲ್ಲ ಎಂದು ಕಿಡಿಕಾರಿದರು.ಕಾಂಗ್ರೆಸ್ ವಿರುದ್ಧ ಕಿಡಿ ವಾಗ್ದಾಳಿ:ಸಿಬಿಐಗೆ ಪ್ರಕರಣ ನೀಡಿ ರಾಜೀನಾಮೆ ಕೊಡಿ, ಕ್ಲಿನ್‌ಚೀಟ್ ಪಡೆದು ಅಧಿಕಾರಕ್ಕೆ ಬನ್ನಿ ಎಂದು ಸಿಎಂ ಸಿದ್ದರಾಮಯ್ಯಗೆ ಸವಾಲ್ ಹಾಕಿದರು.
ಸಿದ್ದರಾಮಯ್ಯ ಸತ್ಯ ಹರಿಶ್ಚಂದ್ರ ಬಿಟ್ರೆ ನಾನೇ ಅಂತ ಹೇಳಿಕೊಳ್ಳುತ್ತಿದ್ದರು. ಇದೀಗ ಕಾಂಗ್ರೆಸ್ ಸರ್ಕಾರ ನೇರವಾಗಿ, ಬಹಿರಂಗವಾಗಿ ಬೆತ್ತಲಾಗಿದೆ. ಮುಖ್ಯಮಂತ್ರಿಗಳೇ ನೇರಭಾಗಿಯಾಗಿದ್ದಾರೆ ಎಂದು ದೂರಿದರು.ಬಿಜೆಪಿ ಭ್ರಷ್ಟಾಚಾರದ ಪಟ್ಟಿಯಲ್ಲಿ ಕೋಟಾ ಶ್ರೀನಿವಾಸ್ ಪೂಜಾರಿ ಹೆಸರು ಇರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕೋಟಾ ಶ್ರೀನಿವಾಸ್ ಪೂಜಾರಿ ಹೆಸರು ಬಂದಿರೋದಕ್ಕೆ ನೊಂದಿದ್ದೇನೆ. ಪೂಜಾರಿ ಪ್ರಾಮಾಣಿಕ ರಾಜಕಾರಣಿ, ಇದು ಬಹಳ ಅನ್ಯಾಯ, ಕೋಟಾ ಶ್ರೀನಿವಾಸ್ ಹೆಸರಿನ ಪಟ್ಟಿ ವಾಪಸ್ ಪಡೆಯಲಿ. ಸಿದ್ದರಾಮಯ್ಯ ಕೋಟಾ ಹೆಸರು ವಾಪಸ್ ಪಡೆಯಲಿ, ಬಳಿಕ ಕೋಟಾ ಶ್ರೀನಿವಾಸ್ ಬಳಿ ಕ್ಷಮೆ ಕೇಳಲಿ ಎಂದು ಆಗ್ರಹಿಸಿದರು.ಸಿಎಂ ದಾಖಲೆ ಇಲ್ಲದೆ ಹೇಳಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ವಿಚಾರಕ್ಕೆ ಆಕ್ರೋಶ ವ್ಯಕ್ತಪಡಿಸಿ, ಕಾಂಗ್ರೆಸ್ ಹಗರಣದ ಬಗ್ಗೆ ಬಿಜೆಪಿ ಕಾರ್ಯಕರ್ತರು ದಾಖಲೆ ನೀಡುತ್ತಾರೆ. ಇದಕ್ಕೆ ಏನು ಹೇಳ್ತೀರಿ?. ಕಾಂಗ್ರೆಸ್ ಲೂಟಿ ಮಾಡ್ತಾ ಮಾಡ್ತಾ ಮುಚ್ಚಿಕೊಂಡು ಬಂದಿತ್ತು. ಇನ್ಮುಂದೆ ಮುಚ್ಚೋಕೆ ಆಗಲ್ಲ ಎಂದು ಕಿಡಿಕಾರಿದರು.ಬೇಗ ಚುನಾವಣೆ ಬರಲಿದೆ:
4 ವರ್ಷ ಈ ಸರ್ಕಾರ ಇರಲ್ಲ, ಭ್ರಮೆಯಲ್ಲಿ ಇರೋದು ಬೇಡ. ಆದಷ್ಟು ಬೇಗ ಚುನಾವಣೆ ಬರಲಿದೆ ಎಂದು ಈಶ್ವರಪ್ಪ ಭವಿಷ್ಯ ನುಡಿದರು.ಕಾಂಗ್ರೆಸ್ ಪಕ್ಷದ ಇನ್ನಷ್ಟು ಹಗರಣಗಳು ಹೊರಗೆ ಬೀಳುತ್ತವೆ. ಲೂಟಿ ಮಾಡಿದ ಸಿಎಂ, ಇನ್ನೂ ಅನೇಕ ಮಂತ್ರಿಗಳು ಹೊರಗೆ ಬರುತ್ತಾರೆ. ಜೈಲಿಗೆ ಹೋಗಿ ಸಿಎಂ, ಸಚಿವರಿಗೆ ನಾವು ಹಣ್ಣು ಕೊಡಬೇಕು, ಅನುಮಾನವೇ ಬೇಡ ಎಂದು ಲೇವಡಿ ಮಾಡಿದರು.