ಕನ್ನಡಪ್ರಭ ವಾರ್ತೆ, ತುಮಕೂರು
ಅವರು ಗುರುವಾರ ಶ್ರೀ ವಿಶಾಲಾಕ್ಷಮ್ಮ ಸದಾಶಿವಯ್ಯ ಸಭಾ ಭವನದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಧನುರ್ಮಾಸದ ಇಷ್ಟಲಿಂಗ ಮಹಾಪೂಜಾ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಬದುಕು ಬದಲಾಗಬೇಕಾದರೆ ಬದುಕುವ ದಾರಿ ಬದಲಾಗಬೇಕು. ಎಲ್ಲಾ ಇದ್ದಾಗ ನಮ್ಮವರು ಅಂತಾರೆ. ಏನು ಇಲ್ಲದಾಗ ಯಾರು ನೀ ಅಂತಾರೆ. ಇದೇ ಜೀವನ ಎಂದರು.ಗೆದ್ದ ವ್ಯಕ್ತಿಗೆ ಚಪ್ಪಾಳೆ ಹೊಡೆಯುವವರು ದೊಡ್ಡವರಾಗುವುದಿಲ್ಲ. ಬಿದ್ದ ವ್ಯಕ್ತಿಯನ್ನು ಕೈ ಹಿಡಿದು ಮೇಲೆತ್ತುವವರು ದೊಡ್ಡವರಾಗುತ್ತಾರೆ ಎಂದರು.
ಆಧ್ಯಾತ್ಮದ ಅರಿವು ಆದರ್ಶಗಳು ಜೀವನ ವಿಕಾಸಕ್ಕೆ ಅಡಿಪಾಯ. ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮ ಸಂವಿಧಾನದಲ್ಲಿ ಕಾಯಕ ಜೀವನದಿಂದ ಬರುವ ಹಣದಲ್ಲಿ ದಾಸೋಹ ಮಾಡುವ ಉತ್ಕೃಷ್ಟ ವಿಚಾರಗಳನ್ನು ಬೋಧಿಸಿದ್ದಾರೆ. ವೈಚಾರಿಕತೆಯ ಬಿರುಗಾಳಿಯಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳು ನಾಶವಾಗಬಾರದು ಎಂದರು.ಲೋಕಸಭಾ ಮಾಜಿ ಸದಸ್ಯ ಜಿ.ಎಸ್.ಬಸವರಾಜ ಸಮಾರಂಭ ಉದ್ಘಾಟಿಸಿ ಕಣ್ಣು ಚೆನ್ನಾಗಿದ್ದರೆ ಜಗತ್ತನ್ನು ಕಾಣಬಹುದು. ನಾಲಿಗೆ ಚೆನ್ನಾಗಿದ್ದರೆ ಇಡೀ ಜಗತ್ತು ನಮ್ಮನ್ನು ನೋಡುತ್ತದೆ. ವೀರಶೈವ ಧರ್ಮ ಚಿಂತನಗಳು ಬದುಕಿನ ವಿಕಾಸಕ್ಕಾಗಿ ಇವೆ ಹೊರತು ಅವನತಿಗಲ್ಲ ಎಂದರು.
ಎಡೆಯೂರು ರೇಣುಕ ಶಿವಾಚಾರ್ಯ ಸ್ವಾಮಿಗಳು ಸಮ್ಮುಖ ವಹಿಸಿ ಮಾತನಾಡಿ ಕರ್ತವ್ಯದ ಕಾಲು ದಾರಿ ಕೀರ್ತಿಯ ಹೆದ್ದಾರಿ. ಶ್ರಮ ಬದುಕು ಸಂಪತ್ತಿನ ಸಂವರ್ಧನೆಗೆ ಮೂಲ. ವೀರಶೈವ ಜ್ಞಾನ ಸಂಪತ್ತು ಅಪಾರ. ಅರಿತು ಆದರ್ಶ ಬದುಕು ಕಟ್ಟಿಕೊಳ್ಳಬೇಕೆಂದರು. ನೇತೃತ್ವ ವಹಿಸಿದ ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಶ್ರೀ ಜಗದ್ಗುರು ರೇಣುಕಾಚಾರ್ಯರು ವಿಶ್ವಬಂಧುತ್ವದ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳು ನಮ್ಮೆಲ್ಲರ ಬಾಳಿಗೆ ನವ ಚೈತನ್ಯ ತುಂಬುತ್ತವೆ. ದ್ವೇಷ ಅಸೂಯೆ ಮರೆತು ಸಾಮರಸ್ಯದಿಂದ ಬದುಕಲು ಗುರುವಿನ ಮಾರ್ಗದರ್ಶನ ಅವಶ್ಯಕತೆ ಇದೆಯೆಂದರು. ಬೆಳ್ಳಾವಿ ಮಠದ ಕಾರದ ವೀರಬಸವ ಸ್ವಾಮಿಗಳು ವೀರಶೈವ ಧರ್ಮ ಮತ್ತು ಗುರುವಿನ ಮೂಲತತ್ವ ಕುರಿತು ಉಪನ್ಯಾಸವಿತ್ತರು. ಡಾ. ಎಸ್.ಪರಮೇಶ, ಎಂ.ಆರ್.ಹುಲಿನಾಯ್ಕರ್, ಟಿ.ಬಿ.ಶೇಖರ, ಕೆ.ಜಿ.ರುದ್ರಪ್ಪ, ಜಿ.ಮಲ್ಲಿಕಾರ್ಜುನಯ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸಿ.ವಿ.ಮಹಾದೇವಯ್ಯ, ಎಂ.ವಿ.ಮಹೇಶ್, ಜಿ.ಎಸ್.ಲಿಂಗರಾಜು, ಮರಿಬಸಪ್ಪ, ಎಸ್.ನಾಗರಾಜ ಮೊದಲಾದ ಗಣ್ಯರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು. ಸಮಿತಿಯ ಅಧ್ಯಕ್ಷ ಟಿ.ಆರ್. ಸದಾಶಿವಯ್ಯ ಸ್ವಾಗತಿಸಿದರು. ಜಿ.ಎಸ್.ಸಿದ್ಧರಾಜು ನಿರೂಪಿಸಿದರು. ಧನುರ್ಮಾಸದ ಅಂಗವಾಗಿ ಪ್ರಾಃಕಾಲ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಭಕ್ತರಿಗೆ ಶುಭ ಹಾರೈಸಿದರು. ಸಮಾರಂಭದ ನಂತರ ಪ್ರಸಾದ ವಿನಿಯೋಗ ಜರುಗಿತು.