ಪುಸ್ತಕ ಬಿಡುಗಡೆ । ಶಂಕರ ಪಾಗೋಜಿರ ಕವನ ಸಂಕಲನ, ಬಡಿಗೇರ ದೇವೇಂದ್ರರ ಕಾದಂಬರಿ ಲೋಕಾರ್ಪಣೆ
ಸಾವಿರಾರು ವರ್ಷಗಳ ಇತಿಹಾಸವಿರುವ, ವಿಶ್ವದ ಅತ್ಯಂತ ಸುಂದರ ಲಿಪಿಯಾಗಿರುವ ನಮ್ಮೆಲ್ಲರ ಮಾತೃಭಾಷೆ ಕನ್ನಡದ ಬಗ್ಗೆ ಆಲಸ್ಯ, ನಿರ್ಲಕ್ಷ್ಯ ಬೇಡ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಹೇಳಿದರು.
ನಗರದಲ್ಲಿ ಶನಿವಾರ ಸಿರಿಗೆರಿ ಅನ್ನಪೂರ್ಣ ಪ್ರಕಾಶನ ಹೊರ ತಂದಿರುವ ಶಂಕರ ಪಾಗೋಜಿಯವರ ‘ಒಡಲ ದನಿ’ ಕವನ ಸಂಕಲನ ಹಾಗೂ ಬಡಿಗೇರ ದೇವೇಂದ್ರರವರ ‘ರುದ್ರಿ’ ಕಾದಂಬರಿ ಬಿಡುಗಡೆ ಮಾಡಿ ಮಾತನಾಡಿ, ನಮ್ಮ ಭಾಷೆಯ ಬಗ್ಗೆ ನಮಗೆ ಹೆಮ್ಮೆ, ಅಭಿಮಾನ, ಪ್ರೀತಿ ಇರಬೇಕು ಎಂದರು.ಸಾಹಿತ್ಯ ಕವನ ಆಗಲಿ, ಕಾದಂಬರಿಯೇ ಆಗಿರಲಿ ಸಾಹಿತ್ಯಿಕ ಪ್ರಕ್ರಿಯೆ ಜನಸಾಮಾನ್ಯರಿಂದ ಹುಟ್ಟಿವೆ. ಈಗ ಸುಶಿಕ್ಷಿತ ಸಾಹಿತ್ಯ ರಚನೆ ಆಗುತ್ತಿದೆ ಎಂದು ಹೇಳಿದರು.
ಹಿರಿಯ ಲೇಖಕಿ ಬಾನು ಮುಷ್ತಾಕ್‌ರವರು ಬುಕರ್ ಪ್ರಶಸ್ತಿ ಪಡೆಯುವ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಹಿರಿಮೆ ತಂದಿದ್ದಾರೆ. ಅದೇ ರೀತಿ ನಮ್ಮೆಲ್ಲಾ ಲೇಖಕರು, ಸಾಹಿತಿಗಳು ಬೆಳೆಯಬೇಕು ಎಂದರು.
ನಗರವಾಣಿ ಸಹ ಸಂಪಾದಕ, ಹಿರಿಯ ಸಾಹಿತಿ ಬಿ.ಎನ್.ಮಲ್ಲೇಶ ಮಾತನಾಡಿ, ಪಠ್ಯ ಪುಸ್ತಕದ ಜೊತೆಗೆ ಸಾಹಿತ್ಯ ಓದುವ ಮೂಲಕ ಜೀವನದಲ್ಲಿ ಓದುವ ಹವ್ಯಾಸ ಬೆಳೆಸಿಕೊಂಡರೆ ಅದು ಬೇರೆಯೇ ಲೋಕಕ್ಕೆ ನಮ್ಮನ್ನು ತೆಗೆದುಕೊಂಡು ಹೋಗುತ್ತದೆ ಎಂದರು.
ಕಾದಂಬರಿ ಕರ್ತೃ ಬಡಿಗೇರ ದೇವೇಂದ್ರ ಮಾತನಾಡಿ, ಯಾವುದೇ ವ್ಯಕ್ತಿಗೆ ಸಮಾಜದಲ್ಲಿ ತನಗಾಗುವ ಅನ್ಯಾಯಕ್ಕೆ ತನ್ನದೇ ಆದ ರೀತಿ ಸೇಡು ತೀರಿಸಿಕೊಳ್ಳುವುದು, ಆತ್ಮರಕ್ಷಣೆಗಾಗಿ, ಒಂದು ಹೆಣ್ಣು ತನ್ನ ಮೇಲೆ ಅತ್ಯಾಚಾರವಾದಾಗ ಅಂತಹವರ ವಿರುದ್ದ ಸೇಡು ತೀರಿಸಿಕೊಳ್ಳಲು ಕೊಲೆ ಮಾಡಿದರೆ ತಪ್ಪೇನಲ್ಲ ಎಂದು ಅಭಿಪ್ರಾಯಪಟ್ಟರು.