ಕುಡಿಯುವ ನೀರಿಗೆ ಸಮಸ್ಯೆ ಬರಕೂಡದು: ಸ್ಪೀಕರ್ ಸೂಚನೆ

KannadaprabhaNewsNetwork |  
Published : Apr 13, 2026, 02:30 AM IST
ಸಭೆಯಲ್ಲಿ ಮಾತನಾಡುತ್ತಿರುವ ಸ್ಪೀಕರ್‌ ಯು.ಟಿ. ಖಾದರ್‌. | Kannada Prabha

ಸಾರಾಂಶ

ಸಾರ್ವಜನಿಕರಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಸೂಚಿಸಿದ್ದಾರೆ.

ಮಂಗಳೂರು: ಸಾರ್ವಜನಿಕರಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಸೂಚಿಸಿದ್ದಾರೆ.ನಗರದ ಜಿಲ್ಲಾಧಿಕಾರಿ ಕಚೇರಿ ಪ್ರಜಾಸೌಧದಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಕುಡಿಯುವ ನೀರಿನ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಗ್ರಾಮ ಪಂಚಾಯ್ತಿಗಳು, ನಗರ ಸ್ಥಳೀಯ ಸಂಸ್ಥೆಗಳು ಬೇಸಗೆಯಲ್ಲಿ ಕುಡಿಯುವ ನೀರಿನ ಪೂರೈಕೆಗೆ ಹೆಚ್ಚಿನ ಒತ್ತು ನೀಡಬೇಕು. ಯಾವುದೇ ಅಡೆತಡೆ ಇಲ್ಲದೆ ನೀರು ಪೂರೈಸಲು ಗಮನ ಹರಿಸಬೇಕು. ಸ್ಥಳೀಯ ಸಮಸ್ಯೆಗಳನ್ನು ತಮ್ಮ ಹಂತದಲ್ಲಿ ಪರಿಹರಿಸಿ ಗ್ರಾಮ ಪಂಚಾಯ್ತಿಗಳು ಮತ್ತು ಸ್ಥಳೀಯ ಸಂಸ್ಥೆಗಳ ಅನುದಾನ ಬಳಸಿಕೊಂಡು ಕಾಮಗಾರಿ ನಡೆಸಬೇಕು. ಸಾರ್ವಜನಿಕರ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಎಂದು ನಿರ್ದೇಶನ ನೀಡಿದರು.

ಜಲಜೀವನ್ ಯೋಜನೆಯಲ್ಲಿ ಎಲ್ಲ ಮನೆಗಳಿಗೆ ಸಂಪರ್ಕ ಒದಗಿಸಬೇಕು. ಈ ಯೋಜನೆಯಡಿ ನಿರ್ಮಿಸಲಾಗಿರುವ ಟ್ಯಾಂಕ್‍ಗಳಿಗೆ ಸಂಬಂಧಪಟ್ಟ ನೀರಿನ ಮೂಲಗಳಿಂದ ನೀರು ತಲುಪಿಸಿ ಜನವಸತಿ ಪ್ರದೇಶಗಳಿಗೆ ನಿರಂತರ ನೀರು ಪೂರೈಕೆ ಮಾಡಲು ಗಮನ ಹರಿಸಬೇಕು. ಅಗತ್ಯವಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಬೇಕು ಎಂದು ಯು.ಟಿ. ಖಾದರ್‌ ತಿಳಿಸಿದರು.

ಕುಡಿಯುವ ನೀರಿನ ಯೋಜನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲು ವಿಳಂಬ ಮಾಡಬಾರದು. ಪೈಪ್ ಅಳವಡಿಕೆಗೆ ರಸ್ತೆ ಅಗೆದಿರುವ ಕಡೆಗಳಲ್ಲಿ ವಿಳಂಬವಿಲ್ಲದೆ ರಸ್ತೆಯನ್ನು ಪುನಃಸ್ಥಾಪನೆ ಮಾಡಬೇಕು. ಕುಡಿಯುವ ನೀರಿಗೆ ಸಂಬಂಧಿಸಿದ ಇಲಾಖೆಗಳು ನಿಗಮಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.ಜಲಜೀವನ್ ಮಿಷನ್ ಯೋಜನೆಯಡಿ ನೀರಿನ ಸಂಪರ್ಕ ಒದಗಿಸದ ಎಲ್ಲ ಮನೆಗಳಿಗೆ ನೀರಿನ ಮೀಟರ್ ಅಳವಡಿಸಬೇಕು. ಮೀಟರ್ ಅಳವಡಿಸಲು ಬಾಕಿ ಇರುವ ಮನೆಗಳ ಸಮರ್ಪಕ ಮಾಹಿತಿಯನ್ನು ಪಡೆದು ಕ್ರೋಢೀಕರಿಸಿ ಸರ್ಕಾರಕ್ಕೆ ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲು ಯು.ಟಿ. ಖಾದರ್‌ ಹೇಳಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ ಕಾರ್ಭಾರಿ ಮಾತನಾಡಿ, ಕುಡಿಯುವ ನೀರಿನ ಯೋಜನೆಗಳ ಕಾಮಗಾರಿ ಸಂಪೂರ್ಣಗೊಂಡ ನಂತರವೇ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಬೇಕು. ಕಾಮಗಾರಿ ಪೂರ್ಣಗೊಳ್ಳದೆ ಹತ್ತಾಂತರಕ್ಕೆ ಒತ್ತಡ ಹೇರುವಂತಿಲ್ಲ. ಸಂಬಂಧಿಸಿದ ಗುತ್ತಿಗೆದಾರರೇ ಒಂದು ವರ್ಷದವರೆಗೆ ಕಾಮಗಾರಿ ನಿರ್ವಹಣೆ ಮಾಡಬೇಕಿದೆ ಎಂದು ತಿಳಿಸಿದರು.ಇದೇ ಸಂದರ್ಭ ವಿಧಾನ ಸಭಾಧ್ಯಕ್ಷರು ಉಳ್ಳಾಲ ತಾಲೂಕಿನ ಗ್ರಾಮೀಣ ಪ್ರದೇಶ ಹಾಗೂ ಕೋಟೆಕಾರ್, ಸೋಮೇಶ್ವರ, ಉಳ್ಳಾಲ ಪಟ್ಟಣಗಳ ಕುಡಿಯುವ ನೀರಿನ ಪರಿಸ್ಥಿತಿ ಪರಿಶೀಲನೆ ನಡೆಸಿದರು.

ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ, ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಡಾ.ಜಿ. ಸಂತೋಷ್‌ ಕುಮಾರ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೈ ಅಭ್ಯರ್ಥಿಗಳ ಸೋಲಿಗೆ ಆ ಪಕ್ಷದ ನಾಯಕರೇ ಮುಂದು
ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರಿಡಿ