ಬರಪೀಡಿತ ತಾಲೂಕಾಗಿ ಘೋಷಿಸಲು ಒತ್ತಡ ಹೇರುವೆ

KannadaprabhaNewsNetwork |  
Published : Sep 27, 2024, 01:16 AM IST
26ಕೆಆರ್ ಎಂಎನ್ 1.ಜೆಪಿಜಿರಾಮನಗರ ಜಿಪಂ ಸಭಾಂಗಣದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಯಿತು. | Kannada Prabha

ಸಾರಾಂಶ

ರಾಮನಗರ: ಮಳೆ ಕೊರತೆಯಿಂದಾಗಿ ಬೆಳೆಗಳು ಒಣಗುತ್ತಿದ್ದು, ರಾಮನಗರವನ್ನು ಬರಪೀಡಿತ ತಾಲೂಕನ್ನಾಗಿ ಘೋಷಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುತ್ತೇನೆ. ಇದಕ್ಕಾಗಿ ಬೆಳೆ ನಷ್ಟವಾಗಿರುವ ಕುರಿತು ಸ್ಥಳ ಪರಿಶೀಲಿಸಿ ವರದಿ ಸಲ್ಲಿಸುವಂತೆ ಶಾಸಕ ಇಕ್ಬಾಲ್ ಹುಸೇನ್ ಸೂಚನೆ ನೀಡಿದರು.

ರಾಮನಗರ: ಮಳೆ ಕೊರತೆಯಿಂದಾಗಿ ಬೆಳೆಗಳು ಒಣಗುತ್ತಿದ್ದು, ರಾಮನಗರವನ್ನು ಬರಪೀಡಿತ ತಾಲೂಕನ್ನಾಗಿ ಘೋಷಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುತ್ತೇನೆ. ಇದಕ್ಕಾಗಿ ಬೆಳೆ ನಷ್ಟವಾಗಿರುವ ಕುರಿತು ಸ್ಥಳ ಪರಿಶೀಲಿಸಿ ವರದಿ ಸಲ್ಲಿಸುವಂತೆ ಶಾಸಕ ಇಕ್ಬಾಲ್ ಹುಸೇನ್ ಸೂಚನೆ ನೀಡಿದರು.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿ, ಮಳೆ ಇಲ್ಲದ ಕಾರಣ ಬೆಳೆ ಕೈ ಸೇರುವುದಿಲ್ಲವೆಂದು ರೈತರು ಆತಂಕದಲ್ಲಿದ್ದಾರೆ. ಅವರೆಲ್ಲರ ಹಿತ ಕಾಪಾಡುವ ದೃಷ್ಟಿಯಿಂದ ಬೆಳೆ ನಷ್ಟದ ವರದಿ ಸಿದ್ಧಪಡಿಸಿ ಸಲ್ಲಿಸುವಂತೆ ತಿಳಿಸಿದರು.ತಾಲೂಕಿನ ಕಸಬಾ, ಕೂಟಗಲ್, ಬಿಡದಿ, ಕೈಲಾಂಚ ಹೋಬಳಿಗಳಲ್ಲಿ ಜುಲೈನಲ್ಲಿ ಶೇ. 22 ಮತ್ತು ಸೆಪ್ಟೆಂಬರ್‌ನಲ್ಲಿ ಶೇ. 51ರಷ್ಟು ಮಳೆ ಕೊರತೆ ಆಗಿದೆ. ಇದರಿಂದ ಬಿತ್ತನೆ ಕಾರ್ಯಕ್ಕೂ ಹಿನ್ನಡೆ ಉಂಟಾಗಿತ್ತು. ತೊಗರಿ ಬೆಳೆಯಲ್ಲಿ ಕೀಟಬಾಧೆ ಕಾಣಿಸಿಕೊಂಡಿದ್ದು, ನಿರೀಕ್ಷಿತ ಮಳೆ ಇಲ್ಲದೆ ಬೆಳೆಗಳು ಒಣಗುತ್ತಿವೆ ಎಂದು ಕೃಷಿ ಇಲಾಖೆ ಅಧಿಕಾರಿ ಹೇಳಿದರು.ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಇಕ್ಬಾಲ್ ಹುಸೇನ್, ಬೆಳೆಗಳಲ್ಲಿ ಕಾಣಿಸಿಕೊಂಡಿರುವ ಕೀಟಬಾಧೆ ನಿಯಂತ್ರಣಕ್ಕೆ ಕೂಡಲೇ ಕ್ರಮ ವಹಿಸಬೇಕು.

69 ಕೃಷಿ ಹೊಂಡ ನಿರ್ಮಾಣ ಗುರಿ: ತಾಲೂಕಿನಲ್ಲಿ 69 ಕೃಷಿ ಹೊಂಡ ನಿರ್ಮಾಣದ ಗುರಿ ಹೊಂದಲಾಗಿದ್ದು, ಈವರೆಗೆ 26 ಅರ್ಜಿ ಬಂದಿವೆ. ಇದರಲ್ಲಿ 7 ಮಂದಿ ರೈತರು ಕೃಷಿ ಹೊಂಡ ನಿರ್ಮಿಸಿಕೊಂಡಿದ್ದಾರೆ. ಪ್ರತಿ ಹೊಂಡ ನಿರ್ಮಾಣಕ್ಕಾಗಿ 64 ಸಾವಿರ ರು. ಸಹಾಯಧನ ಸಿಗಲಿದೆ. ಮುಂಗಾರು ಮತ್ತು ಹಿಂಗಾರು ಹಂಗಾಮಿಗೆ ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ನಿಮ್ಮ ಇಲಾಖೆಯಿಂದ ನಯಾ ಪೈಸೆ ಅನುಕೂಲ ಆಗುತ್ತಿಲ್ಲವೆಂದು ರೈತರು ಹೇಳುತ್ತಿದ್ದಾರೆ. ಒಂದೊಂದು ಯೂನಿಟ್‌ನಲ್ಲಿ ರಸಗೊಬ್ಬರಕ್ಕೆ 50 ರಿಂದ 60 ರು. ವ್ಯತ್ಯಾಸದ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ನೀವೇಕೆ ಕ್ರಮ ವಹಿಸುತ್ತಿಲ್ಲ. ನೀವೆಲ್ಲರೂ ತಿಂಗಳಾದರೆ ಸಂಬಳಕ್ಕೆ ಕಾಯುತ್ತೀರಿ, ಕೃಷಿಯನ್ನೇ ನಂಬಿರುವ ರೈತರ ಜೀವನ ಹೇಗೆ ನಡೆಯಬೇಕು. ದುಬಾರಿ ದರದಲ್ಲಿ ರಸಗೊಬ್ಬರ ಮಾರಾಟ ಮಾಡುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದರು.ತೋಟಗಾರಿಕೆ ಇಲಾಖೆ ಅಧಿಕಾರಿ ಮಾತನಾಡಿ, ಜಿಲ್ಲೆಯಲ್ಲಿ 4500 ಮಾವು ಬೆಳೆಗಾರರಿದ್ದು, 10,250 ಎಕರೆ ಮಾವು ಬೆಳೆ ಪ್ರದೇಶ ಇದೆ. ಎಕರೆಗೆ 1600 ರು.ನಂತೆ 3900 ರೈತರು ಮಾವು ವಿಮೆ ಕಟ್ಟಿದ್ದರು. ಮಾವು ನಷ್ಟವಾಗಿರುವ ಕಾರಣ ಎಕರೆಗೆ 15 ರಿಂದ 20 ಸಾವಿರ ರು. ಹಣ ಬರಲಿದೆ. ಮಾವು ಬೆಳೆಗಾರರಿಂದ ಪ್ಯಾಕ್ ಹೌಸ್ ಹಾಗೂ ಕ್ರೇಟ್‌ಗಳಿಗೆ ಬೇಡಿಕೆ ಬರುತ್ತಿದೆ ಎಂದು ಗಮನ ಸೆಳೆದರು.ಪ್ಯಾಕ್ ಹೌಸ್ ಜೊತೆಗೆ ಪಾಲಿ ಹೌಸ್‌ಗೂ ಆದ್ಯತೆ ನೀಡಬೇಕು. ಒಂದೆರೆಡು ಪಂಚಾಯಿತಿಗಳನ್ನು ಮಾದರಿಯಾಗಿ ತೆಗೆದುಕೊಂಡು 100 ಎಕರೆ ಭೂಮಿಯಲ್ಲಿ ಒಂದೇ ಬೆಳೆ ಬೆಳೆಯಲು ಪ್ರಯತ್ನ ನಡೆಸುವಂತೆ ಶಾಸಕರು ಹೇಳಿದಾಗ ಅಧಿಕಾರಿಗಳು, ಕಮ್ಯೂನಿಟಿ ಫಾರ್ಮಿಂಗ್ ಸಂಬಂಧ ಸರ್ಕಾರದಿಂದ ಮಾರ್ಗಸೂಚಿ ಬಂದಿಲ್ಲ ಎಂದು ಹೇಳಿದರು.ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಚೇತನ್ ಕುಮಾರ್ ಮಾತನಾಡಿ, ಪ್ರಾಧಿಕಾರದಿಂದ ಲೇಔಟ್ ಗೆ ಅನುಮೋದನೆ ನೀಡುವಾಗ ತೋಟಗಾರಿಕೆ ಇಲಾಖೆ ಪಾರ್ಕ್ ಅಭಿವೃದ್ಧಿ ಪಡಿಸಿರುವುದಾಗಿ ಎನ್‌ಒಸಿ ಕೊಡುತ್ತದೆ. ಆದರೆ, ಪಾರ್ಕ್‌ಅನ್ನೇ ನಿರ್ಮಿಸಿದ ಲೇಔಟ್‌ಗೆ ಹೇಗೆ ಎನ್‌ಒಸಿ ನೀಡಿದಿರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಅಧಿಕಾರಿಗಳು, ಒಂದೆರಡು ಲೇಔಟ್‌ನವರು ಎನ್‌ಒಸಿ ಕೇಳಿಕೊಂಡು ಬಂದಿದ್ದರು. ಅವರಿಗೆ ಕೊಟ್ಟಿಲ್ಲ ಎಂದಾಗ ಶಾಸಕರು ಸ್ಥಳ ಪರಿಶೀಲಿಸಿ ಪಾರ್ಕ್ ಅಭಿವೃದ್ಧಿ ಪಡಿಸಿದ್ದರೆ ಮಾತ್ರ ಎನ್‌ಒಸಿ ಕೊಡುವಂತೆ ಸೂಚನೆ ನೀಡಿದರು.ರೇಷ್ಮೆ ಇಲಾಖೆ ಅಧಿಕಾರಿ ಮಾತನಾಡಿ, ರೇಷ್ಮೆ ಹುಳು ಸಾಕಾಣಿಕೆ ಮನೆ ನಿರ್ಮಾಣಕ್ಕಾಗಿ 62 ಅರ್ಜಿ ಬಂದಿದ್ದು, ಸಹಾಯಧನ ನೀಡಲು ಸರ್ಕಾರದಿಂದ ಅನುದಾನ ಬಂದಿಲ್ಲ. 2 ವರ್ಷದಿಂದ ಸೋಲಾರ್, ಸ್ಪ್ರೇಯರ್, ಪ್ಲಾಸ್ಟಿಕ್ ಚಂದ್ರಿಕೆಯಂತಹ ಸಲಕರಣೆಗಳನ್ನು ವಿತರಣೆ ಮಾಡಿಲ್ಲ. ಕಳೆದ ಆಗಸ್ಟ್‌ನಿಂದ ಈ ವರ್ಷದ ಜೂನ್‌ವರೆಗೆ ಬೈವೋಲ್ಟಿನ್ ಗೂಡಿನ 221 ರೈತರಿಗೆ ಕೆಜಿಗೆ 10 ರು. ಸಹಾಯಧನ ನೀಡುವುದು ಬಾಕಿಯಿತ್ತು. ಈಗ 6 ಲಕ್ಷ 38 ಸಾವಿರ ಬಿಡುಗಡೆಯಾಗಿದೆ ಎಂದು ಹೇಳಿದಾಗ ಇಕ್ಬಾಲ್ ಹುಸೇನ್, ಕೂಡಲೇ ಸಹಾಯಧನ ವಿತರಣೆಗೆ ಕ್ರಮ ವಹಿಸುವಂತೆ ತಿಳಿಸಿದರು. ಕೆ.ರಾಜು, ವಿ.ಎಚ್ .ರಾಜು, ತೇಜಸ್ವಿನಿ ಉಪಸ್ಥಿತರಿದ್ದರು.ತೋಟಗಾರಿಕೆ ಇಲಾಖೆ ಸಚಿವರುದೊಡ್ಡವರು, ಯಾರ ಕೈಗೂ ಸಿಗಲ್ಲ ತೋಟಗಾರಿಕೆ ಇಲಾಖೆ ಸಚಿವರು ಬಹಳ ದೊಡ್ಡವರಿದ್ದು, ಯಾರ ಕೈಗೂ ಸಿಗಲ್ಲ. ರೈತರ ಕಷ್ಟ ಸುಖಕ್ಕೆ ಸ್ಪಂದಿಸುತ್ತಿಲ್ಲ. ಇಲ್ಲಿವರೆಗೆ ಜಿಲ್ಲೆಯಲ್ಲಿ ಸಭೆ ನಡೆಸಿಲ್ಲ. ಮಾವು ಬೆಳೆಗಾರರಿಗೆ ಸಬ್ಸಿಡಿ ದರದಲ್ಲಿ ಕ್ರೇಟ್‌ಗಳ ಒದಗಿಸಿಕೊಡುವಂತೆ ನನಗೆ ಮತ್ತು ಸಚಿವರಿಗೆ ಮನವಿ ಪತ್ರ ಸಲ್ಲಿಸುವಂತೆ ಶಾಸಕ ಇಕ್ಬಾಲ್ ಹುಸೇನ್ ಅಧಿಕಾರಿಗಳಿಗೆ ಸೂಚಿಸಿದರು.ಪ್ಯಾಕ್ ಹೌಸ್ ಜೊತೆಗೆ ಪಾಲಿ ಹೌಸ್‌ಗೂ ಆದ್ಯತೆ ನೀಡಬೇಕು. ಒಂದೆರಡು ಪಂಚಾಯಿತಿಗಳನ್ನು ಮಾದರಿಯಾಗಿ ತೆಗೆದುಕೊಂಡು 100 ಎಕರೆ ಭೂಮಿಯಲ್ಲಿ ಒಂದೇ ಬೆಳೆ ಬೆಳೆಯಲು ಪ್ರಯತ್ನ ನಡೆಸಬೇಕು.

ಇಕ್ಬಾಲ್ ಹುಸೇನ್ ಶಾಸಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ