ಕನ್ನಡಪ್ರಭ ವಾರ್ತೆ ವಿಜಯಪುರ
ಮಂಡ್ಯದ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಜಿಲ್ಲೆಗಳಲ್ಲಿ ಸಂಚರಿಸುತ್ತಿರುವ ಕನ್ನಡ ನುಡಿ ತೇರು ವಿಜಯಪುರಕ್ಕೆ ಆಗಮಿಸಿತು. ಆರಾಧ್ಯ ದೈವ ಶ್ರೀ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಕನ್ನಡ ನುಡಿ ತೇರನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು.ವಿಜಯಪುರದಲ್ಲಿ ಕನ್ನಡಪರ ಘೋಷಣೆಗಳು ಮುಗಿಲು ಮುಟ್ಟಿದ್ದವು. ಐತಿಹಾಸಿಕ ಹಿನ್ನೆಲೆ, ಕನ್ನಡ ನಾಡಿನ ಸಿರಿವಂತಿಕೆಯನ್ನು ಸಾರುವ ಭವ್ಯ ರಥದಲ್ಲಿ ಕನ್ನಡ ತಾಯಿ ಭುವನೇಶ್ವರಿ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿತ್ತು. ಹೃದಯ ಸ್ಪರ್ಶಿಯಾಗಿ ರಥವನ್ನು ಜಿಲ್ಲಾಡಳಿತ, ಕನ್ನಡ ಸಾಹಿತ್ಯ ಪರಿಷತ್, ವಿವಿಧ ಕನ್ನಡಪರ ಸಂಘಟನೆಗಳು ಬರ ಮಾಡಿಕೊಂಡವು.ಈ ವೇಳೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಮಾತನಾಡಿ, ಶತಮಾನದ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ, ಸಂಸ್ಕೃತಿ ಉಳಿಸುವ ಪ್ರಾಮಾಣಿಕ ಕಾರ್ಯ ಮಾಡುತ್ತಿದೆ. ವಿಜಯಪುರ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಸಾಹಿತ್ಯ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ, ಕನ್ನಡ ಸಾಹಿತ್ಯ ಸಮ್ಮೇಳನಗಳು ಪ್ರತಿಯೊಬ್ಬ ಕನ್ನಡಿಗರ ಮನೆ ಹಬ್ಬದಂತೆ, ಈ ಹಬವನ್ನು ಯಶಸ್ವಿಯಾಗಿ ಆಚರಿಸಲು ಸಂಕಲ್ಪ ಮಾಡೋಣ ಎಂದರು.ಸಿಇಒ ರಿಷಿ ಆನಂದ ಮಾತನಾಡಿ, ಕನ್ನಡ ತೇರು ಸಂಚರಿಸುತ್ತಿರುವದು ಹೆಮ್ಮೆಯ ವಿಷಯ. ನಾಲ್ವಡಿ ಕೃಷ್ಣರಾಜ ಒಡೆಯರ ಹಾಗು ಸರ್ ಎಂ.ವಿಶ್ವೇಶ್ವರಯ್ಯನವರ ಕೊಡುಗೆ ಅಪಾರ. ಮಂಡ್ಯ ಜಿಲ್ಲೆಯಲ್ಲಿ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಎಡಿಸಿ ಸೋಮಲಿಂಗ ಗೆಣ್ಣೂರ, ಅಧಿಕಾರಿಗಳಾದ ಸಂತೋಷ ಭೋವಿ, ಪ್ರಶಾಂತ ಚನಗೊಂಡ, ಎನ್.ಎಚ್. ನಾಗೂರ, ಪ್ರಮೋದಿನಿ ಬಳೋಲಮಟ್ಟಿ, ಮಾಧವ ಗುಡಿ, ಸುರೇಶ ಜತ್ತಿ, ಅಭಿಷೇಕ ಚಕ್ರವರ್ತಿ, ಡಾ.ಆನಂದ ಕುಲಕರ್ಣಿ, ಸಿದ್ರಾಮಯ್ಯ ಲಕ್ಕುಂಡಿಮಠ, ಜಯಶ್ರೀ ಹಿರೇಮಠ, ಸುನಂದಾ ಕೋರಿ, ರವಿ ಕಿತ್ತೂರ, ವಿಜಯಕುಮಾರ ಘಾಟಗೆ, ಕಮಲಾ ಮುರಾಳ, ವಿಜಯಲಕ್ಷ್ಮೀ ಹಳಕಟ್ಟಿ, ಅಡಿವೆಪ್ಪ ಸಾಲಗಲ್, ಡಾ.ಸುರೇಶ ಕಾಗಲಕರರಡ್ಡಿ, ಬಸವರಾಜ ಕೋನರಡ್ಡಿ, ಮಹಾದೇವಿ ತೆಲಗಿ, ಕೆ.ವಿದ್ಯಾವತಿ ಅಂಕಲಗಿ, ಕೆ.ಎಫ್.ಅಂಕಲಗಿ, ಕೆ.ಎಸ್. ಹಣಮಾಣಿ, ಅಹ್ಮದ್ ವಾಲೀಕಾರ, ಎಂ.ಸಿ. ಮುಲ್ಲಾ, ಫಯಾಜ ಕಲಾದಗಿ, ದಸ್ತಗೀರ ಸಾಲೋಟಗಿ, ಮಹಾದೇವ ರಾವಜಿ, ಜಗದೀಶ ಸೂರ್ಯವಂಶಿ ಪಾಲ್ಗೊಂಡಿದ್ದರು.