ಪಬ್‌ಗೆ ನುಗ್ಗಿ ಪಿಸ್ತೂಲ್‌ ತೋರಿಸಿ ₹50 ಸಾವಿರ ಕದ್ದ ಕಳ್ಳ

KannadaprabhaNewsNetwork |  
Published : May 13, 2025, 01:25 AM ISTUpdated : May 13, 2025, 08:00 AM IST
ಹಣ ಕಳ್ಳತನ  | Kannada Prabha

ಸಾರಾಂಶ

ಮುಂಜಾನೆ ಪಬ್‌ವೊಂದಕ್ಕೆ ನುಗ್ಗಿರುವ ಮುಸುಕುಧಾರಿ ಕಳ್ಳನೊಬ್ಬ ಸೆಕ್ಯುರಿಟಿ ಗಾರ್ಡ್‌ಗಳಿಗೆ ಪಿಸ್ತೂಲ್‌ ತೋರಿಸಿ ಬೆದರಿಸಿ ಕ್ಯಾಶ್‌ ಕೌಂಟರ್‌ನಲ್ಲಿದ್ದ 50 ಸಾವಿರ ರು. ನಗದು ಕಳವು ಮಾಡಿ ಸಿನಿಮೀಯ ಶೈಲಿಯಲ್ಲಿ ಪರಾರಿಯಾದ ಘಟನೆ ಸುಬ್ರಮಣ್ಯನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

 ಬೆಂಗಳೂರು : ಮುಂಜಾನೆ ಪಬ್‌ವೊಂದಕ್ಕೆ ನುಗ್ಗಿರುವ ಮುಸುಕುಧಾರಿ ಕಳ್ಳನೊಬ್ಬ ಸೆಕ್ಯುರಿಟಿ ಗಾರ್ಡ್‌ಗಳಿಗೆ ಪಿಸ್ತೂಲ್‌ ತೋರಿಸಿ ಬೆದರಿಸಿ ಕ್ಯಾಶ್‌ ಕೌಂಟರ್‌ನಲ್ಲಿದ್ದ 50 ಸಾವಿರ ರು. ನಗದು ಕಳವು ಮಾಡಿ ಸಿನಿಮೀಯ ಶೈಲಿಯಲ್ಲಿ ಪರಾರಿಯಾದ ಘಟನೆ ಸುಬ್ರಮಣ್ಯನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ರಾಜಾಜಿನಗರದ ಜೊಮೆಟ್ರಿ ಬ್ರಿವೇರಿ ಆ್ಯಂಡ್‌ ಕಿಚನ್‌ ಹೆಸರಿನ ಪಬ್‌ನಲ್ಲಿ ಸೋಮವಾರ ಬೆಳಗಿನಜಾವ 4 ಗಂಟೆಗೆ ಈ ಘಟನೆ ನಡೆದಿದೆ. ಪಬ್‌ನ ಮೇಲ್ವಿಚಾರಕ ವಿನಯ್‌ ಕುಮಾರ್‌ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಯ ಪತ್ತೆಗೆ ಶೋಧ ಕಾರ್ಯ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಘಟನೆ?

ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಈ ಪಬ್‌ ಇದೆ. ಸೋಮವಾರ ಮುಂಜಾನೆ 4 ಗಂಟೆಗೆ ಮುಖಕ್ಕೆ ಕಪ್ಪು ಬಣ್ಣದ ಮಾಸ್ಕ್‌, ಕೈಗೆ ಗ್ಲೌಸ್‌ ಧರಿಸಿದ್ದ ಕಳ್ಳ ಪಬ್‌ನ ಅಡುಗೆ ಕೋಣೆಯ ಕಿಟಕಿಯ ಮೆಸ್‌ ಕತ್ತರಿಸಿ ಬಳಿಕ ಕಿಟಕಿಯಲ್ಲಿ ಕೈ ತೂರಿಸಿ ಬಾಗಿಲ ಬೋಲ್ಟ್‌ ತೆಗೆದು ಒಳಗೆ ನುಗ್ಗಿದ್ದಾನೆ.

ಈ ವೇಳೆ ಪಬ್‌ ಒಳಗೆ ಶಬ್ದವಾದ ಹಿನ್ನೆಲೆಯಲ್ಲಿ ಕಟ್ಟಡದ ಇಬ್ಬರು ಸೆಕ್ಯುರಿಟಿ ಗಾರ್ಡ್‌ಗಳ ಪೈಕಿ ಓರ್ವ ಒಳಗೆ ಬರುತ್ತಿದ್ದಂತೆ ಕಳ್ಳ ಪಿಸ್ತೂಲ್ ತೋರಿಸಿ ಬೆದರಿಸಿದ್ದಾನೆ. ಬಳಿಕ ಸಿಸಿಟಿವಿ ಕ್ಯಾಮರಾಗಳನ್ನು ಆಫ್‌ ಮಾಡಿ ಕ್ಯಾಶ್‌ ಕೌಂಟರ್‌ ಬಳಿ ತೆರಳಿ 50 ಸಾವಿರ ರು. ನಗದು ಕಳವು ಮಾಡಿ ಮೊದಲ ಅಂತಸ್ತಿನ ಕಟ್ಟಡದ ಕಿಟಕಿಯಿಂದ ಹೊರಗೆ ಬಂದು ಪರಾರಿಯಾಗಿದ್ದಾನೆ.

112 ಸಹಾಯವಾಣಿಗೆ ಕರೆ:

ಈ ವೇಳೆ ಭಯಗೊಂಡ ಸೆಕ್ಯೂರಿಟಿ ಗಾರ್ಡ್‌ ತಕ್ಷಣ 112 ಪೊಲೀಸ್‌ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಅಷ್ಟರಲ್ಲಿ ರಾತ್ರಿ ಗಸ್ತಿನಲ್ಲಿ ಹೊಯ್ಸಳ ಸಿಬ್ಬಂದಿ ಹಾಗೂ ಸುಬ್ರಮಣ್ಯನಗರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಬಳಿಕ ಕ್ಷಿಪ್ರ ಕಾರ್ಯ ಪಡೆ ಕರೆಸಿಕೊಂಡು ಇಡೀ ಕಟ್ಟಡವನ್ನು ಸುತ್ತುವರಿದು ನಾಲ್ಕು ಅಂತಸ್ತುಗಳನ್ನು ಶೋಧಿಸಿದ್ದಾರೆ. ಆದರೆ ಕಟ್ಟಡದೊಳಗೆ ಯಾರು ಇಲ್ಲದಿರುವುದು ಕಂಡು ಬಂದಿದೆ.

ಸಿಸಿಟಿವಿಯಲ್ಲಿ ಚಲನವಲನ ಸೆರೆ:

ಈ ನಡುವೆ ವಿಷಯ ತಿಳಿದು ಉತ್ತರ ವಿಭಾಗದ ಡಿಸಿಪಿ ಸೈದುಲ್ಲಾ ಅದಾವತ್‌, ಹೆಚ್ಚುವರಿ ಪೊಲೀಸ್‌ ಆಯುಕ್ತ ವಿಕಾಶ್‌ ಕುಮಾರ್‌ ವಿಕಾಶ್‌ ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದಾರೆ. ಪಬ್‌ನ ಸಿಸಿಟಿವಿ ಕ್ಯಾಮರಾದಲ್ಲಿ ಮುಸುಕುಧಾರಿ ಕಳ್ಳ ಪಬ್‌ ಪ್ರವೇಶಿಸಿರುವುದಷ್ಟೇ ಸೆರೆಯಾಗಿದೆ. ವೃತ್ತಿಪರ ಕಳ್ಳನೇ ಈ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಸುಬ್ರಮಣ್ಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೆಕ್ಯೂರಿಟಿ ಗಾರ್ಡ್‌ ನೀಡಿದ ಮಾಹಿತಿ ಮೇರೆಗೆ ಇಡೀ ಕಟ್ಟಡವನ್ನು ಸುತ್ತುವರಿದು ಪರಿಶೀಲಿಸಲಾಗಿದೆ. ಆದರೆ, ಕಟ್ಟಡದೊಳಗೆ ಯಾರೂ ಪತ್ತೆಯಾಗಿಲ್ಲ. ಸಿಸಿಟಿವಿ ದೃಶ್ಯಾವಳಿಯಲ್ಲಿ ವ್ಯಕ್ತಿಯೊಬ್ಬ ಪಬ್‌ನಲ್ಲಿ ಓಡಾಡಿರುವ ದೃಶ್ಯ ಮಾತ್ರ ಸೆರೆಯಾಗಿದೆ. ಆತ ಕೈಯಲ್ಲಿ ಪಿಸ್ತೂಲ್‌ ಹಿಡಿದಿರುವುದು ಕಂಡು ಬಂದಿಲ್ಲ. ಈ ಸಂಬಂಧ ದೂರು ಪಡೆದು ತನಿಖೆ ಕೈಗೊಳ್ಳಲಾಗಿದೆ

- ವಿಕಾಶ್‌ ಕುಮಾರ್‌ ವಿಕಾಶ್‌, ನಗರ ಹೆಚ್ಚುವರಿ ಪೊಲೀಸ್‌ ಆಯುಕ್ತ(ಪಶ್ಚಿಮ ವಿಭಾಗ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ