ಕನ್ನಡಪ್ರಭ ವಾರ್ತೆ ಕುಶಾಲನಗರ ಕುಶಾಲನಗರ ಸಮೀಪದ ಹಾರಂಗಿ ಮೀನುಗಾರಿಕಾ ಕ್ಷೇತ್ರದಲ್ಲಿ ಬೃಹತ್ ಮತ್ಸ್ಯಾಲಯ ಕೇಂದ್ರ ಪ್ರಾರಂಭಿಸುವ ಚಿಂತನೆ ಹೊಂದಲಾಗಿದೆ ಎಂದು ಮೀನುಗಾರಿಕೆ ಮತ್ತು ಬಂದರು ಹಾಗೂ ಒಳನಾಡು ಸಾರಿಗೆ ಇಲಾಖೆ ಸಚಿವ ಮಂಕಾಳ ಎಸ್. ವೈದ್ಯ ತಿಳಿಸಿದ್ದಾರೆ. ಹಾರಂಗಿಯಲ್ಲಿ ಮೀನುಗಾರಿಕಾ ಇಲಾಖೆಯ ಅಪರೂಪದ ತಳಿಯಾದ ಮಹಾಶಿರ್ ಮೀನು ಮರಿಗಳ ಉತ್ಪಾದನಾ ಮತ್ತು ಪಾಲನಾ ಕೇಂದ್ರಕ್ಕೆ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ಅವರೊಂದಿಗೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ದೇಶ, ವಿದೇಶಗಳಲ್ಲಿ ಮೀನಿಗೆ ಬೇಡಿಕೆ ಇದ್ದು ರಾಜ್ಯದ ಎಲ್ಲಾ ಜಲಾಶಯಗಳಲ್ಲಿ ನದಿ ಕೆರೆಗಳಲ್ಲಿ ಮೀನು ಮರಿ ತಳಿಗಳನ್ನು ಬೆಳೆಸಲು ಸರ್ಕಾರದಿಂದ ಎಲ್ಲಾ ರೀತಿಯ ಪ್ರೋತ್ಸಾಹ ನೀಡಲಾಗುತ್ತಿದೆ. ಆಸಕ್ತರಿಗೆ ಉಚಿತವಾಗಿ ನೀಡಲಾಗುತ್ತಿದೆ. ಸರ್ಕಾರದ ಮೂಲಕ ಪ್ರೋತ್ಸಾಹ ಧನ ಕೂಡ ಕಲ್ಪಿಸಲಾಗುತ್ತಿದೆ. ರಾಜ್ಯ, ನೆರೆ ರಾಜ್ಯಗಳು ಹಾಗೂ ವಿದೇಶಗಳಿಗೆ ಕೂಡ ಮೀನು ಸರಬರಾಜು ಮಾಡುವ ವ್ಯವಸ್ಥೆಗೆ ಸಹಾಯಹಸ್ತ ಕಲ್ಪಿಸಲಾಗುತ್ತಿದೆ ಎಂದರು. ನಾಡಿನಲ್ಲಿ ಸಿಹಿ ನೀರಿನ ಮೀನು ಉತ್ಪಾದನೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಮೀನುಗಾರ ಮಹಿಳೆಯರಿಗೆ ಶೂನ್ಯ ಬಡ್ಡಿ ದರದಲ್ಲಿ ಮೂರು ಲಕ್ಷ ರು. ತನಕ ಸಾಲ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು. ರಾಜ್ಯದ ಪ್ರತಿ ಜಿಲ್ಲಾ, ತಾಲೂಕು ಮಟ್ಟದಲ್ಲಿ ಮೀನು ಮಾರಾಟ ಕೇಂದ್ರ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಸಚಿವರು ಹೇಳಿದರು. 300 ವಾಹನಗಳನ್ನು ಮೀನು ಮಾರಾಟಕ್ಕೆ ಸರ್ಕಾರದ ಮೂಲಕ ಖರೀದಿಸಲಾಗಿದೆ. ಈ ಮೂಲಕ ಗ್ರಾಹಕರಿಗೆ ಮೀನು ಮಾರಾಟ ವ್ಯವಸ್ಥೆ ಕಲ್ಪಿಸಲು ಇಲಾಖೆ ಮೂಲಕ ಯೋಜನೆಗಳು ರೂಪುಗೊಂಡಿವೆ ಎಂದರು. ಎಲ್ಲೆಡೆ ಮೀನಿಗೆ ಹೆಚ್ಚಿನ ಬೇಡಿಕೆ ದೊರೆಯುತ್ತಿದ್ದು ಸಿಹಿ ನೀರಿನಲ್ಲಿ ಮೀನಿನ ಉತ್ಪಾದನೆ ಹೇರಳವಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಆರ್. ಗಣೇಶ್, ಉಪ ನಿರ್ದೇಶಕರಾದ ಸಿ.ಎಸ್.ಸಚಿನ್, ಸಹಾಯಕ ನಿರ್ದೇಶಕ ಎಸ್ಎಂ.. ಸಚಿನ್, ಕೆ ಬಿ ಮಿಲನ, ಸ್ನೇಹ, ಸದಸ್ಯರಾದ ವಿ.ಪಿ. ಶಶಿಧರ್, ಜೋಸೆಫ್ ವಿಕ್ಟರ್ ಸೋನ್ಸ್ ಮತ್ತಿತರರಿದ್ದರು. -------- ಡಿಕೆಶಿ ಪ್ರಸ್ತಾಪಕ್ಕೆ ಸಚಿವ ಸ್ವಾಗತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ರಾಮನಗರ ಜಿಲ್ಲೆಯನ್ನು ಬೆಂಗಳೂರಿಗೆ ಸೇರ್ಪಡೆಗೊಳಿಸುವ ಉಪಮುಖ್ಯಮಂತ್ರಿಯ ಚಿಂತನೆ ಸ್ವಾಗತಾರ್ಹ. ಡಿ ಕೆ ಶಿವಕುಮಾರ್ ಅವರು ಎಲ್ಲಾ ರೀತಿಯಲ್ಲಿ ಯೋಗ್ಯವಾದ ಚಿಂತನೆ ಮಾಡುತ್ತಾರೆ, ಆ ಮೂಲಕ ರಾಮನಗರದ ಹೆಚ್ಚಿನ ಅಭಿವೃದ್ಧಿ ಸಾಗಲಿದೆ ಎಂದರು. ------------- ಚಿತ್ರ ಹಾರಂಗಿ ಕ್ಷೇತ್ರಕ್ಕೆ ಮೀನುಗಾರಿಕಾ ಸಚಿವರು ಭೇಟಿ ನೀಡಿದ ಸಂದರ್ಭ