ಸೆಮಿಸ್ಟರ್‌ ಪರೀಕ್ಷೆಗಳ ತ್ವರಿತ ಮೌಲ್ಯಮಾಪನ ನಿರ್ಧಾರ: ಮಂಗಳೂರು ವಿವಿ ಕುಲಪತಿ

KannadaprabhaNewsNetwork | Published : Jan 3, 2024 1:45 AM

ಸಾರಾಂಶ

ಮಂಗಳೂರು ವಿಶ್ವ ವಿದ್ಯಾನಿಲಯದ ಶೈಕ್ಷಣಿಕ ಸಾಲಿನ ಸಾಮಾನ್ಯ ಸಭೆ ಮಂಗಳವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ವಿಶ್ವವಿದ್ಯಾಲಯದ ಪ್ರಥಮ ಹಾಗೂ ದ್ವಿತೀಯ ಸೆಮಿಸ್ಟರ್‌ ಪರೀಕ್ಷೆಗಳ ತ್ವರಿತ ಮೌಲ್ಯಮಾಪನಕ್ಕೆ ಉದ್ದೇಶಿಸಲಾಗಿದೆ. ಈ ಶೈಕ್ಷಣಿಕ ವರ್ಷದ ತರಗತಿಗಳನ್ನು ಜುಲೈನಲ್ಲಿ ಆರಂಭಿಸಲು ಎಲ್ಲ ರೀತಿಯ ಪೂರ್ವಸಿದ್ಧತೆಗಳನ್ನು ಕೈಗೊಳ್ಳಲಾಗುವುದು ಎಂದು ಕುಲಪತಿ ಪ್ರೊ. ಜಯರಾಜ್‌ ಅಮೀನ್‌ ಹೇಳಿದ್ದಾರೆ.ಮಂಗಳೂರು ವಿವಿಯ ಹೊಸ ಸೆನೆಟ್‌ ಸಭಾಂಗಣದಲ್ಲಿ ಮಂಗಳವಾರ ಈ ಶೈಕ್ಷಣಿಕ ಸಾಲಿನ ತೃತೀಯ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಥಮ, ತೃತೀಯ ಹಾಗೂ ಐದನೇ ಸೆಮಿಸ್ಟರ್‌ಗಳ ಪರೀಕ್ಷೆ ಜ.2ರಿಂದ ಆರಂಭವಾಗಿದೆ. ಈ ಪರೀಕ್ಷೆಗಳ ಮೌಲ್ಯಮಾಪನ ಫೆಬ್ರವರಿ 17ರೊಳಗೆ ಮುಕ್ತಾಯಗೊಳಿಸುವ ಇರಾದೆ ಇದೆ. ಜ.15ರಿಂದಲೇ ಮೌಲ್ಯಮಾಪನ ಕಾರ್ಯ ನಡೆಸಲಾಗುವುದು. ಫೆ.19ರಿಂದ ಎರಡು, ನಾಲ್ಕು ಮತ್ತು ಆರನೇ ಸೆಮಿಸ್ಟರ್‌ ತರಗತಿ ಆರಂಭಗೊಳ್ಳಲಿದೆ. ಪರೀಕ್ಷೆ ಮುಗಿದ ಕೂಡಲೇ ಮೌಲ್ಯಮಾಪನ ನಡೆಸುವುದರಿಂದ ಉಪನ್ಯಾಸಕರಿಗೆ ಮುಂದಿನ ತರಗತಿ ನಡೆಸಲು ಅನುಕೂಲವಾಗುತ್ತದೆ. ಈ ಬಾರಿ ಹೊಸ ಸೆನೆಟ್‌ ಹಾಲ್‌ನಲ್ಲೇ ಮೌಲ್ಯಮಾಪನ ನಡೆಸಲಾಗುವುದು. ಪಠ್ಯ ಬೋಧನೆ ಹಾಗೂ ಪರೀಕ್ಷಾ ಮೌಲ್ಯಮಾಪನ ಉಪನ್ಯಾಸಕ ವೃತ್ತಿಯ ಅವಿಭಾಜ್ಯ ಅಂಗವಾಗಿದೆ. ಆದ್ದರಿಂದ ಯುಜಿಸಿ ವೇತನ ಪಡೆಯುವ ಉಪನ್ಯಾಸಕರು ಮೌಲ್ಯಮಾಪನಕ್ಕೆ ಹಾಜರಾಗದೇ ಇದ್ದರೆ ಅವರ ವಿರುದ್ಧ ಕಟ್ಟುನಿಟ್ಟು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದರು.

ಜುಲೈನಲ್ಲಿ ಶೈಕ್ಷಣಿಕ ತರಗತಿಗೆ ಚಿಂತನೆ:

ಕೋವಿಡ್‌ ಸಂದರ್ಭ ಏರುಪೇರಾಗಿದ್ದ ಶೈಕ್ಷಣಿಕ ವೇಳಾಪಟ್ಟಿಯನ್ನು ಸರಿದೂಗಿಸುವ ಪ್ರಯತ್ನ ನಡೆಯುತ್ತಿದೆ. ಈ ಬಾರಿ ಆಗಸ್ಟ್‌ನಲ್ಲಿ ಕಾಲೇಜುಗಳು ಪುನಾರಂಭಗೊಂಡಿತ್ತು. 2024-25ನೇ ಶೈಕ್ಷಣಿಕ ಸಾಲಿನಲ್ಲಿ ಜುಲೈ 25 ತಾರೀಕಿನ ವೇಳೆಗೆ ತರಗತಿ ಆರಂಭಕ್ಕೆ ಚಿಂತನೆ ನಡೆಸಲಾಗಿದೆ ಎಂದರು.

ಅಡಿಟ್‌ನಲ್ಲಿ 53.64 ಕೋಟಿ ರು. ಆಕ್ಷೇಪ:

ಮಂಗಳೂರು ವಿವಿಯ 2020-21ನೇ ಸಾಲಿನ ಲೆಕ್ಕಪರಿಶೋಧನಾ ವರದಿಯಲ್ಲಿ 53.64 ಕೋಟಿ ರು.ಗಳಿಗೆ ಆಕ್ಷೇಪಣೆ ಮಾಡಲಾಗಿದೆ. ಅದರಲ್ಲಿ 4.42 ಕೋಟಿ ರು. ವಸೂಲಾತಿ ಆಗಿದೆ. ಉಳಿದ ಮೊತ್ತದ ವಸೂಲಿ ಕುರಿತಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಹಂಗಾಮಿ ಸಮಿತಿ ಈ ಬಗ್ಗೆ ಚರ್ಚಿಸಿ ತೀರ್ಮಾನಿಸಲಿದೆ ಎಂದು ಹಣಕಾಸು ಅಧಿಕಾರಿ ಸಂಗಪ್ಪ ಮಾಹಿತಿ ನೀಡಿದರು. ಇದಕ್ಕೆ ಆಕ್ಷೇಪಿಸಿದ ವಿಧಾನ ಪರಿಷತ್‌ ಸದಸ್ಯ ಮಧು ಮಾದೇ ಗೌಡ, ಹಂಗಾಮಿ ಸಮಿತಿ ತೀರ್ಮಾನಿಸುವುದಾದರೆ, ಇಲ್ಲಿ ಅಜೆಂಡಾದ ಅಗತ್ಯವೇನಿದೆ ಎಂದು ಪ್ರಶ್ನಿಸಿದರು. ಇಲ್ಲಿ ದೊಡ್ಡ ಮೊತ್ತ ನ್ಯೂನತೆಯಾದ ಬಗ್ಗೆ ಲೆಕ್ಕಪರಿಶೋಧಕರು ಆಕ್ಷೇಪ ಎತ್ತಿದ್ದಾರೆ. ಬಾಕಿ ವಸೂಲಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ರಿಜಿಸ್ಟ್ರಾರ್‌ ಪರೀಕ್ಷಾಂಗ ರಾಜು ಚೆಲ್ಲನ್ನವರ್‌, ಹಣಕಾಸು ಅಧಿಕಾರಿ ಸಂಗಪ್ಪ, ರಿಜಿಸ್ಟ್ರಾರ್‌ ಆಡಳಿತ ರಾಜು ಇದ್ದರು. ವಿವಿ ಅತಿಥಿ ಉಪನ್ಯಾಸಕರ ವೇತನ ಪಾವತಿಗೆ ಸರ್ಕಾರಕ್ಕೆ ಮನವಿ-

ವಿಶ್ವವಿದ್ಯಾಲಯಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಬೋಧನೆ ಮಾಡುತ್ತಿರುವವರ ವೇತನ ಪಾವತಿಗೆ ಮುಂದಾಗುವಂತೆ ಸರ್ಕಾರಕ್ಕೆ ಮಂಗಳೂರು ವಿವಿ ಮನವಿ ಸಲ್ಲಿಸಿದೆ.

ಉನ್ನತ ಶಿಕ್ಷಣ ಸಚಿವ ಸುಧಾಕರ್ ಅವರು ಮಂಗಳೂರು ವಿವಿಗೆ ಇತ್ತೀಚೆಗೆ ಭೇಟಿ ನೀಡಿದ ಸಂದರ್ಭ ಈ ಕುರಿತು ಮನವಿ ಸಲ್ಲಿಸಲಾಗಿದೆ. ಅಲ್ಲದೆ ಬೆಂಗಳೂರಿಗೆ ತೆರಳಿ ಅಲ್ಲಿ ಕೂಡ ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಮಾಡಲು ನಿರ್ಧರಿಸಲಾಗಿದೆ ಎಂದು ಪ್ರಭಾರ ಕುಲಪತಿ ಪ್ರೊ. ಜಯರಾಜ್‌ ಅಮೀನ್‌ ಹೇಳಿದರು.

ಮಂಗಳೂರು ವಿವಿಯಲ್ಲಿ 400 ಮಂದಿ ಅತಿಥಿ ಉಪನ್ಯಾಸಕರಿಗೆ ಮಾಸಿಕ 1.50 ಕೋಟಿ ರು. ಮೊತ್ತ ವೇತನಕ್ಕೆ ಪಾವತಿಯಾಗುತ್ತಿದೆ. 409 ಮಂದಿ ನಿವೃತ್ತರಿಗೆ 1.15 ಕೋಟಿ ರು. ಪೆನ್ಶನ್‌ ಪಾವತಿಸಲಾಗುತ್ತಿದೆ. ಇದರಲ್ಲಿ ಸರ್ಕಾರದ ಪಾಲು 83 ಲಕ್ಷ ರು. ಮಾತ್ರ. ಉಳಿದ ಮೊತ್ತವನ್ನು ವಿವಿಯೇ ಭರಿಸುತ್ತಿದೆ. ಇವೆರಡು ಭಾರಿ ಮೊತ್ತ ವಿವಿಗೆ ಹೊರೆಯಾಗುತ್ತಿದೆ. ವಿವಿಯಲ್ಲಿ 1980ರಲ್ಲಿ ಮಂಜೂರಾದ 273 ಕಾಯಂ ಹುದ್ದೆಗಳ ಪೈಕಿ 144 ಹುದ್ದೆ ಭರ್ತಿಯಾಗಿದೆ. 129 ಹುದ್ದೆ ಖಾಲಿ ಇದೆ. ಬೋಧಕೇತರರಲ್ಲಿ ಮಂಜೂರಾದ 547 ಹುದ್ದೆ ಪೈಕಿ 189 ಹುದ್ದೆ ಭರ್ತಿಯಾಗಿದ್ದು, 358 ಹುದ್ದೆ ಖಾಲಿ ಇದೆ. ಈಗ ವಿವಿಯಲ್ಲಿ ಕೋರ್ಸ್‌ಗಳ ಕಾರ್ಯಭಾರ ಜಾಸ್ತಿಯಾಗಿದ್ದು, ಅದಕ್ಕೆ ಅನುಗುಣವಾಗಿ ಬೋಧಕರ ನೇಮಕವೂ ಅನಿವಾರ್ಯವಾಗಿದೆ. ಹಾಗಾಗಿ ಇದು ವಿವಿಗೆ ಭಾರಿ ಹೊರೆಯಾಗುತ್ತಿದೆ. ಯುಜಿಸಿ ಅನುದಾನವೂ ಕೆಲವು ವರ್ಷಗಳಿಂದ ಬರುತ್ತಿಲ್ಲ. ಹೀಗಾಗಿ ಸರ್ಕಾರವೇ ಪದವಿ ಕಾಲೇಜುಗಳಂತೆ ವಿವಿ ಅತಿಥಿ ಉಪನ್ಯಾಸಕರಿಗೆ ವೇತನ ನೀಡಿದರೆ, ವಿವಿ ಹೊರೆ ತಗ್ಗಲಿದೆ ಎಂದರು.

ಸಂಯೋಜನಾ ಶುಲ್ಕ ಹೆಚ್ಚಳ: ಮಂಗಳೂರು ವಿವಿ ಜತೆ ಸಂಯೋಜನೆಗೊಳ್ಳುವ ಕಾಲೇಜುಗಳಿಗೆ ಶುಲ್ಕದಲ್ಲಿ ಹೆಚ್ಚಳ ಮಾಡಲಾಗುತ್ತದೆ. ಕೊರೋನಾ ವೇಳೆ ಈ ಶುಲ್ಕವನ್ನು ಶೇ.20ರಷ್ಟು ಕಡಿತಗೊಳಿಸಲಾಗಿತ್ತು. ಈಗ ಶೇ.10ರಷ್ಟು ಶುಲ್ಕ ಹೆಚ್ಚಳ ಮಾಡಲಾಗುತ್ತಿದೆ. ಈ ಬಗ್ಗೆ ಅಕಾಡೆಮಿಕ್‌ ಕೌನ್ಸಿಲ್‌ನಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ಈ ಶೈಕ್ಷಣಿಕ ವರ್ಷದಿಂದಲೇ ಅನ್ವಯವಾಗಲಿದೆ ಎಂದು ಕುಲಪತಿ ಪ್ರೊ.ಜಯರಾಜ್‌ ಅಮೀನ್‌ ತಿಳಿಸಿದರು.

Share this article