137 ಗಣತಿದಾರರ ಅಮಾನತಿಗೆ ಚಿಂತನೆ?

KannadaprabhaNewsNetwork |  
Published : Oct 01, 2025, 01:00 AM IST
ಬಳ್ಳಾರಿಯ ಡಿಸಿ ಕಚೇರಿಯಲ್ಲಿ ಸಭೆ ನಡೆಸಿದ ಜಿಲ್ಲಾಧಿಕಾರಿ ಕೆ.ನಾಗೇಂದ್ರ ಪ್ರಸಾದ್ ಅವರು ಸಮೀಕ್ಷೆಯನ್ನು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.  | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಕಂಪ್ಲಿ, ಕುರುಗೋಡು, ಸಿರುಗುಪ್ಪ ತಾಲ್ಲೂಕುಗಳು ಸಮೀಕ್ಷಾ ಕಾರ್ಯ ಅಂತ್ಯಕ್ಕೆ ನಿಗದಿತ ಗುರಿ ತಲುಪಲಿವೆ. ಆದರೆ, ಸಂಡೂರು ಮತ್ತು ಬಳ್ಳಾರಿ ತಾಲೂಕುಗಳಿಂದ ನಿರೀಕ್ಷೆಯಂತೆ ಫಲಿತಾಂಶ ಲಭಿಸಿಲ್ಲ.

ಬಳ್ಳಾರಿ: ಗಣಿ ಜಿಲ್ಲೆ ಬಳ್ಳಾರಿಯಲ್ಲಿ ನಡೆಯುತ್ತಿರುವ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯದಲ್ಲಿ ಗುರುತಿಸಲಾದ 3.85 ಲಕ್ಷ ಮನೆಗಳ ಪೈಕಿ 1.45 ಲಕ್ಷ ಮನೆಗಳ ಸಮೀಕ್ಷೆ ಮಾತ್ರ ಪೂರ್ಣಗೊಂಡಿದ್ದು, ಶೇ. 38 ರಷ್ಟು ಪ್ರಗತಿಯಾಗಿ.

ಬಳ್ಳಾರಿ ಜಿಲ್ಲೆ 15ನೇ ಸ್ಥಾನದಲ್ಲಿದ್ದು, ಸಮೀಕ್ಷೆಗೆ ಅಸಹಕಾರ ತೋರುತ್ತಿರುವ 137 ಗಣತಿದಾರರ ಅಮಾನತಿಗೆ ಜಿಲ್ಲಾಡಳಿತ ಗಂಭೀರ ಚಿಂತನೆ ನಡೆಸಿದೆ.

ಜಿಲ್ಲೆಯಲ್ಲಿ ಕಂಪ್ಲಿ, ಕುರುಗೋಡು, ಸಿರುಗುಪ್ಪ ತಾಲ್ಲೂಕುಗಳು ಸಮೀಕ್ಷಾ ಕಾರ್ಯ ಅಂತ್ಯಕ್ಕೆ ನಿಗದಿತ ಗುರಿ ತಲುಪಲಿವೆ. ಆದರೆ, ಸಂಡೂರು ಮತ್ತು ಬಳ್ಳಾರಿ ತಾಲೂಕುಗಳಿಂದ ನಿರೀಕ್ಷೆಯಂತೆ ಫಲಿತಾಂಶ ಲಭಿಸಿಲ್ಲ.

ಸಂಡೂರು ಭಾಗದಲ್ಲಿ 79 ಸಾವಿರ ಮನೆಗಳ ಪೈಕಿ ತೋರಣಗಲ್ಲು ಮತ್ತು ವಡ್ಡು ಗ್ರಾಮಗಳ ತಲಾ 10 ಸಾವಿರ ಮನೆಗಳಿದ್ದು, ಅದರಲ್ಲಿ ತೋರಣಗಲ್ಲಿನಲ್ಲಿ ಜಿಂದಾಲ್ ವ್ಯಾಪ್ತಿಯಲ್ಲಿ 6 ಟೌನ್ ಶಿಪ್‌ಗಳಿವೆ. ಇಲ್ಲಿ ಸಮೀಕ್ಷಾ ಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿದೆ. ಹಾಗಾಗಿ ಟೌನ್ ಶಿಪ್ ಗಳಲ್ಲಿ ಶಿಬಿರ (ಕ್ಯಾಂಪ್) ಆಯೋಜಿಸುವ ಮೂಲಕ ಈಗಾಗಲೇ ಗುರುತಿಸಲಾದ ಮನೆಗಳನ್ನು ಸಮೀಕ್ಷಾ ಕಾರ್ಯಕ್ಕೆ ಒಳಪಡಿಸಲು ಜಿಲ್ಲಾಡಳಿತ ಮುಂದಾಗಿದೆ.

ಬಳ್ಳಾರಿ ತಾಲೂಕಿನಲ್ಲಿ 1.75 ಲಕ್ಷ ಮನೆಗಳ ಪೈಕಿ 53 ಸಾವಿರ ಮನೆಗಳು ಪೂರ್ಣಗೊಂಡಿದ್ದು, ಉಳಿದ ಮನೆಗಳ ಸಮೀಕ್ಷೆ ಕಾರ್ಯ ಮುಂದುವರಿದಿದೆ. ಕಂಪ್ಲಿ ತಾಲೂಕಿನ 33 ಸಾವಿರ ಮನೆಗಳ ಪೈಕಿ 16 ಸಾವಿರ ಮನೆ ಪೂರ್ಣಗೊಂಡಿದ್ದು, ಕುರುಗೋಡು ತಾಲೂಕಿನಲ್ಲಿ 27 ಸಾವಿರ ಮನೆಗಳ ಪೈಕಿ 15 ಸಾವಿರ ಮನೆಗಳು ಹಾಗೂ ಸಂಡೂರು ತಾಲೂಕಿನ 79 ಸಾವಿರ ಮನೆಗಳ ಪೈಕಿ 27 ಸಾವಿರ ಮನೆ ಪೂರ್ಣಗೊಳಿಸಲಾಗಿದೆ. ಸಿರುಗುಪ್ಪ ತಾಲೂಕಿನ 65 ಸಾವಿರ ಮನೆಗಳ ಪೈಕಿ 35 ಸಾವಿರ ಮನೆಗಳ ಸಮೀಕ್ಷೆ ಕಾರ್ಯ ಮುಗಿದಿದ್ದು ಉಳಿದ ಮನೆಗಳ ಸಮೀಕ್ಷೆ ಕಾರ್ಯಕ್ಕೆ ವೇಗ ನೀಡಲಾಗಿದೆ.

ಡಿಸಿ ಕಚೇರಿಯಲ್ಲಿ ಸಭೆ: ನಗರದ ಜಿಲ್ಲಾಧಿಕಾರಿ ಕಚೇರಿಯ ಕೆಸ್ವಾನ್ ವಿಡಿಯೋ ಸಭಾಂಗಣದಲ್ಲಿ ಸಮೀಕ್ಷೆಯ ನೋಡಲ್ ಅಧಿಕಾರಿಗಳು, ವರ್ಚುವಲ್ ಮೂಲಕ ಸಂಡೂರು ತಾಲೂಕು ತಹಸೀಲ್ದಾರರೊಂದಿಗೆ ಮಂಗಳವಾರ ಸಮೀಕ್ಷೆಯ ಪ್ರಗತಿ ಸಭೆ ನಡೆಸಿದ ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್ ಅವರು, ತೀರಾ ಹಿಂದುಳಿದ ತಾಲೂಕುಗಳಲ್ಲಿ ಸಮೀಕ್ಷೆ ಕೆಲಸವನ್ನು ಮತ್ತಷ್ಟು ಚುರುಕುಗೊಳಿಸಬೇಕು ಎಂದು ನಿರ್ದೇಶನ ನೀಡಿದರು.

ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯ ಆರಂಭಗೊಂಡು 8 ದಿನಗಳಾಗಿವೆ. ಅಧಿಕಾರಿಗಳು ಜತೆಗೂಡಿ ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕು. ಬಳ್ಳಾರಿ ಮಹಾನಗರ ವ್ಯಾಪ್ತಿಯಲ್ಲಿ ಪ್ರತಿ ಎರಡು ವಾರ್ಡ್ ಗಳಿಗೆ ಒಬ್ಬ ಜಿಲ್ಲಾ ಮಟ್ಟದ ಅಧಿಕಾರಿಯನ್ನು ಸಮೀಕ್ಷಾ ಕಾರ್ಯದ ಮೇಲ್ವಿಚಾರಣೆಗಾಗಿ ನೋಡೆಲ್ ಅಧಿಕಾರಿಯನ್ನಾಗಿ ನೇಮಿಸಿದೆ. ಆದರೂ ಪ್ರಗತಿ ಕಾಣುತ್ತಿಲ್ಲ. ಸ್ಪಂದಿಸದಿರುವ ಸೂಪರ್ ವೈಸರ್ ಗಳ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಜಿಪಂ ಸಿಇಒ ಮಹ್ಮಮದ್ ಹ್ಯಾರೀಸ್ ಸುಮೈರ್ ಮಾತನಾಡಿ, ಸಂಡೂರಿನ ತೋರಣಗಲ್ಲು ಮತ್ತು ವಡ್ಡು ಗ್ರಾಮಗಳಲ್ಲಿ ಹೊರ ರಾಜ್ಯದಿಂದ ಬಂದು ಒಂದು ಮನೆಯಲ್ಲಿ 10ಕ್ಕೂ ಹೆಚ್ಚು ಜನ ವಾಸವಿರುತ್ತಾರೆ. ಅಲ್ಲಿ ಒಬ್ಬರ ಆಧಾರ್ ಕಾರ್ಡ್ ಮಾಹಿತಿ ಪಡೆದುಕೊಂಡು ಗಣತಿ ನಡೆಸಬೇಕು. ಯಾವುದೇ ಕಾರಣಕ್ಕೂ ವಿಳಂಬಕ್ಕೆ ಆಸ್ಪದ ನೀಡುವಂತಿಲ್ಲ ಎಂದು ಸಂಡೂರು ತಹಸೀಲ್ದಾರರಿಗೆ ಸೂಚನೆ ನೀಡಿದರು.

ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ಒಟ್ಟು 171 ಗಣತಿದಾರರಿದ್ದು, ಅದರಲ್ಲಿ ಕೇವಲ 36 ಗಣತಿದಾರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಉಳಿದವರು ಸ್ಪಂದಿಸುತ್ತಿಲ್ಲ ಎಂದು ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್. ಮಂಜುನಾಥ ಅವರು ಸಭೆಯ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯವರು, ಅಂತಹವರನ್ನು ಗುರುತಿಸಿ ಅಮಾನತ್ತಿಗೆ ಶಿಫಾರಸ್ಸು ಮಾಡಬೇಕು. ಇನ್ನಿತರೆ ಸಿಬ್ಬಂದಿ ಇದ್ದಲ್ಲಿ ಅವರನ್ನು ನಿಯೋಜನೆ ಮಾಡಿಕೊಳ್ಳಬೇಕು. ಈ ಕುರಿತು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯವರೊಂದಿಗೆ ಸಮನ್ವಯತೆ ಸಾಧಿಸಬೇಕು ಎಂದರು.

ಎಡಿಸಿ ಮಹಮ್ಮದ್ ಎನ್. ಝುಬೇರ್, ಸಹಾಯಕ ಆಯುಕ್ತ ಪಿ. ಪ್ರಮೋದ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಾಲಪ್ಪ, ಡಿಎಂಎಫ್ ವಿಶೇಷಾಧಿಕಾರಿ ಲೋಕೇಶ್, ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್. ಮಂಜುನಾಥ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ ಲಾಲ್‌ಬಾಗ್‌ ಮಾದರಿಯಲ್ಲಿ ಮತ್ತೆರಡು ಪಾರ್ಕ್‌ ನಿರ್ಮಾಣ: ಡಿ.ಕೆ.ಶಿವಕುಮಾರ್
ಸಂಕ್ರಾಂತಿ: ಇಂದು ಗವಿಗಂಗಾಧರನಿಗೆ ಸೂರ್ಯರಶ್ಮಿ ಸ್ಪರ್ಶ