ಕನ್ನಡಪ್ರಭ ವಾರ್ತೆ ಹಿರಿಯೂರು
ಮಾಜಿ ಸಚಿವ ತಿಪ್ಪೇಸ್ವಾಮಿಯವರಿಗೆ ಬಡವರ ಬಗ್ಗೆ ಅಪಾರ ಕಾಳಜಿ ಹಾಗೂ ಸಮುದಾಯದ ಬಗ್ಗೆ ಇದ್ದ ಜವಾಬ್ದಾರಿಯು ನಿಜಕ್ಕೂ ಶ್ಲಾಘನೀಯವಾದುದು ಎಂದು ಬಿಜೆಪಿ ಮುಖಂಡ ಎನ್.ಆರ್.ಲಕ್ಷ್ಮಿಕಾಂತ್ ಹೇಳಿದರು.ನಗರದ ರೋಟರಿ ಸಭಾಂಗಣದಲ್ಲಿ ನಡೆದ ಮಾಜಿ ಸಚಿವ ತಿಪ್ಪೇಸ್ವಾಮಿ ಹಾಗೂ ಸಿದ್ದನಾಯಕರ ನುಡಿ ನಮನ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಮುದಾಯದ ಏಳಿಗೆಗೆ ದುಡಿದವರಲ್ಲಿ ಮಾಜಿ ಸಚಿವರಾದ ತಿಪ್ಪೇಸ್ವಾಮಿಯವರು ಅಗ್ರಗಣ್ಯರು. ಅವರು ನಾಯಕ ಹಾಗೂ ಗೊಲ್ಲ ಸಮುದಾಯದ ಮೇಲೆ ಅಪಾರ ಪ್ರೀತಿ, ವಿಶ್ವಾಸ ಹೊಂದಿದ್ದರು. ಮಂತ್ರಿಯಾದರು ಸಹ ಸರಳವಾಗಿ ಜೀವಿಸಿದಂತವರು. ಚುನಾವಣೆ ಸಮಯದಲ್ಲಿ ಮಾತ್ರ ಅವರು ಪಕ್ಷದ ಪರವಾಗಿದ್ದು ಉಳಿದಂತೆ ಅಭಿವೃದ್ಧಿಗೆ ಹೆಚ್ಚು ಮಹತ್ವ ನೀಡಿದ್ದರು ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ಕೆಟಿ ಕುಮಾರಸ್ವಾಮಿ ಮಾತನಾಡಿ, ನಮ್ಮ ತಂದೆಯವರು ಸಮಾಜದ ಬಗ್ಗೆ ಬಹಳ ಕಾಳಜಿ ಹೊಂದಿದ್ದರು. ಸಮುದಾಯವನ್ನು ಒಗ್ಗೂಡಿಸಿ ರಾಜನಹಳ್ಳಿಯಲ್ಲಿ ವಾಲ್ಮೀಕಿ ಮಠವನ್ನು ಸುಭದ್ರಗೊಳಿಸಿದರು. ನಾಯಕ ಸಮುದಾಯಕ್ಕೆ ಎಸ್‌ಟಿ ಮಿಸಾಲಾತಿಗೆ ಹೋರಾಟ ಮಾಡಿದರು. ಕ್ಷೇತ್ರದಲ್ಲಿ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಗಳನ್ನು ಮಾಡಿದ್ದರು ಎಂದರು.
ಚಳ್ಳಕೆರೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಟಿ.ವೀರೇಶ್, ನಾಯಕ ನೌಕರರ ಮಾಜಿ ಜಿಲ್ಲಾಧ್ಯಕ್ಷ ಬೋರಯ್ಯ, ಕಾರ್ಯಕ್ರಮ ಅಯೋಜಕ ಸೊಂಡೆಕೆರೆ ಶಿವಣ್ಣ, ನ್ಯಾಯವಾದಿ ಎಚ್.ಕಾಂತರಾಜ್, ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು, ಹಿರಿಯ ಮುಖಂಡ ತಿಪ್ಪೇರುದ್ರಪ್ಪ ಹಾಗೂ ತಿಪ್ಪೇಸ್ವಾಮಿ ಮಾತನಾಡಿದರು.ಇದೇ ವೇಳೆ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಸಿಂಚನ ಕೆವಿ ಇವರಿಗೆ ವಿಶೇಷ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎ.ಮುರುಳಿ ,ದಿವಾಕರ ನಾಯಕ, ತಿಪ್ಪೇಸ್ವಾಮಿ,ಗೌರೀಶ್ ನಾಯಕ, ಜೆಬಿ ರಾಜು, ಬಿಜೆಪಿ ಮಾಜಿ ಮಂಡಲ ಅಧ್ಯಕ್ಷ ವಿಶ್ವನಾಥ್ ಸೇರಿದಂತೆ ಸಮುದಾಯದ ಹಲವು ಮುಖಂಡರು ಹಾಜರಿದ್ದರು.