- 1,62,129 ವ್ಯಾಜ್ಯ ಪೂರ್ವ ಪ್ರಕರಣಗಳು ವಿಲೇವಾರಿ,
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಈ ವರ್ಷದ ಮೂರನೇ ರಾಷ್ಟ್ರೀಯ ಲೋಕ ಅದಾಲತ್ ಅನ್ನು ಸೆ.13 ರಂದು ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ತಿಳಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ನ್ಯಾಯಾಂಗ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವರ್ಷದಲ್ಲಿ 4 ರಾಷ್ಟ್ರೀಯ ಲೋಕ ಅದಾಲತ್‌ಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈಗಾಗಲೇ ಮಾರ್ಚ್ 8, ಜುಲೈ 12 ರಂದು ಅದಾಲತ್‌ಗಳು ಯಶಸ್ವಿಯಾಗಿ ನಡೆದಿವೆ. ಇದೀಗ ಸೆ. 13 ರಂದು ಅದಾಲತ್ ಅನ್ನು ಆಯೋಜಿಸ ಲಾಗಿದೆ ಎಂದರು. ಪ್ರತಿಯೊಬ್ಬ ನಾಗರಿಕ ಕೂಡ ಗೌರವ, ಘನತೆಯಿಂದ ಬದುಕಬೇಕು ಎನ್ನುವುದು ನಮ್ಮ ಸಂವಿಧಾನದ ಆಶಯ. ಸಮಾಜದಲ್ಲಿರುವ ಎಷ್ಟೋ ಮಂದಿ ಬಡವರು, ಅನಕ್ಷರಸ್ಥರು, ಅಂಗವಿಕಲರು, ಮಹಿಳೆಯರು, ಮಕ್ಕಳು ಇವರಿಗೆಲ್ಲ ನ್ಯಾಯ ಸಿಗುವುದು ಕಠಿಣವಾಗಿದೆ. ಸುಲಭದಲ್ಲಿ ನ್ಯಾಯ ಒದಗಿಸುವ ಸಲುವಾಗಿ ಅಸ್ತಿತ್ವಕ್ಕೆ ಬಂದಿರುವ ಕಾನೂನು ಸೇವೆಗಳ ಪ್ರಾಧಿಕಾರದ ಕಾಯ್ದೆಯಡಿ ಲೋಕ ಅದಾಲತ್ ಅನ್ನು ನಡೆಸಲಾಗುತ್ತಿದೆ.ಪ್ರತಿಯೊಬ್ಬರಿಗೂ ಅವರಿಗಿರುವ ಹಕ್ಕುಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಈಗಾಗಲೇ ಕಾನೂನು ಸೇವಾ ಪ್ರಾಧಿಕಾರದಿಂದ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ, ಮಕ್ಕಳು, ಮಹಿಳೆಯರು, ಅಂಗವಿಕಲರ ಹಕ್ಕುಗಳು, ಪರಿಶಿಷ್ಟ ಜಾತಿ, ಪಂಗಡದವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಲಾಗಿದೆ ಎಂದು ಹೇಳಿದರು. ಜು.12 ರಂದು ನಡೆದ ಲೋಕ ಅದಾಲತ್‌ನಲ್ಲಿ ನ್ಯಾಯಾಲಯದಲ್ಲಿ ಬಾಕಿ ಇರುವ ಒಟ್ಟು 4,498 ಪ್ರಕರಣಗಳನ್ನು ಮಾತ್ರವಲ್ಲದೆ, ಸುಮಾರು 1,62,129 ವ್ಯಾಜ್ಯ ಪೂರ್ವ ಪ್ರಕರಣಗಳ ವಿಲೇವಾರಿ ಮಾಡಲಾಗಿದೆ. ಲೋಕ ಅದಾಲತ್‌ನಿಂದ ಖರ್ಚಿಲ್ಲದೆ ಶೀಘ್ರ ನ್ಯಾಯ ದೊರೆಯುತ್ತದೆ. ಜೊತೆಗೆ ಸಮಯ ಉಳಿತಾಯವಾಗಲಿದ್ದು, ಕಕ್ಷಿದಾರರಲ್ಲಿ ಪರಸ್ಪರ ಬಾಂಧವ್ಯ ಉಳಿಯಲಿದೆ ಎಂದು ತಿಳಿಸಿದರು.ಕಾಯಂ ಜನತಾ ನ್ಯಾಯಾಲಯದ ವ್ಯಾಪ್ತಿಗೆ ಸರಕು ಸಾಗಣೆ, ಭೂ ಸಾರಿಗೆ, ಜಲಸಾರಿಗೆ, ಅಂಚೆ ಮತ್ತು ತಂತಿ ವ್ಯವಸ್ಥೆ, ದೂರವಾಣಿ ಸೌಲಭ್ಯ, ವಿದ್ಯುತ್ ಮತ್ತು ನೀರು ಸರಬರಾಜು, ಸಾರ್ವಜನಿಕ ನೈರ್ಮಲ್ಯ, ಆಸ್ಪತ್ರೆ, ವಿಮಾ ಸೇವೆ, ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆ, ಶಿಕ್ಷಣ ಮತ್ತು ಶಿಕ್ಷಣ ಸಂಸ್ಥೆ, ರಿಯಲ್ ಎಸ್ಟೇಟ್‌ಗಳಿಗೆ ಸಂಬಂಧಪಟ್ಟ ಸೇವೆಗಳು ಒಳಪಟ್ಟಿವೆ. ಸಂಬಂಧಿಸಿದ ವೆಬ್‌ಸೈಟ್ ಮೂಲಕ ಯಾವುದೇ ಶುಲ್ಕವಿಲ್ಲದೆ ಅರ್ಜಿ ಸಲ್ಲಿಸಿ ಪ್ರಕರಣ ಇತ್ಯರ್ಥಪಡಿಸಬಹುದು. ಈ ಜಿಲ್ಲೆಗೆ ಸಂಬಂಧಪಟ್ಟಂತೆ ಕಾಯಂ ಜನತಾ ನ್ಯಾಯಾಲಯ ಮಂಗಳೂರಿನ ಕೊಡಿಯಾಲ ಬೈಲ್‌ನಲ್ಲಿದೆ ಎಂದು ಮಾಹಿತಿ ನೀಡಿದರು. ಮಧ್ಯಸ್ಥಿಕೆಯಲ್ಲಿ ಕೂಡ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಅವಕಾಶವಿದ್ದು, 90 ದಿನಗಳ ಕಾಲ ಅಂದರೆ ಜು.1 ರಿಂದ ಅ. 6 ರವರೆಗೆ ಮಧ್ಯಸ್ಥಿಕೆ ಮೂಲಕ ಪ್ರಕರಣಗಳ ವಿಲೇವಾರಿ ಮಾಡಲು ಆಂದೋಲನ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಮಧ್ಯಸ್ಥಿಕೆ ಮೂಲಕ 31 ಪ್ರಕರಣಗಳಲ್ಲಿ ರಾಜಿ ಸಂಧಾನ ನಡೆಸಲಾಗಿದೆ ಎಂದು ತಿಳಿಸಿದರು. ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಸುಜೇಂದ್ರ ಮಾತನಾಡಿ, ನ್ಯಾಯ ಅರಸಿ ಬರುವ ಕಕ್ಷಿದಾರರೇ ಆಸಕ್ತಿ ವಹಿಸಿದಲ್ಲಿ ಲೋಕ ಅದಾಲತ್‌ನಲ್ಲಿ ಪ್ರಕರಣಗಳು ಇತ್ಯರ್ಥಗೊಳ್ಳಲು ಸಾಧ್ಯ. ಮನುಷ್ಯ ಸ್ವತಃ ಸಂಘರ್ಷ ಜೀವಿಯಾಗಿದ್ದು, ನ್ಯಾಯಾಲಯದಲ್ಲಿ ನಡೆಯುವ ಪ್ರಕರಣಗಳಲ್ಲಿ ಒಬ್ಬರಿಗೆ ಸೋಲು, ಇನ್ನೊಬ್ಬರಿಗೆ ಗೆಲುವು ಸಹಜ. ಈ ಹಿನ್ನೆಲೆಯಲ್ಲಿ ಕಕ್ಷಿದಾರರು ಈ ನಿಟ್ಟಿನಲ್ಲಿ ಮಧ್ಯಸ್ಥಿಕೆಯಲ್ಲಿ ವಿವಾದ ಬಗೆಹರಿಸುವುದರಿಂದ ಸೋಲು-ಗೆಲುವಿನ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಭಾನುಮತಿ, ನ್ಯಾಯಾಧೀಶರಾದ ದ್ಯಾವಪ್ಪ, ವಿ.ಪ್ರಕಾಶ್, ರಾಘವೇಂದ್ರ ಕುಲಕರ್ಣಿ, ಅನುರಾಧ, ಶರತ್ ಕುಮಾರ್, ನಂದಿನಿ, ವಕೀಲರು ಹಾಗೂ ಕಕ್ಷಿದಾರರು ಭಾಗವಹಿಸಿದ್ದರು,ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ ಸ್ವಾಗತಿಸಿದರು. 1 ಕೆಸಿಕೆಎಂ 1ಜಿಲ್ಲಾ ನ್ಯಾಯಾಲಯ ಸಂಕೀರ್ಣ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಉದ್ಘಾಟಿಸಿದರು.