ಜೀತಕ್ಕಾಗಿ ಸೆರೆಯಲ್ಲಿದ್ದ 32 ಮಂದಿ ರಕ್ಷಣೆ

KannadaprabhaNewsNetwork |  
Published : Sep 06, 2026, 01:45 AM IST
5ಸಿಎಚ್‌ಎನ್‌55ಹನೂರು ತಾಲೂಕಿನ ಗಂಗನದೊಡ್ಡಿ ಗ್ರಾಮದಲ್ಲಿ ಅಕ್ರಮ ಬಂಧನದಲ್ಲಿದ್ದ ಕೂಲಿಗಳು. | Kannada Prabha

ಸಾರಾಂಶ

ಕೆಲಸದ ಆಸೆ ತೋರಿಸಿ ಅಮಾಯಕರನ್ನು ಅಕ್ರಮ ಬಂಧನದಲ್ಲಿಟ್ಟು ಜೀತಕ್ಕೆ ದೂಡುತ್ತಿದ್ದ ಅಮಾನವೀಯ ಜಾಲವೊಂದು ತಾಲೂಕಿನ ರಾಮಾಪುರ ಠಾಣಾ ವ್ಯಾಪ್ತಿಯ ಗಂಗನದೊಡ್ಡಿ ಗ್ರಾಮದಲ್ಲಿ ಬಯಲಾಗಿದೆ.

ಕನ್ನಡಪ್ರಭ ವಾರ್ತೆ ಹನೂರು

ಕೆಲಸದ ಆಸೆ ತೋರಿಸಿ ಅಮಾಯಕರನ್ನು ಅಕ್ರಮ ಬಂಧನದಲ್ಲಿಟ್ಟು ಜೀತಕ್ಕೆ ದೂಡುತ್ತಿದ್ದ ಅಮಾನವೀಯ ಜಾಲವೊಂದು ತಾಲೂಕಿನ ರಾಮಾಪುರ ಠಾಣಾ ವ್ಯಾಪ್ತಿಯ ಗಂಗನದೊಡ್ಡಿ ಗ್ರಾಮದಲ್ಲಿ ಬಯಲಾಗಿದೆ.

ರೈಲ್ವೆ ಮತ್ತು ಬಸ್ ನಿಲ್ದಾಣಗಳಲ್ಲಿ ಭಿಕ್ಷೆ ಬೇಡುತ್ತಿದ್ದ ಹಾಗೂ ಕೆಲಸಕ್ಕಾಗಿ ಅಲೆದಾಡುತ್ತಿದ್ದ 32 ಜನರನ್ನು ರಕ್ಷಿಸಲಾಗಿದೆ. ತಮಿಳುನಾಡು ಮೂಲದ ಷಣ್ಮುಖ ಎಂಬಾತ ತಮಿಳುನಾಡು, ಆಂಧ್ರಪ್ರದೇಶದ ರೈಲ್ವೆ, ಬಸ್ ನಿಲ್ದಾಣಗಳಲ್ಲಿ ಸುತ್ತಾಡಿ ನಿಮಗೆ ಒಳ್ಳೆಯ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿ ಕರೆತಂದು, ಗಂಗನದೊಡ್ಡಿಯ ನಿರ್ಜನ ಪ್ರದೇಶದಲ್ಲಿ ಅಕ್ರಮವಾಗಿ ಬಂಧಿಸಿ ಬೆದರಿಸಿ ಕೂಲಿ ಕೆಲಸ ಮಾಡಿಸುತ್ತಿದ್ದರು ಎಂದು ಕೂಲಿ ಕಾರ್ಮಿಕರು ಆರೋಪಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ರಾಮಾಪುರ ಪೊಲೀಸರು ಮತ್ತು ರೈತ ಸಂಘದ ಮುಖಂಡರು ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ರಕ್ಷಿಸಿದ್ದಾರೆ. ರಕ್ಷಿಸಲ್ಪಟ್ಟವರು ತಮಿಳುನಾಡಿನ ವಿಲ್ಲುಪುರಂನ ರಾಮಲಿಂಗಂ, ಚಿದಂಬರಂನ ವಿಜಯ್, ದಿಂಡಿಗಲ್‌ನ ಮೀನಾ, ಚೆಂಗಲ್ಪಟ್ಟುವಿನ ಕನ್ನಿಯಮ್ಮ, ವೃದ್ಧಾಚಲಂನ ಸೆಲ್ವಿ, ಪೆರಂಬಲೂರಿನ ಪೆರಿಯಸಾಮಿ, ಕಳ್ಳಕುರಿಚಿಯ ಪಳನಿ, ಶ್ರೀರಂಗಂನ ಬಾಬು, ತೇಣಿಯ ಕಾರ್ತಿಕ್, ಕಳ್ಳಕುರಿಚಿಯ ಕುಮಾರ್, ತಿರುಚ್ಚಿಯ ರಾಜಕುಮಾರ್, ತೆಂಕಾಶಿಯ ಆರುಮುಗಂ, ದಿಂಡಿಗಲ್‌ನ ಮಾರಿಮುತ್ತು, ವೆಲ್ಲೂರಿನ ಮಂಜುನಾಥ್, ತಿರುವಣ್ಣಾಮಲೈನ ಜಾನ್, ಚಿರಾಳದ ಮೋಹನರಾಜು, ಕಳ್ಳಕುರಿಚಿಯ ಮುರುಗನ್, ತಂಜಾವೂರಿನ ಪ್ರತೀಶ್ ಕುಮಾರ್, ತಿರುಚಿಯ ಮಹಾಲಕ್ಷ್ಮಿ, ಪಾಂಡಿಚೇರಿಯ ರಾಜು, ಅರುಣಾಗಿರಿಯ ರಾಮಮೂರ್ತಿ, ನಾಮಕಲ್ಲುವಿನ ಕಾಮರಾಜು, ತಿರುವಣ್ಣಾಮಲೈನ ಮುರುಗನ್, ಸಿರ್ಕಾಳಿಯ ತಿರುಮುರುಗನ್ ಮತ್ತು ಬಿಹಾರದ ವಿಕಾಸ್ ಕುಮಾರ್ ಎಂದು ಗುರುತಿಸಲಾಗಿದೆ.

ಕೂಲಿಯೂ ಇಲ್ಲ, ವಸತಿಯೂ ಇಲ್ಲ, ಪ್ರಾಣಿಗಳಂತೆ ಹಿಂಸೆ:

ಕಳೆದ ಒಂದು ವರ್ಷದಿಂದ ಯಾವುದೇ ಕೂಲಿ ನೀಡದೆ ಪ್ರಾಣಿಗಳಂತೆ ದುಡಿಸಿಕೊಳ್ಳಲಾಗಿದೆ. ಮಲಗಲು ಸರಿಯಾದ ವ್ಯವಸ್ಥೆ ಇರಲಿಲ್ಲ, ಎಲ್ಲೆಂದರಲ್ಲಿ ಮಲಗಿಸುತ್ತಿದ್ದರು. ದಿನವಿಡೀ ದುಡಿದು ಬರುತ್ತಿದ್ದವರಿಗೆ ಉಪ್ಪು-ಖಾರವಿಲ್ಲದ ರುಚಿಯಿಲ್ಲದ ಊಟ ನೀಡಿ ಹಿಂಸಿಸುತ್ತಿದ್ದರು. ಊರಿಗೆ ಹೋಗುತ್ತೇವೆ ಎಂದರೆ ಹಲ್ಲೆ ನಡೆಸುತ್ತಿದ್ದರು ಎಂದು ಸ್ಥಳೀಯ ರೈತ ಮುಖಂಡ ಅಮ್ಜದ್ ಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

6 ಮಂದಿ ವಿರುದ್ಧ ಎಫ್ಐಆರ್:

ಹನೂರು ತಾಲೂಕಿನ ರಾಮಾಪುರ ಹೋಬಳಿ ಗಂಗನದೊಡ್ಡಿ ಗ್ರಾಮದಲ್ಲಿ ಅಕ್ರಮವಾಗಿ ಕೂಲಿ ಕಾರ್ಮಿಕರನ್ನು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದ್ದ 32 ಮಂದಿಯನ್ನು ಪೊಲೀಸರು ರಕ್ಷಿಸಿ ಪ್ರಕರಣ ದಾಖಲಿಸಿದ್ದಾರೆ.

ಈ ಪ್ರಕರಣದ ಪ್ರಮುಖ ಆರೋಪಿ ಷಣ್ಮುಗಂ ಆಗಿದ್ದು, ಆತನ ಸಹಚರರಾದ ರೂಬಿ (39), ರಂಜಿತಾ (29), ಸರವಣನ್ (37), ಕಾರ್ತಿಕ್ (35), ಅಪರಿಚಿತನ ವಿರುದ್ಧ ಪ್ರಕರಣ ದಾಖಲಾಗಿದೆ.

ರಾಮಾಪುರ ಹೋಬಳಿಯ ರಾಜಸ್ವ ನಿರೀಕ್ಷಕ ಶಿವಕುಮಾರ್ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ, ಪುರುಷೋತ್ತಮ್ ಅವರ ಜಮೀನಿನಲ್ಲಿ ಪರಿಶೀಲನೆ ನಡೆಸಿದಾಗ ಪ್ರಕರಣ ಪತ್ತೆಯಾಗಿದೆ.

ಕಬ್ಬು ಕಟಾವು ಮಾಡುವ ಸಲುವಾಗಿ ತಮಿಳುನಾಡಿನ 30 ಜನ, ಆಂಧ್ರಪ್ರದೇಶದ ಒಬ್ಬರು ಮತ್ತು ಬಿಹಾರ ರಾಜ್ಯದ ಒಬ್ಬರು ಸೇರಿ ಒಟ್ಟು 32 ಜನರನ್ನು ಷಣ್ಮುಗಂ ತಮಿಳುನಾಡಿನ ವಿವಿಧ ಗ್ರಾಮಗಳಿಂದ ಕರೆತಂದು ಕೂಲಿ ಕೆಲಸಕ್ಕೆ ನಿಯೋಜಿಸಿದ್ದನು.

ಈ ಕುರಿತು ರಾಜಸ್ವ ನಿರೀಕ್ಷಕರು ರಾಮಾಪುರ ಠಾಣೆಗೆ ದೂರು ನೀಡಿದ್ದು, ಜೀತ ಪದ್ಧತಿ ನಿರ್ಮೂಲನಾ ಕಾಯ್ದೆ 1976ರ ಕಲಂ 16, 17, 18, ಬಾಂಡೆಡ್ ಲೇಬರ್ ಆಕ್ಟ್ ಮತ್ತು ಮಾನವ ಕಳ್ಳಸಾಗಾಣಿಕೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಪೊಲೀಸರು ಕೂಡ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಅಕ್ರಮವಾಗಿ ಈ ರೀತಿ ದುಡಿಸಿಕೊಳ್ಳುವುದು ಅಪರಾಧವಾಗಿದ್ದು ಈ ಬಗ್ಗೆ ತಾಲೂಕು ಆಡಳಿತ ಜಾಗೃತಿ ಮೂಡಿಸಲಿದೆ ಎಂದು ಹನೂರು ತಹಸೀಲ್ದಾರ್ ಚೈತ್ರಾ ಮಾಹಿತಿ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನ ಕೊಟ್ಟ ಅರ್ಜಿಗಳು ಕಚೇರಿಗಳಲ್ಲೇ ಕೊಳೆಯಬಾರದು
ಶಿಕ್ಷಕರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ