ಕನ್ನಡಪ್ರಭ ವಾರ್ತೆ ಮಂಗಳೂರು
ಕೇರಳ ಕರಾವಳಿಗೆ ಮೊದಲ ಬಾರಿ ಲಭಿಸಿದ ತಿರುವನಂತಪುರ-ಕಾಸರಗೋಡು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕೆಲವೇ ದಿನಗಳಲ್ಲಿ ಮಂಗಳೂರಿಗೆ ವಿಸ್ತರಣೆಗೊಳ್ಳಲಿದೆ. ಮಂಗಳೂರು-ಮಡ್ಗಾಂವ್ ನಡುವೆ ಶನಿವಾರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದ ಬೆನ್ನಲ್ಲೇ ಈಗ ಕೇರಳ ರೈಲು ಕರ್ನಾಟಕದ ಕರಾವಳಿಗೆ ವಿಸ್ತರಣೆಗೊಳ್ಳುವ ಪ್ರಸ್ತಾಪ ಬಂದಿದೆ. ಕೇರಳಕ್ಕೆ ಎರಡು ವಂದೇ ಭಾರತ್ ರೈಲು ಮಂಜೂರಾದರೂ ಕರ್ನಾಟಕ ಕರಾವಳಿಗೆ ಹೊಸ ರೈಲಿಗೆ ಭಾರಿ ಬೇಡಿಕೆ ವ್ಯಕ್ತಗೊಂಡಿತ್ತು. ತಿರುವನಂತಪುರ-ಕಾಸರಗೋಡು ವಂದೇ ಭಾರತ್ ರೈಲನ್ನು ಮಂಗಳೂರಿಗೆ ವಿಸ್ತರಿಸುವಂತೆ ಬಹಳ ಬೇಡಿಕೆ ಕೇಳಿಬಂದಿತ್ತು. ಕೊನೆಗೂ ಮಂಗಳೂರು-ಮಡ್ಗಾಂವ್ ನಡುವೆ ವಂದೇ ಭಾರತ್ ಓಡಾಟಕ್ಕೆ ಹಸಿರು ನಿಶಾನೆ ಸಿಕ್ಕಿತ್ತು. ಇದೇ ವೇಳೆ ಕಾಸರಗೋಡು ರೈಲನ್ನು ಮಂಗಳೂರಿಗೆ ವಿಸ್ತರಿಸಬೇಕು, ಕೊಚ್ಚಿನ್-ಮಂಗಳೂರು ನಡುವೆ ವಂದೇ ಭಾರತ್ ಸಂಚಾರ ನಡೆಸುವಂತೆ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದರು. ಇದಕ್ಕೆ ರೈಲ್ವೆ ಸಚಿವರು ಕೂಡ ಸಕಾರಾತ್ಮಕ ಸ್ಪಂದಿಸಿದ್ದರು. ತಿರುವನಂತಪುರ- ಕಾಸರಗೋಡು ವಂದೇ ಭಾರತ್ ರೈಲಿಗೆ ಕಾಸರಗೋಡಿನಲ್ಲಿ ಕೋಚ್ ನಿರ್ವಹಣೆಗೆ ಸೌಲಭ್ಯದ ಕೊರತೆ ಇದೆ. ಲೋಕೋ ಪೈಲಟ್‌ಗಳಿಗೆ ವಿಶ್ರಾಂತಿಗೂ ಸೂಕ್ತ ವ್ಯವಸ್ಥೆ ಇಲ್ಲ. ವಂದೇ ಭಾರತ್ ರೈಲನ್ನು ಶುಚಿಗೊಳಿಸಲು ಮಾತ್ರ ನೀರಿನ ವ್ಯವಸ್ಥೆ ಬಿಟ್ಟರೆ ಬೇರೆ ಯಾವುದೇ ನಿರ್ವಹಣೆಯ ಸೌಲಭ್ಯ ಇಲ್ಲ. ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ತಂತ್ರಜ್ಞರು, ಸಿಬ್ಬಂದಿ ಇದಕ್ಕಾಗಿ ಕಾಸರಗೋಡಿಗೆ ತೆರಳಬೇಕಾಗುತ್ತದೆ. ಈ ತೊಂದರೆ ತಪ್ಪಿಸಲು ಹಾಗೂ ಪ್ರಯಾಣಿಕರ ಬೇಡಿಕೆಯನ್ನು ಲಕ್ಷ್ಯದಲ್ಲಿರಿಸಿ ಈ ವಂದೇ ಭಾರತ್ ರೈಲನ್ನು ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸುವ ಬಗ್ಗೆ ರೈಲ್ವೆ ಉನ್ನತಾಧಿಕಾರಿಗಳ ಮಟ್ಟದಲ್ಲಿ ಚಿಂತನೆ ನಡೆಸಲಾಗಿದೆ. ಇದು ಸಾಕಾರಗೊಂಡರೆ ಕಾಸರಗೋಡು-ಮಂಗಳೂರು ನಡುವಿನ 46 ಕಿ.ಮೀ. ಕ್ರಮಿಸಲು 45 ನಿಮಿಷ ಬೇಕಾಗಿದ್ದು, ತಿರುವನಂತಪುರ-ಕಾಸರಗೋಡು ವಂದೇ ಭಾರತ್ ರೈಲಿನ ವೇಳಾಪಟ್ಟಿಯೂ ಬದಲಾಗಲಿದೆ.