ಇತಿಹಾಸದಲ್ಲಿ ಇದೇ ಮೊದಲ ಬಾರಿ ಹರಿವು ನಿಲ್ಲಿಸಿದ ಹೇಮಾವತಿ ನದಿ

KannadaprabhaNewsNetwork |  
Published : Apr 13, 2024, 01:08 AM ISTUpdated : Apr 13, 2024, 12:48 PM IST
12ಎಚ್ಎಸ್ಎನ್9 : ಹೆನ್ನಲಿ ಗ್ರಾಮ ಸಮೀಪ ಹೇಮಾವತಿನದಿ ಒಡಲು ಬರಿದಾಗಿರುವುದು. | Kannada Prabha

ಸಾರಾಂಶ

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹೇಮಾವತಿ ನದಿ ತನ್ನ ಹರಿವನ್ನು ನಿಲ್ಲಿಸಿದೆ. ಜಾವಳಿ ಗ್ರಾಮದ ಕಾಫಿ ತೋಟದಲ್ಲಿ ಹುಟ್ಟುವ ಹೇಮಾವತಿ ನದಿ ಪಟ್ಟಣ ಸಮೀಪಿಸುವ ವೇಳೆಗೆ ಜಪವತಿ ಸೇರಿದಂತೆ 10  ಕ್ಕೂ ಅಧಿಕ ಉಪನದಿಗಳ ಸಂಗಮವಾಗುತ್ತಿದೆ.

ಶ್ರೀವಿದ್ಯಾಸಕಲೇಶಪುರ

 ಸಕಲೇಶಪುರ :  ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹೇಮಾವತಿ ನದಿ ತನ್ನ ಹರಿವನ್ನು ನಿಲ್ಲಿಸಿದೆ. ಮೂಡಿಗೆರೆ ತಾಲೂಕಿನ ಜಾವಳಿ ಗ್ರಾಮದಲ್ಲಿ ಹುಟ್ಟಿ 245   ಕಿ.ಮೀ ದೂರ ಹರಿದು ಕೆ.ಆರ್. ಪೇಟೆ ತಾಲೂಕಿನ ಅಂಬಿಗರಹಳ್ಳಿ ಗ್ರಾಮ ಸಮೀಪ ಕಾವೇರಿ ನದಿ ಸೇರುವ ಹೇಮಾವತಿ ಕಾವೇರಿ ನದಿಯ ಪ್ರಮುಖ ಉಪನದಿ.

ಜಾವಳಿ ಗ್ರಾಮದ ಕಾಫಿ ತೋಟದಲ್ಲಿ ಹುಟ್ಟುವ ಹೇಮಾವತಿ ನದಿ ಪಟ್ಟಣ ಸಮೀಪಿಸುವ ವೇಳೆಗೆ ಜಪವತಿ ಸೇರಿದಂತೆ 10 ಕ್ಕೂ ಅಧಿಕ ಉಪನದಿಗಳ ಸಂಗಮವಾಗುತ್ತಿದೆ. ಆದರೆ, ಕಳೆದ ಬಾರಿಯ ವಾಡಿಕೆ ಮಳೆಯ ಕೊರತೆ, ಈ ಬಾರಿಯ ಅಧಿಕ ಉಷ್ಣಾಂಶ ಪಶ್ಚಿಮಘಟ್ಟದಿಂದ ಹುಟ್ಟಿ ಹರಿಯುವ ಉಪನದಿಗಳ ಜಲಮೂಲವನ್ನು ಬತ್ತಿಸಿರುವುದರಿಂದ ಹೇಮಾವತಿ ನದಿಯು ಬತ್ತಲು ಪ್ರಮುಖ ಕಾರಣವಾಗಿದೆ.

ಇತಿಹಾಸದಲ್ಲಿ ಇದೇ ಮೊದಲು:

ಹೇಮಾವತಿ ನದಿ ಸಂಪೂರ್ಣ ಹರಿವು ನಿಲುಗಡೆಯಾಗಿರುವುದು ಇದೇ ಮೊದಲಾಗಿದ್ದು, ಅರ್ಧ ದಶಕದ ಅವಧಿಯಲ್ಲಿ ಏಳು ಬಾರಿ ಮಲೆನಾಡಿನಲ್ಲಿ ಬರಗಾಲದ ಸ್ಥಿತಿ ಎದುರಾಗಿದೆ. 1974 ,  1978 ,  1986 ,  1998 , 2003  ಹಾಗೂ 2017 ರಲ್ಲಿ ಮಳೆ ಕೊರತೆಯಾದರೂ ಹೇಮಾವತಿ ನದಿಯ ಹರಿವು ನಿಲುಗಡೆಯಾಗಿರಲಿಲ್ಲ. ಪಟ್ಟಣಕ್ಕೆ ನೀರು ಪೊರೈಸುವ ಚೆಕ್ ಡ್ಯಾಂವರೆಗೆ ಅಲ್ಪ ಪ್ರಮಾಣದಲ್ಲಿ ನೀರಿನ ಹರಿವಿದೆ.

ಅಧಿಕಾರಿಗಳ ಸಾಸಹ:

ತಾಲೂಕಿನ ಹೆನ್ನಲಿ ಗ್ರಾಮ ಸಮೀಪ ಪಟ್ಟಣಕ್ಕೆ ನೀರು ಪೊರೈಸಲು ಚೆಕ್‌ಡ್ಯಾಂ ನಿರ್ಮಾಣ ಮಾಡಲಾಗಿದೆ. ಆದರೆ, ಡ್ಯಾಂನಲ್ಲಿ ಕೇವಲ ಮೂರರಿಂದ ನಾಲ್ಕು ಅಡಿಗಳಷ್ಟು ನೀರಿನ ಸಂಗ್ರಹವಿದ್ದು ಮೋಟರ್‌ಗಳಿಗೆ ನೀರು ದೊರೆಯದಾಗಿದೆ. ಇದರಿಂದಾಗಿ ಕಳೆದ ಎರಡು ದಿನಗಳಿಂದ ಪುರಸಬೆ ಅಧಿಕಾರಿಗಳು ಪಟ್ಟಣಕ್ಕೆ ನೀರು ಪೊರೈಕೆಗಾಗಿ ಕಸರತ್ತು ಮಾಡುತ್ತಿದ್ದು ಬಾವಿಯಲ್ಲಿ ಸಂಗ್ರಹವಾಗಿರುವ ನೀರನ್ನು ಮೋಟರ್‌ನಿಂದ ನದಿ ಸಮೀಪದ ಮತ್ತೊಂದು ಬಾವಿಗೆ ಡಂಪ್‌ಮಾಡಿ. ಅಲ್ಲಿಂದ ಟ್ಯಾಂಕಿಗೆ ನೀರು ಪೊರೈಸಲಾಗುತ್ತಿದ್ದು ಚೆಕ್ ಡ್ಯಾಂವರೆಗೆ ನದಿಯಲ್ಲಿ ನೀರಿನ ಹರಿವು ಕ್ಷೀಣವಾಗಿ ಹರಿಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನದಿಯ ವಿಶೇಷ:

ಉತ್ತರ ಭಾರತದ ಗಂಗಾನದಿಯನ್ನು ಹೊರತುಪಡಿಸಿದರೆ ದೋಣಿ ವಿಹಾರಕ್ಕೆ ಯೋಗ್ಯವಾಗಿರುವ ನದಿ ಎಂದರೆ ಹೇಮಾವತಿ ಎಂಬ ಮಾತಿದ್ದು ಹುಟ್ಟಿದ ಪ್ರದೇಶದಿಂದ ಸೇರುವ ಸ್ಥಳದವರಗೂ ಎಲ್ಲಿಯು ಒಂದಡಿಯೂ ಜಿಗಿಯದ ಈ ನದಿಯ ಹರಿವು ನಿಗೂಢ. ಮೇಲ್ಮೈನಲ್ಲಿ ನಿಂತಿರುವಂತೆ ಕಂಡರೂ ಒಳಭಾಗದಲ್ಲಿ ಭಾರಿ ವೇಗದಲ್ಲಿ ಹರಿಯುವುದು ಇದರ ವಿಶೇಷ. ಮೇಲ್ಮೈನಲ್ಲಿ ನೀರು ನಿಧಾನಗತಿಯಲ್ಲಿ ಹರಿಯುವುದರಿಂದ ಈ ನದಿಯನ್ನು ಮೂಡಿಗೆರೆ ಹಾಗೂ ಸಕಲೇಶಪುರ ತಾಲೂಕಿನ ಗ್ರಾಮೀಣ ಭಾಗದಲ್ಲಿ ಜನರು ಎಣ್ಣೆಹೊಳೆ ಎಂದು ಕರೆಯುತ್ತಾರೆ.

ಪ್ರತೀತಿ:

ಹೇಮಾವತಿ ನದಿ ಹಾಗೂ ಎತ್ತಿನಹಳ್ಳ ಅಕ್ಕತಂಗಿಯರು ಎಂಬ ಪ್ರತೀತಿ ಇದ್ದು ಎರಡು ನದಿಗಳು ಒಂದೆಡೆ ತಂಗಿದ್ದ ವೇಳೆ ಎತ್ತಿನಹಳ್ಳ ನಿದ್ರೆಗೆ ಜಾರಿತ್ತು. ಈ ವೇಳೆ ಎಚ್ಚೆತ್ತ ಹೇಮಾವತಿ ನದಿ ನಿಧಾನವಾಗಿ ಪೂರ್ವಾಭಿಮುಖವಾಗಿ ಹರಿಯಲಾರಂಭಿಸಿತ್ತು. ನಿದ್ರೆಯಿಂದ ಎಚ್ಚೆತ್ತ ಎತ್ತಿನಹಳ್ಳ ಹೇಮಾವತಿ ಸೇರುವ ಬಯಕೆಯಿಂದ ಪಶ್ಚಿಮಾಭಿಮುಖವಾಗಿ ಹರಿಯಲಾರಂಭಿಸಿತ್ತು. ಅಂದಿನಿಂದ ಈ ಎರಡು ನದಿಗಳು ಸಂಗಮಿಸಲು ಸಾಧ್ಯವಾಗಿಲ್ಲ ಎಂಬ ಕಥೆ ಮಲೆನಾಡಿನಲ್ಲಿದೆ.

ಚೆಕ್ ಡ್ಯಾಂನಲ್ಲಿ ನೀರಿನ ಸಂಗ್ರಹ ಕ್ಷೀಣವಾಗಿರುವುದರಿಂದ ನದಿಯ ಮದ್ಯಭಾಗಲ್ಲಿರುವ ಬಾವಿಗೆ ಮೋಟರ್ ಇಟ್ಟು ನೀರೆತ್ತಲಾಗುತ್ತಿದೆ. ಮಳೆಯಾಗದಿದ್ದರೆ ನೀರು ಪೂರೈಕೆ ಕಷ್ಟವಾಗಲಿದೆ.

ರಮೇಶ್, ಮುಖ್ಯಾಧಿಕಾರಿ, ಪುರಸಭೆ.

ಇದೇ ಮೊದಲ ಬಾರಿಗೆ ಹೇಮಾವತಿ ನದಿ ಒಡಲು ಸಂಪೂರ್ಣ ಖಾಲಿಯಾಗಿರುವುದು ದುರದೃಷ್ಟಕರ. ಇದರಿಂದ ಲಕ್ಷಾಂತರ ವಿವಿಧ ಜಾತಿಯ ಜಲಚರಗಳ ನಾಶಕ್ಕೆ ಕಾರಣವಾಗಿದೆ.

ಬನ್ನಹಳ್ಳಿ ಪುನೀತ್, ಅರೆಕೆರೆ ಗ್ರಾಮ, ಉದ್ಯಮಿ.  

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?