ಗೋಣಿಬಸವೇಶ್ವರ ದಾಸೋಹ ಭವನ ನಿರ್ಮಾಣಕ್ಕೆ ಇ ಸ್ವತ್ತು ವಿಘ್ನ

KannadaprabhaNewsNetwork | Published : Apr 1, 2025 12:46 AM

ಸಾರಾಂಶ

ತಾಲೂಕಿನ ಕೂಲಹಳ್ಳಿ ಗ್ರಾಮದಲ್ಲಿ ಪಂಚಗಣಾಧೀಶರಲ್ಲಿ ಒಬ್ಬರಾದ ಮದ್ದಾನೇಶ್ವರರ ಪುತ್ರ, ಪವಾಡ ಪುರುಷ ಗೋಣಿಬಸವೇಶ್ವರ ದೇವಸ್ಥಾನವಿದ್ದು, ಈಚೆಗಂತು ಇಲ್ಲಿಗೆ ಭಕ್ತರ ಮಹಾಪೂರವೇ ಹರಿದು ಬರುತ್ತಿದೆ.

ಧಾರ್ಮಿಕ ದತ್ತಿ ಇಲಾಖೆಯ ಅರ್ಜಿಗೆ ಪಟ್ಟದ ಚಿನ್ಮಯ ಶ್ರೀಗಳು ಆಕ್ಷೇಪ

₹1.40 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು ಚಿಂತನೆ

ಬಿ.ರಾಮಪ್ರಸಾದ್‌ ಗಾಂಧಿ

ಕನ್ನಡಪ್ರಭ ವಾರ್ತೆ ಹರಪನಹಳ್ಳಿ

ತಾಲೂಕಿನ ಕೂಲಹಳ್ಳಿ ಗ್ರಾಮದಲ್ಲಿ ಪಂಚಗಣಾಧೀಶರಲ್ಲಿ ಒಬ್ಬರಾದ ಮದ್ದಾನೇಶ್ವರರ ಪುತ್ರ, ಪವಾಡ ಪುರುಷ ಗೋಣಿಬಸವೇಶ್ವರ ದೇವಸ್ಥಾನವಿದ್ದು, ಈಚೆಗಂತು ಇಲ್ಲಿಗೆ ಭಕ್ತರ ಮಹಾಪೂರವೇ ಹರಿದು ಬರುತ್ತಿದೆ.

ಇಂತಹ ಪುರಾತನ ಇತಿಹಾಸಯುಳ್ಳ ಗೋಣಿಬಸವೇಶ್ವರ ಭಕ್ತರಿಗೆ ಹಿಂದೂ ಧಾರ್ಮಿಕ ದತ್ತಿ ಇಲಾಖೆ ದಾಸೋಹ ನೀಡುತ್ತಿದೆ. ಪ್ರತಿ ಅಮಾವಾಸ್ಯೆ, ಕಾರ್ತಿಕ, ಜಾತ್ರೆ ಸಂದರ್ಭದಲ್ಲಿ ಭಕ್ತಾದಿಗಳಿಗೆ ಅನ್ನ ದಾಸೋಹ ನಡೆಸಲಾಗುತ್ತಿದೆ.

ಪ್ರತಿ ಅಮಾವಾಸ್ಯೆಗೆ ಗೋಣಿಬಸವೇಶ್ವರ ದೇವರ ದರ್ಶನಕ್ಕೆ ಸುಮಾರು 8ರಿಂದ 10 ಸಾವಿರ ಭಕ್ತರು ಆಗಮಿಸುತ್ತಾರೆ. ದಾಸೋಹ ಸ್ವೀಕರಿಸುವಾಗ ನೆಮ್ಮದಿಯಿಂದ ಕುಳಿತು ಊಟ ಮಾಡಲೆಂದು ಧಾರ್ಮಿಕ ದತ್ತಿ ಇಲಾಖೆಯವರು ದಾಸೋಹ ಭವನ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದರು. ಸದ್ಯ ತಾತ್ಕಾಲಿಕವಾಗಿ ಶೆಡ್‌ ಹಾಕಿ ಇಕ್ಕಟ್ಟಿನ ಜಾಗದಲ್ಲಿ ಅನ್ನ, ಸಾಂಬರು ಬಡಿಸಲಾಗುತ್ತಿದೆ. ಭಕ್ತರು ಸರತಿ ಸಾಲು ಆದರೂ ನೂಕು ನುಗ್ಗಲಿನಿಂದ ತಟ್ಟೆಯಲ್ಲಿ ಹಾಕಿಸಿಕೊಂಡು ಎಲ್ಲೆಂದರೆಲ್ಲಿ ಕುಳಿತು ಪ್ರಸಾದ ಸೇವಿಸುತ್ತಾರೆ.

ಇದನ್ನು ಮನಗಂಡ ಧಾರ್ಮಿಕ ದತ್ತಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಪ್ಪನವರು ದೇವಸ್ಥಾನ ನಿಧಿಯಿಂದ ₹1.40 ಕೋಟಿ ವೆಚ್ಚದಲ್ಲಿ ದೇವಸ್ಥಾನದ ಆವರಣದಲ್ಲಿಯೇ ದಾಸೋಹ ಭವನ ನಿರ್ಮಿಸಲು ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಂದ ಅನುಮೋದನೆ ಪಡೆದು ಸ್ಥಳೀಯ ಗ್ರಾಮ ಪಂಚಾಯಿತಿಗೆ ಗೋಣಿ ಬಸ‍ವೇಶ್ವರ ದೇವರ ಹೆಸರಲ್ಲಿ ಇ ಸ್ವತ್ತು ಪಡೆಯಲು ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿ ಸಲ್ಲಿಸಿ 3-4 ತಿಂಗಳು ಕಳೆದರೂ ಗ್ರಾಪಂಯವರು ಈ ಸ್ವತ್ತು ಕೊಟ್ಟಿಲ್ಲ, ಕಾರಣ ಈ ದೇವಸ್ಥಾನದ ಪಟ್ಟದ ಚಿನ್ಮಯ ಸ್ವಾಮೀಜಿಯವರು ಈ ಸ್ವತ್ತು ನೀಡಲು ಆಕ್ಷೇಪ ವ್ಯಕ್ತಪಡಿಸಿ ಗ್ರಾಪಂಗೆ ಪತ್ರ ನೀಡಿದ್ದಾರೆ.

ಶ್ರೀಗಳ ಆಕ್ಷೇಪ ಬಂದಿದ್ದರಿಂದ ಗ್ರಾಪಂ ಆಡಳಿತ ಮಂಡಳಿ ಸಾಮಾನ್ಯ ಸಭೆಯಲ್ಲಿ ಈ ವಿಚಾರ ಇಟ್ಟು ಚರ್ಚಿಸಿ ತೀರ್ಮಾನಿಸಲು ಧಾರ್ಮಿಕ ದತ್ತಿ ಇಲಾಖೆಯವರ ಅರ್ಜಿಯನ್ನು ಪೆಂಡಿಂಗ್‌ ಇಟ್ಟಿದ್ದಾರೆ.

ದಾಸೋಹ ಭವನ ಕಟ್ಟಿದರೆ ಭಕ್ತರಿಗೆ ನೆಮ್ಮದಿಯಿಂದ ನೆರಳಲ್ಲಿ ಕುಳಿತು ಪ್ರಸಾದ ಸೇವನೆಗೆ ಅನುಕೂಲವಾಗುತ್ತದೆ ಎಂಬುದು ಧಾರ್ಮಿಕ ದತ್ತಿ ಇಲಾಖೆಯವರ ಉದ್ದೇಶವಾಗಿದೆ.

ಮದ್ದಾನೇಶ್ವರ ಟ್ರಸ್ಟ್‌ ಇದೆ, ನಮ್ಮ ಟ್ರಸ್ಟ್‌ಗೆ ಈ ಸ್ವತ್ತು ನೀಡಬೇಕು, ಗೋಣಿಬಸವೇಶ್ವರರ ಹೆಸರಿಗೆ ಈ ಸ್ವತ್ತು ನೀಡಬಾರದು ಎನ್ನುತ್ತಾರೆ ಪಟ್ಟದ ಚಿನ್ಮಯ ಶ್ರೀಗಳು.

ಈ ವಿಚಾರ ಶಾಸಕಿ ಎಂ.ಪಿ. ಲತಾ ರವರ ಗಮನಕ್ಕೂ ಬಂದಿದೆ, ಒಟ್ಟಿನಲ್ಲಿ ಹಣವಿದ್ದರೂ ದಾಸೋಹ ಭವನ ನಿರ್ಮಾಣಕ್ಕೆ ವಿಘ್ನ ಎದುರಾಗಿದೆ, ಶಾಸಕರು, ಗ್ರಾಪಂಯವರು, ಧಾರ್ಮಿಕ ದತ್ತಿ ಇಲಾಖೆಯವರು, ಪಟ್ಟದ ಚಿನ್ಮಯ ಸ್ವಾಮೀಜಿ , ಗ್ರಾಮದ ಹಿರಿಯರು ಸಮಾಲೋಚಿಸಿ ಚರ್ಚಿಸಿ ಸುಸಜ್ಜಿತವಾದ ದಾಸೋಹ ಭವನ ಕಟ್ಟಿದರೆ ಬರುವ ಭಕ್ತರಿಗೆ ಅನುಕೂಲವಾಗುವುದಂತು ಸತ್ಯ.

Share this article