ಕನ್ನಡಪ್ರಭ ವಾರ್ತೆ ಬೆಂಗಳೂರು / ಪೀಣ್ಯ ದಾಸರಹಳ್ಳಿ
ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ಜೆಡಿಎಸ್-ಬಿಜೆಪಿ ಮೈತ್ರಿಯಿಂದ ಕಾಂಗ್ರೆಸ್ ಈ ಚುನಾವಣೆಯಲ್ಲಿ ಧೂಳಿಪಟವಾಗಲಿದೆ. ಜನರಿಗೆ ಕಾಂಗ್ರೆಸ್‌ನ ಪೊಳ್ಳು ಗ್ಯಾರಂಟಿಗಳು ಅರ್ಥವಾಗಿವೆ. ಗ್ಯಾರಂಟಿಗಳಿಂದ ತಮ್ಮನ್ನು ಸಾಲದ ಶೂಲಕ್ಕೆ ಸಿಲುಕಿಸುತ್ತಾರೆ ಎಂಬುದು ಜನರಿಗೆ ಗೊತ್ತಾಗಿದೆ ಎಂದು ವಾಗ್ದಾಳಿ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಜನ ಕಲ್ಯಾಣಕ್ಕೆ ಜಾರಿಗೊಳಿಸಿರುವ ಯೋಜನೆಗಳ ಪರವಾಗಿ ಜನರು ಮತ ಹಾಕಲಿದ್ದಾರೆ. ರಾಜ್ಯಕ್ಕೆ ನರೇಂದ್ರ ಮೋದಿ ಅವರ ಕೊಡುಗೆ ಅಪಾರ. ಎಲ್ಲ ಕ್ಷೇತ್ರಗಳಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದೆ ಸಮನ್ವಯತೆಯಿಂದ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯ ಐದು ವರ್ಷಗಳಲ್ಲಿ ಅನೇಕ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ತಮ್ಮ ಮನೆಯೂ ಇದೇ ಕ್ಷೇತ್ರದಲ್ಲಿದ್ದು, ಕ್ಷೇತ್ರದ ಅಭಿವೃದ್ಧಿಯ ದೂರದೃಷ್ಟಿಯನ್ನು ಅವರು ಹೊಂದಿದ್ದಾರೆ. ಯುವಕರನ್ನು ಒಟ್ಟಾಗಿ ಮುನ್ನಡೆಸುವ ಸೂರ್ಯ ಅವರು ಉತ್ತಮ ಸಂಸದೀಯ ಪಟುವಾಗಿರುವುದು ಸಂತೋಷದ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಶಾಸಕ ಸಿ.ಕೆ.ರಾಮಮೂರ್ತಿ, ಬಿಜೆಪಿ ಮುಖಂಡರಾದ ಎಚ್.ರವೀಂದ್ರ , ಟಿ.ವಿ.ಕೃಷ್ಣ, ವಿಶ್ವನಾಥಗೌಡ, ತುಳಸಿರಾಮ್, ರಮೇಶ್ ಗೌಡ, ಎಸ್.ರಮೇಶ್, ರಾಮಾಂಜನಿ ಸೇರಿದಂತೆ ಬಿಜೆಪಿ-ಜೆಡಿಎಸ್‌ನ ಕಾರ್ಯರ್ಕರು ಉಪಸ್ಥಿತರಿದ್ದರು.ಎಚ್‌ಡಿಕೆ ಪ್ರಚಾರದಿಂದ ಆನೆಬಲ: ತೇಜಸ್ವಿ
ಅಭ್ಯರ್ಥಿ ತೇಜಸ್ವಿ ಸೂರ್ಯ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕ್ಷೇತ್ರದಲ್ಲಿನ ನನ್ನ ಕಾರ್ಯಗಳಿಗೆ ಅನೇಕ ಬಾರಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಜತೆಗೆ ಬೆನ್ನುತಟ್ಟಿ ಪ್ರೋತ್ಸಾಹಿಸಿರುವುದು ನನಗೆ ಶ್ರೀರಕ್ಷೆಯಾಗಿದೆ. ಕುಮಾರಣ್ಣ ಅವರು ಕ್ಷೇತ್ರದಲ್ಲಿ ನನ್ನ ಪರವಾಗಿ ಪ್ರಚಾರಕ್ಕೆ ಬಂದು ಬೆಂಬಲ ಸೂಚಿಸಿರುವುದು ಮತ್ತಷ್ಟು ಆನೆಬಲ ಬಂದಂತಾಗಿದೆ ಎಂದರು.ಜೆಡಿಎಸ್ ಸೇರ್ಪಡೆಯಿಂದ ಎನ್‌ಡಿಎ ಮೈತ್ರಿಕೂಟಕ್ಕೆ ಹೆಚ್ಚಿನ ಬಲ ಬಂದಿದ್ದು, ಈ ಬಾರಿ ರಾಜ್ಯದ ಎಲ್ಲ 28 ಕ್ಷೇತ್ರಗಳೂ ಎನ್‌ಡಿಎ ಪಾಲಾಗುವುದು ನಿಶ್ಚಿತ. ಮೋದಿ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡಲು ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಪರಸ್ಪರ ಹೆಗಲು ಕೊಟ್ಟು ಸಮನ್ವಯತೆಯಿಂದ ಒಟ್ಟಾಗಿ ಶ್ರಮಿಸುತ್ತಿದ್ದಾರೆ. ಬಿಜೆಪಿಯ ಸಂಕಲ್ಪ ಪತ್ರವನ್ನು ಮನೆಮನೆಗೆ ತಲುಪಿಸುತ್ತಿದ್ದಾರೆ. ಪ್ರಧಾನಿ ಮೋದಿ ಅವರು ಕಳೆದ ಹತ್ತು ವರ್ಷಗಳಲ್ಲಿ ಕೈಗೊಂಡ ಮಹತ್ಕಾರ್ಯಗಳನ್ನು ವಿವರಿಸುತ್ತಿದ್ದಾರೆ. ಎಲ್ಲೆಡೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಜನರ ತೀರ್ಪು ಈಗಲೇ ಸ್ಪಷ್ಟವಾಗಿದೆ ಎಂದು ಹೇಳಿದರು.
ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಲ್ಲಿ ಅನೇಕ ಜನಪರ ಕಾರ್ಯಗಳು ಯಶಸ್ವಿಯಾಗಿ ಜಾರಿಗೊಂಡಿವೆ. ರಸ್ತೆ, ಮೆಟ್ರೋ ಸೇರಿದಂತೆ ಮೂಲ ಸೌಕರ್ಯ ಯೋಜನೆಗಳು ಭರದಿಂದ ಸಾಗಿವೆ. ಕೆಲವೇ ತಿಂಗಳಲ್ಲಿ ಮೆಟ್ರೋ ಹಳದಿ ಮಾರ್ಗ ಸಂಚಾರಕ್ಕೆ ಮುಕ್ತವಾಗಲಿದ್ದು, ದಕ್ಷಿಣ ಭಾಗದ ನಾಗರಿಕರಿಗೆ ಇದರಿಂದ ಹೆಚ್ಚು ಅನುಕೂಲವಾಗಲಿದೆ. ಮೆಟ್ರೋ ವಿಸ್ತರಣೆ, ಉಪನಗರ ರೈಲು, ಉಪನಗರ ಹೊರ ವರ್ತುಲ ರಸ್ತೆಯಿಂದ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಕಡಿಮೆಯಾಗಲಿದೆ ಎಂದು ತೇಜಸ್ವಿ ಸೂರ್ಯ ಹೇಳಿದರು.ಸರ್ಕಾರ 5 ಗ್ಯಾರಂಟಿ ಹೆಸರಿನಲ್ಲಿ ರಾಜ್ಯ ಬರಿದು ಮಾಡಿದೆ: ಎಚ್ಡಿಕೆಪೀಣ್ಯ ದಾಸರಹಳ್ಳಿ: ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಿಲ್ಲದೆ ಕೇವಲ 5 ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯವನ್ನು ಸಂಪೂರ್ಣ ಬರಿದು ಮಾಡಿ ಮುಂದಿನ ದಿನಗಳಲ್ಲಿ ನಿಮ್ಮನ್ನ ಸಾಲಗಾರರನ್ನಾಗಿ ಮಾಡುವುದೇ ಸರ್ಕಾರದ ಸಾಧನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಬಾಗಲಗುಂಟೆಯ ಮಾರಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಎನ್‌ಡಿಎ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರ ದಾಸರಹಳ್ಳಿ, ಚೊಕ್ಕಸಂದ್ರ, ಪೀಣ್ಯ 2ನೇ ಹಂತ, ಹೆಗ್ಗನಹಳ್ಳಿ ಸುಂಕದಕಟ್ಟೆವರೆಗೂ ರೋಡ್ ಶೋ ಭಾಗವಹಿಸಿ ಮಾತನಾಡಿದರು.ಐದು ಗ್ಯಾರಂಟಿ ಕಾರ್ಯಕ್ರಮಗಳ ಹೆಸರಿನಲ್ಲಿ ₹1.5 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ನಿಮಗೆ ಕೊಡುವ ₹2 ಸಾವಿರಕ್ಕೆ ಮಾಡಿರುವ ಸಾಲ ತೀರಿಸುವವರಾರು? ಅದನ್ನು ನೀವೇ ತೀರಿಸಬೇಕಾಗುತ್ತದೆ. ಇವತ್ತು ರಾಜ್ಯದಲ್ಲಿ ಒಬ್ಬೊಬ್ಬ ವ್ಯಕ್ತಿಯ ಮೇಲೆ ₹36ಸಾವಿರ ಸಾಲದ ಹೊರೆ ಹೊರಿಸಿದ್ದಾರೆ. 2 ಸಾವಿರ ಕೊಡುತ್ತಾರೆ ಎಂದು ಖುಷಿ ಪಟ್ಟರೆ ಮುಂದೆ ದೊಡ್ಡಬೆಲೆ ತೆರಬೇಕಾಗುತ್ತದೆ. ಆದ್ದರಿಂದ ಎಚ್ಚರಿಕೆಯಿಂದ ತೀರ್ಮಾನ ಮಾಡಿ ಮತನೀಡಿ ಎಂದರು.ಕಾಂಗ್ರೆಸ್ ಹಲವಾರು ರೀತಿಯ ಆಮಿಷಗಳನ್ನು ಒಡ್ದುತ್ತಿದೆ. ಅದು ವೈಯಕ್ತಿಕವಾಗಿ ಸರ್ಕಾರದ ತೆರಿಗೆ ಹಣವನ್ನು ದುರುಪಯೋಗ ಮಾಡಿ ಎರಡು ದಿನಗಳಿಂದ ಪತ್ರಿಕೆಗಳಲ್ಲಿ ಕೊಡುತ್ತಿರುವ ಜಾಹೀರಾತು ಈ ನಾಡಿನ ಜನತೆಯ ತೆರಿಗೆ ಹಣ. ಅದನ್ನು ಲೂಟಿ ಮಾಡಿ ಇವತ್ತು ಖಾಲಿ ಚೊಂಬನ್ನು ಪ್ರದರ್ಶಿಸಿದ್ದೇವೆ ಎಂಬುದನ್ನು ತೋರಿಸಿದ್ದಾರೆ. ಈ ದೇಶ, ರಾಜ್ಯವನ್ನು ಯಾವ ಮಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದಾರೆಂದು ನೀವು ಆಲೋಚಿಸಬೇಕು ಎಂದು ತಿಳಿಸಿದರು.ಬೆಂಗಳೂರಿನ ಅಭಿವೃದ್ಧಿಗೆ ಕಾಂಗ್ರೆಸ್ ಕೊಟ್ಟ ಕೊಡುಗೆ ಏನು? ಎಂದು ಪ್ರಶ್ನಿಸಿದ ಅವರು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಬಹುಶಃ ಬಿಜೆಪಿ ಹಾಗೂ ಮೈತ್ರಿ ಸರ್ಕಾರದಲ್ಲಿ ಬೆಂಗಳೂರು ಅಭಿವೃದ್ಧಿಗೆ ಹಲವಾರು ರೀತಿಯ ತೀರ್ಮಾನ ತೆಗೆದುಕೊಂಡಿದ್ದು ದೇವೇಗೌಡರು. ಅವರು ಕಾವೇರಿಯ ಒಂಬತ್ತು ಟಿಎಂಸಿ ನೀರನ್ನು ಬೆಂಗಳೂರು ನಗರಕ್ಕೆ ಕೊಡುವ ನಿರ್ಧಾರ ಮಾಡಿದ್ದರಿಂದ ಅಲ್ಲಲ್ಲಿ ಸ್ವಲ್ಪ ನೀರು ದೊರಕುತ್ತಿದೆ ಎಂದರು.
ಇದೇ ಕಾಂಗ್ರೆಸ್ ಪಕ್ಷ ‘ನಮ್ಮ ನೀರು ನಮ್ಮ ಹಕ್ಕು’ ಅಂತ ಹೇಳಿ ಮೇಕೆದಾಟುವರೆಗೂ ಪಾದಯಾತ್ರೆ ಮಾಡಿ ಈಗ ''''ನಮ್ಮ ನೀರು ತಮಿಳುನಾಡಿನ ಹಕ್ಕು'''' ಎಂದು ತಮಿಳುನಾಡಿಗೆ ಎತೇಚ್ಛವಾಗಿ ನೀರು ಬಿಡುವ ಮುಖಾಂತರ ನೀರಿನ ಹಾಹಾಕಾರ ಉಂಟಾಗಿದೆ ಎಂದರು.ಸಂಸದ ಡಿ.ವಿ. ಸದಾನಂದಗೌಡ ಮಾತನಾಡಿ, ಕಳೆದ ಹಲವಾರು ಲೋಕಸಭೆಯಲ್ಲಿ ಗೆದ್ದಿದ್ದೇವೆ. ಇವತ್ತು ಒಂದು ಹೊಸ ಅಧ್ಯಾಯ ಏನೆಂದರೆ ಲೂಟಿ ಕೋರ ಕಾಂಗ್ರೆಸ್ ನಿರ್ಮೂಲನೆ ಮಾಡಬೇಕು. ರಾಜ್ಯಾದ್ಯಂತ ಮೈತ್ರಿ ಪಕ್ಷದಿಂದ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ. ಈ ಕ್ಷೇತ್ರದಲ್ಲಿ ಒಂದೂವರೆ ಲಕ್ಷ ಅಧಿಕ ಅಂತರದಿಂದ ಶೋಭಾ ಕರಂದ್ಲಾಜೆ ಅವರು ಗೆಲ್ಲುತ್ತಾರೆ ಎಂದರು.ಎನ್‌ಡಿಎ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮಾತನಾಡಿದರು. ಶಾಸಕ ಎಸ್. ಮುನಿರಾಜು, ರಾಜ್ಯ ಜೆಡಿಎಸ್ ಹಿರಿಯ ಉಪಾಧ್ಯಕ್ಷ ಅಂದಾನಪ್ಪ, ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಎಂ. ಮುನಿಸ್ವಾಮಿ, ಟಿ.ಎಸ್. ಗಂಗರಾಜು , ಎಂ. ಮುನೇಗೌಡ, ಮಂಡಲ ಅಧ್ಯಕ್ಷ ಸೋಮಶೇಖರ್,ಶೆಟ್ಟಿಹಳ್ಳಿ ಸುರೇಶ್, ಬಾಗಲಗುಂಟೆ ವಾರ್ಡ್ ಜೆಡಿಎಸ್ ಅಧ್ಯಕ್ಷ ಹನುಮಂತ ರಾಯಪ್ಪ, ಪಿ.ಎಚ್. ರಾಜು, ಭರತ್ ಸೌಂದರ್ಯ, ಬಿ.ಎಂ. ಕೃಷ್ಣ, ಭರತ್ ಗುಂಡಪ್ಪ ,ಸುಜಾತ ಮುನಿರಾಜು, ಗುರುನಿಶ್ಚಲ್, ಅನಿಲ್ ಕುಮಾರ್, ಸತೀಶ್.ಬಿ.ಅರ್. ಮುಂತಾದವರಿದ್ದರು.