ಈ ಬಾರಿ ದಸರಾ 11 ದಿನ ಆಚರಣೆ:400 ವರ್ಷಗಳಲ್ಲಿ ಇದೇ ಮೊದಲು?

KannadaprabhaNewsNetwork |  
Published : Jun 19, 2025, 11:49 PM ISTUpdated : Jun 20, 2025, 08:01 AM IST
Mysuru Dasara Bheema elephant

ಸಾರಾಂಶ

ದಸರಾ ಆರಂಭವಾಗುವ ಸೆಪ್ಟೆಂಬರ್‌ ತಿಂಗಳ ಶುಕ್ಲ ಪಕ್ಷದಲ್ಲಿ 2 ಬಾರಿ ಪಂಚಮಿ ಬಂದಿದ್ದು, ಈ ಬಾರಿ 11ನೇ ದಿನಕ್ಕೆ ವಿಜಯದಶಮಿ ಬರಲಿದೆ.

  ಮೈಸೂರು :  ದಸರಾ ಆರಂಭವಾಗುವ ಸೆಪ್ಟೆಂಬರ್‌ ತಿಂಗಳ ಶುಕ್ಲ ಪಕ್ಷದಲ್ಲಿ 2 ಬಾರಿ ಪಂಚಮಿ ಬಂದಿದ್ದು, ಈ ಬಾರಿ 11ನೇ ದಿನಕ್ಕೆ ವಿಜಯದಶಮಿ ಬರಲಿದೆ. ಹಾಗಾಗಿ ಈ ಬಾರಿ ವಿಶೇಷವಾಗಿ 11 ದಿನಗಳ ದಸರಾ ಆಚರಣೆ ನಡೆಯಲಿದೆ. ಆದರೆ, ಜಂಬೂಸವಾರಿ ಮೆರವಣಿಗೆಯ ಅಂತಿಮ ದಿನಾಂಕವನ್ನು ರಾಜ್ಯ ಸರ್ಕಾರ ತೀರ್ಮಾನಿಸಲಿದೆ.

ಮಹಾಲಯ ಅಮಾವಾಸ್ಯೆಯ ಬಳಿಕ ಆರಂಭವಾಗುವ ನವರಾತ್ರಿಯು ಈ ಬಾರಿ ದಶರಾತ್ರಿಯಾಗಲಿದೆ. ಇದು ದಸರಾ ಮಹೋತ್ಸವ ಇತಿಹಾಸದಲ್ಲಿಯೇ ಅಪರೂಪದ ಪ್ರಸಂಗವಾಗಿದೆ. ನಿಯಮದಂತೆ ಸೆ.21ಕ್ಕೆ ಅಮಾವಾಸ್ಯೆ ಮುಗಿದ ಮಾರನೆ ದಿನ (ಸೆ.22) ನವರಾತ್ರಿ ಆರಂಭವಾಗಬೇಕು. ಆದರೆ, ಸೆ.26 ಮತ್ತು 27ರಂದು ಪಂಚಮಿ ಬಂದಿರುವುದರಿಂದ ನವರಾತ್ರಿಯ ದಿನಗಳು ದಶರಾತ್ರಿಯಾಗಿ ಮಾರ್ಪಟ್ಟಿವೆ. ಅ.2ರ ಗಾಂಧಿ ಜಯಂತಿಯಂದು ವಿಜಯದಶಮಿ ನಡೆಯಲಿದೆ.

ದಸರಾ ಆರಂಭದ ದಿನಗಳಿಂದಲೂ ನವರಾತ್ರಿಯನ್ನು ಯದುವಂಶಸ್ಥರು ಚಾಚೂ ತಪ್ಪದೆ ನಡೆಸಿಕೊಂಡು ಬಂದಿದ್ದಾರೆ. ಸಾಮಾನ್ಯ ಪಂಚಾಂಗಕ್ಕೂ, ಅರಮನೆ ಪಂಚಾಂಗಕ್ಕೂ ವ್ಯತ್ಯಾಸವಿದೆ. ಈ ಹಿನ್ನೆಲೆಯಲ್ಲಿ ಅರಮನೆಯಲ್ಲಿ ನಡೆಯುವ ವಿಜಯದಶಮಿಗೂ, ಸರ್ಕಾರದ ವಿಜಯದಶಮಿಗೂ ವ್ಯತ್ಯಾಸವಾಗಬಹುದು.

ಒಂದು ವೇಳೆ 2 ದಿನದ ಚೌತಿಯನ್ನು ಒಂದೇ ದಿನಕ್ಕೆ ಲೆಕ್ಕ ಹಾಕಿದರೆ ಅ.1ರ ಮಹಾನವಮಿಯಂದೆ ವಿಜಯದಶಮಿ ಮಾಡಬೇಕಾಗುತ್ತದೆ. ಇಲ್ಲವೇ ನವರಾತ್ರಿ ಆರಂಭವನ್ನು ಸೆ.23ರಿಂದ ಆರಂಭಿಸಬೇಕಾಗುತ್ತದೆ. 400 ವರ್ಷಗಳಲ್ಲಿ ಇಂತಹ ಘಟನೆ ನಡೆದಿದೆಯೋ ಇಲ್ಲವೋ ಎಂಬುದು ಗೊತ್ತಿಲ್ಲ. ಈ ಬಗ್ಗೆ ಅನೇಕರಲ್ಲಿ ಗೊಂದಲವಿದ್ದು, ಅಂತಿಮ ತೀರ್ಮಾನವನ್ನು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನವರಾತ್ರಿ ಮುಗಿದು 10ನೇ ದಿನ ವಿಜಯದಶಮಿ ಬರಲಿದೆ. ದಸರಾ ಮಹೋತ್ಸವ 11 ದಿನ ಬಂದರೂ ಅದರ ಲೆಕ್ಕ 10 ದಿನಗಳೇ ಆಗಿರುತ್ತದೆ. ಪಂಚಾಂಗದಲ್ಲಿ ಯಾವ ರೀತಿ ಆಚರಣೆ ಮಾಡಬೇಕು ಎಂಬುದನ್ನು ನೋಡಿ ಹೇಳಬೇಕಿದೆ ಎಂದು ಹಿರಿಯ ಪುರೋಹಿತ ಜನಾರ್ಧನ್ ಅಯ್ಯಂಗಾರ್‌ ಹೇಳಿದ್ದಾರೆ.

ಈ ಹಿಂದೆಯೂ ನವಮಿ-ದಶಮಿ ಸಮಾಗಮ

ನವಮಿ ಮತ್ತು ದಶಮಿ 2005 ಮತ್ತು 2014ರಲ್ಲಿಯೂ ಸಮಾಗಮವಾಗಿತ್ತು. ಅರಮನೆ ಪಂಚಾಂಗ, ಸೂರ್ಯೋದಯ ಮತ್ತು ಸೂರ್ಯಾಸ್ತಮಾನ ನೋಡಿಕೊಂಡು ಕಾಳಿ ಪುರಾಣದ ಪ್ರಕಾರ ಈಗಲೂ ಪೂಜೆ ನಡೆಯುವುದರಿಂದ ಆ 2 ವರ್ಷಗಳಲ್ಲಿ ನವಮಿ ಮತ್ತು ದಶಮಿ ಸಮಾಗಮಗೊಂಡಿತ್ತು. ಆಗ ನವಮಿಯು ಅ.2ರಂದು ಬೆಳಗ್ಗೆ ಆರಂಭವಾಗಿ ಅ.3ರ ಸೂರ್ಯೋದಯದ ನಂತರ ಮುಕ್ತಾಯವಾಗಿತ್ತು. ಬಳಿಕ ವಿಜಯದಶಮಿ ಆರಂಭವಾಗಿತ್ತು. ಈ ಬಗ್ಗೆ ಆಗಲೂ ಕನ್ನಡಪ್ರಭ ವಿಶೇಷ ಲೇಖನ ಪ್ರಕಟಿಸಿತ್ತು.

PREV
Read more Articles on

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ