69ನೇ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಸಚಿವ ಡಾ. ಜಿ. ಪರಮೇಶ್ವರ್

KannadaprabhaNewsNetwork | Published : Nov 2, 2024 1:32 AM

ಸಾರಾಂಶ

ಕೃಷಿ, ತೋಟಗಾರಿಕೆ, ಆಹಾರ, ಆರೋಗ್ಯ, ರೇಷ್ಮೆ, ಪಶುಸಂಗೋಪನೆ, ಜಿಲ್ಲಾ ಪಂಚಾಯತಿ ಸೇರಿದಂತೆ ವಿವಿಧ ಇಲಾಖೆಗಳ ಸ್ತಬ್ಧಚಿತ್ರ ವಾಹನಗಳು ಸರ್ಕಾರಿ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿದವು.

ಕನ್ನಡಪ್ರಭ ವಾರ್ತೆ ತುಮಕೂರು

ಈ ಬಾರಿ ಜಿಲ್ಲಾದ್ಯಂತ ವಾಡಿಕೆಗಿಂತ ಶೇ.49ರಷ್ಟು ಹೆಚ್ಚುವರಿ ಮಳೆಯಾಗಿದ್ದು, ಜನವರಿಯಿಂದ ಈವರೆಗೆ 853 ಮಿ.ಮೀ. ಮಳೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಶುಕ್ರವಾರ ನವೆಂಬರ್ ೧ರಂದು ಹಮ್ಮಿಕೊಂಡಿದ್ದ 69ನೇ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಒಟ್ಟು 3.20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಉತ್ತಮ ಮಳೆಯಿಂದ ಈವರೆಗೂ 3.08 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಉತ್ತಮ ಬೆಳೆಯಾಗುವ ನಿರೀಕ್ಷೆಯಿದೆ. ಸಹಾಯಧನ ಆಧಾರದಲ್ಲಿ ಜಿಲ್ಲೆಯ 1.52 ಲಕ್ಷ ರೈತರಿಗೆ ಮುಂಗಾರು ಹಂಗಾಮಿಗಾಗಿ 1800 ಕ್ವಿಂಟಾಲ್ ಗುಣಮಟ್ಟದ ಬಿತ್ತನೆ ಬೀಜ ವಿತರಿಸಲಾಗಿದೆ ಎಂದರು.

ಜಿಲ್ಲೆಯು ತೋಟಗಾರಿಕೆ ಬೆಳೆಗಳ ವಿಸ್ತೀರ್ಣದಲ್ಲಿ ರಾಜ್ಯದಲ್ಲಿಯೇ ಮೊದಲನೇ ಸ್ಥಾನದಲ್ಲಿದ್ದು, ತೋಟಗಾರಿಕಾ ರೈತರ ಆದಾಯವನ್ನು ದ್ವಿಗುಣಗೊಳಿಸಲು ಜಿಲ್ಲೆಯ ಪ್ರಮುಖ ತೋಟಗಾರಿಕಾ ಬೆಳೆಯಾದ ತೆಂಗು ಬೆಳೆಯಲ್ಲಿ ಸಂಯೋಜಿತ ಬೇಸಾಯ ಯೋಜನೆಯಡಿ ಒಣಗಿರುವ ಮತ್ತು ಹಳೆಯ ತೆಂಗಿನ ತೋಟಗಳ ಪುನಃಶ್ಚೇತನ ಮತ್ತು ನಿರ್ವಹಣೆ ಕಾರ್ಯಕ್ರಮದಡಿ 8852 ಹೆಕ್ಟೇರ್ ಪ್ರದೇಶದ 10,382 ಫಲಾನುಭವಿಗಳಿಗೆ 15.50 ಕೋಟಿ ರು.ಗಳ ಸಹಾಯಧನ ನೀಡಲು ಗುರಿ ಹೊಂದಲಾಗಿದೆ ಎಂದರು.

‘ರೇಷ್ಮೆ ಕೃಷಿ ಕೈಗೊಂಡು ಸ್ವಾವಲಂಬಿಗಳಾಗೋಣ’ ಎಂಬಂತೆ ಜಿಲ್ಲೆಯಲ್ಲಿ ವಾರದಲ್ಲಿ ಒಂದು ದಿನ ಒಂದು ತಾಲೂಕಿನ ಒಂದು ಗ್ರಾಮದಲ್ಲಿ ಗುಂಪು ಸಭೆ ನಡೆಸುವ ಮೂಲಕ ವಿಶೇಷವಾಗಿ 1500 ಎಕರೆಯಲ್ಲಿ ಹಿಪ್ಪು ನೇರಳೆ ನಾಟಿ ಮಾಡುವ ಮೂಲಕ 513 ಹೊಸ ಕುಟುಂಬಗಳನ್ನು ರೇಷ್ಮೆ ಕೃಷಿಗೆ ತರಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಕೃಷಿ ಅಭಿವೃದ್ಧಿಯ ಜೊತೆ ಜೊತೆಗೆ ಕೈಗಾರಿಕೆಗಳ ಅಭಿವೃದ್ಧಿಯೂ ಅತ್ಯವಶ್ಯಕ. ತುಮಕೂರು ಜಿಲ್ಲೆ ಭಾರತದ ಭೂಪಟದಲ್ಲಿ ಕೈಗಾರಿಕಾ ವಲಯ ಎಂಬುದು ಈಗಾಗಲೇ ಸಾಬೀತಾಗಿದೆ. ಜಿಲ್ಲೆಯ ವಸಂತ ನರಸಾಪುರ ಹಾಗೂ ಶಿರಾ ಕೈಗಾರಿಕಾ ಪ್ರದೇಶಗಳು ರಾಜ್ಯದ ಪ್ರಮುಖ ಕೈಗಾರಿಕಾ ವಲಯಗಳಾಗಿ ಬಿಂಬಿತವಾಗಿವೆ. ಬೇಡಿಕೆಗನುಗುಣವಾಗಿ ಜಿಲ್ಲೆಯ ಕೈಗಾರಿಕಾ ಪ್ರದೇಶಾಭಿವೃದ್ಧಿಗಾಗಿ ಮಧುಗಿರಿ ತಾಲೂಕು ಕಸಬಾ ಹೋಬಳಿ ದೊಡ್ಡವೀರನಹಳ್ಳಿ, ಮದ್ಲೇರಹಳ್ಳಿ, ದಬ್ಬೇಘಟ್ಟ, ಕಂಬದಹಳ್ಳಿ ಗ್ರಾಮಗಳಲ್ಲಿ ಕೈಗಾರಿಕಾ ಘಟಕ ಸ್ಥಾಪನೆಗೆ ಕ್ರಮ ವಹಿಸಲಾಗಿದೆ. ಕೈಗಾರಿಕೆಗಳನ್ನು ಉತ್ತೇಜಿಸಲು ‘ತುಮಕೂರು ಇಂಡಸ್ಟ್ರಿಯಲ್ ಟೌನ್‌ಶಿಪ್’ ಸ್ಥಾಪನೆಗೆ ಯೋಜಿಸಲಾಗಿದ್ದು, ಇದರ ಅನುಷ್ಠಾನಕ್ಕಾಗಿ 948 ಕೋಟಿ ರು. ವೆಚ್ಚದಲ್ಲಿ ಕೈಗಾರಿಕೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳ ನಿರ್ವಹಣೆ ಮಾಡುವ ಹೊಣೆಯನ್ನು ಪ್ರತಿಷ್ಠಿತ ಎಲ್&ಟಿ ಸಂಸ್ಥೆಗೆ ವಹಿಸಲಾಗಿದೆ ಎಂದು ತಿಳಿಸಿದರು.

ನಾಡದೇವಿಯ ಭವ್ಯ ಮೆರವಣಿಗೆ:

ಇದಕ್ಕೂ ಮುನ್ನ ರಾಜ್ಯೋತ್ಸವದ ಪ್ರಯುಕ್ತ ನಗರದ ಟೌನ್‌ಹಾಲ್ ವೃತ್ತದಿಂದ ಬೆಳ್ಳಿ ರಥದಲ್ಲಿರಿಸಿದ ನಾಡದೇವಿಯ ಭವ್ಯ ಮೆರವಣಿಗೆಯನ್ನು ಏರ್ಪಡಿಸಲಾಗಿತ್ತು.

ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯು ಟೌನ್‌ಹಾಲ್ ವೃತ್ತದಿಂದ ಮಹಾತ್ಮಗಾಂಧಿ ಕ್ರೀಡಾಂಗಣದವರೆಗೆ ಸಂಚರಿಸಿತು. ಮೆರವಣಿಗೆಯಲ್ಲಿ ಕಂಸಾಳೆ, ವೀರಗಾಸೆ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಕಲಾ ಪ್ರದರ್ಶನ ನೀಡಿದವು. ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಕನ್ನಡ ನಾಡಿನ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಕವಿ, ಸಾಹಿತಿಗಳ ಭಾವಚಿತ್ರ, ಹೆಸರಾಂತ ಕವಿಗಳ ಅರ್ಥಪೂರ್ಣ ಬರಹದ ಸಾಲುಗಳ ಪ್ರದರ್ಶನ ಫಲಕಗಳನ್ನು ಹಿಡಿದು ಸಾಗಿದ್ದು ಅರ್ಥಪೂರ್ಣವಾಗಿತ್ತು.

ಕೃಷಿ, ತೋಟಗಾರಿಕೆ, ಆಹಾರ, ಆರೋಗ್ಯ, ರೇಷ್ಮೆ, ಪಶುಸಂಗೋಪನೆ, ಜಿಲ್ಲಾ ಪಂಚಾಯತಿ ಸೇರಿದಂತೆ ವಿವಿಧ ಇಲಾಖೆಗಳ ಸ್ತಬ್ಧಚಿತ್ರ ವಾಹನಗಳು ಸರ್ಕಾರಿ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿದವು.

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿಂದು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 69 ಸಾಧಕರಿಗೆ ಸಚಿವ ಡಾ. ಜಿ. ಪರಮೇಶ್ವರ ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದರು.

ಸಮಾರಂಭದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಪಂ ಮುಖ್ಯ ಸಿಇಒ ಜಿ. ಪ್ರಭು, ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಎಡೀಸಿ ಡಾ. ಎನ್.ತಿಪ್ಪೇಸ್ವಾಮಿ, ಕಸಾಪ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ, ಜಿಲ್ಲೆಯ ಕಲಾವಿದರು, ಸಾಹಿತಿಗಳು, ಕನ್ನಡಾಭಿಮಾನಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿ/ಸಿಬ್ಬಂದಿ, ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಪೋಷಕರು, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಕ್ರೀಡಾ ಸಾಧಕರಿಗೆ ಸನ್ಮಾನ:

ಕಬಡ್ಡಿ ಕ್ರೀಡಾ ಸಾಧಕರಾದ ನಂಜೇಗೌಡ, ಮಹಮ್ಮದ್ ಇಸ್ಮಾಯಿಲ್ ಎಲ್. ಹಾಗೂ ಪಿ.ಎನ್.ರಾಮಯ್ಯ. ಅಥ್ಲೆಟಿಕ್ಸ್ನಲ್ಲಿ ಸಾಧನೆಗೈದ ಟಿ.ಕೆ.ಆನಂದ್, ಟಿ.ಎ.ನರೇಶ್‌ಬಾಬು ಹಾಗೂ ಶಶಾಂಕ್ ವರ್ಮ. ಜಿಮ್ನಾಸ್ಟಿಕ್ಸ್ ಸಾಧಕ ಸುಧೀರ್ ದೇವದಾಸ್. ಕುಸ್ತಿಯಲ್ಲಿ ಉಮೇಶ್. ಖೋ-ಖೋ ಕ್ರೀಡೆಯಲ್ಲಿ ಟಿ.ಎ.ರಾಘವೇಂದ್ರ ಕುಮಾರ್ ಹಾಗೂ ಕು. ಟಿ.ಎನ್. ಹರ್ಷಿತ, ಯೋಗದಲ್ಲಿ ಡಾ. ಎಂ.ಎಸ್. ಜಗದೀಶ, ಜಿ.ವಿ. ಉಮೇಶ್, ಕು. ಜಿ.ವಿ.ಜಯತೇಷ್ಣ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಸಾಧನೆಗೈದವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಉತ್ತಮ ಪಥ ಸಂಚಲನಕ್ಕೆ ಬಹುಮಾನ:

ರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಉತ್ತಮ ಪಥ ಸಂಚಲನ ಪ್ರದರ್ಶನ ನೀಡಿದ ಪೊಲೀಸ್ ವಿಭಾಗದ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ತಂಡ ಪ್ರಥಮ ಬಹುಮಾನ, ನಾಗರಿಕ ಪೊಲೀಸ್ ತಂಡ ದ್ವಿತೀಯ ಹಾಗೂ ಗೃಹರಕ್ಷಕ ದಳಕ್ಕೆ ತೃತೀಯ ಬಹುಮಾನ ನೀಡಲಾಯಿತು. ಅದೇ ರೀತಿ ಎನ್‌ಸಿಸಿ ವಿಭಾಗದಲ್ಲಿ ಸರ್ವೋದಯ ಕಾಲೇಜಿನ ಬಾಲಕರ ತಂಡ ಪ್ರಥಮ, ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಬಾಲಕರ ತಂಡ ದ್ವಿತೀಯ ಹಾಗೂ ಸಿದ್ಧಗಂಗಾ ಕಾಲೇಜಿನ ಬಾಲಕಿಯರ ತಂಡವು ತೃತೀಯ ಬಹುಮಾನ ಗಳಿಸಿತು. ಸ್ಕೌಟ್ಸ್ ಮತ್ತು ಗೈಡ್ಸ್ ವಿಭಾಗದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಲ್ಪತರು ರೋಮ್ಸ್ ಮುಕ್ತದಳ ಪ್ರಥಮ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭಗತ್ ಸಿಂಗ್ ರೋರ್ಸ್ಕ ಘಟಕ ದ್ವಿತೀಯ ಹಾಗೂ ಮರಳೂರಿನ ಅಂಕಿತ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ತಂಡವು ತೃತೀಯ ಬಹುಮಾನ ಪಡೆದಿದೆ. ಸೇವಾದಳ ವಿಭಾಗದಲ್ಲಿ ಬಾಪೂಜಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಭಾರತ ಸೇವಾದಳ(ಬಾಲಕರ ವಿಭಾಗ) ಪ್ರಥಮ, ಬಾಪೂಜಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಭಾರತ ಸೇವಾದಳ(ಬಾಲಕಿಯರ ವಿಭಾಗ) ದ್ವಿತೀಯ ಹಾಗೂ ಕನ್ನಿಕ ಆಂಗ್ಲ ಶಾಲೆಯ ಭಾರತ ಸೇವಾದಳ(ಬಾಲಕಿಯರ ವಿಭಾಗ) ತೃತೀಯ ಬಹುಮಾನ ಗಳಿಸಿದೆ.

ಅಗ್ನಿಶಾಮಕ ದಳದವರಿಗೆ ಪುರಸ್ಕಾರ:

ತುಮಕೂರು ತಾಲೂಕು ಮೈದಾಳ ಕೆರೆ ಕೋಡಿಯಲ್ಲಿ ಅಕ್ಟೋಬರ್ 27ರಂದು ಸುಮಾರು 18 ಗಂಟೆಗಳ ಕಾಲ ಹಗಲು- ರಾತ್ರಿ ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿ ಕಲ್ಲಿನ ಪೊಟರೆಯಲ್ಲಿ ಸಿಲುಕಿಗೊಂಡಿದ್ದ ಯುವತಿಯನ್ನು ಜೀವಂತವಾಗಿ ರಕ್ಷಿಸುವಲ್ಲಿ ಶ್ರಮಿಸಿದ ಅಗ್ನಿಶಾಮಕ ದಳದ ಕೆ.ಪಿ. ಶಶಿಧರ, ಅಡಿವೇಶ್, ಶ್ರೀಶೈಲ ಕರೋಲಿ, ಅಹಮ್ಮದ್ ಬೇಗ್, ಸುರೇಶ ಮಾದರ್, ಸಿದ್ದಪ್ಪ ಜೋಗಿನ್, ಕೆ.ಆರ್. ಗಂಗರಾಜ, ರಾಮ್ ಪ್ರಸಾದ್, ಮಂಜುನಾಥ ಓ., ಪ್ರದೀಪ ಜಿ.ಕೆ., ಅಣ್ಣಪ್ಪ ಪಿ. ನುಗ್ಗಾನಟ್ಟಿ, ಯೋಗೇಶ್ ಎಂ.ಜಿ., ಆಸೀಪ್ ಅಲಿ, ವೆಂಕಟೇಶ್ ಕೋಠಾರಿ, ವಿಶ್ವನಾಥ ತಾವಂಶಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

Share this article