ತೊಕ್ಕೊಟ್ಟು: ಟ್ಯಾಂಕರ್‌ ಹಾಯ್ದು ಸ್ಕೂಟರ್ ಸಹಸವಾರೆ ಸಾವು

KannadaprabhaNewsNetwork |  
Published : Nov 10, 2024, 01:30 AM IST
ರಸ್ತೆ ಅವ್ಯವಸ್ಥೆ ಖಂಡಿಸಿ ಉದ್ರಿಕ್ತ ಗುಂಪಿನಿಂದ ತೊಕ್ಕೊಟ್ಟು- ಕೊಣಾಜೆ ರಸ್ತೆ ತಡೆ | Kannada Prabha

ಸಾರಾಂಶ

ರಸ್ತೆ ಅವ್ಯವಸ್ಥೆಯಿಂದ ಅಪಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಉದ್ರಿಕ್ತ ಗುಂಪು ರಸ್ತೆಗೆ ಅಡ್ಡವಾಗಿ ಕಲ್ಲುಗಳನ್ನಿಟ್ಟು ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಒಂದು ಗಂಟೆ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ.

ಕನ್ನಡಪ್ರಭ ವಾರ್ತೆ ಉಳ್ಳಾಲ

ಟ್ಯಾಂಕರ್ ಲಾರಿ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮಹಿಳೆಯೊಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಉಳ್ಳಾಲ ಪ್ರೆಸ್ ಕ್ಲಬ್ ಎದುರಿನ ತೊಕ್ಕೊಟ್ಟು-ಮಂಗಳೂರು ವಿಶ್ವವಿದ್ಯಾನಿಲಯ ರಸ್ತೆಯಲ್ಲಿ ಶನಿವಾರ ಸಂಜೆ ಸಂಭವಿಸಿದೆ.

ರಸ್ತೆ ಅವ್ಯವಸ್ಥೆಯಿಂದ ಅಪಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಉದ್ರಿಕ್ತ ಗುಂಪು ರಸ್ತೆಗೆ ಅಡ್ಡವಾಗಿ ಕಲ್ಲುಗಳನ್ನಿಟ್ಟು ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಒಂದು ಗಂಟೆ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ.ದೇರಳಕಟ್ಟೆ ಯೇನೆಪೋಯ ಆಸ್ಪತ್ರೆ ಸಿಬ್ಬಂದಿ ರಶೀದ್ ಎಂಬವರ ಪತ್ನಿ ರೆಹಮತ್ (47) ಮೃತರು. ದೇರಳಕಟ್ಟೆ ಕಡೆಯಿಂದ ಸ್ಕೂಟರ್‌ನಲ್ಲಿ ತೊಕ್ಕೊಟ್ಟು ಕಡೆಗೆ ದಂಪತಿ ತೆರಳುತ್ತಿದ್ದ ಸಂದರ್ಭ ರಸ್ತೆ ಹೊಂಡ ತಪ್ಪಿಸುವ ಹಂತದಲ್ಲಿ ಸ್ಕೂಟರ್ ಆಯತಪ್ಪಿ ರಸ್ತೆಗೆ ಉರುಳಿಬಿದ್ದಿದೆ. ಈ ಸಂದರ್ಭ ಹಿಂಬದಿಯಲ್ಲಿದ್ದ ಟ್ಯಾಂಕರ್ ಲಾರಿ ರಸ್ತೆಗೆ ಬಿದ್ದಿದ್ದ ರೆಹಮತ್ ಅವರ ಮೇಲೆ ಚಲಿಸಿದೆ. ಪರಿಣಾಮವಾಗಿ ರೆಹಮತ್ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.

ರಸ್ತೆ ಅವ್ಯವಸ್ಥೆಯಿಂದಾಗಿ ಘಟನೆ ನಡೆದಿರುವುದಾಗಿ ಆರೋಪಿಸಿದ ಉದ್ರಿಕ್ತ ಗುಂಪು, ರಸ್ತೆಗೆ ಅಡ್ಡವಾಗಿ ಕಲ್ಲುಗಳನ್ನು ಇಟ್ಟು ಪ್ರತಿಭಟನೆ ನಡೆಸಿದೆ. ಇದರಿಂದಾಗಿ ತೊಕ್ಕೊಟ್ಟು ಕೊಣಾಜೆ ರಸ್ತೆ ಸಂಪೂರ್ಣ ಬಂದ್ ಆಗಿದ್ದು, ವಾಹನಗಳೆಲ್ಲವೂ ಸರತಿ ಸಾಲುಗಳಲ್ಲಿ ನಿಂತರೆ, ಹಲವು ವಾಹನಗಳು ಬೀರಿ ಮಾರ್ಗವಾಗಿ ಸಂಚರಿಸಿದೆ. ಉದ್ರಿಕ್ತ ಗುಂಪು ಹಾಗೂ ಉಳ್ಳಾಲ ಪೊಲೀಸರ ನಡುವೆ ತೀವ್ರ ವಾಗ್ದಾಳಿ ನಡೆದಿದೆ.108 ಆಂಬ್ಯುಲೆನ್ಸ್ ಅವ್ಯವಸ್ಥೆ!

ಅಪಘಾತದಲ್ಲಿ ಸಾವನ್ನಪ್ಪಿದ ಮಹಿಳೆ ರೆಹಮತ್ ಅವರ ಮೃತದೇಹ ಅರ್ಧ ಗಂಟೆಗೂ ಅಧಿಕ ಕಾಲ ರಸ್ತೆಯಲ್ಲೇ ಉಳಿದಿತ್ತು. 108 ಆಂಬ್ಯುಲೆನ್ಸ್‌ಗೆ ಕರೆ ಮಾಡಿದಾಗ ತಾಂತ್ರಿಕ ಕಾರಣಗಳನ್ನು ನೀಡಿ ಸ್ಥಳಕ್ಕಾಗಮಿಸಲಿಲ್ಲ. ಇದರಿಂದ ಇನ್ನಷ್ಟು ರೊಚ್ಚಿಗೆದ್ದ ಜನ ಆಂಬ್ಯುಲೆನ್ಸ್ ಅವ್ಯವಸ್ಥೆಯ ವಿರುದ್ಧವೂ, ನಿತ್ಯ ಹೊಂಡಗುಂಡಿಯ ರಸ್ತೆಯ ಬದಿಯಲ್ಲೇ ನಿಂತು ದಂಡ ಪಡೆಯುವ ಸಂಚಾರಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಘಟನಾ ಸ್ಥಳಕ್ಕೆ ಡಿಸಿಪಿ ದಿನೇಶ್ ಕುಮಾರ್, ಸಂಚಾರಿ ವಿಭಾಗದ ಎಸಿಪಿ ನಜ್ಮಾ ಫಾರೂಕಿ, ಎಸಿಪಿ ಧನ್ಯಾ ನಾಯಕ್, ಉಳ್ಳಾಲ ಠಾಣಾಧಿಕಾರಿ ಬಾಲಕೃಷ್ಣ ಎಚ್.ಎನ್. ಭೇಟಿ ನೀಡಿ ಉದ್ರಿಕ್ತರನ್ನು ಸಮಾಧಾನಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ