18 ವರ್ಷ ಮೇಲ್ಪಟ್ಟವರು ಸ್ವಯಂ ಪ್ರೇರಿತ ರಕ್ತದಾನ ಮಾಡಿ: ಜಿಲ್ಲಾಧಿಕಾರಿ

KannadaprabhaNewsNetwork | Published : Feb 19, 2025 12:45 AM

ಸಾರಾಂಶ

ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಬಳಿಯ ಜೆಎಸ್‌ಡಬ್ಲ್ಯು ಸಂಸ್ಥೆಯಿಂದ ಜಿಂದಾಲ್‌ನ ವಿವಿಧ 10 ಸ್ಥಳಗಳಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ.

ಫೆ. 20, 21, 22ರಂದು ಜಿಂದಾಲ್‌ನಲ್ಲಿ ರಕ್ತದಾನ ಶಿಬಿರ । ಆರೋಗ್ಯಾಧಿಕಾರಿಗಳ ಜೊತೆ ಸಭೆ

ಕನ್ನಡಪ್ರಭವಾರ್ತೆ ಬಳ್ಳಾರಿ

ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಬಳಿಯ ಜೆಎಸ್‌ಡಬ್ಲ್ಯು ಸಂಸ್ಥೆಯಿಂದ ಜಿಂದಾಲ್‌ನ ವಿವಿಧ 10 ಸ್ಥಳಗಳಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿದ್ದು, 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಅರ್ಹರು ಸ್ವಯಂ ಪ್ರೇರಿತ ರಕ್ತದಾನ ಮಾಡುವಂತೆ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜನೆ ಕುರಿತಂತೆ ಆರೋಗ್ಯಾಧಿಕಾರಿಗಳ ಜೊತೆ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ರಕ್ತದ ಕೊರತೆ ನೀಗಿಸಲು ಫೆ. 20, 21, 22ರಂದು ಜಿಂದಾಲ್‌ನಲ್ಲಿ ಜರುಗುವ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ತಪ್ಪದೇ ರಕ್ತದಾನ ಮಾಡಿ ಶಿಬಿರ ಯಶಸ್ವಿಗೊಳಿಸಬೇಕು. ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ರಕ್ತದಾನದ ಮಹತ್ವ ಕುರಿತು ಜನರಿಗೆ ಮನವರಿಕೆ ಮಾಡಿಕೊಡಬೇಕು. ವ್ಯಾಪಕ ಪ್ರಚಾರವೂ ಮಾಡಬೇಕು ಎಂದು ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಲ್ಲಾ ರಮೇಶ್ ಬಾಬು ಮಾತನಾಡಿ, ರಕ್ತದಾನದಿಂದ ಅಪಘಾತಗಳಿಂದ ಗಾಯಗೊಂಡವರು, ರಕ್ತಹೀನತೆಯಿಂದ ಬಳಲುವ ಗರ್ಭಿಣಿಯರಿಗೆ ಹೆರಿಗೆ ಸಮಯದಲ್ಲಿ ರಕ್ತದ ಕೊರತೆ ನೀಗಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

5000 ಯುನಿಟ್ ರಕ್ತ ಸಂಗ್ರಹಕ್ಕೆ ಗುರಿ:

ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ನಿರ್ವಹಣಾ ಘಟಕ ಇವರೊಂದಿಗೆ ತೋರಣಗಲ್ಲು ನ ಜೆಎಸ್‌ಡಬ್ಲ್ಯು ಜಿಂದಾಲ್ ಇವುಗಳ ಸಹಯೋಗದಲ್ಲಿ ಜಿಂದಾಲ್ ಆವರಣದ ವಿವಿಧ 10 ಸ್ಥಳಗಳಲ್ಲಿ ರಕ್ತ ಭಂಡಾರ (ಬ್ಲಡ್‌ಬ್ಯಾಂಕ್) ಮೂಲಕ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಒಟ್ಟು 5000ಕ್ಕೂ ಹೆಚ್ಚು ಯುನಿಟ್ ರಕ್ತ ಸಂಗ್ರಹಿಸಲು ಗುರಿ ಹೊಂದಲಾಗಿದೆ. ಶಿಬಿರದಲ್ಲಿ 9 ರಕ್ತ ಕೇಂದ್ರಗಳು ಭಾಗವಹಿಸಲಿವೆ ಎಂದು ತಿಳಿಸಿದರು.

ರಕ್ತದಾನ ಶಿಬಿರ ನಡೆಯುವ ಸ್ಥಳ:

ಜಿಂದಾಲ್‌ನ ಓಪಿಜೆ ಸೆಂಟರ್‌ನ ತಮನ್ನಾ ಶಾಲೆ, ಜಿಂದಾಲ್ ಸಂಜೀವಿನಿ ಆಸ್ಪತ್ರೆ, ವಿದ್ಯಾನಗರದ ಆರೋಗ್ಯ ಕೇಂದ್ರ ಮತ್ತು ಲಿಟಲ್ ಎಲ್ಲೆ, ಎಚ್‌ಎಸ್‌ಟಿ ಕಾಂಪ್ಲೆಕ್ಸ್, ಸಿಆರ್‌ಎಂ-1 ಪ್ಲ್ಯಾಂಟ್, ಲಾಜಿಸ್ಟಿಕ್ ಪ್ಲಾಂಟ್, ಎಸ್‌ಎಂಎಸ್-4 ಪ್ಲ್ಯಾಂಟ್‌, ಜೆಎಸ್‌ಎಂಎಸ್‌ಎಚ್‌ನ ಸ್ಟೆಪ್‌ಡೌನ್ ಐಸಿಯು ಮತ್ತು ಜೆಎಸ್‌ಡಬ್ಲ್ಯು ಎನರ್ಜಿ ಸಭಾಂಗಣದಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 4.30 ರವರೆಗೆ ನಡೆಯಲಿದೆ.

ನೋಂದಣಿಗಾಗಿ ಮೊ.7829012277, 8039542124, 08395-42222, 9945367894, 9686595215 ಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬಹುದು ಎಂದರು.

ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಇಂದ್ರಾಣಿ ವಿ., ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಗಿರೀಶ್ ಇತರರಿದ್ದರು.

Share this article