ಅಭಿವೃದ್ಧಿಯ ವಿರೋಧಿಗಳು ರೋಲ್ ಕಾಲ್ ಗಿರಾಕಿಗಳು: ಶಾಸಕ ಕೆ.ಎಂ.ಉದಯ್

KannadaprabhaNewsNetwork |  
Published : Jun 14, 2025, 01:33 AM IST
13ಕೆಎಂಎನ್ ಡಿ28 | Kannada Prabha

ಸಾರಾಂಶ

ಮದ್ದೂರು ಪುರಸಭೆ ನಗರಸಭೆಯಾದರೆ ನನಗೆ ಹೆಸರು ಬರುತ್ತದೆ ಎಂದು ಸಹಿಸಲಾರದ ಕೆಲವು ರೋಲ್ ಕಾಲ್ ಗಿರಾಕಿಗಳು ಎಂಜಲು ಕಾಸಿಗಾಗಿ ಸಂಘ- ಸಂಸ್ಥೆಗಳ ಹೆಸರಿನಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ಅಭಿವೃದ್ಧಿಗೆ ವಿರೋಧ ಮಾಡುವವರು ರೋಲ್ ಕಾಲ್ ಗಿರಾಕಿಗಳು. ಸಂಘ ಸಂಸ್ಥೆಗಳ ಹೆಸರಿನಲ್ಲಿ ಎಂಜಲು ಕಾಸಿಗೆ ಕೈಯೊಡ್ಡುತ್ತಿದ್ದಾರೆ ಎಂದು ಮದ್ದೂರು ಪುರಸಭೆಯನ್ನು ನಗರಸಭೆಯಾಗಿ ಪರಿವರ್ತನೆ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವವರ ವಿರುದ್ಧ ಶಾಸಕ ಕೆ.ಎಂ. ಉದಯ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಆತಗೂರು ಹೋಬಳಿ ಹೆಮ್ಮನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ ಮತ್ತು ಸ್ವಂತ ಸಂಪನ್ಮೂಲ ಅನುದಾನದ ಅಡಿ ನಿರ್ಮಿಸಿರುವ ಕಲಿಕಾ ಕೇಂದ್ರವನ್ನು ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಮದ್ದೂರು ನಗರಸಭೆ ವ್ಯಾಪ್ತಿಗೆ ಸೋಮನಹಳ್ಳಿ, ಗೆಜ್ಜಲಗೆರೆ ಹಾಗೂ ಗೊರವನಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಸೇರ್ಪಡೆ ಮಾಡುವುದಕ್ಕೆ ಕೆಲವರು ಸಂಘ- ಸಂಸ್ಥೆಗಳ ಹೆಸರಿನಲ್ಲಿ ವಿರೋಧ ಮಾಡುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

ಮದ್ದೂರು ಪುರಸಭೆ ನಗರಸಭೆಯಾದರೆ ನನಗೆ ಹೆಸರು ಬರುತ್ತದೆ ಎಂದು ಸಹಿಸಲಾರದ ಕೆಲವು ರೋಲ್ ಕಾಲ್ ಗಿರಾಕಿಗಳು ಎಂಜಲು ಕಾಸಿಗಾಗಿ ಸಂಘ- ಸಂಸ್ಥೆಗಳ ಹೆಸರಿನಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಅಭಿವೃದ್ಧಿ ದೃಷ್ಟಿಯಿಂದ ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡುವಂತೆ ಹೆಮ್ಮನಹಳ್ಳಿ, ಹುಳುಗನಹಳ್ಳಿ ಸೇರಿ ಹಲವು ಗ್ರಾಮಗಳ ಜನಪ್ರತಿನಿಧಿಗಳು ಮತ್ತು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಪ್ರಥಮ ಹಂತದಲ್ಲಿ ನಾಲ್ಕು ಗ್ರಾಮ ಪಂಚಾಯ್ತಿಗಳನ್ನು ಸೇರ್ಪಡೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಬೇಡಿಕೆ ಇಟ್ಟಿರುವ ಗ್ರಾಮಗಳನ್ನು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿದರು.

ಕೆಆರ್‌ಎಸ್‌ನ ಗಂಗಾರತಿಗೆ ಕೆಲವು ರೈತ ಸಂಘದ ನಾಯಕರು ವಿರೋಧ ಮಾಡುತ್ತಿದ್ದಾರೆ. ಎಲ್ಲರೂ ಅಪ್ಪ ಹಾಕಿದ ಆಲದ ಮರಕ್ಕೆ ನೇತು ಹಾಕಿಕೊಳ್ಳುವ ಪ್ರವೃತ್ತಿಯಲ್ಲಿದ್ದಾರೆ. ಇದರಿಂದ ಜಿಲ್ಲೆ ಅಭಿವೃದ್ಧಿ ಹೊಂದುವುದು ಯಾವಾಗ ಎಂದು ಪ್ರಶ್ನಿಸಿದರು.

ಕೆಆರ್‌ಎಸ್‌ನಲ್ಲಿ ಗಂಗಾರತಿ ಮಾಡುವುದರಿಂದ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ. ಅಲ್ಲದೆ ಸ್ಥಳೀಯವಾಗಿ ಉದ್ಯೋಗಾವಕಾಶಗಳು ಲಭ್ಯವಾಗುತ್ತವೆ. ರೈತರ ಜಮೀನಿಗೆ ಒಳ್ಳೆಯ ಬೆಲೆ ಬರುತ್ತದೆ. ಹೀಗಾಗಿ ಕಾವೇರಿ ಆರತಿಗೆ ವಿರೋಧ ಮಾಡುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಈ ವೇಳೆ ಹೆಮ್ಮನಹಳ್ಳಿ ಗ್ರಾಪಂ ಅಧ್ಯಕ್ಷೆ ವೀಣಾ, ಉಪಾಧ್ಯಕ್ಷ ಮಧುಸೂದನ್, ಮಾಜಿ ಅಧ್ಯಕ್ಷ ನಂದೀಶ್ ಗೌಡ, ಸದಸ್ಯರಾದ ನಾಗೇಶ್, ಉಮೇಶ್, ಮತ್ತಿತರರು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ