ಅನುಕೂಲತೆ ಪಡೆದವರು ಕೃತಜ್ಞರಾಗಿರಬೇಕು: ಶಿವರಾಮ ಹೆಬ್ಬಾರ

KannadaprabhaNewsNetwork |  
Published : Jul 15, 2025, 01:09 AM IST
ಫೋಟೋ ಜು.೧೪ ವೈ.ಎಲ್.ಪಿ. ೦೧ | Kannada Prabha

ಸಾರಾಂಶ

ಸರ್ಕಾರದ ಶಕ್ತಿ ಯೋಜನೆಗೆ ೫೦೦ ಕೋಟಿ ಫಲಾನುಭವಿಗಳಾದ ಹಿನ್ನೆಲೆಯಲ್ಲಿ ಯಲ್ಲಾಪುರ ಪಟ್ಟಣದ ಬಸ್ ನಿಲ್ದಾಣದಲ್ಲಿ ಸೋಮವಾರ ಬಸ್‌ಗೆ ಶಾಸಕ ಶಿವರಾಮ ಹೆಬ್ಬಾರ ಪೂಜೆ ಸಲ್ಲಿಸಿದರು.

ಯಲ್ಲಾಪುರ: ರಾಜ್ಯ ಸರ್ಕಾರ ಚುನಾವಣಾ ಘೋಷಣೆಯಂತೆ ೫ ಗ್ಯಾರಂಟಿಗಳನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ₹೫೮ ಸಾವಿರ ಕೋಟಿ ವಿನಿಯೋಗಿಸಲಾಗುತ್ತಿದೆ. ಈ ಎಲ್ಲ ಅನುಕೂಲತೆ ಪಡೆದವರು ಕೃತಘ್ನರಾಗದೇ ಚುನಾವಣೆಯಲ್ಲಿ ಮತ ಹಾಕಿದಾಗ ಮಾತ್ರ ನಿಜವಾದ ಧರ್ಮ ಆಚರಿಸಿದಂತಾಗುತ್ತದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಸರ್ಕಾರದ ಶಕ್ತಿ ಯೋಜನೆಗೆ ೫೦೦ ಕೋಟಿ ಫಲಾನುಭವಿಗಳಾದ ಹಿನ್ನೆಲೆಯಲ್ಲಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಸೋಮವಾರ ಬಸ್‌ಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಉಪಕಾರ ಪಡೆದ ಪ್ರತಿಯೊಬ್ಬರೂ ಕೃತಜ್ಞತೆಯಿಂದ ಋಣಿಯಾಗಿರಬೇಕು. ಈ ೫ ಗ್ಯಾರಂಟಿ ಯೋಜನೆಯ ಶಕ್ತಿ ಯೋಜನೆಯಿಂದ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ವಿಶೇಷ ಅನುಕೂಲವಾಗಿದೆ. ನಮ್ಮ ಯಲ್ಲಾಪುರ ಡಿಪೋ ಒಂದರಲ್ಲಿ ₹೪೩ ಕೋಟಿಯನ್ನು ಸರ್ಕಾರ ನಿಗಮಕ್ಕೆ ನೀಡಿದೆ. ಹೀಗೆ ಬಡವರ ಪರವಾಗಿ ಸರ್ಕಾರ ಕಾರ್ಯಮಾಡುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ೫ ಗ್ಯಾರಂಟಿ ಪ್ರಾಧಿಕಾರದ ತಾಲೂಕಾಧ್ಯಕ್ಷ ಉಲ್ಲಾಸ ಶಾನಭಾಗ ಮಾತನಾಡಿ, ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ ಮತ್ತು ಯುವನಿಧಿ ಇವೆಲ್ಲವೂ ಜಾರಿಯಾಗಿದೆ. ಯುವನಿಧಿ ಯೋಜನೆ ಜಿಎಸ್‌ಟಿಯಿಂದಾಗಿ ಸ್ವಲ್ಪ ಹಿಂದೆಮುಂದೆ ಆಗುತ್ತಿದೆ. ಅನೇಕ ಮಹಿಳೆಯರು ಮತ್ತು ಯುವತಿಯರು ಉದ್ಯೋಗಕ್ಕಾಗಿ ನಿತ್ಯ ಬಸ್ಸಿಗೆ ಹೋಗಬೇಕಿತ್ತು. ದೊರೆಯುವ ಅರ್ಧ ಸಂಬಳ ಬಸ್ಸಿಗೆ ಬೇಕಾಗಿತ್ತು. ಈ ಶಕ್ತಿ ಯೋಜನೆಯಿಂದ ಮಹಿಳೆಯರು ರಾಜ್ಯದ ಪ್ರತಿಷ್ಠಿತ ದೇವಸ್ಥಾನಗಳ ದರ್ಶನ ಪಡೆಯುವ ಅವಕಾಶ ಲಭಿಸಿದೆ. ಇಂತಹ ನಮ್ಮ ರಾಜ್ಯ ಸಾರಿಗೆಗೆ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ೯ ಪ್ರಶಸ್ತಿಗಳು ದೊರೆತಿವೆ. ನಮ್ಮ ಡ್ರೈವರ್‌ ಮತ್ತು ಚಾಲಕರು ಮೊದಲು ಸ್ವಲ್ಪ ಸಿಟ್ಟಿನಿಂದ ಪ್ರಯಾಣಿಕರ ಜತೆ ವರ್ತಿಸಿರಬಹುದು. ಈಗ ಅದೆಲ್ಲವನ್ನೂ ಸರಿಪಡಿಸಲಾಗಿದೆ. ಸೌಜನ್ಯದ ಸೇವೆ ಪ್ರಯಾಣಿಕರಿಗೆ ಸಿಗುತ್ತಿದೆ. ನಮ್ಮ ತಾಲೂಕು ಸಮಿತಿಯಲ್ಲಿ ೧೫ ಸದಸ್ಯರಿದ್ದು, ನಾವು ಬಸ್ ನಿಲ್ದಾಣದ ಸ್ವಚ್ಛತೆ, ವ್ಯವಸ್ಥೆ, ಅನ್ನಭಾಗ್ಯ ಯೋಜನೆ ಮೊದಲಾದವುಗಳ ಕುರಿತು ಆಗಾಗ ಪರಿಶೀಲನೆ ನಡೆಸುತ್ತಿದ್ದೇವೆ ಎಂದರು.

ನಿತ್ಯ ಬಸ್ ಪ್ರಯಾಣಿಸುವ ಮಹಿಳೆ ಮಹಾಲಕ್ಷ್ಮಿ ಅಕ್ಕಸಾಲಿಗ ತನ್ನ ಅನುಭವ ಹಂಚಿಕೊಂಡರು. ಗ್ಯಾರಂಟಿ ಪ್ರಾಧಿಕಾರದಿಂದ ಶಾಸಕ ಹೆಬ್ಬಾರ ಅವರನ್ನು ಮತ್ತು ಘಟಕ ವ್ಯವಸ್ಥಾಪಕ ಸಂತೋಷ ವೆರ್ಣೇಕರ ಮತ್ತು ವಾಹನ ಚಾಲಕ ತಿಮ್ಮಣ್ಣ ನಿರ್ವಾಹಕ ಮಂಜುನಾಥ ನಿಲೇಕಣಿ, ನಿರ್ವಾಹಕಿ ವೀರಮ್ಮ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಡಿ.ಎನ್. ಗಾಂವ್ಕರ. ಪಪಂ ಅಧ್ಯಕ್ಷೆ ನರ್ಮದಾ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್. ಭಟ್ಟ ಪ್ರಮುಖರಾದ ಎನ್.ಕೆ. ಭಟ್ಟ ಮೆಣಸುಪಾಲ, ವಿಜಯ ಮಿರಾಶಿ, ಸುಜಾತಾ ಸಿದ್ದಿ, ಪೂಜಾ ನೇತ್ರೇಕರ, ಮತ್ತಿತರರು ಉಪಸ್ಥಿತರಿದ್ದರು.

ಗ್ಯಾರಂಟಿ ಸಮಿತಿ ಸದಸ್ಯ ಮಹೇಶ ನಾಯ್ಕ ಸ್ವಾಗತಿಸಿದರು. ಗ್ರಾಪಂ. ಸದಸ್ಯರ ಒಕ್ಕೂಟದ ಜಿಲ್ಲಾಧ್ಯಕ್ಷ ಎಂ.ಕೆ. ಭಟ್ಟ ಯಡಳ್ಳಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ