ಬಣ್ಣ ಬಳಿಯಲು ಬಂದವರು25 ಲಕ್ಷದ ಚಿನ್ನ ಕದ್ದು ಪರಾರಿ

KannadaprabhaNewsNetwork |  
Published : Jun 09, 2026, 02:00 AM IST
ಚಿನ್ನಾಭರಣದೊಂದಿಗೆ ಎಸ್ಕೇಪ್  | Kannada Prabha

ಸಾರಾಂಶ

ಮನೆಗೆ ಬಣ್ಣ ಬಳಿಯಲು ಬಂದ ಪೇಂಟರ್‌ಗಳು ಬೀರುವಿನಲ್ಲಿದ್ದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ರಾಮಾಂಜನೇಯ ಬಡಾವಣೆಯಲ್ಲಿ ನಡೆದಿದ್ದು, ಇದರಿಂದಾಗಿ ನಗರದಲ್ಲಿ ಮನೆಗೆ ಕೆಲಸಗಾರರನ್ನು ಸೇರಿಸಿಕೊಳ್ಳುವ ಮುನ್ನ ಮಾಲೀಕರು ಹಲವು ಬಾರಿ ಯೋಚನೆ ಮಾಡುವಂತಾಗಿದೆ.

ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ ಮನೆಗೆ ಬಣ್ಣ ಬಳಿಯಲು ಬಂದ ಪೇಂಟರ್‌ಗಳು ಬೀರುವಿನಲ್ಲಿದ್ದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ರಾಮಾಂಜನೇಯ ಬಡಾವಣೆಯಲ್ಲಿ ನಡೆದಿದ್ದು, ಇದರಿಂದಾಗಿ ನಗರದಲ್ಲಿ ಮನೆಗೆ ಕೆಲಸಗಾರರನ್ನು ಸೇರಿಸಿಕೊಳ್ಳುವ ಮುನ್ನ ಮಾಲೀಕರು ಹಲವು ಬಾರಿ ಯೋಚನೆ ಮಾಡುವಂತಾಗಿದೆ.

ರಾಮಾಂಜನೇಯ ಬಡಾವಣೆ ನಿವಾಸಿಗಳಾದ ನಿತ್ಯಾ ಮತ್ತು ಚಂದ್ರಶೇಖರ್ ದಂಪತಿ ಮನೆಯಲ್ಲೇ ದರೋಡೆ ನಡೆದಿದ್ದು, ಬರೋಬ್ಬರಿ ₹25 ಲಕ್ಷ ಮೌಲ್ಯದ 254 ಗ್ರಾಂ ಚಿನ್ನಾಭರಣ ಕಳವಾಗಿದೆ ಎಂದು ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿಗಳ ಪತ್ತೆಗಾಗಿ ಶೋಧ ನಡೆಸಿದ್ದಾರೆ.

ಘಟನೆ ಹಿನ್ನೆಲೆ: ನಿತ್ಯಾ ಹಾಗೂ ಚಂದ್ರಶೇಖರ್ ದಂಪತಿ ರಾಮಾಂಜನೇಯ ಬಡಾವಣೆಯಲ್ಲಿ 2 ಅಂತಸ್ತಿನ ಮನೆ ಕಟ್ಟಿಸಿದ್ದು, ಮೊದಲ ಮಹಡಿಯನ್ನು ಬಾಡಿಗೆ ನೀಡಿದ್ದರು. ಕಳೆದ 1 ತಿಂಗಳ ಹಿಂದೆಯಷ್ಟೇ ಮೊದಲ ಮಹಡಿಯಲ್ಲಿದ್ದ ಬಾಡಿಗೆದಾರರು ಮನೆ ಖಾಲಿ ಮಾಡಿದ್ದರು. ಇದನ್ನು ಗಮನಿಸಿದ ಪೇಂಟರ್ ಲಿಂಗರಾಜು ಎಂಬಾತ, ಮನೆ ಮಾಲೀಕ ಚಂದ್ರಶೇಖರ್ ಅವರನ್ನು ಭೇಟಿಯಾಗಿ, ನಿಮ್ಮ ಮನೆಗೆ ನಾವೇ ಕಡಿಮೆ ದರದಲ್ಲಿ ಪೇಂಟ್ ಮಾಡಿಕೊಡುತ್ತೇವೆ ಎಂದು ನಂಬಿಸಿ ಮೊಬೈಲ್ ನಂಬರ್ ನೀಡಿದ್ದ. 2 ದಿನಗಳ ಬಳಿಕ ಚಂದ್ರಶೇಖರ್ ಅವರು ಲಿಂಗರಾಜುವಿಗೆ ಕರೆ ಮಾಡಿ ಬಣ್ಣ ಬಳಿಯಲು ಕರೆದಿದ್ದರು. ಆ ಬಳಿಕ ಲಿಂಗರಾಜು ತನ್ನ ಜೊತೆಗೆ ಪವನ್ ಕುಮಾರ್, ಮಂಜುನಾಥ್ ಮತ್ತು ವೆಂಕಟೇಶ್ ಎಂಬ ಮೂವರು ಕೆಲಸಗಾರರನ್ನು ಕರೆತಂದು ಮೊದಲ ಮಹಡಿಗೆ ಪೇಂಟ್ ಮಾಡಿಸಿದ್ದ. ಕೆಲಸ ಚೆನ್ನಾಗಿ ಮಾಡಿದ್ದರಿಂದ, ಮಾಲೀಕರು ತಾವು ವಾಸವಿದ್ದ ಕೆಳಮಹಡಿಯ ಕಿಟಕಿಗಳಿಗೂ ಬಣ್ಣ ಬಳಿಯುವಂತೆ ತಿಳಿಸಿದ್ದರು. ಮಾಲೀಕರ ಈ ನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡ ಪೇಂಟರ್‌ಗಳು ನಿತ್ಯಾ ದಂಪತಿ ವಾಸವಿದ್ದ ಬೆಡ್‌ರೂಂಗೆ ಪೇಂಟ್ ಮಾಡಲು ಹೋಗಿದ್ದರು. ಈ ವೇಳೆ ಹೋರಗಿದ್ದ ಮಗುವನ್ನು ಸಮಾಧಾನಪಡೆಸಲು ನಿತ್ಯಾ ರೂಮ್‌ನಿಂದ ಹೋರಗಡೆ ಹೋಗಿ ಬರುವಷ್ಟರಲ್ಲಿ ಅಂದರೆ ಕೇವಲ 5 ನಿಮಿಷದಲ್ಲಿ ಬೀರುವಿನಲ್ಲಿದ್ದ ಸುಮಾರು 254 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಿ ಜಾಗ ಖಾಲಿ ಮಾಡಿದ್ದಾರೆ.

ಕೆಲಸ ಮುಗಿಯುವ ಮುನ್ನವೇ ಪೇಂಟರ್‌ಗಳು ದಿಢೀರ್ ನಾಪತ್ತೆಯಾಗಿದ್ದನ್ನು ಕಂಡು ಅನುಮಾನಗೊಂಡ ನಿತ್ಯಾ ಅವರು ರೂಮ್​​​ನ ಬೀರು ಪರಿಶೀಲಿಸಿದಾಗ ಕಳ್ಳತನ ಬೆಳಕಿಗೆ ಬಂದಿದೆ. ಇದೀಗ ಒಡವೆಗಳನ್ನು ಪತ್ತೆಹಚ್ಚಿ ಕೊಡುವಂತೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಂದಿನ ಮೂರು ದಿನ ಭಾರಿ ಮಳೆ ಸಾಧ್ಯತೆ: ಜಿಲ್ಲಾಧಿಕಾರಿ
ಕೂಡ್ಲಿಗಿಯಲ್ಲಿ ದಸಂಸ ಬೃಹತ್ ಪ್ರತಿಭಟನೆ