ಧರ್ಮಗಳ ಹೆಸರಿನಲ್ಲಿ ಕಚ್ಚಾಡುತ್ತಿರುವವರು ಧರ್ಮಗ್ರಂಥಗಳನ್ನು ಓದಿರಲ್ಲ-ಶಾಸಕ ಮಾನೆ

KannadaprabhaNewsNetwork |  
Published : Nov 23, 2025, 03:00 AM IST
ಫೋಟೊ : 20ಎಚ್‌ಎನ್‌ಎಲ್2 | Kannada Prabha

ಸಾರಾಂಶ

ನಮ್ಮ ದೇಶದ ಪವಿತ್ರ ಮಣ್ಣು ಬೇಧ, ಭಾವ ಮಾಡದೇ ಎಲ್ಲರನ್ನೂ ಒಂದಾಗಿ ನೋಡಿದೆ. ಆದರೆ ಭಗವದ್ಗೀತೆ, ಕುರಾನ್, ಬೈಬಲ್ ಧರ್ಮಗ್ರಂಥಗಳ ನಿಜಸಾರ ಅರಿಯುವಲ್ಲಿ ವಿಫಲರಾಗುತ್ತಿದ್ದೇವೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಹಾನಗಲ್ಲ: ನಮ್ಮ ದೇಶದ ಪವಿತ್ರ ಮಣ್ಣು ಬೇಧ, ಭಾವ ಮಾಡದೇ ಎಲ್ಲರನ್ನೂ ಒಂದಾಗಿ ನೋಡಿದೆ. ಆದರೆ ಭಗವದ್ಗೀತೆ, ಕುರಾನ್, ಬೈಬಲ್ ಧರ್ಮಗ್ರಂಥಗಳ ನಿಜಸಾರ ಅರಿಯುವಲ್ಲಿ ವಿಫಲರಾಗುತ್ತಿದ್ದೇವೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. ಇಲ್ಲಿನ ಅಂಜುಮನ್ ಶಿಕ್ಷಣ ಸಂಸ್ಥೆಯಲ್ಲಿ ನೂತನ ಕೊಠಡಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲರೂ ಸಹ ಒಂದಾಗಿ ಪ್ರೀತಿ, ವಿಶ್ವಾಸ, ಪರಸ್ಪರ ಸಹೋದರತೆ ಮತ್ತು ಸೌಹಾರ್ದತೆಯಿಂದ ಬದುಕುವ ಮೂಲಕ ಇಡೀ ಜಗತ್ತಿಗೆ ಉತ್ತಮ ಸಂದೇಶ ನೀಡಿರುವ ಏಕೈಕ ದೇಶ ನಮ್ಮ ಭಾರತ. ಧರ್ಮ ಗ್ರಂಥಗಳು ದ್ವೇಷ ಬೋಧಿಸಿಲ್ಲ, ಪ್ರೀತಿಯನ್ನೇ ಒತ್ತಿ ಒತ್ತಿ ಹೇಳಿವೆ. ಧರ್ಮಗಳ ಹೆಸರಿನಲ್ಲಿ ಕಚ್ಚಾಡುತ್ತಿರುವರು ಯಾರೂ ಸಹ ಧರ್ಮಗ್ರಂಥಗಳನ್ನು ಓದಿಲ್ಲ. ಓದಿದವರು ಯಾರೂ ಸಹ ಕಚ್ಚಾಡುತ್ತಿಲ್ಲ. ಸಣ್ಣಪುಟ್ಟ ಸಂಗತಿಗಳನ್ನು ಮುಂದಿಟ್ಟುಕೊಂಡು ದ್ವೇಷ ಸಾಧಿಸುತ್ತಾ ಹೋದರೆ ಅದರ ದುಷ್ಪರಿಣಾಮವನ್ನು ಮುಂದಿನ ಪೀಳಿಗೆ ಎದುರಿಸಬೇಕಾಗುತ್ತದೆ. ಪ್ರೀತಿಯಿಂದ ಎಲ್ಲರೂ ಜೊತೆಗೂಡಿ ಮುಂದೆ ಹೋದರೆ ಮಾತ್ರ ಭವಿಷ್ಯದಲ್ಲಿ ಸುಂದರ ದಿನಗಳನ್ನು ಕಾಣಬಹುದಾಗಿದೆ. ಈ ನಿಟ್ಟಿನಲ್ಲಿ ದೃಢಸಂಕಲ್ಪ ಮಾಡಬೇಕಿದೆ. ವಿದ್ಯಾರ್ಥಿ ದೆಸೆಯಿಂದಲೇ ಇಂಥ ಚಿಂತನೆ ನಡೆಯಬೇಕಿದೆ ಎಂದರು.ಅಂಜುಮನ್ ಅಧ್ಯಕ್ಷ ನಜೀರ್‌ಅಹ್ಮದ್ ಸವಣೂರ ಮಾತನಾಡಿ, ಅಂಜುಮನ್ ಶಿಕ್ಷಣ ಸಂಸ್ಥೆಯಲ್ಲಿ ಎಲ್ಲ ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶ ಹೊಂದಲಾಗಿದೆ. ಏಕಪೋಷಕ ವಿದ್ಯಾರ್ಥಿಗಳಿಗೆ ಅರ್ಧ ಪ್ರವೇಶ ಹಣ, ಪೋಷಕರಿಲ್ಲದ ವಿದ್ಯಾರ್ಥಿಗಳಿಗೆ ಪ್ರವೇಶ ಹಣ ಪಡೆಯದೇ ಪಠ್ಯಪುಸ್ತಕ, ಸಮವಸ್ತ್ರ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸಂಸ್ಥೆಯಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತಿದೆ. ಸುಶಿಕ್ಷಿತ ಸಮಾಜ ನಿರ್ಮಾಣದ ಉದ್ದೇಶದಿಂದ ಸಂಸ್ಥೆಯನ್ನು ಮುನ್ನಡೆಸಲಾಗುತ್ತಿದೆ ಎಂದು ತಿಳಿಸಿದರು. ಮೌಲಾನಾ ಖಲೀಲ್‌ಅಹ್ಮದ್ ಮಿಸ್ಸಾಯಿ, ಮೌಲಾನಾ ಮೆಹಬೂಬಿ ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ನಿಸಾರ್ ಖಾಜಿ, ನಿಸಾರ್ ಗೌಂಡಿ, ಮೊಯಿನ್ ಪೀರಾ, ಮುನೀರ್ ಪಾಳಾ, ಖುರ್ಷಿದ್ ಹುಲ್ಲತ್ತಿ, ನಿಸಾರ್ ಪಾನವಾಲೆ, ಇಫ್ರಾನ್ ಸೌದಾಗರ, ಇಫ್ರಾನ್ ಮಿಠಾಯಿಗಾರ, ಖಾಲಿದ್ ಶೇಷಗಿರಿ ಇದ್ದರು.ಜಾಗತೀಕರಣದ ಈ ಯುಗದಲ್ಲಿ ರಾಷ್ಟ್ರ, ಪ್ರಾಂತ, ಭಾಷೆ-ಬಣ್ಣ, ಜಾತಿ-ಧರ್ಮ ಎಂಬ ಎಲ್ಲ ಗಡಿಗಳನ್ನು ಮೀರಿ ಶಾಂತಿ, ಪರಸ್ಪರ ನಂಬಿಕೆ ಮತ್ತು ಸಹಭಾಗಿತ್ವ ಮಾತ್ರ ಇಡೀ ಮಾನವ ಕುಲವನ್ನು ಮುಂದಕ್ಕೆ ಕೊಂಡೊಯ್ಯಬಲ್ಲದು. ಸರ್ವಧರ್ಮ ಸೌಹಾರ್ದತೆ, ಮಾನವೀಯ ಮೌಲ್ಯಗಳು ಮತ್ತು ಸಹಜೀವನ ಸಂದೇಶ ಅರಿತು, ಅನುಸರಿಸುವ ಸಂಕಲ್ಪ ನಾವಿಂದು ಮಾಡಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

PREV

Recommended Stories

ಸಾಮಾಜಿಕ ಸಮಸ್ಯೆ ಬಗ್ಗೆ ಕವಿತೆ ಮೂಡಿ ಬರಲಿ
ವಿವಾಹ ವಿಚ್ಛೇದನದಿಂದ ಕುಟುಂಬ ವ್ಯವಸ್ಥೆಯ ಮೇಲೆ ಪೆಟ್ಟು: ಸ್ವರ್ಣವಲ್ಲೀ ಶ್ರೀ