ಕಾರ್ಮಿಕರ ಬೋಗಸ್ ಕಾರ್ಡ್ ಮಾಡಿದ್ದ ಆರೋಪದಲ್ಲಿ ವಜಾಗೊಂಡಿದ್ದ 13 ಹೊರಗುತ್ತಿಗೆ ಸಿಬ್ಬಂದಿ
ಕನ್ನಡಪ್ರಭ ವಾರ್ತೆ ಹಾವೇರಿ
ಕಾರ್ಮಿಕರ ಬೋಗಸ್ ಕಾರ್ಡ್ ಮಾಡಿದ್ದ ಆರೋಪದಲ್ಲಿ ಸ್ವತಃ ಕಾರ್ಮಿಕ ಸಚಿವರೇ ಕಿತ್ತೆಸೆದಿದ್ದ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದ 13 ಜನ ನೌಕರರು ಕೇವಲ 15 ದಿನಗಳಲ್ಲಿ ಮತ್ತದೇ ಜಾಗಕ್ಕೆ ಬಂದಿರುವುದು ಚರ್ಚೆಗೆ ಗ್ರಾಸವಾಗಿದೆ.ಕಾರ್ಮಿಕ ಸಚಿವ ಸಂತೋಷ ಲಾಡ್ ನ.5ರಂದು ಇಲಾಖೆ ಪ್ರಗತಿ ಪರಿಶೀಲನೆ ನಡೆಸುವ ವೇಳೆ ಜಿಲ್ಲೆಯಲ್ಲಿ 2.96 ಲಕ್ಷ ಕಾರ್ಮಿಕ ಕಾರ್ಡ್ ವಿತರಣೆಯಾಗಿರುವುದನ್ನು ಕೇಳಿ ಆಶ್ಚರ್ಯಗೊಂಡಿದ್ದರು. ಇಲಾಖೆಯ ತಾಲೂಕು ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾಟಾ ಎಂಟ್ರಿ ಆಪರೇಟರ್, ಸಿಬ್ಬಂದಿಯ ಕೈಚಳಕದಿಂದಲೇ ಬೋಗಸ್ ಕಾರ್ಡ್ ಆಗಿರುವುದನ್ನು ಮೋಲ್ನೋಟಕ್ಕೆ ಅರಿತ ಸಚಿವರು, ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದ 13 ನೌಕರರನ್ನು ಸೇವೆಯಿಂದ ಬಿಡುಗಡೆ ಮಾಡಿ ಆದೇಶಿಸಿದ್ದರು. ಆದರೆ, ಕೇವಲ 15 ದಿನಗಳಲ್ಲಿ ವಜಾಗೊಂಡಿದ್ದ ಎಲ್ಲರೂ ಮಂಗಳವಾರ ಮತ್ತೆ ಅದೇ ಕೆಲಸಕ್ಕೆ ಹಾಜರಾಗಿ ಹುಬ್ಬೇರಿಸುವಂತೆ ಮಾಡಿದ್ದಾರೆ.
ಜಿಲ್ಲೆಯಲ್ಲಿ 2.96 ಲಕ್ಷ ಕಾರ್ಡ್:
ಬೆಂಗಳೂರು ನಗರ, ಕಲಬುರಗಿ ಹೊರತುಪಡಿಸಿ ಹಾವೇರಿಯಲ್ಲೇ ಅತ್ಯಧಿಕ ಸಂಖ್ಯೆಯಲ್ಲಿ ಕಾರ್ಮಿಕರ ನೋಂದಣಿಯಾಗಿದೆ. ಬೆಂಗಳೂರಿನಲ್ಲಿ 4.56 ಲಕ್ಷ, ಕಲಬುರಗಿಯಲ್ಲಿ 3.27 ಲಕ್ಷ ಕಾರ್ಮಿಕರ ನೋಂದಣಿಯಾಗಿದ್ದರೆ, ಹಾವೇರಿ ಜಿಲ್ಲೆಯಲ್ಲಿ 2,96,039 ಕಾರ್ಮಿಕರ ನೋಂದಣಿಯಾಗಿದೆ. ಬಳ್ಳಾರಿ, ಬೀದರ್, ಬೆಳಗಾವಿ ಸೇರಿದಂತೆ ಪ್ರಮುಖ ಜಿಲ್ಲೆಗಳಲ್ಲಿ ಕೂಡ ಆಗದಷ್ಟು ಕಾರ್ಮಿಕರ ನೋಂದಣಿ ಜಿಲ್ಲೆಯಲ್ಲಿ ಆಗಿದೆ. ಇದರಿಂದ ಡಾಟಾ ಎಂಟ್ರಿ ಆಪರೇಟರಗಳು ಬೋಗಸ್ ಕಾಡ್೯ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಅದಕ್ಕಾಗಿ ಹಾವೇರಿ ಜಿಲ್ಲಾ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮೂವರು, ಹಾವೇರಿ ತಾಲೂಕಾ ಕಚೇರಿಯ ಇಬ್ಬರು, ಬ್ಯಾಡಗಿ 2, ಇನ್ನುಳಿದ 6 ತಾಲೂಕುಗಳಲ್ಲಿನ ತಲಾ ಒಬ್ಬರಂತೆ 13 ಸಿಬ್ಬಂದಿಯನ್ನು ಕಾರ್ಮಿಕ ಸಚಿವರು ಸೇವೆಯಿಂದ ಕಿತ್ತೆಸೆದಿದ್ದರು. ಇಲಾಖೆಯಲ್ಲಿ ಖಾಯಂ ಹುದ್ದೆ ಭರ್ತಿಯಾಗದಿರುವುದೇ ಇವರ ಮರು ನೇಮಕಕ್ಕೆ ಕಾರಣವಾಗಿದೆ.ಹೊಸ ಟಾಸ್ಕ್:
ವಜಾಗೊಂಡಿದ್ದವರನ್ನು ಮತ್ತೆ ನೇಮಕ ಮಾಡುವ ಮುನ್ನ ಅವರಿಗೆ ಹೊಸ ಟಾಸ್ಕ್ ನೀಡಲಾಗಿದೆ. ತಮ್ಮ ವ್ಯಾಪ್ತಿಯಲ್ಲಿನ ಬೋಗಸ್ ಕಾರ್ಡ್ ಪತ್ತೆ ಹಚ್ಚುವ ಕಾರ್ಯ ನೀಡಲಾಗಿದೆ ಎಂದು ತಿಳಿದುಬಂದಿದೆ. ಆದರೆ ತಾವೇ ನೀಡಿದ ಕಾರ್ಡ್ ತಾವೇ ರದ್ದುಪಡಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.ಕಾರ್ಮಿಕ ಸಚಿವ ಸಂತೋಷ ಲಾಡ್ ಪ್ರಗತಿ ಪರಿಶೀಲನೆ ವೇಳೆ ಜಿಲ್ಲೆಯಲ್ಲಿ ಹೆಚ್ಚಿನ ಕಾರ್ಮಿಕರ ನೋಂದಣಿಯಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅದಕ್ಕಾಗಿ 13 ನೌಕರರ ಸೇವೆಯನ್ನು ರದ್ದುಗೊಳಿಸಿದ್ದರು. ಈಗ ಅವರನ್ನೇ ಮತ್ತೆ ಸೇವೆಗೆ ತೆಗೆದುಕೊಳ್ಳಲಾಗಿದೆ. ಈಗ ಸರ್ವೇ ಮಾಡಿ ಬೋಗಸ್ ಕಾರ್ಡ್ ಪತ್ತೆಹಚ್ಚುವ ಕಾರ್ಯ ಮಾಡಲಾಗುತ್ತಿದೆ. ಕಳೆದ 6 ತಿಂಗಳಲ್ಲಿ 5 ಸಾವಿರ ಕಾರ್ಡ್ ರದ್ದುಪಡಿಸಲಾಗಿದೆ ಎನ್ನುತ್ತಾರೆ
ಜಿಲ್ಲಾ ಕಾರ್ಮಿಕ ಅಧಿಕಾರಿ ಮಹೇಶ ಕೊರಳಿ.